»   » ವೈವಿಧ್ಯಮಯ ಪಾತ್ರಗಳ ಹರಿಕಾರ ಕಮಲ್ ಹಾಸನ್

ವೈವಿಧ್ಯಮಯ ಪಾತ್ರಗಳ ಹರಿಕಾರ ಕಮಲ್ ಹಾಸನ್

Posted By:
Subscribe to Filmibeat Kannada

ಭಾರತೀಯ ಚಿತ್ರರಂಗದ ಬೆಳ್ಳಿಪರದೆ ಮೇಲೆ ತನ್ನದೇ ಆದಂತಹ ಛಾಪು ಒತ್ತಿದ ಕಲಾವಿದ ಕಮಲ್ ಹಾಸನ್. ಭಾರತೀಯ ಸಿನಿಮಾಗಳನ್ನು ಖಂಡಾಂತರದ ಆಚೆಗೆ ಕೊಂಡೊಯ್ದ ಖ್ಯಾತಿಯೂ ಕಮಲ್ ಅವರಿಗೆ ಸಲ್ಲುತ್ತದೆ.

ಮಾನಸಿಕ ವಿಕಲಾಂಗ, ಸೈಕೋ ಪ್ರೇಮಿ, ಕುಬ್ಜನಾಗಿ ವೈವಿಧ್ಯಮಯ ಪಾತ್ರಗಳನ್ನು ಪೋಷಿಸಿ ಚಿತ್ರರಸಿಕರ ಮನಸನ್ನು ಸೂರೆಗೊಂಡ ನಾಯಕ. ಇಂದು ಕಮಲ್ ಹಾಸನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಅವರನ್ನು ನೋಡಿದರೆ 60 ವರ್ಷ ವಯಸ್ಸಾದಂತೆ ಅನ್ನಿಸುವುದಿಲ್ಲ ಅಲ್ಲವೇ?

ಕಮಲ್ ಹಾಸನ್ ಅವರು ಹುಟ್ಟಿದ್ದು 1954 ನವೆಂಬರ್ 7ರಂದು. ಅಂದಿನ ಮದ್ರಾಸ್ ರಾಜ್ಯದ ರಾಮಾನಾಥಪುರಂ ಜಿಲ್ಲೆಯ ಪರಮಕುಡಿಯಲ್ಲಿ ಶ್ರೀನಿವಾಸನ್ - ರಾಜ್ಯಲಕ್ಷ್ಮಿ ದಂಪತಿಗಳ ಮೂರನೇ ಕೂಸು ಕಮಲ್ ಹಾಸನ್.

ಹಿಂದೂ ಮುಸ್ಲಿಂ ಬಾಂಧವ್ಯದ ಸಂಕೇತದ ಹೆಸರು

ಕಮಲ್ ಹಾಸನ್ ಅವರ ತಂದೆ ಶ್ರೀನಿವಾಸನ್ ಸ್ನೇಹಕ್ಕೆ ಅತ್ಯಂತ ಬೆಲೆ ಕೊಡುವ ವ್ಯಕ್ತಿ. ಆ ದಿನಗಳಲ್ಲಿ ಹಿಂದೂ, ಮುಸ್ಲಿಂ ಸಾಮರಸ್ಯ ಹದಗೆಟ್ಟಿದ್ದಂತಹ ಸಮಯ. ತನ್ನ ಮುಸ್ಲಿಂ ಪ್ರಾಣಮಿತ್ರನಿಗಾಗಿ ಹಾಗೂ ತಮ್ಮಿಬ್ಬರ ಸ್ನೇಹದ ನೆನಪಿಗಾಗಿ ಮೂವರು ಮಕ್ಕಳಿಗೂ ಮುಸ್ಲಿಂ ಹೆಸರು ಸೇರಿಸಿ ಚಾರು ಹಾಸನ್, ಚಂದ್ರ ಹಾಸನ್ ಹಾಗೂ ಕಮಲ್ ಹಾಸನ್ ಎಂದು ಹೆಸರಿಟ್ಟರು.

ಚೆನ್ನೈನಲ್ಲೇ ವಿದ್ಯಾಭ್ಯಾಸ ಮುಗಿಸಿದ ಕಮಲ್

ಕಮಲ್ ಹಾಸನ್ ಅವರಿಗೆ ಆರು ವರ್ಷ ವಯಸ್ಸಿದ್ದಾಗಲೇ 'ಕಳತ್ತೂರು ಕನ್ನಮ್ಮ' ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿದರು. ಆ ಚಿತ್ರ 1960, ಆಗಸ್ಟ್ 12ರಂದು ಬಿಡುಗಡೆಯಾಯಿತು. ಜೆಮಿನಿ ಗಣೇಶನ್, ಸಾವಿತ್ರಿ ಪ್ರಮುಖ ಪಾತ್ರಧಾರಿಗಳು. ಕಮಲ್ ಬಾಲ್ಯವೆಲ್ಲಾ ಮದ್ರಾಸ್ ನಲ್ಲೇ ಕಳೆಯಿತು. ಅಲ್ಲಿನ ಟಿ ನಗರ್, ಟ್ರಿಪಿಕೇನ್ ನಲ್ಲೇ ವಿದ್ಯಾಭ್ಯಾಸ ಮಾಡಿದರು.

ಮೂರು ಬಾರಿ ರಾಜ್ಯ ಪ್ರಶಸ್ತಿ ಪಡೆದ ನಟ

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲಿ ಅಭಿನಯಿಸಿದರು. ರಾಜ್ಯ ಪ್ರಶಸ್ತಿಯನ್ನು ಮೂರು ಬಾರಿ ಪಡೆದಿದ್ದಾರೆ. 1983ರಲ್ಲಿ ಬಂದಂತಹ ಮೂಂಡ್ರಾಪಿರೈ, 1988ರಲ್ಲಿ ಬಿಡುಗಡೆಯಾದ ನಾಯಗನ್, 1997ರಲ್ಲಿ ಬಂದಂತಹ ಇಂಡಿಯನ್ ಚಿತ್ರಗಳಿಗೆ ಪ್ರಶಸ್ತಿ ಬಂದಿದೆ.

ಒಟ್ಟು 19 ಚಿತ್ರಗಳಿಗೆ ಫಿಲಂ ಫೇರ್ ಪ್ರಶಸ್ತಿ

ಹಿಂದಿಯಲ್ಲಿ ಬಂದಂತಹ ಸಾಗರ್, ವಿರಾಸತ್, ತೆಲುಗಿನಲ್ಲಿ ಸಾಗರ ಸಂಗಮಂ, ತಮಿಳಿನಲ್ಲಿ 16 ವಯಿದಿನಿಲೆ, ಸಿಗಪ್ಪು ರೋಜಾಕ್ಕಲ್ ಮುಂತಾದ ಚಿತ್ರಗಳು ಸೇರಿದಂತೆ ಒಟ್ಟು 19 ಚಿತ್ರಗಳು ಫಿಲಂ ಫೇರ್ ಪ್ರಶಸ್ತಿಗೆ ಭಾಜನವಾಗಿವೆ.

ಡಾಕ್ಟರೇಟ್ ಪದವಿಗೂ ಭಾಜನರಾದ ಕಮಲ್

1960ರ ಕಳತ್ತೂರು ಕನ್ನಮ್ಮ, 1976ರಲ್ಲಿ ಅಪೂರ್ವ ರಾಗಂಗಳ್, 1993ರ ದೇವರ್ ಮಗನ್, 1994ರ ಮಹಾನದಿ, 1995ರ ನಮ್ಮವರ್ ಮುಂತಾದ ಚಿತ್ರಗಳು ರಾಷ್ಟ್ರ ಪ್ರಶಸ್ತಿ ಪಡೆದಿವೆ. ಭಾರತ ಸರ್ಕಾರದ ಪದ್ಮಶ್ರೀ, ತಮಿಳುನಾಡು ಸರ್ಕಾರದ ಕಲೈಮಾಮಣಿ, ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯದ ಡಾಕ್ಟರೇಟ್ ಗರಿಯೂ ಕಮಲ್ ಮುಡಿಯನ್ನು ಅಲಂಕರಿಸಿದೆ.

ಪಾತ್ರಗಳಿಗಾಗಿಯೇ ಹುಟ್ಟಿದಂತಹ ನಟ

ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ಎಂಬ ಮಾತುಗಳನ್ನು ಕಲಾವಿದರ ವಿಚಾರದಲ್ಲಿ ಆಗಾಗ ಕೇಳುತ್ತಿರುತ್ತೇವೆ. ಆದರೆ ಕಮಲ್ ಅವರ ವಿಚಾರದಲ್ಲಿ ಮಾತ್ರ ಅವರು ಪ್ರತಿ ಪಾತ್ರದಲ್ಲೂ ಪರಕಾಯ ಪ್ರವೇಶ ಮಾಡಿದ್ದಾರೆ. ಆ ಪಾತ್ರಗಳಿಗಾಗಿಯೇ ಅವರು ಹುಟ್ಟಿದಂತೆ ಅಭಿನಯಿಸಿದ್ದಾರೆ.

ವಿಶ್ವರೂಪಂ 2 ಚಿತ್ರದ ನಿರೀಕ್ಷೆಯಲ್ಲಿ ಅಭಿಮಾನಿಗಳು

ಶೀಘ್ರದಲ್ಲೇ ಕಮಲ್ ಹಾಸನ್ ಅವರು 'ವಿಶ್ವರೂಪಂ 2' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದ ಬಗ್ಗೆ ಭಾರಿ ನೀರೀಕ್ಷೆಗಳು ಇವೆ. ಅವರ ಅಭಿಮಾನಿಗಳಷ್ಟೇ ಅಲ್ಲದೆ ಎಲ್ಲರೂ ನಿರೀಕ್ಷಿಸಿರುವಂತಹ ಚಿತ್ರ.

English summary
Today (Nov 7) is Universal Star Kamal Haasan’s 60th birthday. An actor par excellence and philanthropist by choice, Kamal Haasan is a multi-talented personality, who has fans spread across all age groups. From being a child artist to becoming one of the stalwarts of Indian Cinema, Kamal has tasted success with dedication and hard work.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada