ಛತ್ರಪತಿ ಶಿವಾಜಿ ಅವತಾರವೆತ್ತಲು ಹೊರಟ ರಿಷಬ್ ಶೆಟ್ಟಿಗೆ ಪ್ರತಿಭಟನೆ ಎಚ್ಚರಿಕೆ; ವಾಟಾಳ್ ನಾಗರಾಜ್ ಗರಂ!
'ಕಾಂತಾರ' ಸಿನಿಮಾ ಬಳಿಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಬೇರೆ ಭಾಷೆಗಳಿಂದ ರಿಷಬ್ ಶೆಟ್ಟಿಗೆ ಆಫರ್‌ಗಳು ಹುಡುಕಿಕೊಂಡು ಬರುತ್ತಿವೆ. ಅದರಲ್ಲಿ ' ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾ ಕೂಡ ಒಂದು. ಈ ಸಿನಿಮಾದಲ್ಲಿ ಮರಾಠರ ಮಹಾರಾಜ ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದು, ಈಗಾಗಲೇ ಫಸ್ಟ್ ಲುಕ್ ರಿವೀಲ್ ಆಗಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿರುವುದಕ್ಕೆ ವಾಟಾಳ್ ನಾಗರಾಜ್ ಆಕ್ರೋಶ ಹೊರ ಹಾಕಿದ್ದಾರೆ.
ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಹಾಗೂ ಚಾಲಕನ ಮೇಲೆ ಮರಾಠಿಗರಿಂದ ಹಲ್ಲೆಗೆ ಮಾಡಿದ ಪ್ರಕರಣ ಪ್ರತಿಭಟನೆಯ ಕಾವು ಪಡೆದುಕೊಳ್ಳುತ್ತಿದೆ. ಕನ್ನಡ ಪರ ಹೋರಾಟಗಾರರ ಕಣ್ಣುಗಳನ್ನು ಕೆಂಪು ಮಾಡಿದೆ. ಕನ್ನಡ ಹೋರಾಟಗಳು ಕಳೆದ ಕೆಲವು ದಿನಗಳಿಂದ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಇದೇ ಬೆನ್ನಲ್ಲೇ ವಾಟಾಳ್ ನಾಗರಾಜ್ ಕಣ್ಣಿಗೆ ರಿಷಬ್ ಶೆಟ್ಟಿ ಬಿದ್ದಿದ್ದಾರೆ.

ಬೆಳಗಾವಿಯ ಗಡಿಭಾಗದಲ್ಲಿ ಕನ್ನಡಿಗರು ಹಾಗೂ ಮರಾಠಿಗರ ನಡುವಿನ ಕಿತ್ತಾಟ ಹೊಸದೇನು ಅಲ್ಲ. ಆಗಾಗ ಮರಾಠಿಗರು ಪುಂಡಾಟ ನಡೆಸುತ್ತಲೇ ಇರುತ್ತಾರೆ. ಹೀಗಾಗಿ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಈಗ ಇಂತಹದ್ದೇ ಪರಿಸ್ಥಿತಿ ಎದುರಾಗಿದ್ದು, ಕನ್ನಡ ಪರ ಹೋರಾಟಗಾರರ ಕಣ್ಣು ರಿಷಬ್ ಶೆಟ್ಟಿಯ ಮೇಲೆ ಬಿದ್ದಿದೆ. ಶಿವಾಜಿ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ಕಣ್ಣುಗಳು ಕೆಂಪಾಗಿದ್ದು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದಕ್ಕೆ ಮುಂದಾಗಿದ್ದು, ಆ ಪಾತ್ರವನ್ನು ಒಪ್ಪಿಕೊಳ್ಳುವುದಿಲ್ಲ. ನಮ್ಮ ಜನರು ರಿಷಬ್ ಶೆಟ್ಟಿಯನ್ನು ಶಿವಾಜಿ ಪಾತ್ರವನ್ನು ತಿರಸ್ಕರಿಸುತ್ತಾರೆ. ಕರ್ನಾಟಕಕ್ಕೆ ಶಿವಸೇನೆ ಬರುವುದು ಬೇಡ ಎಂದು ವಾಟಾಳ್ ನಾಗರಾಜ್ ಗರಂ ಆಗಿದ್ದಾರೆ. ಕನ್ನಡ ಪರ ಹೋರಾಟಗಾರರ ಕಣ್ಣುಗಳು ಕೆಂಪಾಗಿದ್ದರಿಂದ ರಿಷಬ್ ಶೆಟ್ಟಿ ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆಯಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾದಲ್ಲಿ ನಟಿಸುತ್ತಿರುವ ರಿಷಬ್ ಶೆಟ್ಟಿ ವಿರುದ್ಧ ವಾಟಾಳ್ ನಾಗರಾಜ್ ಗರಂ ಆಗಿದ್ದಷ್ಟೇ ಅಲ್ಲ, ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ನಾಳೆ ಅಂದರೆ (ಫೆಬ್ರವರಿ 25) ಬೆಳಗ್ಗೆ 11.30ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್ ಬಂದ್ ಮಾಡುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಸಿಗಬೇಕಿದೆ. ಆದರೆ, ಮರಾಠಿಗರ ಪುಂಡಾಟಕ್ಕೆ ರಿಷಬ್ ಶೆಟ್ಟಿ ಪೇಚಿಗೆ ಸಿಲುಕುವಂತಾಗಿದೆ.

ಮರಾಠಿಗರ ಪುಂಟಾಟ ಸೇರಿದಂತೆ ರಿಷಬ್ ಶೆಟ್ಟಿ ವಿಷಯದ ಬಗ್ಗೆ ಫೆಬ್ರವರಿ 28ಕ್ಕೆ ಗಂಭೀರ ಸಭೆ ನಡೆಸುವುದಕ್ಕೆ ಮುಂದಾಗಿದ್ದಾರೆ. ಎಲ್ಲಾ ಕನ್ನಡ ಪರ ಸಂಘಟನೆಗಳನ್ನು ವಾಟಾಳ್ ನಾಗರಾಜ್ ಸಭೆ ಕರೆದಿದ್ದು, ಒಟ್ಟಿಗೆ ಸೇರಿ ಹೋರಾಟದ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಕನ್ನಡ ಪರ ಸಂಘಟನೆಗಳ ಒಟ್ಟಾಗಿ ಸಭೆ ಸೇರಿ ಯಾವ ರೀತಿಯ ನಿರ್ಧಾರಕ್ಕೆ ಬರುತ್ತವೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಸದ್ಯ ರಿಷಬ್ ಶೆಟ್ಟಿ 'ಕಾಂತಾರ' ಪ್ರೀಕ್ವೆಲ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವರ್ಷ ಅಕ್ಟೋಬರ್ 2ನೇ ತಾರೀಕಿನಂದು 'ಕಾಂತರ ಚಾಪ್ಟರ್ 1' ವಿಶ್ವದಾದ್ಯಂತ ರಿಲೀಸ್ ಆಗುವುದಾಗಿ ಘೋಷಣೆಯಾಗಿದೆ. ಹೀಗಾಗಿ ಕನ್ನಡಪರ ಹೋರಾಟಗಾರರ ಆಕ್ರೋಶ 'ಕಾಂತಾರ' ಚಾಪ್ಟರ್ 1 ರ ಮೇಲೆ ಬೀಳುವ ಸಾಧ್ಯತೆ ಕೂಡ ಇದೆ. ವಾಟಾಳ್ ನಾಗರಾಜ್ ಎಚ್ಚರಿಕೆ ಬಗ್ಗೆ ರಿಷಬ್ ಶೆಟ್ಟಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











