ಕಮಲ್ ಹಾಸನ್ ವಿಶ್ವರೂಪಂ ಬ್ರಹ್ಮಾಸ್ತ್ರ ಪ್ರಯೋಗ
"ನೀವು ಹೀಗೆ ಮಾಡಬಾರದು..ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. 'ವಿಶ್ವರೂಪಂ' ಚಿತ್ರ ತಪ್ಪದೆ ಡಿಟಿಎಚ್ ಮೂಲಕ ಪ್ರಸಾರವಾಗಲಿದೆ. ಇದರಲ್ಲಿ ಯಾವುದೇ ಸಂದೇಹ ಬೇಡ. ಯಾವುದೇ ಒತ್ತಡ, ನಿಬಂಧನೆಗಳಿಗೂ ಬಗ್ಗಲ್ಲ. ಚಿತ್ರದ ಬಿಡುಗಡೆಯನ್ನು ಮುಂದೂಡಲ್ಲ. ಥಿಯೇಟರ್ ಹಾಗೂ ಡಿಟಿಎಚ್ ನಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಚರ್ಚೆಗಳು ನಡೆಯುತ್ತಿವೆ ಎಂದು ನಟ ಕಮಲ್ ಹಾಸನ್ ಪ್ರಕಟಿಸಿದ್ದಾರೆ.
'ವಿಶ್ವರೂಪಂ' ಚಿತ್ರಕ್ಕೆ ಕಳೆದ ಒಂದು ವಾರದಿಂದ ಹಲವು ಸಮಸ್ಯೆಗಳು ಎದುರಾದವು. ಶೀಘ್ರದಲ್ಲೇ ತಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸುತ್ತೇನೆ ಎಂದಿದ್ದಾರೆ ಅಭಿಯನದ ಜೊತೆಗೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಕಮಲ್ ಹಾಸನ್.

ರೆಸ್ಟೋರೆಂಟ್, ದೊಡ್ದ ಹಾಲ್ ಗಳಲ್ಲಿ ಪ್ರಸಾರ ನಿಷೇಧ
ಸ್ಯಾಟಲೈಟ್ ಹಕ್ಕುಗಳು ಬಂದಾಗಲೂ ಇದೇ ರೀತಿ ಸಮಸ್ಯೆ ಉಂಟಾಗಿತ್ತು. ಆದರೀಗ ಅದನ್ನು ಎಲ್ಲರೂ ಸ್ವಾಗತಿಸುತ್ತಿದ್ದಾರೆ. ಹಾಗೆಯೇ ಡಿಟಿಎಚ್ ಅನ್ನೂ ಎಲ್ಲರೂ ಆದರಿಸುತ್ತಾರೆ. ಕೇವಲ ಮನೆಗೆ ಮಾತ್ರವೇ ಡಿಟಿಎಚ್ ನಲ್ಲಿ ವೀಕ್ಷಿಸುವ ಸೌಲಭ್ಯವನ್ನು ಕಲ್ಪಿಸಬೇಕು. ಅದು ಬಿಟ್ಟು ಕೇಬಲ್ ಮೂಲಕ, ರೆಸ್ಟೋರೆಂಟ್, ದೊಡ್ಡ ಕಾಂಪ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡುವುದು ಕಾನೂನಿನ ರೀತ್ಯ ಸಮ್ಮತವಲ್ಲ.

ಯಾವುದೇ ವರ್ಗಕ್ಕೆ ನೋವುಂಟು ಮಾಡುವ ಚಿತ್ರವಲ್ಲ
ಈ ರೀತಿಯ ನಿಯಮಗಳನ್ನು ಮುರಿದು ಪ್ರಸಾರ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಿಡುಗಡೆ ಯಾವಾಗ ಎಂಬುದನ್ನು ನಾನೇ ನಿರ್ಣಯಿಸುತ್ತೇನೆ. ಯಾರು ಏನು ಹೇಳಿದರೂ ನಂಬುವ ಅವಶ್ಯಕತೆ ಇಲ್ಲ. 'ವಿಶ್ವರೂಪಂ' ಚಿತ್ರ ಯಾವುದೇ ವರ್ಗಕ್ಕೂ ನೋವುಂಟು ಮಾಡುವ ಸಿನಿಮಾ ಅಲ್ಲ.

ಸುಮಾರು ರು.120 ಕೋಟಿ ಬಜೆಟ್
ಸದಾ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಲೇ ಬಂದಿರುವ ಕಮಲ್ ಹಾಸನ್ ಈಗ ತಮ್ಮ ಮಹತ್ವಾಕಾಂಕ್ಷಿ ಚಿತ್ರವನ್ನು ಡಿಟಿಎಚ್ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸುಮಾರು ರು.120 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಸ್ಯಾಟಲೈಟ್ ರೈಟ್ಸ್ ಹೋಗಿ ಡಿಟಿಎಚ್ ರೈಟ್ಸ್ ಬಂತು
ಚಿತ್ರಕ್ಕೆ ಹೂಡಿರುವ ಬಂಡವಾಳನ್ನು ಅತ್ಯಧಿಕವಾಗಿ ಡಿಟಿಎಚ್ ಮೂಲಕವೇ ವಸೂಲಿ ಮಾಡಿಕೊಳ್ಳಬೇಕು ಎಂಬ ಆಲೋಚನೆ ಅವರದು. ಇಷ್ಟು ದಿನಗಳ ಕಾಲ ಚಿತ್ರ ಬಿಡುಗಡೆಯಾದ ಬಳಿಕ ಅದನ್ನು ಸ್ಯಾಟಲೈಟ್ ರೈಟ್ಸ್ ಗೆ ಮಾರಲಾಗುತ್ತಿತ್ತು. ಈಗ ಇದಕ್ಕೆ ತದ್ವಿರುದ್ಧವಾಗಿ ಮೊದಲು ಟಿವಿಯಲ್ಲಿ ಬಿಡುಗಡೆ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ಡಿಟಿಎಚ್ ನಲ್ಲಿ ಏಕಕಾಲಕ್ಕೆ ಪ್ರಸಾರ
ಚಿತ್ರ ವಿತರಕರಿಂದ ತೀವ್ರ ವಿರೋಧ ಎದುರಾದರೂ ಡಿಟಿಎಚ್ ಸಂಸ್ಥೆಗಳಿಂದ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಸದ್ಯಕ್ಕೆ ಐದು ಸಂಸ್ಥೆಗಳು ಬಿಡುಗಡೆಗೂ ಒಂದು ದಿನ ಮುಂದಾಗಿ ಏಕಕಾಲಕ್ಕೆ ಬಿಡುಗಡೆ ಮಾಡಲು ಹಕ್ಕುಗಳನ್ನು ಪಡೆದಿವೆ.

ಡಿಟಿಎಚ್ ಚಾರ್ಜ್ ರು.1000ದಿಂದ ರು.500
ಚಿತ್ರವನ್ನು ವೀಕ್ಷಿಸಬೇಕಾದರೆ ಪ್ರತಿ ಬಳಕೆದಾರನು ತಮಿಳು ಚಿತ್ರಕ್ಕೆ ರು.1000 ಹಾಗೂ ತೆಲುಗು, ಹಿಂದಿ ಚಿತ್ರಗಳಿಗೆ ತಲಾ ರು.500 ಮುಂಗಡವಾಗಿ ತೆರಬೇಕು. ಒಟ್ಟಾರೆ ಸಂಗ್ರಹವಾದ ಹಣದಲ್ಲಿ ಇಂತಿಷ್ಟು ಪಾಲನ್ನು ಚಿತ್ರ ನಿರ್ಮಾಣ ಸಂಸ್ಥೆಗೆ ನೀಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಡಿಟಿಎಚ್ ರೈಟ್ಸ್ ನಲ್ಲಿ ರು.100 ಕೋಟಿ ಕಲೆಕ್ಷನ್
ಆರಂಭದಲ್ಲಿ ಇಷ್ಟೆಲ್ಲಾ ನಿರೀಕ್ಷೆಗಳನ್ನು ಸ್ವತಃ ಕಮಲ್ ಹಾಸನ್ ಅವರೂ ಇಟ್ಟುಕೊಂಡಿರಲಿಲ್ಲ. ಆದರೆ ಡಿಟಿಎಚ್ ಸಂಸ್ಥೆಗಳ ಪ್ರತಿಕ್ರಿಯೆ ಕಂಡು ಕಮಲ್ ದಂಗಾಗಿದ್ದಾರೆ. ಡಿಟಿಎಚ್ ಹಕ್ಕುಗಳ ರೂಪದಲ್ಲಿ ಮೊದಲು ರು.50 ಕೋಟಿ ಎಂದು ನಿರ್ಧಾರವಾಯಿತು. ಬಳಿಕ ಚಿತ್ರಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಕಂಡು ಅದನ್ನು ರು.100 ಕೋಟಿಗೆ ಏರಿಸಲಾಯಿತು. ಮುಂದೆ ರು.120 ಕೋಟಿ ಆದರೂ ಅಚ್ಚರಿ ಇಲ್ಲ. ಚಿತ್ರದ ಬಂಡವಾಳ ಡಿಟಿಹೆಚ್ ಹಕ್ಕುಗಳ ರೂಪದಲ್ಲೇ ಬಂದರೂ ಬರಬಹುದು!

ಥಿಯೇಟರ್ ಮಾಲೀಕರ ಎದೆಯಲ್ಲಿ ಢವಢವ
ಥಿಯೇಟರ್ ಗಳಿಗೂ ಮುನ್ನವೇ ಡಿಟಿಹೆಚ್ ನಲ್ಲಿ ಪ್ರಸಾರವಾಗುತ್ತಿರುವ ಭಾರತದ ಮೊಟ್ಟಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ವಿಶ್ವರೂಪಂ ಚಿತ್ರ ಭಾಜನವಾಗುತ್ತಿದೆ. ಇನ್ನೊಂದು ಕಡೆ ಮಲ್ಟಿಫ್ಲೆಕ್ಸ್, ಥಿಯೇಟರ್ ಮಾಲೀಕರ ಎದೆಯಲ್ಲಿ ಢವ ಢವ ಶುರುವಾಗಿದೆ. ಎಲ್ಲರೂ ಇದೇ ತಂತ್ರ ಅನುಸರಿಸಿದರೆ ಚಿತ್ರಮಂದಿರಗಳ ಕಥೆ ಏನು ಎಂದು ಅವರೆಲ್ಲಾ ಕಂಗಾಲಾಗಿದ್ದಾರೆ.

ಡಿಟಿಎಚ್ ನಲ್ಲಿ ವಿಶ್ವರೂಪಂ ಯಾವಾಗ?
ಚಿತ್ರಮಂದಿರದ ಮಾಲೀಕರು, ವಿತರಕರು ವಿಶ್ವರೂಪಂ ಬಿಡುಗಡೆಗೆ ತೀವ್ರ ವಿರೋಧ ಒಡ್ಡಿದ ಕಾರಣ ಕೊನೆಯ ಕ್ಷಣದಲ್ಲಿ ಚಿತ್ರವ ಬಿಡುಗಡೆಯನ್ನು ಕಮಲ್ ಮುಂದೂಡಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಜ.10ರ ರಾತ್ರಿ ಡಿಟಿಹೆಚ್ ನಲ್ಲಿ ವಿಶ್ವರೂಪಂ ಪ್ರಸಾರವಾಗಬೇಕಿತ್ತು.

ಜ.25ಕ್ಕೆ ಥಿಯೇಟರ್ ನಲ್ಲಿ ವಿಶ್ವರೂಪಂ
ಜ.25ರಂದು ವಿಶ್ವರೂಪಂ ಚಿತ್ರವನ್ನು 500ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಡಿಟಿಹೆಚ್ ನಲ್ಲಿ ಯಾವಾಗ ಬಗ್ಗೆ ಇನ್ನೂ ದಿನಾಂಕ ಪ್ರಕಟಿಸಿಲ್ಲ. ಎಲ್ಲರೂ ಅದೇ ನಿರೀಕ್ಷೆಯಲ್ಲಿದ್ದಾರೆ. ಕಮಲ್ ಹಾಸನ್ ಗೆ ಜೊತೆಯಾಗಿ ಪೂಜಾ ಕುಮಾರ್, ಉಪೇಂದ್ರ, ಆಂಡ್ರಿಯಾ ಜೆರೆಮಯ್ಯಾ, ರಾಹುಲ್ ಬೋಸ್, ಜೈದೀಪ್ ಅಹ್ಲಾವತ್ ಮುಂತಾದವರಿದ್ದಾರೆ.
ಕಮಲ್ ಹಾಸನ್ ಪ್ರಕಾರ ಜ.11ರಂದು 'ವಿಶ್ವರೂಪಂ' ಚಿತ್ರ ಥಿಯೇಟರ್ ಗಳಲ್ಲಿ ಹಾಗೂ ಜ.10ರ ರಾತ್ರಿ ಡಿಟಿಎಚ್ ನಲ್ಲಿ ಪ್ರಸಾರವಾಗಬೇಕಿತ್ತು. ಆದರೆ ಬಿಡುಗಡೆ ಮುಂದೂಡಲ್ಪಟ್ಟಿದೆ. ಯಾಕೆ? ಏನಾಯಿತು? ಬಿಡುಗಡೆ ಮುಂದೂಡಲು ಕಾರಣ ಏನು?
ಬುಧವಾರ (ಜ.9) ಕಮಲ್ ಹಾಸನ್ ಅವರ ಮನೆಯಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಕಮಲ್ ಮಾತನಾಡುತ್ತಾ, "ವಿಶ್ವರೂಪಂ ಚಿತ್ರ ನನ್ನ ಆಸ್ತಿ. ಅದನ್ನು ಹೇಗೆ ಪ್ಯಾಪಾರ ಮಾಡಬೇಕು ಎಂಬುದನ್ನು ನಾನೇ ನಿರ್ಣಯಿಸುತ್ತೇನೆ. ಇದನ್ನು ಯಾರೂ ತಡೆಯಲಾಗುವುದಿಲ್ಲ. ಡಿಟಿಎಚ್ ವಿಧಾನ ಹೊಸ ದಾರಿ. ಇದೇ ನಾಳೆ ಎಲ್ಲರ ದಾರಿಯಾಗಿ ಬದಲಾಗಲಿದೆ..."


Click it and Unblock the Notifications











