'ಥಗ್ ಲೈಫ್' ಚಿತ್ರಕ್ಕೆ ಮತ್ತೆ ಸಂಕಷ್ಟ; ಸುಪ್ರೀಂ ಅಸ್ತು ಅಂದ್ರು ಕರ್ನಾಟಕದಲ್ಲಿ ಬಿಡುಗಡೆಗೆ ವಿಘ್ನ!
ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರಕ್ಕೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಎರಡು ವಾರಗಳ ಹಿಂದೆ ವಿಶ್ವದಾದ್ಯಂತ ತೆರೆಗಪ್ಪಳಿಸಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಆಗಲಿಲ್ಲ. ಈಗ ಸುಪ್ರೀಂ ಕೋರ್ಟ್ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಅನುವು ಮಾಡಿಕೊಟ್ಟರು, ಪ್ರಯೋಜನವಿಲ್ಲ ಎನ್ನುವಂತಾಗಿದೆ.
ಮಣಿರತ್ನಂ ನಿರ್ದೇಶನದ ಗ್ಯಾಂಗ್‌ಸ್ಟರ್ 'ಥಗ್ ಲೈಫ್' ಚಿತ್ರದಲ್ಲಿ ಕಮಲ್ ಜೊತೆ ಸಿಂಬು, ತ್ರಿಷಾ, ನಾಸರ್, ಅಭಿರಾಮಿ ನಟಿಸಿದ್ದಾರೆ. ಬಹಳ ವರ್ಷಗಳ ಬಳಿಕ ಕಮಲ್- ಮಣಿ ಒಟ್ಟಿಗೆ ಮಾಡಿದ್ದ ಸಿನಿಮಾ ಎನ್ನುವ ಕಾರಣಕ್ಕೆ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಆದರೆ ಜೂನ್ 5ರಂದು ತೆರೆಕಂಡ ಸಿನಿಮಾ ಎಲ್ಲರ ನಿರೀಕ್ಷೆ ಹುಸಿಯಾಗಿಸಿದೆ. ಕನ್ನಡ ಭಾಷೆಯ ಕುರಿತು ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ರಾಜ್ಯದಲ್ಲಿ ಸಿನಿಮಾ ಬಿಡುಗಡೆಗೆ ತೊಡಕಾಗಿತ್ತು.

ಕಮಲ್ ಹಾಸನ್ ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದರು. ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿ ಕಮಲ್ ಹಾಸನ್‌ಗೆ ಎಚ್ಚರಿಕೆ ಕೊಟ್ಟಿದ್ದರು. ರಾಜ್ಯದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆ ಆಗಬೇಕು ಅಂದರೆ ಕ್ಷಮೆ ಕೇಳಬೇಕು ಎಂದು ಎಚ್ಚರಿಸಿದ್ದರು. ಪೊಲೀಸ್ ಭದ್ರತೆ ನಡುವೆ ಸಿನಿಮಾ ಬಿಡುಗಡೆಗೆ ಹೈಕೋರ್ಟ್ ಮೆಟ್ಟಿಲೇರಿದರೂ ಪ್ರಯೋಜನವಾಗಿರಲಿಲ್ಲ. ಕೋರ್ಟ್ ಸಹ ಕಮಲ್ ಕ್ಷಮೆ ಕೇಳಬೇಕು ಎಂದಿತ್ತು.
ಕರ್ನಾಟಕ ಹೊರತು ಪಡಿಸಿ ಬೇರೆ ಎಲ್ಲಾ ಕಡೆ ಸಿನಿಮಾ ತೆರೆಕಂಡು ನೆಗೆಟಿವ್ ಟಾಕ್ ಗಿಟ್ಟಿಸಿಕೊಂಡಿದೆ. ಒಂದೇ ವಾರಕ್ಕೆ ಸಾಕಷ್ಟು ಚಿತ್ರಮಂದಿರಗಳಿಂದ ಸಿನಿಮಾ ತೆಗೆದು ಹಾಕಲಾಗಿದೆ. ಇದೆಲ್ಲದರ ನಡುವೆ ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆ ಅಡ್ಡಿಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸರ್ಕಾರಕ್ಕೆ ಈ ಬಗ್ಗೆ ಆದೇಶ ನೀಡಿದೆ. ಅಲ್ಲಿಗೆ ರಾಜ್ಯದಲ್ಲಿ ಸಿನಿಮಾ ಬಿಡುಗಡೆಗೆ ಎದುರಾಗಿದ್ದ ಸಮಸ್ಯೆ ಬಗೆಹರಿದಿದೆ. ಆದರೆ ಇದೀಗ ಸಿನಿಮಾ ಬಿಡುಗಡೆಗೆ ವಿತರಕರು ಹಿಂದೇಟು ಹಾಕುತ್ತಿದ್ದಾರೆ.
ಬೇರೆ ಕಡೆಗಳಲ್ಲಿ ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್, ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಕನ್ನಡಪರ ಹೋರಾಟಗಾರರ ಎಚ್ಚರಿಕೆ ಗಮನಿಗೆ ವಿತರಕರು ಸಿನಿಮಾ ತೆರೆಗೆ ತರಲು ಹಿಂದೇಟು ಹಾಕುತ್ತಿದ್ದಾರೆ. ವೆಂಕಟೇಶ್ ಕಮಲಾಕರ್ ಎಂಬುವವರು 'ಥಗ್ ಲೈಫ್' ಚಿತ್ರದ ಕರ್ನಾಟಕ ವಿತರಣೆ ಹಕ್ಕು ಪಡೆದಿದ್ದರು. ಈ ಸಂಬಂಧ ಒಪ್ಪಂದವಾಗಿ ಒಂದಷ್ಟು ಹಣ ಕೊಟ್ಟುಬಿಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರು ಸಿನಿಮಾ ಬಿಡುಗಡೆ ಸಿದ್ಧರಿಲ್ಲ. ನಾನು ಕೊಟ್ಟಿರುವ ಮುಂಗಡ ಹಣ ನನಗೆ ವಾಪಸ್ ಕೊಟ್ಟರೆ ಸಾಕು ಎನ್ನುತ್ತಿದ್ದಾರೆ.

ಕರ್ನಾಟಕದಲ್ಲಿ ನಾವು ಸಿನಿಮಾ ಬಿಡುಗಡೆ ಮಾಡಲ್ಲ ಎಂದು ವಿತರಕ ವೆಂಕಟೇಶ್ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ನಾವು ವಿತರಣೆ ಹಕ್ಕು ಪಡೆದುಕೊಂಡಿದ್ದೆವು. ಆದರೆ ಈಗ ಬಿಡುಗಡೆಗೆ ಯಾವುದೇ ಪ್ರಯತ್ನ ಮಾಡ್ತಿಲ್ಲ, ಬಿಡುಗಡೆ ಮಾಡುವುದು ಇಲ್ಲ" ಎಂದು ಹೇಳಿದ್ದಾರೆ.
ಸ್ವತಃ ಮಣಿರತ್ನಂ ಹಾಗೂ ಕಮಲ್ ಹಾಸನ್ 'ಥಗ್ ಲೈಫ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಸಿನಿಮಾ ಬೇರೆ ಕಡೆಗಳಲ್ಲಿ ನೀರಸ ಪ್ರದರ್ಶನ ಕಂಡಿದೆ. ಈಗ ಥಿಯೇಟರ್ ಮಾಲೀಕರು ಸಿನಿಮಾ ಪ್ರದರ್ಶನಕ್ಕೆ ಆಸಕ್ತಿ ತೋರಿಸುತ್ತಿಲ್ಲ. "ನಿರ್ಮಾಪಕರೇ ನೇರವಾಗಿ ಬಿಡುಗಡೆ ಮಾಡಬೇಕು ಎಂದರೂ ಮೊದಲು ಸೆಟ್ಲ್‌ಮೆಂಟ್ ಮುಗಿಸಬೇಕು. ನಮ್ಮ ಅನುಮತಿ ಇಲ್ಲದೇ ಬೇರೆ ವಿತರಕರು ಸಿನಿಮಾ ಬಿಡುಗಡೆ ಮಾಡಲು ಅವಕಾಶ ಇಲ್ಲ. ನಿರ್ಮಾಪಕರು, ಮಲ್ಟಿಪ್ಲೆಕ್ಸ್ ಚೈನ್ ಕೂಡ ಸಿನಿಮಾ ಬಿಡುಗಡೆಗೆ ಆಸಕ್ತಿ ತೋರಿಸುತ್ತಿಲ್ಲ" ಎಂದು ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಕಮಲ್ ಹಾಸನ್ ಕ್ಷಮೆ ಕೇಳದ ಹೊರತು ರಾಜ್ಯದಲ್ಲಿ ಆಕ್ರೋಶ ಕಮ್ಮಿ ಆಗುವುದಿಲ್ಲ. ರಾಜ್ಯಸಭಾ ಸದಸ್ಯರಾಗುವ ಅವಕಾಶ ಸಿಕ್ಕಿರುವ ಸಮಯದಲ್ಲಿ ಕಮಲ್ ಕ್ಷಮೆ ಕೇಳಲು ಸಿದ್ಧರಿಲ್ಲ. ಇಂತಹ ಸಮಯದಲ್ಲಿ ಬೇರೆಡೆ ಸೋತ ಸಿನಿಮಾವನ್ನು ಇಲ್ಲಿ ಬಿಡುಗಡೆ ಮಾಡುವುದು ಅನುಮಾನ ಎನ್ನುವಂತಾಗಿದೆ. ಈಗಾಗಲೇ 4 ವಾರಕ್ಕೆ ಚಿತ್ರವನ್ನು ಓಟಿಟಿಗೆ ತರುವ ಬಗ್ಗೆ ಊಹಾಪೋಹ ಶುರುವಾಗಿದೆ. ಹಾಗಾಗಿ ಕರ್ನಾಟಕದ ಚಿತ್ರಮಂದಿರಗಳಲ್ಲಿ 'ಥಗ್ ಲೈಫ್' ರಿಲೀಸ್ ಕಷ್ಟ ಕಷ್ಟ ಎನ್ನುವಂತಾಗಿದೆ.


Click it and Unblock the Notifications











