"ನನ್ನ ಮಗಳ ವಿಡಿಯೋ ಪೋಸ್ಟ್ ಮಾಡುವ ಅಧಿಕಾರ ಯಾರು ಕೊಟ್ಟರು? ಸಿಂಪತಿಗಾಗಿ ಗಿಮಿಕ್ ಮಾಡಿದ್ದಲ್ಲ" ಅಜಯ್ ರಾವ್
ನಟ ಅಜಯ್ ರಾವ್ ಇತ್ತೀಚೆಗೆ ಸಂದರ್ಶನದಲ್ಲಿ ಕೊಟ್ಟ ಹೇಳಿಕೆ ಸಂಚಲ ಸೃಷ್ಟಿಸಿತ್ತು. ಅವರೇ ನಿರ್ಮಿಸಿರುವ 'ಯುದ್ಧಕಾಂಡ 2' ಸಿನಿಮಾಗಾಗಿ ಕೋಟಿಗಟ್ಟಲೆ ಸಾಲ ಮಾಡಿಕೊಂಡಿರುವುದಾಗಿ ಹೇಳಿದ್ದರು. ಅದು ಸ್ಯಾಂಡಲ್‌ವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಬಳಿಕ ಖುದ್ದಾಗಿ ಅಜಯ್ ರಾವ್ ಅವರೇ ತೀರುಸುವ ತಾಕತ್ತು ಇರುವುದಕ್ಕೆ ಸಾಲ ಮಾಡಿದ್ದೇನೆ ಎಂದು ಹೇಳಿದ್ದೇನೆ ಹೊರತು, ಸಾಲ ಮಾಡಿ ಬೀದಿಗೆ ಬಂದಿದ್ದೀನಿ ಎಂದು ಹೇಳಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು.
ಆ ಬಳಿಕ ಅಜಯ್ ರಾವ್ ಅವರು ಮಗಳ ವಿಡಿಯೋ ವೈರಲ್ ಆಗಿತ್ತು. ಅಜಯ್ ರಾಮ್ ತಮ್ಮ ಐಷಾರಾಮಿ ಕಾರನ್ನು ಮಾರಾಟ ಮಾಡಿದ ಬಳಿಕ ಅವರ ಮಗಳು ಕಣ್ಣೀರು ಹಾಕಿದ್ದರು. ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆಗ ಕೆಲವರು ಅಜಯ್ ರಾವ್ ಮೇಲೆ ಸಿಂಪತಿ ತೋರಿಸಿದ್ದರು. ಮತ್ತೆ ಕೆಲವರು ಅಜಯ್ ರಾವ್ ವಿರುದ್ಧ ಟೀಕೆ ಮಾಡಿದ್ದರು. ಸಿಂಪತಿ ಗಿಟ್ಟಿಸಿಕೊಳ್ಳುವುದಕ್ಕೆ ಹೀಗೆ ಮಾಡಿದ್ದಾರೆಂದು ದೂರಿದ್ದರು.

ಮಗಳ ಅಳುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಜಯ್ ರಾವ್ ಕ್ಲಾರಿಟಿ ಕೊಟ್ಟಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಕಾರು ಮಾರಿದಾಗ ಮಗಳು ಅಳುತ್ತಿರುವ ವಿಡಿಯೋ ವೈರಲ್ ಆಗಿದ್ದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಅಂದ್ಹಾಗೆ, ಈಗ ವೈರಲ್ ಆಗಿರುವ ವಿಡಿಯೋ ಮೂರು ವರ್ಷಗಳ ಹಿಂದಿನ ವಿಡಿಯೋ ಎಂದು ಅಜಯ್ ರಾವ್ ಈ ಸಂದರ್ಶನದಲ್ಲಿ ಹೇಳಿದ್ದಾರೆ. ಆ ಸಂದರ್ಶನದ ಝಲಕ್ ಇಲ್ಲಿದೆ.
"ನನಗೂ ಸಂಸ್ಕಾರವಿದೆ"
"ನನಗೆ ಸಂಸ್ಕಾರವಿದೆ. ನನಗೆ ನನ್ನ ಮಗಳು ಬೇಜಾರಲ್ಲಿ ಅಳುತ್ತಿರುವ ವಿಡಿಯೋವನ್ನು ಇಟ್ಟುಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುವುದಕ್ಕೆ, ಗಿಮಿಕ್ ಮಾಡುವುದಕ್ಕೆ ದುರ್ಬಳಕೆ ಮಾಡಲ್ಲ. ಅಷ್ಟು ಸಂಸ್ಕಾರ ನನಗೆ ಇದೆ. ಅದನ್ನು ಪ್ರೂವ್ ಮಾಡುತ್ತಾ ಕೂರಲ್ಲ. ನಾನು ಪ್ರಚಾರಕ್ಕೆ ಬಿಟ್ಟಿದ್ದೀನಿ, ಈ ಟೈಮ್‌ನಲ್ಲೇ ಹೇಗೆ ಬಂತು? ಹೀಗೆ ಸಾವಿರ ಪ್ರಶ್ನೆಗಳು ಬರುತ್ತವೆ. ಆದರೆ, ಒಂದಂತೂ ನಿಜ. ಅದರಿಂದ ನಾನು ತುಂಬಾನೇ ಬೇಜಾರಾಗಿದ್ದೀನಿ. ನನ್ನ ಕುಟುಂಬ ತುಂಬಾನೇ ಬೇಜಾರಾಗಿದೆ." ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.

ಈ ಅಧಿಕಾರ ಕೊಟ್ಟವರು ಯಾರು?
"ಅದು ಹೇಗೆ ಬಂತು ಎನ್ನುವುದಕ್ಕೆ ನಾನು ಕ್ಲಾರಿಫಿಕೇಷನ್ ಕೊಡುವುದಕ್ಕೆ ಇಷ್ಟ ಪಡಲ್ಲ. ಆದರೆ, ಯಾರೆಲ್ಲ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರಲ್ಲ ಅವರಿಗೆ ನಾನು ಕೇಳುವುದು ಏನಂದ್ರೆ, ಅದನ್ನು ಪೋಸ್ಟ್ ಮಾಡುವಂತಹ ಅಧಿಕಾರ ಯಾರು ಕೊಟ್ಟರು ಅನ್ನೋದು ನನ್ನ ಪ್ರಶ್ನೆ. ಈಗ ಅಜಯ್ ಗಿಮಿಕ್ ಮಾಡಿ ಕೊಟ್ಟಿದ್ದಾನೆ ಅಂತ ಅಂದುಕೊಳ್ಳಬಹುದು. ಅದನ್ನು ಪೋಸ್ಟ್ ಮಾಡುವಂತಹ ಅಧಿಕಾರ ಯಾರಿಗೂ ಇಲ್ಲ. ನಾಳೆ ಅದು ಅವಳ ಜೀವನದಲ್ಲಿ ಒಂದು ಕಲೆಯಾಗಿ ಉಳಿದುಕೊಳ್ಳಬಾರದು." ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಅದು ಹಳೆಯ ವಿಡಿಯೋ"
"ಇದು ಮೂರು ನಾಲ್ಕು ವರ್ಷದ ಹಿಂದಿನ ವಿಡಿಯೋ. ಇತ್ತೀಚೆಗಿನ ವಿಡಿಯೋ ಅಂತೂ ಅಲ್ಲ. ನಾವು ಸೆಲೆಬ್ರಿಟಿಗಳ ಜೀವನ ಮೊಬೈಲ್ ಫೋನ್‌ಗಳು ಬಂದು ಎಷ್ಟು ಕಷ್ಟಕರವಾಗಿದೆ ಅಂದರೆ, ನಮ್ಮ ಸುತ್ತಮುತ್ತ ಇರೋದು ನಮ್ಮವರೇ ಅಂದುಕೊಂಡು ಇರುತ್ತೇವೆ. ಇವತ್ತು ಮಾಡಿದ ವಿಡಿಯೋ ನಾಳೆ ಏನಾಗಬಹುದು ಎಂದು ಯೋಚನೆ ಮಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಅವತ್ತು ಹೀಗೆಲ್ಲಾ ಪರಿವರ್ತನೆ ಆಗುತ್ತಾ ಅಂತ ನಮ್ಮ ಕಲ್ಪನೆಯಲ್ಲೂ ಇರಲಿಲ್ಲ." ಎನ್ನುತ್ತಾರೆ.

"ವಿಡಿಯೋ ಬೇಡ ಅಂದ್ರೆ ದುರಹಂಕಾರ ಅಂತಾರೆ"
"ಒಂದು ಉದಾರಣೆ ಕೊಡುತ್ತೇನೆ. ನನ್ನ ಕಾರಲ್ಲಿ, ಮಿಡ್ ನೈಟ್ ನಮ್ಮ ಸಿನಿಮಾದ ಔಟ್‌ಪುಟ್ ತೆಗೆಯುವುದಕ್ಕಾಗಿ ಒಂದು ಸ್ಟುಡಿಯೋಗೆ ಹೋಗಿರುತ್ತೇವೆ. ಹೊಟ್ಟೆ ಹಸಿವಾಗುತ್ತೆ. ನಾನು ನಮ್ಮ ಟೀಮ್, ಎಡಿಟರ್ ಎಲ್ಲರೂ ರೋಡ್ ಸೈಡ್‌ನಲ್ಲಿ ಚಿತ್ರಾನ್ನ, ಇಡ್ಲಿ ಎಲ್ಲ ತಿನ್ನುತ್ತಿದ್ದೇವೆ. ಪ್ಲೇಟ್ ತೆಗೆದುಕೊಳ್ಳುವುದಕ್ಕೆ ವಿಂಡೋ ಇಳಿಸಿರುತ್ತೇವೆ. ಬೆಳಕಲ್ಲಿ ಜನರಿಗೆ ನಾನು ಕೂತಿರುವುದು ಗೊತ್ತಾಗಿದೆ. ಆಗ ಒಬ್ಬ ವಿಡಿಯೋ ಮಾಡುತ್ತಿದ್ದ. ವಿಡಿಯೋ ಆಫ್ ಮಾಡು ಅಂತ ಸನ್ನೆ ಮಾಡುತ್ತಿದ್ದೆ. ಈಗ ಏನಾಗಿದೆ, ಅವನಿಗೆ ವಿಡಿಯೋ ಮಾಡಬೇಡ ಎನ್ನುವ ಅಧಿಕಾರ ನಟನಿಗೆ ಇಲ್ಲ. ಒಂದ್ವೇಳೆ ವಿಡಿಯೋ ತೆಗೀಬೇಡ ಅಂದರೆ, ದುರಹಂಕಾರ ಅಂತಾರೆ. ನಿಮ್ಮ ಸಿನಿಮಾ ನೋಡಲ್ಲ ಅಂತಾರೆ. ಈಗ ನಾನು ಸಾಲ ಮಾಡಿ ಬೀದಿಗೆ ಬಂದಿದ್ದೇನೆ ಅಂತ ಓಡಾಡುತ್ತಿದ್ದೆ. ಈಗ ಆ ವಿಡಿಯೋ ಬಂದರೆ, ಇವನಿಗೆ ಹೋಟೆಲ್‌ನಲ್ಲಿ ತಿನ್ನುವ ಯೋಗ್ಯತೆಯಿಲ್ಲ. ಬೀದಿಯಲ್ಲಿ ತಿನ್ನುತ್ತಿದ್ದಾನೆ ಅಂತ. ಈಗ ಹೇಗಾಗಿದೆ ಅಂದರೆ, ನಾಳೆ ಆ ವಿಡಿಯೋ ಹೇಗೆ ಬರುತ್ತೋ ಗೊತ್ತಿಲ್ಲ. ಅಷ್ಟು ಭಯ ಹುಟ್ಟಾಕಿದೆ." ಎಂದು ಅಜಯ್ ರಾವ್ ಹೇಳಿಕೊಂಡಿದ್ದಾರೆ.
"ನಾನು ಬೀದಿಗೆ ಬಿದ್ದೀನಿ ಅಂತ ಹೇಳಿಕೊಂಡಿಲ್ಲ"
"ನಾನು ಏನೂ ಇಲ್ಲದೆ ಬಂದು ನಿಂತವನು. ಒಂದು ಸಿನಿಮಾ ನಿರ್ಮಾಣ ಮಾಡಿದ್ದೀನಿ. ನನಗೆ ಇವತ್ತು ಕೋಟಿಗಟ್ಟಲೆ ಸಾಲವಿದೆ. ಖುಷಿ ಏನಪ್ಪ ಅಂದರೆ, ಆ ಕೋಟಿಯನ್ನು ನಾನು ತೀರಿಸಬಹುದು. ಬ್ಯಾಂಕ್ ಅಥವಾ ಯಾರೇ ನಿಮಗೆ ಸಾಲ ಕೊಡುತ್ತಾರೆ ಅಂದರೆ, ನಿಮಗೆ ಆ ತಾಕತ್ತು ಇದೆ ಅಂತ ಅರ್ಥ ಅಲ್ವಾ? ನಾನು ಪ್ರಾಪರ್ಟಿ ಮಾಡಿದ್ದಕ್ಕೆ ತಾನೇ ಅದರ ಮೇಲೆ ಅಷ್ಟು ಲೋನ್ ಕೊಡುತ್ತಿದ್ದಾರೆ. ನಾನು ಬೀದಿಗೆ ಬಿದ್ದೀನಿ, ಕಷ್ಟದಲ್ಲಿ ಇದ್ದೀನಿ ಅಂತ ದು:ಖ ಹೇಳಿಕೊಂಡಿದ್ದಲ್ಲ." ಎಂದಿದ್ದಾರೆ.
"ನನ್ನ ಹೆಂಡ್ತಿನೂ ಅಳುತ್ತಾಳೆ"
"ಈಗ ಕಾರಿನ ವಿಷಯ ಬಂದಾಗಲೂ ತೋರಿಸಿ, ನಾನು ಕಷ್ಟಕ್ಕೆ ಮಾರಿದ್ದೀನಿ ಅಂತ ಹೇಳಿದ್ದೀನಾ? ದೊಡ್ಡ ದೊಡ್ಡ ಪತ್ರಕರ್ತರು ಬರೆದಿದ್ದಾರೆ. ಅದನ್ನು ಬಳಸುವ ಮುನ್ನ ನನ್ನ ಬಳಿ ಒಂದು ಮಾತು ಕೇಳಬಹುದಿತ್ತು. ಅಜಯ್ ಅವರೇ ಇದು ನಿಜನಾ? ಈ ವಿಡಿಯೋವನ್ನು ಬಳಸಬಹುದಾ ಅಂತ. ಆ ವಿಡಿಯೋ ಬಳಸಿದ್ದೇ ದೊಡ್ಡ ಅಪರಾಧ. ಅದನ್ನ ನೋಡಿ ನನ್ನ ಹೆಂಡ್ತಿ ಅಳ್ತಾಳೆ. ನನಗೆ ಬೇಜಾರಾಗುತ್ತೆ. ವಿಪರ್ಯಾಸ ಏನು ಅಂದರೆ, ನಾನು ಮನೆಗೆ ಹೋದಾಗ ನನ್ನ ಮಗು ಕುಣಿದುಕೊಂಡು ಬಂದು, ಅವತ್ತು ಅತ್ತಿದ್ದು ವಿಡಿಯೋ ಮೊಬೈಲ್‌ನಲ್ಲಿ ಬಂದಿದೆ. ಅಜ್ಜಿ ತೋರಿಸಿದಳು ಅಂತಾಳೆ. ಮುಂದೆ ಅವಳಿಗೆ ಅದು ತೊಂದರೆ ಆಗುತ್ತೆ ಅನ್ನೋದು ಗೊತ್ತೂ ಇಲ್ಲ." ಎಂದು ಬೇಸರ ಹೊರ ಹಾಕಿದ್ದಾರೆ.
"ಇನ್ಮುಂದೆ ಯೋಚನೆ ಮಾಡಬೇಕು"
"ಇಷ್ಟೆಲ್ಲ ಆದ್ಮೇಲೆ ನಾನು ಡಿಸೈಡ್ ಮಾಡಬೇಕಿದೆ. ನಾವು ಯಾರಿಗೂ ಸಿಗಬಾರದು. ಮೊಬೈಲ್‌ನಲ್ಲೂ ಸಿಗಬಾರದು. ಯಾವ ಮೊಬೈಲ್ ಆನ್ ಆಗಿದೆ. ಯಾವ ಕ್ಯಾಮರಾ ಆನ್ ಆಗಿದೆ. ಮೈ ಎಲ್ಲಾ ಕಣ್ಣು ಆಗಬೇಕಿದೆ. ಇಲ್ಲಿವರೆಗೂ ಅದೆಲ್ಲ ಇರಲಿಲ್ಲ. ಈಗ ಆ ಭಯ ಶುರುವಾಗಿದೆ. ನನ್ನ ಮಗಳು, ಹೆಂಡ್ತಿ ಜೊತೆಯಲ್ಲಿ ಇದ್ದಾಗ ಯಾವ ಕ್ಯಾಮರಾನೂ ಆನ್ ಆಗದೇ ಇರುವ ಹಾಗೆ ನೋಡಿಕೊಳ್ಳಬೇಕಾಗುತ್ತೆ. ಅಂತಹ ಮನ:ಸ್ಥಿತಿ ಬರುತ್ತಿದೆ ಈಗ." ಎಂದು ಹೇಳಿಕೊಂಡಿದ್ದಾರೆ.
ಇನ್ನು ಸಿನಿಮಾ ಕಡೆಗೆ ಬರುವುದಾದರೇ ಅಜಯ್ ರಾವ್ ನಿರ್ಮಿಸಿ, ನಟಿಸಿರುವ ಸಿನಿಮಾ 'ಯುದ್ಧಕಾಂಡ ಚಾಪ್ಟರ್ 2' ಇದೇ ವಾರ ಬಿಡುಗಡೆಯಾಗುತ್ತಿದೆ. ಏಪ್ರಿಲ್ 18ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ಸಿನಿಮಾ ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರದ ಪ್ರಕರಣದ ಹಿನ್ನೆಲೆಯನ್ನು ಇಟ್ಟುಕೊಂಡು ನಿರ್ಮಿಸಿರುವ ಸಿನಿಮಾ.


Click it and Unblock the Notifications











