ಕನ್ನಡ ಭಾಷೆ ಬಗ್ಗೆ ಕಮಲ್ ವಿವಾದಾತ್ಮಕ ಹೇಳಿಕೆಯಿಂದ ಒಳ್ಳೇದೇ ಆಯ್ತಾ?
ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಲು ಸುಪ್ರೀಂ ಕೋರ್ಟ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ ವಿತರಕರು ಸಿನಿಮಾ ಬಿಡುಗಡೆಗೆ ಮುಂದೆ ಬರುತ್ತಿಲ್ಲ ಎನ್ನಲಾಗ್ತಿದೆ. ಕೋರ್ಟ್ ಆದೇಶವನ್ನು ನಾವೆಲ್ಲರೂ ಗೌರವದಿಂದ ಅನುಸರಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಹೇಳಿದ್ದಾರೆ.
ಕನ್ನಡಪರ ಸಂಘಟನೆಗಳು ಕೂಡ ರಾಜ್ಯದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆ ವಿರೋಧಿಸುವುದಿಲ್ಲ ಎಂದು ಹೇಳಿವೆ. ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ನೀಡಿದ್ದ ಹೇಳಿಕೆ ತಪ್ಪು. ಅದಕ್ಕೆ ಅವರು ಕ್ಷಮೆ ಯಾಚಿಸಬೇಕಿತ್ತು. ಹೈಕೋರ್ಟ್ ಕೂಡ ಇದನ್ನೇ ಹೇಳಿತ್ತು. ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ನೀಡಿದ್ದ ಕಮಲ್ ಅದಕ್ಕೆ ಕ್ಷಮೆ ಕೇಳಬೇಕಿತ್ತು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗಲಿ ಬಿಡಲಿ, ಆದರೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಯಿಂದ ಒಂದು ಸತ್ಯ ಎಲ್ಲರಿಗೂ ಗೊತ್ತಾಗಿದೆ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ತಮಿಳರು ನಾವೇ ಶ್ರೇಷ್ಠ, ತಮಿಳಿನಿಂದಲೇ ಕನ್ನಡ ಸೇರಿದಂತೆ ದಕ್ಷಿಣದ ಭಾಷೆಗಳೆಲ್ಲಾ ಹುಟ್ಟಿದೆ ಎಂದು ಬೀಗುತ್ತಿದ್ದರು. ಅದು ನಿಜವಲ್ಲ ಎಂದು ಕೆಲವರಿಗಾದರೂ ಗೊತ್ತಾಗಿದೆ. ಇದಕ್ಕೆಲ್ಲಾ ಕಾರಣ ಕಮಲ್ ಹಾಸನ್ ನೀಡಿದ್ದ ಹೇಳಿಕೆ ಹುಟ್ಟುಹಾಕಿದ ಚರ್ಚೆ ಎನ್ನಲಾಗ್ತಿದೆ.
ದ್ರಾವಿಡ ಭಾಷೆಗಳಲ್ಲಿ ತಮಿಳು ಬಹಳ ಪುರಾತನವಾದುದು ಎಂದು ತಮಿಳರು ವಾದಿಸುತ್ತಾ ಬರುತ್ತಿದ್ದಾರೆ. ಅದನ್ನೇ ನಿಜ ಎಂದು ಎಲ್ಲರನ್ನು ನಂಬಿಸುವ ಪ್ರಯತ್ನ ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಆದರೂ ಈ ಬಗ್ಗೆ ಸರಿಯಾದ ಮಾಹಿತಿ ಎಲ್ಲರಿಗೂ ಗೊತ್ತಾಗಬೇಕಿದೆ. ಪ್ರೋಟೊ ದ್ರಾವಿಡ ಎನ್ನುವುದು ಮೂಲ ದ್ರಾವಿಡ ಭಾಷೆ. ಸದ್ಯ ಇರುವ ಎಲ್ಲಾ ದ್ರಾವಿಡ ನುಡಿಗಳು ಇದರಿಂದಲೇ ಹುಟ್ಟಿಕೊಂಡವು ಎಂದು ಕೆಲ ಇತಿಹಾಸತಜ್ಞರು ವಾದಿಸುತ್ತಾರೆ. ಬಳಿಕ ಅವರು ಅವು ಬೇರೆ ಬೇರೆ ಭಾಷೆಗಳಾಗಿ ಕವಲು ಒಡೆಯಿತು ಎನ್ನುತ್ತಾರೆ. ಆದರೂ ತಮಿಳು ಭಾಷೆಯೇ ಪ್ರೋಟೊ ದ್ರಾವಿಡ ಭಾಷೆಗೆ ಹತ್ತಿರ ಎನ್ನುವಂತಿದೆ. ಹಾಗಾಗಿ ತಮಿಳು ಭಾಷೆಯೇ ದ್ರಾವಿಡ ಭಾಷೆಗಳ ತಾಯಿ ಎಂದು ತಮಿಳರು ಈ ಕ್ಷಣಕ್ಕೂ ವಾದಿಸುತ್ತಿದ್ದಾರೆ.
ತಮಿಳರ ವಾದಕ್ಕೆ ಸರಿಯಾದ ಪುರಾವೆ ಇಲ್ಲ ಎನ್ನುವುದು ಈಗ ಸಾಕಷ್ಟು ಜನರಿಗೆ ಗೊತ್ತಾಗಿದೆ. ಕರ್ನಾಟಕ ಹೈಕೋರ್ಟ್ ಕೂಡ "ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ಹೇಳಿಕೆ ನೀಡಲು ಕಮಲ್ ಹಾಸನ್ ಇತಿಹಾಸಕಾರರೇ ಅಥವಾ ಭಾಷಾ ತಜ್ಞರೇ? ಎಂದು ಪ್ರಶ್ನಿಸಿತ್ತು. ಈ ಹಿಂದೆ ರಾಜಗೋಪಾಲಾಚಾರ್ಯ ಕೂಡ ಇಂಥದ್ದೇ ಹೇಳಿಕೆ ನೀಡಿ ಕೊನೆಗೆ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದ್ದ ಪ್ರಕರಣವನ್ನು ನ್ಯಾಯಾಧೀಶರು ನೆನಪಿಸಿದ್ದರು.
ಸದ್ಯ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಯಾರೂ ಅಡ್ಡಿಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಕಮಲ್ ಹಾಸನ್ ಸೃಷ್ಟಿಸಿದ ವಿವಾದ ಬಗೆಹರಿದಿಲ್ಲ. ಕಮಲ್ ಹೇಳಿಕೆಯಿಂದ ಕೆಲವರು ಎಚ್ಚೆತ್ತುಕೊಂಡಿದ್ದಾರೆ. ಕನ್ನಡ ಬಗ್ಗೆ ತಿಳಿದುಕೊಂಡಿದ್ದಾರೆ ಎನ್ನುವ ವಾದ ಇದ್ದರೂ ಗೊಂದಲ ಮತ್ತೆ ಮುಂದುವರೆದಿದೆ ಎನ್ನುವ ವಾದವೂ ಇದೆ. "ಥಟ್ ಅಂತ ಹೇಳಿ" ಕಾರ್ಯಕ್ರಮ ಖ್ಯಾತಿಯ ನಾ. ಸೋಮೇಶ್ವರ ಅವರು ಫಿಲ್ಮಿಬೀಟ್ ಕನ್ನಡಕ್ಕೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಯಾರಿಗೂ ಇನ್ನು ಈ ಬಗ್ಗೆ ಅರಿತು ಬಂದಿಲ್ಲ. ಕಾರಣ ಯಾರೊಬ್ಬರೂ ಗಟ್ಟಿಯಾಗಿ ಕನ್ನಡದ ಅಸ್ಮಿತೆ ಬಗ್ಗೆ ಹೇಳಿಲ್ಲ. ಹಾಗಾಗಿ ಗೊಂದಲ ಮುಂದುವರೆದಿದೆ. ಯಾರದರೂ ಒಬ್ಬರು ಇದನ್ನು ಹೇಳಬೇಕು, ಅಥವಾ ಸರ್ಕಾರವೇ ಯಾವುದು ಸರಿ, ಯಾವುದು ತಪ್ಪು ಎಂದು ಹೇಳಬೇಕು. ಯಾರು ಮಾತನಾಡುತ್ತಿಲ್ಲ. ಇದನ್ನು ಯಾರಾದರೂ ಸರಿಯಾಗಿ ನಿಭಾಯಿಸಬೇಕಿತ್ತು. ಸರ್ಕಾರವೋ, ಕನ್ನಡ ವಿಶ್ವವಿದ್ಯಾಲಯವೋ ಇದಕ್ಕೆ ಸರಿಯಾದ ಉತ್ತರ ಕೊಡಬೇಕಿತ್ತು" ಎಂದು ನಾ. ಸೋಮೇಶ್ವರ ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications











