"ನಮ್ಮ ಕಾಲು ಎಳೆದವರಿಗೆ, ಉರಿಸಿದವರಿಗೆ ಮಾಡುತ್ತಿರುವ ವಿಡಿಯೋ ಇದು"; ರೊಚ್ಚಿಗೆದ್ದ ಧರ್ಮಣ್ಣ, ಯೋಗರಾಜ್ ಭಟ್
18 ವರ್ಷಗಳಿಂದ ಇದೊಂದು ಕ್ಷಣಕ್ಕಾಗಿ ಆರ್‌ಸಿಬಿ ಅಭಿಮಾನಿಗಳು ಕಾದು ಕೂತಿದ್ದರು. ಪ್ರತಿಬಾರಿನೂ ಆರ್‌ಸಿಬಿಗೆ ನಿರಾಸೆಯೇ ಆಗಿತ್ತು. ಆದರೆ, ಈ ಬಾರಿ ಆರ್‌ಸಿಬಿ ಐಪಿಎಲ್ ಕಪ್ ಗೆದ್ದು ತಂದಿದೆ. ನಿನ್ನೆಯಿಂದ (ಜೂನ್ 3) ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ನೆಚ್ಚಿನ ಆಟಗಾರರನ್ನು ಕಣ್ತುಂಬಿ ಕೊಳ್ಳುವುದಕ್ಕೆ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.
18 ವರ್ಷಗಳಿಂದ ಒಂದೇ ತಂಡದಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ ಟ್ರೋಫಿ ಗೆದ್ದಕ್ಕೆ ಖುಷಿಯಾಗಿದ್ದಾರೆ. ತಮ್ಮ ನೆಚ್ಚಿನ ಆಟಗಾರನಿಗೆ ಕಮ್ ಬರಬೇಕು ಅನ್ನೋದು ಅಭಿಮಾನಿಗಳ ಆಸೆಯಾಗಿತ್ತು. 18 ವರ್ಷಗಳಿಂದ ಆರ್‌ಸಿಬಿ ಕಪ್ ಗೆಲ್ಲಬೇಕು ಅಂತ ಮಾಡಿಕೊಳ್ಳುತ್ತಿದ್ದ ದೇವರಲ್ಲಿ ಪ್ರಾರ್ಥನೆ ಕೊನೆಗೂ ಈಡೇರಿದೆ. ಅಭಿಮಾನಿಗಳ ಸಂಭ್ರಮ ಒಂದು ಕಡೆಯಾದರೆ, ಇನ್ನೊಂದು ಕಡೆ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಆರ್‌ಸಿಬಿ ಕಪ್ ಗೆದ್ಮೇಲೆ ಹೊಸ ಟಾಸ್ಕ್‌ಗೆ ಮುಂದಾಗಿದ್ದಾರೆ. ಕಪ್ ಗೆದ್ದಾಯ್ತು ಆರ್‌ಸಿಬಿ ಮುಂದಿನ ಟಾರ್ಗೆಟ್ ಏನು? ಅಂತ ಕೆಲ ಸಿನಿಮಾ ಮಂದಿ ತಲೆಕೆಡಿಸಿಕೊಂಡು ಕೂತಿದ್ದಾರೆ. ಮತ್ತೆ ಕೆಲವರು ಆರ್‌ಸಿಬಿ ಕಪ್ ಗೆಲ್ಲದೇ ಇದ್ದಾಗ ಮಾಡುತ್ತಿದ್ದ ಅವಮಾನಕ್ಕೆ ರಿವೇಂಜ್ ತೆಗೆದುಕೊಂಡಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನ ಹಾಸ್ಯ ನಟ ಧರ್ಮಣ್ಣ, ಹಾಗೂ ಯೋಗರಾಜ್ ಭಟ್ ಏನಂದಿದ್ದಾರೆ? ಈ ವಿಡಿಯೋಗಳನ್ನು ನೋಡಿ.
ಕನ್ನಡ ಚಿತ್ರರಂಗದ ವಿಕಟಕವಿ, ನಿರ್ದೇಶಕ ಯೋಗರಾಜ್ ಭಟ್ ಆರ್‌ಸಿಬಿ ಗೆದ್ದಿದ್ದಕ್ಕೆ ಫುಲ್ ಆಕ್ಟಿವ್ ಆಗಿದ್ದಾರೆ. ಇನ್ನೊಂದು ಕಡೆ ಹಾಸ್ಯ ಧರ್ಮಣ್ಣ ರೊಚ್ಚಿಗೆದ್ದ ವಿಡಿಯೋ ಮಾಡಿ ತಮ್ಮ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇಬ್ಬರ ವಿಡಿಯೋಗಳಿಗೆ ನೆಟ್ಟಿಗರು ಕಮೆಂಟ್‌ಗಳ ಮೇಲೆ ಕಮೆಂಟ್‌ಗಳನ್ನ ಹಾಕುತ್ತಿದ್ದಾರೆ. ಆರ್‌ಸಿಬಿ ಅಭಿಮಾನಿಗಳ ಸಂಭ್ರಮದ ಜೊತೆಯಾಗಿದ್ದಾರೆ. ಅದರಲ್ಲೂ ಧರ್ಮಣ್ಣ ಅಂತೂ ಯಾರೆಲ್ಲ ಉರಿಸಿದ್ದರೋ ಅಂತಹವರಿಗಾಗಿಯೇ ರೊಚ್ಚಿಗೆದ್ದು ವಿಡಿಯೋ ಮಾಡಿದ್ದಾರೆ.
ಧರ್ಮಣ್ಣ ಹಂಚಿಕೊಂಡಿರುವ ವಿಡಿಯೋದಲ್ಲಿ "ನಮ್ಮ ಕಾಲು ಎಳೆದವರಿಗೆ, ನಮ್ಮನ್ನು ಉರಿಸಿದವರಿಗೆ ಮಾಡುತ್ತಿರುವ ವಿಡಿಯೋ ಇದು" ಅಂತ ಹೇಳಿಯೇ ವಿಡಿಯೋ ಮಾಡಿದ್ದಾರೆ. "ಖುಷಿಯನ್ನು ತಡೆಯೋಕೆ ಆಗದೆ ಮಾಡುತ್ತಿರುವ ವಿಡಿಯೋ ಇದು. ನಮ್ಮ ಕಾಲು ಎಳೆದವರಿಗೆ, ನಮ್ಮನ್ನು ಉರಿಸಿದವರಿಗೆ ಮಾಡುತ್ತಿರುವ ವಿಡಿಯೋ ಇದು. ಒಂದರಿಂದ 17ರದ್ದು ಒಂದು ಲೆಕ್ಕ. 18ರದ್ದೇ ಒಂದು ಲೆಕ್ಕ. ಈ ಲೆಕ್ಕ ನಿಮ್ಮ ಜೀವನ ಪರ್ಯಂತೆ ನೆನಪಿರುತ್ತೆ. ಅದು ನಮಗೆ ಗೊತ್ತು ಪಕ್ಕ. ಜೈ ಕನ್ನಡ ಜೈ ಆರ್‌ಸಿಬಿ, ಜೈ ಭುವನೇಶ್ವರಿ, ಜೈ ಕೊಹ್ಲಿ" ಎಂದು ಹಾಸ್ಯ ನಟ ಧರ್ಮಣ್ಣ ವಿಡಿಯೋ ಮಾಡಿದ್ದಾರೆ.
ಧರ್ಮಣ್ಣ ಒಂದು ಕಡೆಯಾದರೆ, ಇನ್ನೊಂದು ಕಡೆ ಯೋಗರಾಜ್ ಭಟ್ ಫುಲ್ ಜೋಷ್‌ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. "ಒಂದು ಮ್ಯಾಟರ್ ಹೇಳ್ತೀನಿ. ಇನ್ಮುಂದೆ ಪ್ರತಿ ಸಲನೂ ಕಪ್ ನಮ್ದೆ ಅಂತ ಅನ್ನೋಣ. ಈ ಸಲ ಕಪ್ ನಮ್ದೆ ಬದಲು, ಈಸಲನೂ ಕಪ್ ನಮ್ಮದೇ ಎನ್ನೋಣ. ಆಡುತ್ತಿರೋಣ, ಹೊಡೆಯುತ್ತಿರೋಣ, ಗೆಲ್ಲುತ್ತಿರೋಣ. ಜೈ ಆರ್‌ಸಿಬಿ, ಜೈ ಬೆಂಗಳೂರು" ಎಂದು ಯೋಗರಾಜ್ ಭಟ್ ತಮ್ಮ ವಿಡಿಯೋದಲ್ಲಿ ಆರ್‌ಸಿಬಿ ಟಾರ್ಗೆಟ್ ಕೊಟ್ಟಿದ್ದಾರೆ.
ಕಪ್ ಗೆದ್ದು ಆರ್‌ಸಿಬಿ ತಂಡ ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ. ಕಪ್ ಗೆದ್ದ ಆಟಗಾರರಿಗೆ ಕರ್ನಾಟಕ ಸರ್ಕಾರ ವಿಧಾನ ಸೌಧದ ಮುಂಭಾಗದಲ್ಲಿ ಸನ್ಮಾನ ಮಾಡಿದೆ. ಈ ಸಮಾರಂಭವನ್ನು ನೋಡುವುದಕ್ಕೆ ಜನರು ಕಿಕ್ಕಿರಿದು ಸೇರಿದ್ದಾರೆ. ಇನ್ನು ಕಪ್ ಗೆದ್ದ ಖುಷಿಯಲ್ಲಿ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆದರೆ, ಆರ್‌ಸಿಬಿ ಆಟಗಾರರನ್ನು ನೋಡುವ ಭರಾಟೆಯಲ್ಲಿ ನುಕು ನುಗ್ಗಲಾಗಿದ್ದು, ಕಾಲ್ತುಳಿತಕ್ಕೆ ನಾಲ್ಕು ಪ್ರಾಣ ಕಳೆದುಕೊಂಡಿದ್ದಾರೆಂದು ವರದಿಯಾಗಿದೆ.


Click it and Unblock the Notifications











