ದೂದ್ ಪೇಡಾ ದಿಗಂತ್, ಲವ್ ಗುರು ತರುಣ್ ಚಂದ್ರ ಹವಾ ಶುರು: ಶೂಟಿಂಗ್ ಆರಂಭ
ಒಂದೇ ಸಿನಿಮಾದಲ್ಲಿ ಇಬ್ಬರು ಹೀರೋ ನಟಿಸುವುದು ಕನ್ನಡ ಚಿತ್ರರಂಗದಲ್ಲಿ ಕಾಮನ್ ಅಲ್ಲವೇ ಅಲ್ಲ. ಇಬ್ಬರು ಸ್ಟಾರ್ ನಟರು ಕೂಡ ಒಂದೇ ಸಿನಿಮಾದಲ್ಲಿ ನಟಿಸುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಹೀಗಾಗಿ ಸ್ಯಾಂಡಲ್‌ವುಡ್‌ನಲ್ಲಿ ಇಬ್ಬರು ನಾಯಕ ನಟಿ ಒಟ್ಟಿಗೆ ನಟಿಸಿದ್ದು ತೀರಾ ವಿರಳ. ಆದ್ರೀಗ ದೂದ್ ಪೇಡಾ ದಿಗಂತ್ ಹಾಗೂ ಲವ್ ಗುರು ತರುಣ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
Recommended Video
ಬಾಲಿವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ ಯಾವುದೇ ಚಿತ್ರರಂಗವಿರಲಿ ತಾರೆಯರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಕನ್ನಡದಲ್ಲಿ ಮಾತ್ರ ಒಬ್ಬ ನಟನ ಜೊತೆ ಮತ್ತೊಂದು ನಟಿಸಲು ಹಿಂದೇಟು ಹಾಕುತ್ತಾರೆ. ಈಗ ಮತ್ತೆ ದಿಗಂತ್ ಹಾಗೂ ತರುಣ್ ಚಂದ್ರ ಒಂದೇ ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತೆ ಮಲ್ಟಿಸ್ಟಾರರ್ ಸಿನಿಮಾಗೆ ನಾಂದಿ ಹಾಡುತ್ತಿದ್ದಾರೆ. ಅಷ್ಟಕ್ಕೂ ಈ ಕಾಂಬಿನೇಷನ್ ಸಿನಿಮಾದ ಕಥೆಯೇನು? ತಿಳಿಯಲು ಮುಂದೆ ಓದಿ.

ದಿಗಂತ್ ಈಗ ಬರಹಗಾರ
ದಿಗಂತ್ ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ 'ಗಾಳಿಪಟ 2' ದಿಗಂತ್ ನಿರೀಕ್ಷೆ ಮಾಡುತ್ತಿರುವ ಸಿನಿಮಾ. ಈ ಮಧ್ಯೆ ಮತ್ತೊಂದು ಸಿನಿಮಾಗೆ ಜೈ ಅಂದಿದ್ದಾರೆ. ಈ ಸಿನಿಮಾದಲ್ಲಿ ಬರಹಗಾರರಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಹೀಗಾಗಿ ದಿಗಂತ್‌ಗೆ ಈ ಸಿನಿಮಾ ವಿಶೇಷ. "ನನ್ನದು ಈ ಸಿನಿಮಾದಲ್ಲಿ ಬರಹಗಾರನ ಪಾತ್ರ. ನಿರ್ಮಾಪಕ ಕಮರ್ ಹಾಗೂ ತರುಣ್ ನನಗೆ ಬಹಳ ದಿನಗಳಿಂದ ಸ್ನೇಹಿತರು. ಕಮರ್ ಯಾವಾಗಲೂ ಸಿನಿಮಾ ಮಾಡೋಣ ಎನ್ನುತ್ತಿದ್ದರು. ಅದಕ್ಕೀಗ ಸಮಯ ಕೂಡಿ ಬಂದಿದೆ. ಹಾಗಾಗಿ ಸಿನಿಮಾ ಮಾಡುತ್ತಿದ್ದೇವೆ." ಎಂದು ಈ ಸಿನಿಮಾ ಬಗ್ಗೆ ದಿಗಂತ್ ಹೇಳಿದ್ದಾರೆ.

7 ವರ್ಷಗಳ ಬಳಿಕ ಮತ್ತೆ ಮರಳಿದ ತರುಣ್
'ಲವ್ ಗುರು' ಖ್ಯಾತಿಯ ತರುಣ್ ಚಂದ್ರ ಕಳೆದ 7 ವರ್ಷಗಳಿಂದ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಸಿನಿಮಾದಿಂದ ದೂರನೇ ಉಳಿದ್ದರು. ಇತ್ತೀಚೆಗೆ ಅಲ್ಬಂ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದ ತರುಣ್ ಮತ್ತೆ ಚಿತ್ರರಂಗಕ್ಕೆ ಮರಳುವ ಸೂಚನೆ ನೀಡಿದ್ದರು. ಅದರಂತೆ ದಿಗಂತ್ ಜೊತೆ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. "ಬಹಳ ದಿನಗಳ ಬಳಿಕ ನಾನು ಮತ್ತೆ ನಟನೆಗೆ ಮರಳಿದ್ದೇನೆ. ದಿಗಂತ್ ಹಾಗೂ ಕಮರ್ ಜೊತೆಗೆ ನಾನು ಕ್ರಿಕೆಟ್ ಆಡಿದ್ದೇನೆ. ಆದರೆ ಸಿನಿಮಾ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಅವರೊಂದಿಗೆ ಸಿನಿಮಾ ಮಾಡುತ್ತಿದ್ದೇನೆ." ಎನ್ನುತ್ತಾರೆ ನಟ ತರುಣ್ ಚಂದ್ರ.

ಈ ಸಿನಿಮಾಗೆ ಇಬ್ಬರು ನಾಯಕಿಯರು
ಸಿನಿಮಾದಲ್ಲಿ ಇಬ್ಬರು ನಾಯಕರು ಇದ್ಮೇಲೆ ಇಬ್ಬರು ನಾಯಕಿಯರೂ ಇರಲೇಬೇಕು. ಅದರಂತೆ ದಿಗಂತ್ ಹಾಗೂ ತರುಣ್ ಚಂದ್ರಗೆ ಇಬ್ಬರು ನಾಯಕಿಯರಿದ್ದಾರೆ. ಕಾವ್ಯ ಶೆಟ್ಟಿ ಹಾಗೂ ಕೊಮಿಕ ಆಂಚಲ್ ಇಬ್ಬರೂ ನಾಯಕಿಯರನ್ನು ಚಿತ್ರತಂಡ ಈಗಾಗಲೇ ಆಯ್ಕೆ ಮಾಡಿದೆ. "ನನಗೆ ಇವರೆಲ್ಲರೂ ಹಿಂದಿನಿಂದಲೂ ಪರಿಚಯ. ಈ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ನನಗೆ ಸಂತಸವಾಗಿದೆ. ನಿರ್ದೇಶಕರು ಕಥೆ ಬಗ್ಗೆ ಹೆಚ್ಚು ಮಾಹಿತಿ ನೀಡಿಲ್ಲ. ಹೀಗಾಗಿ ಸ್ಟೋರಿಗೆ ಏನು ಹೇಳುವುದಿಲ್ಲ." ಎಂದಿದ್ದಾರೆ ಕಾವ್ಯ ಶೆಟ್ಟಿ.

ಥ್ರಿಲ್ಲರ್ ಸಿನಿಮಾಗೆ ಮುಂಬೈ ನಿರ್ದೇಶಕ
ತರುಣ್ ಹಾಗೂ ದಿಗಂತ್ ನಟಿಸುತ್ತಿರುವ ಸಿನಿಮಾ ಥ್ರಿಲ್ಲರ್ ಸಿನಿಮಾವಾಗಿದೆ. ಈ ಸಿನಿಮಾವನ್ನು ಮುಂಬೈ ಮೂಲಕ ಆನಂದ್ ಪ್ರಕಾಶ್ ಮಿಶ್ರಾ ನಿರ್ದೇಶನ ಮಾಡುತ್ತಿದ್ದಾರೆ. ಕಮರ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಆನಂದ್ ರಾಜ್ ವಿಕ್ರಮ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಹಿರಿಯ ಛಾಯಾಗ್ರಾಹಕ ಪಿ.ಕೆ.ಎಚ್ ದಾಸ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇದೇ ಫೆಬ್ರವರಿ ಏಳರಿಂದ ಬೆಂಗಳೂರು, ಕೊಡಗು ಸೇರಿದಂತೆ 40 ದಿನಗಳ ಚಿತ್ರೀಕರಣ ನಡೆಯಲಿದೆ.


Click it and Unblock the Notifications











