ಅಜಯ್ ರಾವ್-ಸ್ವಪ್ನಾ ವಿಚ್ಛೇದನಕ್ಕೆ ಆ ಒತ್ತಡವೇ ಕಾರಣನಾ? ಅಂತಹದ್ದೇನಾಯ್ತು?
ಚಿತ್ರರಂಗದಲ್ಲಿ ಲವ್ ಸ್ಟೋರಿಗಳು, ಬ್ರೇಕಪ್ ಹಾಗೂ ವಿಚ್ಚೇದನಗಳು ಕಾಮನ್. ಪ್ರತಿಯೊಂದು ಚಿತ್ರರಂಗದಲ್ಲೂ ಇಂತಹದ್ದೊಂದು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅದರಲ್ಲೂ ಬಾಲಿವುಡ್, ಕಾಲಿವುಡ್, ಟಾಲಿವುಡ್‌ನಲ್ಲಿ ವಿಚ್ಚೇದನದ ಪ್ರಕರಣಗಳು ಆಗಾಗ ಅವರ ಅಭಿಮಾನಿಗಳನ್ನು ಬೆಚ್ಚಿ ಬೀಳಿಸುತ್ತಲೇ ಇರುತ್ತವೆ. ಆದರೆ, ಸ್ಯಾಂಡಲ್‌ವುಡ್‌ನಲ್ಲಿ ವಿಚ್ಚೇದನದ ಪ್ರಕರಣಗಳು ತೀರಾ ಅಪರೂಪವೇನಿತ್ತು. ಆದ್ರೀಗ ಒಂದೊಂದಾಗೇ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ.
ಕನ್ನಡ ಚಿತ್ರರಂಗದ ಸೈಲೆಂಟ್ ಜೋಡಿ ಅಂತಲೇ ಕರೆಸಿಕೊಳ್ಳುತ್ತಿದ್ದ ಅಜಯ್ ರಾವ್ ಹಾಗೂ ಸ್ವಪ್ನ ಇಬ್ಬರ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ. ಪತ್ನಿ ಸ್ವಪ್ನ ಅಜಯ್ ರಾವ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪತಿಯಿಂದ ವಿಚ್ಚೇದನ ಪಡೆಯುವುದಕ್ಕೆ ಮುಂದಾಗಿದ್ದಾರೆ. ಈ ವಿಷಯವೀಗ ಸಿನಿ ಪ್ರಿಯರಲ್ಲಿ ಹಾಗೂ ಚಿತ್ರರಂಗದಲ್ಲಿ ಬೇಸರ ವಾತಾವರಣವನ್ನು ಸೃಷ್ಟಿಸಿದೆ.

ಕೆಲವು ದಿನಗಳ ಹಿಂದೆ ಅಜಯ್ ರಾವ್ ಅವರ ವಿಚ್ಛೇದನದ ಸುದ್ದಿ ಹರಿದಾಡುತ್ತಿತ್ತು. ಆದರೆ, ಆ ವೇಳೆ ಅಜಯ್ ರಾವ್ ಈ ಡಿವೋರ್ಸ್ ಮ್ಯಾಟರ್ ಅನ್ನು ತಳ್ಳಿ ಹಾಕಿದ್ದರು. ಆದ್ರೀಗ ಅಜಯ್ ರಾವ್ ಹಾಗೂ ಪತ್ನಿ ಸ್ವಪ್ನಾ ನಡುವೆ ಭಿನ್ನಾಬಿಪ್ರಾಯಗಳು ಮೂಡಿರುವುದು ಜಗತ್‌ಜಾಹೀರಾಗಿದೆ. ಅಸಲಿಗೆ ಅನ್ಯೋನ್ಯವಾಗಿದ್ದ ಈ ಜೋಡಿಗೆ ಏನಾಯ್ತು? ಪತ್ನಿ ಸ್ವಪ್ನಾ ವಿಚ್ಚೇದನಕ್ಕೆ ಮುಂದಾಗಿದ್ದು ಯಾಕೆ? ಅಂತಹ ಕಾರಣವೇನಿದೆ? ತಿಳಿಯುವುದಕ್ಕೆ ಮುಂದೆ ಓದಿ.
ಸೌಮ್ಯ ಸ್ವಭಾವದ ನಟ ಅಜಯ್ ರಾವ್
ಅಜಯ್ ರಾವ್ ಹಾಗೂ ಸ್ವಪ್ನಾ ಇಬ್ಬರೂ ಪ್ರೀತಿಸಿ 2014ರಲ್ಲಿ ಮದುವೆ ಆಗಿದ್ದರು. ಇವರಿಗೆ ಚರಿಷ್ಮಾ ಎನ್ನುವ ಮುದ್ದಾದ ಹೆಣ್ಣು ಮಗು ಕೂಡ ಇದೆ. ಸ್ಯಾಂಡಲ್‌ವುಡ್‌ನ ಮೋಸ್ಟ್ ಡಿಸೆಂಟ್ ಕಪಲ್ ಲಿಸ್ಟ್‌ನಲ್ಲಿ ಅಜಯ್ ರಾವ್ ಹಾಗೂ ಸ್ವಪ್ನಾ ಜೋಡಿ ಇತ್ತು. ಯಾರ ತಂಟೆಗೂ ಹೋಗದ, ತಾವಾಯಿತು ತಮ್ಮ ಕೆಲಸ ಆಯ್ತು ಎನ್ನುವಂತೆ ಇತ್ತು. ಆದ್ರೀಗ ಹೀಗಿದ್ದ ಜೋಡಿನೇ ಈಗ ಬೇರೆಯಾಗುವುದಕ್ಕೆ ಮುಂದಾಗಿದೆ. ಇದು ಸಿನಿಪ್ರಿಯರಿಗೆ ಶಾಕ್ ಆಗಿದೆ. ಅದರಲ್ಲೂ ಅಜಯ್ ರಾವ್ ಅವರ ವಿರುದ್ಧ ಪತ್ನಿ ಸ್ವಪ್ನಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದು ಕೌಟಂಬಿಕ ದೌರ್ಜನ್ಯ ತಡೆ ಕಾಯ್ದೆ 12ರ ಅಡಿಯಲ್ಲಿ ದೂರನ್ನು ದಾಖಲಿಸಿದ್ದಾರೆಂದು ವರದಿಯಾಗಿದೆ.
ಸ್ವಪ್ನಾ ನಿರ್ಧಾರಕ್ಕೇನು ಕಾರಣ?
ಅಜಯ್ ರಾವ್ ಹಾಗೂ ಸ್ವಪ್ನಾ ವಿಚ್ಚೇದನದ ವಿಷಯ ಹೊರ ಬೀಳುತ್ತಿದ್ದಂತೆ ಒಂದೊಂದು ವಿಷಯಗಳು ಹೊರಬೀಳುತ್ತಿವೆ. ಸಿನಿಮಾ ಮಂದಿ ಈ ವಿಷಯವನ್ನು ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅಜಯ್ ರಾವ್ ಹಾಗೂ ಸ್ವಪ್ನಾ ದಾಂಪತ್ಯದಲ್ಲಿ ಬಿರುಕು ಬಿಡುವುದಕ್ಕೆ ಕಾರಣ 'ಯುದ್ಧಕಾಂಡ' ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಆರಂಭ ಮಾಡಿದ ದಿನದಿಂದ ಇಬ್ಬರ ನಡುವೆ ಬಿರುಕು ಕಾಣಿಸಿಕೊಂಡಿದೆ ಎಂದು ಚಿತ್ರರಂಗದಲ್ಲಿ ಓಡಾಡುತ್ತಿದೆ.
'ಯುದ್ಧಕಾಂಡ'ದ ಸೋಲೇ ಕಾರಣ
ಅಜಯ್ ರಾವ್ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಪತ್ನಿ ಸ್ವಪ್ನಾ ಅವರಿಗೆ ಇಷ್ಟವಿರಲಿಲ್ಲ. ಆದರೂ, ಪತ್ನಿಯ ಮಾತನ್ನೂ ಕೇಳದೆ ಅಜಯ್ ರಾವ್ 'ಯುದ್ಧಕಾಂಡ' ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಇದು ಅವರ ದಾಂಪತ್ಯದಲ್ಲಿ ದೊಡ್ಡ ಬಿರುಗಾಳಿಯನ್ನೇ ತಂದಿದೆ. ಅದರಲ್ಲೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದ್ದರಿಂದ ದಾಂಪತ್ಯ ಕಲಹ ಮತ್ತಷ್ಟು ಹೆಚ್ಚಾಯ್ತು ಎಂದು ಹೇಳಲಾಗುತ್ತಿದೆ.

'ಯುದ್ಧಕಾಂಡ'ದಿಂದ ನಷ್ಟ
'ಯುದ್ಧಕಾಂಡ' ಸಿನಿಮಾ ಪ್ರಚಾರದ ವೇಳೆನೇ ಅಜಯ್ ರಾವ್ ಸಾಲ ಮಾಡಿಕೊಂಡಿದ್ದೇನೆ ಎಂದಿದ್ದರು. 'ಯುದ್ಧಕಾಂಡ' ನಿರ್ಮಾಣಕ್ಕೆ ಸುಮಾರು 4 ರಿಂದ 5 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಆದರೆ, 'ಯುದ್ಧಕಾಂಡ' ಅಂದುಕೊಂಡಂತೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಹೀಗಾಗಿ ಅಜಯ್ ರಾವ್ ಸಾಕಷ್ಟು ನಷ್ಟವನ್ನು ಅನುಭವಿಸಿದ್ದರು. ಅಲ್ಲದೆ, ಅವರ ನೆಚ್ಚಿನ ಬಿಎಂಡ್ಲ್ಯೂ ಕಾರು ಮಾಡಿದ್ದು, ಮಗಳು ಕಾರು ಮಾರಿದ್ದಕ್ಕೆ ಅತ್ತಿದ್ದ ವಿಡಿಯೋ ವೈರಲ್ ಆಗಿದ್ದು, ಇದೆಲ್ಲವೂ ಪತ್ನಿ ಸ್ವಪ್ನಾ ಅವರಿಗೆ ನೋವುಂಟು ಮಾಡಿತ್ತು ಎಂಬ ಮಾತುಗಳು ಕೂಡ ಚಿತ್ರರಂಗದಲ್ಲಿ ಹರಿದಾಡುವುದಕ್ಕೆ ಶುರುವಾಗಿದೆ.
ಸಿಕ್ಕಿದ್ದು ಬರೀ ₹25 ಲಕ್ಷ ಅಷ್ಟೇನಾ?
ಅಜಯ್ ರಾವ್ ಅವರ 'ಯುದ್ಧಕಾಂಡ' ಬಿಡುಗಡೆಗೆ ಯಶ್ ಸಹಾಯ ಮಾಡಿದ್ದರು. ಕೆವಿಎನ್ ಸಂಸ್ಥೆ ಈ ಸಿನಿಮಾದ ವಿತರಣೆಗೆ ಮುಂದಾಗುವುದಕ್ಕೆ ನೆರವಾಗಿದ್ದರು. ಈ ಮಾತನ್ನು ಸ್ವತ: ಅಜಯ್ ರಾವ್ ಅವರೇ ಹೇಳಿಕೊಂಡಿದ್ದರು. ಆದರೆ, ಸಿನಿಮಾ ಅಂದುಕೊಂಡಷ್ಟು ಲಾಭ ಮಾಡದೇ ಇರುವುದರಿಂದ ಕೆವಿಎನ್ ಪ್ರೊಡಕ್ಷನ್ ಬರೀ ₹25 ಲಕ್ಷವನ್ನು ನೀಡಿದ್ದರು ಎಂದು ಬಲ್ಲ ಮೂಲಗಳು ಹೇಳುತ್ತವೆ. ಇದರಿಂದ ಅಜಯ್ ರಾವ್‌ಗೆ ಸಿಕ್ಕಾಪಟ್ಟೆ ನಷ್ಟ ಆಗಿತ್ತು. ಇದರಿಂದ ಮನೆಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಹೀಗಾಗಿ ಸ್ವಪ್ನಾ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಈ ಸಂಗತಿ ಸಿನಿಮಾ ಮಂದಿಯ ಬಾಯಲ್ಲಿ ಚರ್ಚೆಯಾಗುತ್ತಿರುವ ಸುದ್ದಿಯಷ್ಟೇ. ಅಧಿಕೃತವಾಗಿ ಅಜಯ್ ರಾವ್ ಆಗಲಿ, ಸ್ವಪ್ನಾ ಅವರಾಗಲಿ ವಿಚ್ಛೇದನದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ.


Click it and Unblock the Notifications











