ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಕಮಲ್ ಹಾಸನ್ ಭೇಟಿ
ಪುನೀತ್ ರಾಜ್‌ಕುಮಾರ್ ಅಗಲಿ ಎರಡು ತಿಂಗಳ ಮೇಲಾಗಿದೆ. ಆದರೆ ಅವರ ನೆನಪು ಇನ್ನೂ ತುಸುವೂ ಮಾಸಿಲ್ಲ. ಪುನೀತ್ ರಾಜ್‌ಕುಮಾರ್ ಸಮಾಧಿಗೆ ಈಗಲೂ ಪ್ರತಿದಿನವೂ ಸಾವಿರಾರು ಮಂದಿ ಭೇಟಿ ನೀಡುತ್ತಲೇ ಇದ್ದಾರೆ. ಪುನೀತ್ ನಿವಾಸಕ್ಕೆ ಭೇಟಿ ನೀಡುತ್ತಿರುವ ಸ್ಟಾರ್ ನಟ-ನಟಿಯರ ಸಂಖ್ಯೆಯೂ ಕಡಿಮೆ ಆಗಿಲ್ಲ.
ನಿನ್ನೆಯಷ್ಟೆ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ನಟ ಪ್ರಭಾಸ್ ಭೇಟಿ ನೀಡಿದ್ದರು. ಇಂದು ಜನಪ್ರಿಯ ತಮಿಳು ಸ್ಟಾರ್ ನಟ ಕಮಲ್ ಹಾಸನ್ ಅಪ್ಪು ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
'ವಿಕ್ರಂ' ಸಿನಿಮಾದ ಚಿತ್ರೀಕರಣಕ್ಕೆಂದು ನಟ ಕಮಲ್ ಹಾಸನ್ ಬೆಂಗಳೂರಿಗೆ ಆಗಮಿಸಿದ್ದರು, ಈ ಸಮಯ ಬಿಡುವು ಮಾಡಿಕೊಂಡು ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಸಾಂತ್ವನ ಹೇಳಿದ್ದಾರೆ.

ನಿನ್ನೆಯಷ್ಟೆ ತೆಲುಗಿನ ಸೂಪರ್ ಸ್ಟಾರ್ ಪ್ರಭಾಸ್ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು. ಅಶ್ವಿನಿ ಅವರಿಗೆ ಸಾಂತ್ವನ ಹೇಳಿದ್ದರು.
ಈವರೆಗೆ ದೇಶದ ಹಲವಾರು ಸ್ಟಾರ್ ನಟ-ನಟಿಯರು ಪುನೀತ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ನಟ ಚಿರಂಜೀವಿ, ರಾಮ್ ಚರಣ್ ತೇಜ, ಜೂ ಎನ್‌ಟಿಆರ್, ಬಾಲಕೃಷ್ಣ, ನಾಗಾರ್ಜುನ, ಮೋಹನ್‌ಬಾಬು, ತಮಿಳು ನಟ ವಿಶಾಲ್, ಸೂರ್ಯ, ಸಿದ್ಧಾರ್ಥ್ ಪಟ್ಟಿ ಹೀಗೆ ಬೆಳೆಯುತ್ತಾ ಸಾಗುತ್ತದೆ. ಆದರೆ ರಜನೀಕಾಂತ್ ಅವರು ಈವರೆಗೆ ಪುನೀತ್ ಮನೆಗೆ ಭೇಟಿ ನೀಡಿಲ್ಲ. ಪುನೀತ್ ನಿಧನ ಹೊಂದಿದಾಗ ರಜನೀಕಾಂತ್ ಸಹ ಆಸ್ಪತ್ರೆಯಲ್ಲಿದ್ದರು ಹಾಗಾಗಿ ಅವರು ಪುನೀತ್ ಅಂತಿಮ ದರ್ಶನಕ್ಕೆ ಬರಲಾಗಿರಲಿಲ್ಲ.
ಡಿಸೆಂಬರ್ 29ಕ್ಕೆ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿ ಎರಡು ತಿಂಗಳಾಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್ ಕುಮಾರ್ ಸೇರಿದಂತೆ ಅಪ್ಪು ಕುಟುಂಬದವರು ಕಂಠೀರವ ಸ್ಟುಡಿಯೋಕ್ಕೆ ಭೇಟಿ ನೀಡಿ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದರು. ಪುನೀತ್ ಪತ್ನಿ ಅಶ್ವಿನಿ ಹಾಗೂ ಇಬ್ಬರು ಮಕ್ಕಳು ಸಹ ಆಗಮಿಸಿದ್ದರು. ಪೂಜೆ ವೇಳೆ ಕುಟುಂಬದ ಸದಸ್ಯರು ಅಪ್ಪುವನ್ನು ನೆನದು ಮತ್ತೆ ಕಣ್ಣೀರು ಹಾಕಿದರು.
ಪುನೀತ್ ರಾಜ್‌ಕುಮಾರ್ ಅವರ ಕನಸುಗಳನ್ನು ಈಡೇರಿಸಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಟೊಂಕ ಕಟ್ಟಿ ನಿಂತಿದ್ದು, ಪಿಆರ್‌ಕೆ ಪ್ರೊಡಕ್ಷನ್ಸ್ ಹಾಗೂ ಪಿಆರ್‌ಕೆ ಆಡಿಯೋ ಸಂಸ್ಥೆಯ ಹೊಣೆಯನ್ನು ತಮ್ಮ ಹೆಗಲಿಗೆ ಹಾಕಿಕೊಂಡಿದ್ದಾರೆ. ಪುನೀತ್ ಈ ಮೊದಲು ಅಡ್ವಾನ್ಸ್ ಪಡೆದಿದ್ದ ನಿರ್ಮಾಪಕರ ಎಲ್ಲ ಹಣವನ್ನು ಮರಳಿಸಿರುವ ಅಶ್ವಿನಿ, ಪುನೀತ್ ಕನಸಾಗಿದ್ದ 'ಗಂಧದ ಗುಡಿ' ಟ್ರಾವೆಲ್ ಸಿನಿಮಾದ ಬಿಡುಗಡೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


Click it and Unblock the Notifications











