ಕಮಲ್‌ ಹಾಸನ್ ಅವರ ಅಹಂಕಾರ ಹಾಗೂ ಕನ್ನಡಿಗರ ಅಭಿಮಾನ ಶೂನ್ಯತೆ - ಡಾ|ನಾ. ಸೋಮೇಶ್ವರ

"ತಮಿಳಿನಿಂದ ಹುಟ್ಟಿದ್ದು ಕನ್ನಡ" ಎನ್ನುವ ನಟ ಕಮಲ್ ಹಾಸನ್ ಹೇಳಿಕೆ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಕನ್ನಡಿಗರು ಇದನ್ನು ವಿರೋಧಿಸಿದ್ದಾರೆ. ಕಮಲ್ ಹಾಸನ್ ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಇದರ ನಡುವೆ ಆತನ 'ಥಗ್ ಲೈಫ್' ಸಿನಿಮಾ ಈ ವಾರ ಬಿಡುಗಡೆಗೆ ಸಜ್ಜಾಗಿದೆ.

ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ಕೊಟ್ಟಿವೆ. ಆದರೆ ಕಮಲ್ ಹಾಸನ್ ಇದಕ್ಕೆ ಸೊಪ್ಪು ಹಾಕುತ್ತಿಲ್ಲ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ, ಕರ್ನಾಟಕದಲ್ಲಿ ನನ್ನ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಲ್ಲ ಎನ್ನುವ ಬೆದರಿಕೆಗೆ ನಾನು ಜಗ್ಗಲ್ಲ ಎನ್ನುವಂತೆ ಮತ್ತೆ ಹೇಳಿಕೆ ಕೊಟ್ಟಿದ್ದಾರೆ. ಕಮಲ್ ಹೇಳಿಕೆ, ಕನ್ನಡಿಗರು ಎತ್ತಿರುವ ದನಿಯ ಬಗ್ಗೆ "ಥಟ್ ಅಂತ ಹೇಳಿ" ಕಾರ್ಯಕ್ರಮ ಖ್ಯಾತಿಯ ನಾ. ಸೋಮೇಶ್ವರ ಅವರು ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಕನ್ನಡಿಗರ ತಪ್ಪು ಇದೆ ಎಂದಿದ್ದಾರೆ.

Kamal Haasan s Kannada Born from Tamil Remark Sparks Uproar Na Someshwara Blames Kannadigas Language Apathy

ಅಭಿಮಾನ ಶೂನ್ಯತೆ:

"ಕಮಲ್ ಹಾಸನ್ ಹೇಳಿಕೆ ಅಹಂಕಾರದ ಮಾತು ಹಾಗೂ ಸುಳ್ಳಿನಿಂದ ಕೂಡಿರುವಂಥದ್ದು. ಇದರಲ್ಲಿ ನಮ್ಮವರ ತಪ್ಪು ಇದೆ. ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಕಮಲ್ ಹೇಳಿದಾಗ ಅದಕ್ಕೆ ಆಧಾರ ಏನು ಎಂದು ಕನ್ನಡ ಪತ್ರಕರ್ತರು ಕೇಳಬೇಕಿತ್ತು. ಕೇಳುವ ಧೈರ್ಯ, ಬುದ್ಧಿವಂತಿಕೆ ಯಾರು ತೋರಿಸಲಿಲ್ಲ. ಬಹುಶಃ ಅದಕ್ಕೆ ಎರಡು ಕಾರಣಗಳಿರಬಹುದು.

1. ಕನ್ನಡಿಗರ ಅಭಿಮಾನದ ಶೂನ್ಯತೆ
2. ಕನ್ನಡ ಭಾಷೆಯ ಇತಿಹಾಸದ ಬಗೆಗಿನ ಅಜ್ಞಾನ ಹಾಗೂ ಉದಾಸೀನತೆ.

ತಮಿಳರಿಗೆ ಅವರ ಭಾಷೆಯ ಬಗ್ಗೆ ಅಭಿಮಾನಕ್ಕಿಂತ ಹೆಚ್ಚು ದುರಭಿಮಾನವಿದೆ. ನಮ್ಮನ್ನು ಬಿಟ್ಟರೆ ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ ಎನ್ನುವ ಒಣ ಅಹಂಕಾರ. ಕನ್ನಡಿಗರಿಗೆ ತಮ್ಮ ಬಗ್ಗೆ ಅಭಿಮಾನವನ್ನು ಬಿಡಿ, ನಿರಭಿಮಾನವೇ ಹೆಚ್ಚು. ಅಯ್ಯೋ ಹೋಗಲಿ ಬಿಡಿ. ಅವರು ಏನಾದರೂ ಹೇಳಿಕೊಳ್ಳಲಿ, ನಾವು ಯಾಕೆ ತಲೆಯನ್ನು ಕೆಡಿಸಿಕೊಳ್ಳಬೇಕು ಎಂಬ ಉದಾಸೀನತೆ. ಕನ್ನಡದ ಇತಿಹಾಸವನ್ನು ಕಲಿಸುವುದನ್ನು ಬಿಡಿ, ಕನ್ನಡ ಶಾಲೆಗಳನ್ನೇ ನೀವು ಮುಚ್ಚುತ್ತಿದ್ದೇವೆ. ಕನ್ನಡವನ್ನು ಮಾತನಾಡಿದರೆ ದಂಡ ವಿಧಿಸುವ ಶಾಲೆಗಳು ನಮ್ಮಲ್ಲಿವೆ. ಮನೆಯಲ್ಲಿ ಅಪ್ಪ ಅಮ್ಮಂದಿರು ತಮ್ಮ ಮಕ್ಕಳೊಂದಿಗೆ ಇಂಗ್ಲಿಷಿನಲ್ಲಿ ಟಸ್ ಪುಸ್ ಎಂದು ಮಾತನಾಡಿದರೆ ಅಲ್ಲಿಗೆ ತಮ್ಮ ಜನ್ಮ ಸಾರ್ಥವಾಯಿತು ಎಂದು ನಂಬಿದ್ದಾರೆ. ನಮ್ಮ ಮಕ್ಕಳಿಗೆ ಇಂಗ್ಲಿಷನ್ನು ಇಂಗ್ಲೀಷರಿಗಿಂತಲೂ ಚೆನ್ನಾಗಿ ಕಲಿಸೋಣ; ಆದರೆ ಕನ್ನಡವನ್ನು ಮರೆಯದಿರೋಣ ಎನ್ನುವುದನ್ನು ಮರೆತಿದ್ದಾರೆ. ತಾಯಿ, ತಾಯಿನುಡಿ ಹಾಗೂ ತಾಯಿನಾಡಿಗೆ ಮತ್ತೊಂದು ಬದಲಿ ಇಲ್ಲ ಎನ್ನುವುದು ಅವರ ಪ್ರಜ್ಞೆಯಲ್ಲಿ ಇಲ್ಲ' ಎಂದು ನಾ ಸೋಮೇಶ್ವರ ಅಭಿಪ್ರಾಯಪಟ್ಟಿದ್ದಾರೆ.

ಕೇರಳದಲ್ಲಿ ಮಲಯಾಳಂ ಮಾತನಾಡುವವರ ಪ್ರಮಾಣ 97.03%. ಆಂಧ್ರದಲ್ಲಿ ತೆಲುಗು ಮಾತನಾಡುವವರು 89.21%. ತಮಿಳು ನಾಡಿನಲ್ಲಿ ತಮಿಳು ಮಾತನಾಡುವವರು 88.35%. ನಮ್ಮ ಕರ್ನಾಟಕದಲ್ಲಿ? ಕನ್ನಡ ಮಾತನಾಡುವವರು ಕೇವಲ 66.5% ಮಾತ್ರ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡವನ್ನು ಬಲ್ಲವರು 44.5% ಮಾತ್ರ. ಹಾಗಾಗಿ ತಮಿಳರು ಬೆಂಗಳೊರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಬೊಬ್ಬೆ ಹೊಡೆದಿದ್ದನ್ನು ಕನ್ನಡಿಗರು ಮರೆತಿದ್ದಾರೆ. ಹಾಗಾಗಿ ಸೋನು ನಿಗಮ್, ಕಮಲ ಹಾಸನ್, ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಕನ್ನಡ ಭಾಷೆಗೆ ಅವಮಾನವನ್ನು ಮಾಡುತ್ತಲೇ ಬಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಕನ್ನಡಿಗರು ಪ್ರತಿಭಟನೆ ಸೂಕ್ತ ರೀತಿಯಲ್ಲಿ ಇರಲಿಲ್ಲ. ಈ ರೀತಿಯ ಭಾಷಾ ಆಕ್ರಮಣ ತಮಿಳಿನ ಮೇಲೋ ಅಥವ ಉರ್ದುವಿನ ಮೇಲೋ ಆಗಿದ್ದರೆ, ಅವರು ಹೇಗೆ ಪ್ರತಿಕ್ರಿಯೆಯನ್ನು ನೀಡುತ್ತಿದ್ದರು ಎಂಬುದನ್ನು ಊಹಿಸಿಕೊಳ್ಳಿ' ಎಂದರು.

ಶಿವಣ್ಣ ಯಾಕೆ ಪ್ರಶ್ನಿಸಲಿಲ್ಲ?

"ಕರ್ನಾಟಕದಲ್ಲಿ ನೆಲೆಸಬೇಕು ಅಂದರೆ ನೀವು ಕನ್ನಡ ಕಲಿಯಬೇಕು ಎಂದು ನಾವು ಹೇಳಲ್ಲ, ನಾವೇ ಅವರ ಭಾಷೆ ಕಲಿಯುತ್ತೇವೆ. ನಾನು ಚೆನ್ನೈಗೆ ಹೋದಾಗ ನೋಡಿದ್ದೇನೆ, ಅಲ್ಲಿನವರು ಇಂಗ್ಲೀಷ್‌ನಲ್ಲಿ ಮಾತನಾಡಲು ಹಿಂದೇಟು ಹಾಕುತ್ತಾರೆ. ತಮಿಳು ಮಾತ್ರ ಎನ್ನುತ್ತಾರೆ. ಆದರೆ ನಾವು ಕಷ್ಟಬಿದ್ದು ಅವರದ್ದೇ ಭಾಷೆಯಲ್ಲಿ ಮಾರ್ಗದರ್ಶನ ಕೊಡುತ್ತೇವೆ ಇದು ನಮ್ಮ ದೌರ್ಬಲ್ಯ. ನಮ್ಮ ಅಜ್ಞಾನ ಹಾಗೂ ದೌರ್ಬಲ್ಯದಿಂದ ನಮ್ಮವರು ಯಾರು ಕಮಲ್ ಹೇಳಿಕೆ ಬಗ್ಗೆ ಪ್ರಶ್ನಿಸಲಿಲ್ಲ. ಶಿವಣ್ಣನವರೂ ಪ್ರಶ್ನಿಸಲಿಲ್ಲ " ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಜನರಿಗೆ ಅಭಿಮಾನ ಕಡಿಮೆ ಎನ್ನುವ ವಿಷಯವನ್ನು ಮತ್ತೆ ಮತ್ತೆ ಹೇಳಬೇಕಾಗಿದೆ. ಮಹಾಜನ್ ಆಯೋಗದ ತೀರ್ಪಿನ ಪ್ರಕಾರ ಕನ್ನಡ ಭಾಷೆ ಹೆಚ್ಚು ಮಾತನಾಡುವ ಜನ ಇರುವ ಭೂ ಭಾಗ ಕರ್ನಾಟಕಕ್ಕೆ ಸೇರಬೇಕು. ಈ ಹಿನ್ನೆಲೆಯಲ್ಲಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎನ್ನುವ ತೀರ್ಪು ಬಂದಿದೆ. ಲೋಕಸಭೆಯಲ್ಲಿ ಕೂಡ ಮಂಡನೆಯಾಗಿದೆ. ನಮ್ಮ ಸರ್ಕಾರ ಈ ತೀರ್ಪನ್ನು ಆಧರಿಸಿ ಕಾಸರಗೋಡು ನಮಗೆ ಕೊಡಿ ಎಂದು ಸರ್ಕಾರ ಕೇಳಬೇಕಿತ್ತು, ಯಾಕೆ ಕೇಳಿಲ್ಲ?' ಎಂದು ನಾ ಸೋಮೇಶ್ವರ ಪ್ರಶ್ನಿಸಿದ್ದಾರೆ. ನಾವು ಪ್ರಶ್ನಿಸುವುದನ್ನು ಬಿಟ್ಟರೆ, ಪ್ರತಿಭಟಿಸುವುದನ್ನು ಬಿಟ್ಟರೆ, ನಮ್ಮ ಅಭಿಮಾನ ಶೂನ್ಯತೆಯನ್ನು ಮುಂದುವರೆಸಿದರೆ, ಮುಂದಾನೊಂದು ಕಾಲದಲ್ಲಿ ಇವರೆಲ್ಲರೂ ಕರ್ನಾಟಕವನ್ನು ಹರಿದು ಹಂಚಿಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ.

ಮಹಾ ಸುಳ್ಳುಗಾರರು

ತಮಿಳರು ಎಂತಹ ಭಂಡ ಜನ, ಎಂತಹ ಸುಳ್ಳನ್ನೂ ಸಲ ಸುಲುಭವಾಗಿ ಹೇಳಿ ಸತ್ಯವನ್ನು ಮಣ್ಣಲ್ಲಿ ಹೂತುಹಾಕುವ ಸಾಮರ್ಥ್ಯವನ್ನು ಉಳ್ಳವರು ಎನ್ನುವುದಕ್ಕೆ ಪುರಾವೆಯು ಬೇಕಾಗಿದ್ದರೆ ನಮ್ಮ ಬಿಜಿಎಲ್ ಸ್ವಾಮಿ ಅವರು ಬರೆದ ' ತಮಿಳು ತಲೆಗಳ ನಡುವೆ' ಎನ್ನುವ ಕೃತಿಯನ್ನು ಓದಬೇಕು. ಸುಳ್ಳನ್ನು ಸತ್ಯವೆಂದು, ಇಲ್ಲದುದನ್ನು ಇದೆಯೆಂದು ಸಾಧಿಸುವುದರಲ್ಲಿ ನಿಸ್ಸೀಮರು. ಸ್ವಾಮಿಯವರು ಈ ಪುಸ್ತಕದಲ್ಲಿ ತಮಿಳರ ಆಕ್ರಮಣಶೀಲ ಮನೋಭಾವಕ್ಕೆ ಹಾಗೂ ಸತ್ಯವನ್ನು ತಿರುಚುವುದಕ್ಕೆ ಹೇಗೆ ಪ್ರಸಿದ್ಧರು ಎನ್ನುವುದಕ್ಕೆ ಹಲವು ಉದಾಹರಣೆಗಳು ದೊರೆಯುತ್ತವೆ. ದಯವಿಟ್ಟು ಎಲ್ಲ ಕನ್ನಡಿಗರು ಈ ಕೃತಿಯನ್ನು ಓದಬೇಕು' ಎಂದರು.

ದ್ರಾವಿಡ ಭಾಷಾ ಸಂಕುಲ

ದ್ರಾವಿಡ ಎಂಬ ಶಬ್ದವು ಜನಾಂಗ ಸೂಚಕವಲ್ಲ. ಅದು ಭಾಷಾ ಸಂಕುಲದ ಸೂಚಕ. ಆದರೆ ತಮಿಳರು ದ್ರಾವಿಡರನ್ನು ಪ್ರತ್ಯೇಕ ಜನಾಂಗ ಎಂದು ಬಿಂಬಿಸಿ, ತಮಿಳೇ ಜಗತ್ತಿನ ಸರ್ವಶ್ರೇಷ್ಠ ಭಾಷೆ ಎಂದು ಬಿಂಬಿಸಿ ರಾಜಕೀಯವನ್ನು ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಕರ್ನಾಟಕದ ಯಾವ ರಾಜಕೀಯ ಪಕ್ಷವೂ ನಾಡು, ನುಡಿಯ ಹೆಸರಿನಲ್ಲಿ ಮತವನ್ನು ಕೇಳಿಲ್ಲ. ಹಾಗೆಯೇ ಕನ್ನಡಿಗರೂ ಸಹ ಕನ್ನಡ ಹಿತವನ್ನು ಬಯಸುವ ಸರ್ಕಾರಕ್ಕೆ ಮಾತ್ರ ಮತವನ್ನು ಚಲಾಯಿಸುತ್ತೇವೆ ಎಂದು ಹೇಳಿಲ್ಲ. ಹಾಗಾಗಿ ಕನ್ನಡ ಬಾಷೆಯ ದುರ್ದೆಶೆ ಮುಂದುವರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡ-ತಮಿಳು-ದ್ರಾವಿಡ ಭಾಷೆಗಳ ಇತಿಹಾಸವನ್ನು ತಿಳಿಯುವುದು ಒಳ್ಳೆಯದು.

Kamal Haasan s Kannada Born from Tamil Remark Sparks Uproar Na Someshwara Blames Kannadigas Language Apathy

ಮಧ್ಯಪ್ರಾಚ್ಯ ಮೂಲ

ದ್ರಾವಿಡ ಭಾಷೆಯ ಬುಡವನ್ನು ಇರಾನ್ ಸಮೀಪದ ಈಳಂ ಪ್ರದೇಶದ ಇಲಾಮೈಟ್ ಭಾಷೆಯಲ್ಲಿ ಕಾಣಬಹುದು. ಇಲಾಮೈಟ್ ಭಾಷೆಯ ಶಬ್ದಗಳು ಮತ್ತು ವ್ಯಾಕರಣವು ದ್ರಾವಿಡ ಭಾಷೆಗಳೊಂದಿಗೆ ಹೋಲುತ್ತದೆ. ಇರಾನಿನಲ್ಲಿ ಹಿಂಗಾರು ಮಳೆ ಮಾತ್ರ ಬೀಳುತ್ತದೆ. ಕೃಷಿ ಕಷ್ಟ. ಹಾಗಾಗಿ ಅನೇಕ ಜನರು ವಾಯುವ್ಯ ದಿಕ್ಕಿನ ಮೂಲಕ ಭಾರತಕ್ಕೆ ಬಂದರು. ಸಿಂಧು ನದಿಯ ಕಣಿವೆಯಲ್ಲಿ ಮುಂಗಾರು-ಹಿಂಗಾರು ಮಳೆ ಬೀಳುತ್ತಿತ್ತು. ನದಿಗಳು ವರ್ಷಪೂರ್ತಿ ಭೋರ್ಗರೆದು ಹರಿಯುತ್ತಿದ್ದವು. ಹಾಗಾಗಿ ಅಲ್ಲಿಯೇ ನೆಲೆ ನಿಂತು ಸಿಂಧು-ಸರಸ್ವತಿ ಸಂಸ್ಕೃತಿಯನ್ನು ಸ್ಥಾಪಿಸಿದರು.
ಭಾರತಕ್ಕೆ ಬರುವಾಗ ಬಹುಶಃ ದ್ರಾವಿಡರು ಮೂಲ ದ್ರಾವಿಡ ಭಾಷೆಯನ್ನು (ಪ್ರೋಟೋ ದ್ರವಿಡಿಯನ್) ಮಾತನಾಡುತ್ತಿದ್ದರು. ಇವರಲ್ಲಿ ಒಂದಷ್ಟು ಜನರು ಉತ್ತರದಲ್ಲಿ ನೆಲೆನಿಂತರು. ದ್ರಾವಿಡ ಭಾಷೆಯು ಬ್ರಾಹುಯಿ, ಕುರುಕ್, ಮಾಲ್ಟೋ ಭಾಷೆಗಳಿಗೆ ಜನ್ಮವಿತ್ತವು. ಇವರೇ ಉತ್ತರ ದ್ರಾವಿಡರು. ನಂತರ ಉಳಿದವರು ದ್ರಾವಿಡರು ಮಧ್ಯ ಭಾರತಕ್ಕೆ ಬಂದರು. ಅಲ್ಲಿ ಕೆಲವರು ಉಳಿದರು. ಕೊಲಾಮಿ, ದೂರುವ, ಗಡಬ ಭಾಷೆಗಳನ್ನು ರೂಪಿಸಿದರು. ಮಧ್ಯ ದ್ರಾವಿಡರೆನಿಸಿಕೊಂಡರು. ಕೆಲವರು ಮತ್ತಷ್ಟು ದಕ್ಷಿಣದ ಕಡೆಗೆ ಬಂದರು. ಇವರೇ ದಕ್ಷಿಣ-ಮಧ್ಯ ಭಾರತದ ದ್ರಾವಿಡರು. ಇವರು ತೆಲುಗು, ಗೊಂಡಿ ಮತ್ತಷ್ಟು ಅಸಂಖ್ಯ ಉಪಭಾಷೀಗಳನ್ನು ರೂಪಿಸಿದರು. ಉಳಿದವರು ಸಂಪೂರ್ಣ ದಕ್ಷಿಣಕ್ಕೆ ಬಂದರು. ಇವರೇ ದಕ್ಷಿಣ ಭಾರತದ ದ್ರಾವಿಡರು.

ದಕ್ಷಿಣ ಭಾರತಕ್ಕೆ ಬಂದ ದ್ರಾವಿಡರು ಆಡುತ್ತಿದ್ದ ದಕ್ಷಿಣ ದ್ರಾವಿಡ ಮಾತೃಭಾಷೆ ಎಲ್ಲಾ ದ್ರಾವಿಡ ಭಾಷೆಗಳಿಗೆ ಜನ್ಮವನ್ನು ನೀಡಿದವು. ದಕ್ಷಿಣ ದ್ರಾವಿಡ ಮಾತೃಭಾಷೆಯಿಂದ ಮೊದಲು ತುಳು, ಕೊರಗ, ಕುಡಿಯ ಬೇರ್ಪಟ್ಟವು. ನಂತರ ತಮಿಳು ಮತ್ತು ಕನ್ನಡ ಭಾಷಾ ಸಂಕುಲಕ್ಕೆ ಜನ್ಮವಿತ್ತ ಕಂದಮಿಳ್ ರೂಪುಗೊಂಡಿತು. ಈ ಕಂದಮಿಳ್ ಇಂದ ಕನ್ನಡ ಭಾಷಾ ಸಂಕುಲ ಹಾಗೂ ತಮಿಳು ಭಾಷಾ ಸಂಕುಲವು ಬೇರ್ಪಟ್ಟವು. ಕನ್ನಡದ ಜೊತೆಯಲ್ಲಿ ಬಡಗವು ಪ್ರತ್ಯೇಕವಾಯಿತು. ತಮಿಳಿನ ಜೊತೆಯಲ್ಲಿ ಕೋಟ, ತೋಡ, ಕೊಡವ, ಇರುಳ ಹಾಗೂ ಮಲಯಾಳಿ ಭಾಷೆಗಳು ರೂಪುಗೊಂಡವು.


ಲಿಪಿಯ ಉಗಮ:

ನಮ್ಮ ಭಾರತದ ಎಲ್ಲ ಭಾಷಾ ಲಿಪಿಗಳ ಉಗಮವನ್ನು ಬ್ರಾಹ್ಮಿಯಲ್ಲಿ ಕಾಣಬಹುದು. ಬಹುಶಃ ಈ ಬ್ರಾಹ್ಮಿಯನ್ನು ಕಂದಮಿಳ್ ಜನರು ರೂಪುಗೊಳಿಸಿರಬೇಕು. ಕ್ರಿ.ಪೂ.೬ನೆಯ ಶತಮಾನದ ಹೊತ್ತಿಗೆ ಬ್ರಾಹ್ಮಿ ಲಿಪಿಯು ಶ್ರೀಲಂಕ ಮತ್ತು ತಮಿಳುನಾಡಿನಲ್ಲಿ ಕಾಣಿಸಿಕೊಂಡವು. ಕೀಲಡಿಯಲ್ಲಿ ದೊರೆತ ಮಡಕೆಯ ಚೂರುಗಳ ಮೇಲೆ ಲಿಪಿಯಿದೆ. ಇದನ್ನು ಅವರು ಕಂದಮಿಳ್-ಬ್ರಾಹ್ಮಿ ಎಂದು ಕರೆಯಬೇಕಿತ್ತು. ಆದರೆ ಹಾಗೆ ಕರೆಯಲಿಲ್ಲ. ತಮಿಳು-ಬ್ರಾಹ್ಮಿ ಎಂದು ಕರೆದರು. ತಮಿಳರು ಕ್ರಿ.ಪೂ.3 ನೆಯ ಶತಮಾನದ ಹೊತ್ತಿಗೆ ಶಾಸನಗಳನ್ನು ಕೆತ್ತಿದರು. ಕ್ರಿ.ಪೂ.3 ರಿಂದ ಕ್ರಿ.ಶ.3 ನೆಯ ಶತಮಾನಗಳ ನಡುವೆ ಸಂಗಮ ಸಾಹಿತ್ಯವು ಬೆಳೆಯಿತು.

ಅವರು ತಮಿಳು-ಬ್ರಾಹ್ಮಿ ಎಂದು ಕರೆದ ಹಾಗೆ ಕನ್ನಡ-ಬ್ರಾಹ್ಮಿ ಲಿಪಿಯೂ ರೂಪುಗೊಂಡಿರಬೇಕು. ಆದರೆ ಅದಕ್ಕೆ ಪುರಾವೆ ನಮಗೆ ದೊರೆತಿಲ್ಲ. ದೊರೆತಿಲ್ಲ ಎಂದರೆ ನಾವು ಹುಡುಕಿಲ್ಲ. ತಮಿಳರು ತಮ್ಮ ಭಾಷೆಯ ಬಗ್ಗೆ ಇರುವಷ್ಟು ಅಭಿಮಾನ ನಮಗೆ ಹಾಗೂ ನಮ್ಮ ಸರ್ಕಾರಕ್ಕೆ ಇರದ ಕಾರಣ ಈ ದಿಶೆಯಲ್ಲಿ ಸಂಶೋಧನೆಯು ನಡೆದಿಲ್ಲ. ಈ ಅವಧಿಯ ಕನ್ನಡ ಶಾಸನಗಳಾಗಲಿ ಅಥವ ಸಾಹಿತ್ಯ ಕೃತಿಗಳಾಗಲಿ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ತಮಿಳರು ದಾಖಲೆಗಳಿಲ್ಲದ ಕನ್ನಡವನ್ನು ಹೀಗಳೆದು ತಮಿಳಿನಿಂದ ಕನ್ನಡ ಹುಟ್ಟಿತು ಎಂದು ಹಂಗಿಸುತ್ತಿದ್ದಾರೆ.
ಸಿಂಧು-ಸರಸ್ವತಿ ಸಂಸ್ಕೃತಿಯನ್ನು ಕಟ್ಟಿದವರಲ್ಲಿ ಕಣ್ಣರ್ ಎಂಬ ಬುಡಕಟ್ಟಿನವರೂ ಒಬ್ಬರು. ಲೋಥಾಲಿನಲ್ಲಿ ದೊರೆತ ಚಿನ್ನ ನಮ್ಮ ಕೋಲಾರ ಮತ್ತು ಹಟ್ಟಿಯ ಮೂಲದವು. ರಾಮಾಯಣ-ಮಹಾಭಾರತದಲ್ಲಿ ಕರ್ನಾಟಕದ ಪ್ರದೇಶಗಳ ಉಲ್ಲೇಖವಿದೆ. ಮಹಾಭಾರತವಂತು ಕರಟಕ, ಮಹಿಷಕ, ವನವಾಸಿಕ, ಕುಂತಳ ಮುಂತಾದ ಪ್ರದೇಶಗಳನ್ನು ಹೆಸರಿಸುತ್ತದೆ. ಚಾರಿತಾನ್ ಮೈಮ್ ಗ್ರೀಕ್ ಪ್ರಹಸನದಲ್ಲಿ ಕನ್ನಡದ ನುಡಿಗಳಿವೆ. ಅಶೋಕನ ಬ್ರಹ್ಮಗಿರಿ ಶಿಲಾ ಶಾಸನದಲ್ಲಿ ಇಸಿಲ ಎಂಬ ಕೋಟೆಯಿಂದ ಸುತ್ತುವರೆದ ನಗರ (ವಾಣಿಜ್ಯ ಕೇಂದ್ರ) ದ ಉಲ್ಲೇಖವಿದೆ. ಅಲೆಗ್ಸಾಂಡ್ರಿಯದ ಗ್ರಂಥಾಲಯದಲ್ಲಿ ಕನ್ನಡ ಕೃತಿಗಳು ಇದ್ದವು ಎಂದು ಡಾ|ದೊಡ್ಡರಂಗೇ ಗೌಡರು ಹೇಳಿದ್ದಾರೆ. ಆದರೆ ನಮಗೆ ಅಧಿಕೃತವಾಗಿ ದೊರೆತಿರುವುದು ಹಲ್ಮಿಡಿ ಶಾಸನ ಹಾಗೂ ಕವಿರಾಜಮಾರ್ಗ. ಕವಿರಾಜ ಮಾರ್ಗದಲ್ಲಿ ಈ ಹಿಂದೆ ಇದ್ದ ಕವಿಗಳ ಹಾಗೂ ಅವರು ಬರೆದ ಕೃತಿಗಳ ದೊಡ್ಡ ಪಟ್ಟಿಯೇ ಸಿಗುತ್ತದೆ. ಹೀಗಿದ್ದರೂ ಸೂಕ್ತ ದಾಖಲೆಗಳು ಇರದ ಕಾರಣ, ತಮಿಳರು ಕನ್ನಡಿಗರನ್ನು ಹಗುರವಾಗಿ ಕಾಣುತ್ತಿದ್ದಾರೆ. ಕನ್ನಡವು ತಮಿಳಿನಿಂದ ಹುಟ್ಟಿದು ಎಂದು ಕುಹುಕವನ್ನು ಆಡುತ್ತಿದ್ದಾರೆ. ಭಾಷೆಯು ಎಂದಿಗೂ ಹುಟ್ಟಲು ಸಾಧ್ಯವಿಲ್ಲ. ಅದು ಯಾವಾಗಲು ಕವಲೊಡೆಯುತ್ತದೆ. ಈ ಸಾಮಾನ್ಯ ಜ್ಞಾನವನ್ನು ಪ್ರಜ್ಞಾಪೂರ್ವಕವಾಗಿ ಉಪೇಕ್ಷಿಸ್ತಾರೆ. ಕನ್ನಡವು ತಮಿಳಿನಿಂದ ಹುಟ್ಟದೇ ಸ್ವತಂತ್ರವಾಗಿ ಬ್ರಾಹ್ಮಿಯಿಂದ ವಿಕಾಸವಾಯಿತು ಎನ್ನುವುದಕ್ಕೆ ಉತ್ತಮ ಉದಾಹರಣೆ ಎರಡೂ ಭಾಷೆಗಳ ಲಿಪಿ. ವಿನೋಬಾ ಭಾವೆಯವರು ಕನ್ನಡ ಲಿಪಿಯನ್ನು ಲಿಪಿಗಳ ರಾಣಿ ಎಂದು ಕರೆದಿದ್ದಾರೆ. ಅಷ್ಟು ಸುಂದರವಾಗಿದೆ. ತಮಿಳು ಲಿಪಿಗೆ ಈ ಸೌಂದರ್ಯವಿಲ್ಲ.

ಕನ್ನಡ ವರ್ಣಮಾಲೆ ವೈಜ್ಞಾನಿಕವಾದದ್ದು. ನುಡಿದಂತೆ ಬರೆಯುತ್ತೇವೆ. ಬರೆದಂತೆ ಓದುತ್ತೇವೆ. ನಾವು ಮನೋಹರ ಎಂದು ಸ್ಪಷ್ಟವಾಗಿ ಬರೆದರೆ, ತಮಿಳರು ಮನೋಗರ ಎಂದು ಬರೆಯುತ್ತಾರೆ. ಏಕೆಂದರೆ ಅವರು ನುಡಿದಂತೆ ಬರೆಯುವುದಿಲ್ಲ. ಬರೆದಂತೆ ಓದಿದರೆ ಆಭಾಸವಾಗುತ್ತದೆ. ಕಾರಣ ಅವರ ಅವೈಜ್ಞಾನಿಕ ಹಾಗೂ ಅಪೂರ್ಣ ಲಿಪಿ. ಕನ್ನಡದಲ್ಲಿ ಸರ್ವಶ್ರೇಷ್ಠ ಸಾಹಿತ್ಯ ಕೃತಿಗಳು ರಚನೆಯಾಗಿವೆ. ಕನ್ನಡಕ್ಕೆ ೮ ಜ್ಞಾನಪೀಠ ಪ್ರಶಸ್ತಿಗಳು ದೊರೆತಿದ್ದರೆ ತಮಿಳಿಗೆ ೨ ಮಾತ್ರ ದೊರೆತಿವೆ. ಬೂಕರ್ ಪ್ರಶಸ್ತಿಯಂತೂ ಕನ್ನಡಕ್ಕೆ ಮಾತ್ರ ದೊರೆತಿದೆ.

'ಥಗ್ ಲೈಫ್'

ಕಮಲಹಾಸನ್ ಕನ್ನಡಿಗರ ಕ್ಷಮೆಯನ್ನು ಕೇಳುವುದಿಲ್ಲ ಎಂದು ಸ್ಪಷ್ಟವಾಗಿ ನುಡಿದಿದ್ದಾರೆ. ನಮ್ಮ ಫಿಲಂ ಚೇಬರ್ ಹಾಗೂ ಶಿವರಾಜ್ ತಂಗಡಗಿಯವರು ಚಿತ್ರ ಬಿಡುಗಡೆಗೆ ಅನುಮತಿಯನ್ನು ಕೊಡುವುದಿಲ್ಲ ಎಂದಿದ್ದಾರೆ. ಆದರೂ ಒಂದು ವೇಳೆ ಚಿತ್ರ ಬಿಡುಗಡೆ ಆಯಿತು ಎಂದು ಕೊಳ್ಳಿ. ಆಗ ಕನ್ನಡಿಗರು ಚಿತ್ರವನ್ನು ನೋಡಲು ಹೋಗಬಾರದು. ಇದನ್ನು ನಿರೀಕ್ಷಿಸಿಯೇ ಕನ್ನಡಿಗರು ಚಿತ್ರವನ್ನು ನೋಡದಿದ್ದರೂ ಪರವಾಗಿಲ್ಲ ಎಂದು ಕಮಲ ಹಾಸನ್ ಹೇಳಿದ್ದಾರೆ. ಅವರಿಗೆ ಗೊತ್ತು. ಬೆಂಗಳೂರಿನಲ್ಲಿ ಹಾಗೂ ಕರ್ನಾಟಕದಲ್ಲಿ ಕನ್ನಡಿಗರಿಗಿಂತ ಇತರ ಭಾಷಿಕ್‌ರು ಅಧಿಕವಾಗಿದ್ದಾರೆ, ಅವರು ನೋಡುತ್ತಾರೆ ಎನ್ನುವ ಆತ್ಮವಿಶ್ವಾಸ.

ಇನ್ನೆರಡು ಮೂರು ದಿನಗಳಲ್ಲಿ ಕನ್ನಡಿಗರ ಅಭಿಮನ ಹಾಗೂ ಅಸ್ಮಿತೆಗಳ ಪಣ ಏನಾಗುತ್ತದೆ ಎನ್ನುವುದನ್ನು ನೋಡಬೇಕು. ಹಾಗೆಯೇ ಕಮಲಹಾಸನ್ ಹೆಣೆಯುವ ತಂತ್ರವನ್ನು ನೋಡುವ ಕುತೂಹಲವಿದೆ ಎಂದು ಡಾ|ನಾ.ಸೋಮೇಶ್ವರ ಹೇಳಿದರು.

More from Filmibeat

English summary
Kamal Haasan's controversial statement claiming Kannada originated from Tamil has triggered backlash in Karnataka.
Read more about: kamal haasan kannada tamil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X