14 ವರ್ಷಗಳ ಸತತ ಪ್ರಯತ್ನಕ್ಕೆ ನಿರಾಸೆ; ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ವಿಡಿಯೋ ಬಿಟ್ಟು, ಕಣ್ಣೀರಿಟ್ಟ ಅನೀಶ್
ಕನ್ನಡದಲ್ಲಿ ಒಂದು ದೊಡ್ಡ ಸಕ್ಸಸ್‌ಗಾಗಿ ಎದುರು ನೋಡುತ್ತಿರುವ ನಟ ಅನೀಶ್. ಕಳೆದ ಒಂದೂವರೆ ದಶಕದಿಂದ ನಿರಂತರ ಪ್ರಯತ್ನಗಳನ್ನು ಮಾಡಿಕೊಂಡೇ ಬರುತ್ತಿದ್ದಾರೆ. ಆದರೂ ಒಂದು ದೊಡ್ಡ ಸಕ್ಸಸ್ ಅಂತ ಸಿಕ್ಕಿಲ್ಲ. ನಿನ್ನೆಯಷ್ಟೇ (ನವೆಂಬರ್ 14) ಅನೀಶ್ ನಟಿಸಿ ನಿರ್ದೇಶಿಸಿದ ಮತ್ತೊಂದು ಸಿನಿಮಾ 'ಲವ್ OTP' ರಿಲೀಸ್ ಆಗಿದೆ. ಈ ಸಿನಿಮಾ ಒಳ್ಳೆಯ ವಿಮರ್ಶೆಗಳು ಕೂಡ ಬಂದಿವೆ.
ಈ ಸಿನಿಮಾಗೆ ಒಳ್ಳೆಯ ವಿಮರ್ಶೆ ಬಂದರೂ ಥಿಯೇಟರ್‌ಗೆ ಬರು ಬರುತ್ತಿಲ್ಲ. ಅನೀಶ್ ಸಿನಿಮಾ 'ಲವ್ OTP' ನೋಡುವುದಕ್ಕೆ ಆಸಕ್ತಿ ತೋರುತ್ತಿಲ್ಲ. ಫಸ್ಟ್ ಡೇ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ನೋಡಿ ಹತಾಶರಾದ ಅನೀಶ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅನೀಶ್ ತಮ್ಮ ಸಿನಿಮಾ ಬಗ್ಗೆ ನೆನೆದು ಕಣ್ಣೀರು ಸುರಿಸಿದ್ದಾರೆ. ಇನ್ನು ಎಂತಹ ಸಿನಿಮಾ ಮಾಡಬೇಕು ಅಂತ ಭಾವುಕರಾಗಿದ್ದಾರೆ.

ಕಳೆದ ಒಂದೂವರೆ ದಶಕದಿಂದ ಅನೀಶ್ ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಗೆಲ್ಲಲೇ ಬೇಕು ಅಂತ ಹಠ ಬಿದ್ದಿದ್ದರು. ಅದರಂತೆ ಈ ಬಾರಿ 'ಲವ್ OTP'ಯಲ್ಲಿ ನಟಿಸುವುದರ ಜೊತೆಗೆ ನಿರ್ದೇಶನಕ್ಕೂ ಕೂಡ ಕೈ ಹಾಕಿದ್ದರು. ಈ ಸಿನಿಮಾಗೆ ಒಳ್ಳೆಯ ವಿಮರ್ಶೆಗಳು ಕೂಡ ಬಂದಿವೆ. ಬುಕ್ ಮೈ ಶೋನಲ್ಲೂ 3.5 ರೇಟಿಂಗ್ ಸಿಕ್ಕಿದೆ. ಹೀಗಿದ್ದರೂ ಜನರು ಸಿನಿಮಾ ನೋಡುತ್ತಿಲ್ಲ ಅಂತ ಬೇಸರ ಹೊರ ಹಾಕಿದ್ದಾರೆ. ವಿಡಿಯೋದಲ್ಲಿ ಅನೀಶ್ ಏನು ಹೇಳಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
14 ವರ್ಷಗಳ ನಿರಂತರ ಪ್ರಯತ್ನಕ್ಕೆ ನಿರಾಸೆ
ಅನೀಶ್ ಕನ್ನಡ ಚಿತ್ರರಂಗದಲ್ಲಿ ನೆಲೆಯೂರುವುದಕ್ಕೆ ಹಾರ್ಡ್‌ವರ್ಕ್ ಮಾಡುತ್ತಿರುವ ನಟರಲ್ಲಿ ಒಬ್ಬರು. ಒಂದೊಳ್ಳೆ ಸಿನಿಮಾ ಕೊಡಬೇಕು ಅನ್ನೋದು ಇವರ ಪ್ರಯತ್ನ. ಅದಕ್ಕೆ ತಕ್ಕಂತೆ ಕಳೆದ 14 ವರ್ಷಗಳಿಂದ ಪ್ರಯತ್ನಗಳನ್ನು ಮಾಡಿಕೊಂಡು ಬರುತ್ತಲೇ ಇದ್ದಾರೆ. ಸಿನಿಮಾ ಸೋತಾಗ ಕುಗ್ಗದೆ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕುತ್ತಲೇ ಇದ್ದರು. ಆದರೆ, ಈ ಬಾರಿ ಕೂಡ ಅವರಿಗೆ ಮೊದಲ ದಿನ ಒಳ್ಳೆಯ ರಿಸಲ್ಟ್ ಸಿಕ್ಕಿಲ್ಲ. ಹೀಗಾಗಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಮಾಡಿ ಕಣ್ಣೀರು ಹಾಕಿದ್ದಾರೆ.
ಅನೀಶ್ ನೋವಿನ ಮನವಿ
ಇನ್ನು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ವಿಡಿಯೋ ಹಂಚಿಕೊಂಡು ಹತಾಶೆಯಿಂದ ಸಿನಿಮಾ ನಿಲ್ಲಿಸುವ ಮಾತುಗಳನ್ನು ಆಡಿದ್ದಾರೆ. "ನಮಸ್ಕಾರ, ತುಂಬಾ ನೋವಿನಿಂದ ಹತಾಶೆಯಿಂದ ಈ ಮಾತುಗಳನ್ನ ಹೇಳ್ತೀನಿದ್ದೀನಿ. 14 ವರ್ಷದ ನಿರಂತರ ಶ್ರಮ, ಸೋಲುಗಳಿಗೆ ಕಂಗೆಡದೇ, ಸಿನಿಮಾದಿಂದ ಸಿನಿಮಾಗೆ ಆಶಾದಾಯಕವಾಗೇ ಇಲ್ಲಿವರೆಗೂ ಬಂದೆ. ನನ್ನ ವೃತ್ತಿ ಬದುಕಿನಲ್ಲೇ The Best Reviews ಲವ್ OTPಗೆ ಸಿಕ್ಕಿದೆ, ಸಿಕ್ತಿದೆ. ಆದ್ರೆ, ಥಿಯೇಟರಿಗೆ ಯಾಕ್ ಯಾರೂ ಬರ್ತಿಲ್ಲ? ನಾನೂ ಇನ್ನೇನ್ ಮಾಡ್ಬೇಕು? ಗೊತ್ತಾಗ್ತಿಲ್ಲ. ಮೊನ್ನೆ ಪ್ರಿಮಿಯರ್ ನೋಡಿ ಪತ್ರಕರ್ತರು ಅತ್ಯುತ್ತಮ ವಿಮರ್ಶೆಗಳನ್ನ ಕೊಟ್ಟಿದ್ದಾರೆ. ನಿನ್ನೆ ಯಾರೆಲ್ಲಾ ನೋಡಿದ್ದಾರೋ ಬುಕ್ ಮೈಶೋನಲ್ಲಿ ನಿರೀಕ್ಷೆಗೂ ಮೀರಿ ನಮ್ಮ ಕೆಲಸವನ್ನ ಕೊಂಡಾಡ್ತಿದ್ದಾರೆ. ಆದ್ರೂ ಯಾಕ್ ಈ ರೀತಿ? ಅರ್ಥ ಆಗ್ತಿಲ್ಲ? ಇವತ್ತು ನಾಳೆಯೊಳಗೆ ಪ್ರೇಕ್ಷಕರು ಬಂದ್ರೆ ಕೈ ಹಿಡಿದ್ರೆ ಮುಂದಿನ ದಾರಿ. ಇಲ್ಲಾಂದ್ರೆ ಇಲ್ಲಿಗೆ ನನ್ನ ಸಿನಿಮಾ ಪ್ರಯತ್ನವನ್ನ ನಿಲ್ಲಿಸ್ತೀನಿ. ತುಂಬಾ ದುಃಖದಿಂದ ಈ ವಿಚಾರ ಹೇಳ್ತಿದ್ದೀನಿ. ಈ ಕಣ್ಣೀರು ಸಿಂಪತಿಗಲ್ಲ, ಗಿಮಿಕ್ಕು ಅಲ್ಲ, ನನ್ನ ಅಂತರಾಳದ ನೋವಿದು." ಎಂದು ಅನೀಶ್ ಬರೆದು ಪೋಸ್ಟ್ ಮಾಡಿದ್ದಾರೆ.
ಇದು ನನ್ನ ಕೊನೆಯ ಪ್ರಯತ್ನ
ಅನೀಶ್ ಶೇರ್ ಮಾಡಿರುವ ವಿಡಿಯೋದಲ್ಲಿ ಎರಡು ಸಿನಿಮಾ ನೋಡುವುದಕ್ಕೆ ಜನ ಬಂದರೆ, ಸಿನಿಮಾ ಉಳಿಯುತ್ತೆ. ಇಲ್ಲದೇ ಹೋದರೆ, ಇದು ಕೊನೆಯ ಪ್ರಯತ್ನ ಆಗುತ್ತೆ ಎಂದು ಭಾವುಕರಾಗಿದ್ದಾರೆ. "ನನಗೆ ಅಂತ ಯಾರೂ ಇಲ್ಲ. ನಾನು ಒಬ್ಬೊಂಟಿ. ಬ್ಯಾಕ್‌ಗ್ರೌಂಡ್‌ನಲ್ಲಿ ಎಲ್ಲವೂ ಆಗುತ್ತೆ. ನೀನು ಬರೀ ನಟನೆ ಮಾಡಿಕೊಂಡು ಇರು ಅಂದರೆ, ಅದು ಆಗದೇ ಇರೋ ಕೆಲಸ. ನಟನೆ ಜೊತೆಗೆ ಎಲ್ಲವನ್ನೂ ನಾನೇ ಮಾಡಬೇಕು. ಇವತ್ತು ವೀಕೆಂಡ್. ಸಿನಿಮಾ ಉಳಿಸಬೇಕು ಅಂದರೆ, ಇನ್ನೆರಡು ದಿನ ಅಷ್ಟೇ. ಅದು ಮಿಸ್ ಆದರೆ, ಇದು ನನ್ನ ಕೊನೆಯ ಪ್ರಯತ್ನ ಆಗುತ್ತೆ." ಎಂದು ಅನೀಶ್ ವಿಡಿಯೋದಲ್ಲಿ ಹೇಳಿದ್ದಾರೆ.
'ಲವ್ OTP' ಕಥೆಯೇನು?
'ಲವ್ OTP' ಸಿನಿಮಾದಲ್ಲಿ ಅನೀಶ್ ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದಾರೆ. ಇಲ್ಲೂ ಕೂಡ ಕ್ರಿಕೆಟ್ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವುದಕ್ಕೆ ಪರದಾಡುತ್ತಿರುವ ಪಾತ್ರ ಮಾಡಿದ್ದಾರೆ. ತನ್ನ ಗುರಿಯನ್ನು ಚೇಸ್ ಮಾಡುತ್ತಿರುವಾಗ, ಪ್ರೀತಿ ನಾಯಕನ ತಾಳ್ಮೆ, ಸಮಯ, ನಂಬಿಕೆಯನ್ನು ಪರೀಕ್ಷೆ ಮಾಡುತ್ತೆ. ಸಿನಿಮಾ ಕಥೆ, ನಿರ್ದೇಶನ ಎಲ್ಲದರ ಬಗ್ಗೆನೂ ಒಳ್ಳೆಯ ಅಭಿಪ್ರಾಯವೇ ಇದೆ. ಆದರೆ, ಸಿನಿಮಾ ಗಳಿಕೆಯಲ್ಲಿ ಹಿಂದೆ ಬಿದ್ದಿದೆ.


Click it and Unblock the Notifications











