"ಅವಳು ಗೊತ್ತಿದ್ದು ಮಾಡಿದ್ಲೋ, ಗೊತ್ತಿಲ್ಲದೆ ಮಾಡಿದ್ಲೋ ಗೊತ್ತಿಲ್ಲ.. 20 ನಿಮಿಷ ಪ್ರಜ್ಞೆ ಇರಲಿಲ್ಲ"-ದಿಗಂತ್
ಕನ್ನಡ ಚಿತ್ರರಂಗದ ಸುಂದರ ನಟರಲ್ಲಿ ದಿಗಂತ್ ಕೂಡ ಒಬ್ಬರು. ಬಾಲಿವುಡ್ ನಟರಿಗೆ ಪೈಪೋಟಿ ಕೊಡಬಲ್ಲ ಹಂಡ್‌ಸಮ್ ಹೀರೋ. ಇದೇ ಕಾರಣಕ್ಕೆ ಅವರಿಗೆ ಬಾಲಿವುಡ್‌ನಿಂದಲೂ ಆಫರ್ ಬಂದಿತ್ತು. ಎರಡು ಮೂರು ಸಿನಿಮಾಗಳಿಗೆ ಆಫರ್ ಸಿಕ್ಕಿತ್ತು. ಇನ್ನೇನು ದಿಗಂತ್ ಬಾಲಿವುಡ್‌ನಲ್ಲಿ ಸೆಟಲ್ ಆಗಿಬಿಟ್ಟರು ಎನ್ನುವಾಗಲೇ ಒಂದು ಘಟನೆ ನಡೆದು ಹೋಯ್ತು.
ದಿಗಂತ್ 'ಟಿಕೆಟ್ ಟು ಬಾಲಿವುಡ್' ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ವೇಳೆ ಒಂದು ದೃಶ್ಯದ ಶೂಟಿಂಗ್ ಸಮಯದಲ್ಲಿ ಆ ಸಿನಿಮಾದ ನಾಯಕಿ ಮಾಡಿದ ಎಡವಟ್ಟಿನಿಂದ ದಿಗಂತ್ ಒಂದು ಕಣ್ಣನ್ನು ಕಳೆದುಕೊಳ್ಳಬೇಕಾಗಿ ಬಂತು. ಆ ಘಟನೆ ಬಳಿಕ ದಿಗಂತ್ ಆ ಬಾಲಿವುಡ್ ನಟಿಯ ಹೆಸರನ್ನು ಕೂಡ ತೆಗೆದುಕೊಂಡಿರಲಿಲ್ಲ. ನಟಿಯ ಮೇಲೆ ಆರೋಪ ಕೂಡ ಮಾಡಿರಲಿಲ್ಲ. ಆದ್ರೀಗ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ದಿಗಂತ್ ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.

'ಟಿಕೆಟ್ ಟು ಬಾಲಿವುಡ್' ಸಿನಿಮಾ ನಾಯಕಿ ದಿಗಂತ್ ಮೇಲೆ ಹೈ ಹೀಲ್ಸ್ ಚಪ್ಪಲಿಯನ್ನು ಎಸೆದಿದ್ದರು. ಅದು ಅವರ ಕಣ್ಣಿಗೆ ಬಡಿದು ಪೆಟ್ಟಾಗಿತ್ತು. ಈ ಘಟನೆ ಲಂಡನ್‌ನಲ್ಲಿ ನಡೆದಿತ್ತು. ಕೂಡಲೇ ಆಸ್ಪತ್ರೆ ಧಾವಿಸಿದ ದಿಗಂತ್‌ಗೆ ವೈದ್ಯರು ಕಣ್ಣು ಕಳೆದುಕೊಂಡಿದ್ದೀಯ ಎಂದಿದ್ದರು. ಅಲ್ಲಿಂದ ದಿಗಂತ್ ಕೆಲವು ದಿನಗಳ ಕಾಲ ಖಿನ್ನತೆಗೆ ಜಾರಿದ್ದರು. ಆ ವೇಳೆ ಏನೆಲ್ಲ ಆಯ್ತು? ಎನ್ನುವುದನ್ನು ದಿಗಂತ್ ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
"ಕಣ್ಣು ಏಟಾದಾಗ ಎಲ್ಲಾ ಮುಗಿದು ಹೋಯ್ತು. ಕರಿಯರ್ ಮುಗಿದೇ ಹೋಯ್ತು ಎನ್ನುವ ನಿರ್ಧಾರಕ್ಕೆ ಬಂದಿದ್ದೆ. ಮೊದಲ 15 ರಿಂದ 20 ದಿನ ಹಾಗೆ ಅನಿಸಿತ್ತು. ಈ ಘಟನೆ ನಡೆದಿದ್ದು 2015ನಲ್ಲಿ, ಮದುವೆ ನಡೆದಿತ್ತು 2018. ನನಗೆ ಖಿನ್ನತೆ ಅಂದರೆ ಏನು ಅಂತ ಅನಿಸಿದ್ದೇ ಆಗ. ಏನು ಮಾಡಿದರೂ, ನನಗೆ ನೆಮ್ಮದಿ ಸಿಗುತ್ತಿರಲಿಲ್ಲ. ನನಗೆ ಒಂದು ಕಣ್ಣು ಇಲ್ಲ ಅನ್ನೋದು ಕಾಡುತ್ತಿತ್ತು. ನನಗೆ ಬೇಜಾರು ಯಾವಾಗ ಜಾಸ್ತಿ ಆಗಿದ್ದು ಅಂದರೆ, ಕರಿಯರ್‌ಗಿಂತ ಬ್ಯಾಡ್ಮಿಂಟ್ ಆಡುವುದಕ್ಕೆ ಹೋದೆ. ಶಟಲ್ ಕಾಣಿಸುತ್ತಿಲ್ಲ. ಒಂದು ಕಣ್ಣು ಮುಚ್ಚಿಕೊಂಡರೆ ನಿಮಗೆ ಒಂದು ಕಣ್ಣು ಕಾಣಲ್ಲ. ಆಗ ಬೇಜಾರಾಯ್ತು. ಅಯ್ಯೋ ದೇವರೆ ನನಗೆ ಆಟ ಆಡುವುದಕ್ಕೂ ಆಗಲ್ವಾ ಅಂತ. ಆ ಮೇಲೆ ಅದರಿಂದ ಹೊರ ಬಂದೆ." ಎಂದಿದ್ದಾರೆ ದಿಗಂತ್.
ಹಾಗೇ ಈ ಖಿನ್ನತೆಯಿಂದ ಹೊರ ಬರುವುದಕ್ಕೆ ಏನು ಮಾಡಿದರು ಅನ್ನೋದನ್ನು ಹೇಳಿದ್ದಾರೆ. "ಎಷ್ಟು ಆಕ್ಟರ್‌ಗಳಿಗೆ ಸಿನಿಮಾ ಶೂಟಿಂಗ್ ಮಾಡಬೇಕಾದರೆ ಅಪಘಾತವಾಗಿದೆ ಅನ್ನೋದೆಲ್ಲ ನೋಡಿದೆ. ತುಂಬಾನೇ ಲಿಸ್ಟ್‌ಗಳು ಬಂದವು. ಕೆಲವರು ಕುದುರೆಯಲ್ಲಿ ಹೋಗಬೇಕಾದರೆ, ಬೆನ್ನು ಹುರಿಯೆಲ್ಲ ಮುರಿದು ಹೋಗಿದೆ. ಅದೆಲ್ಲ ನೋಡಿದ ಮೇಲೆ ನನ್ನದು ಅಷ್ಟು ದೊಡ್ಡ ಅಪಘಾತವೇನಲ್ಲ. ಒಂದಿಷ್ಟು ಸರ್ಜರಿಯಿಂದ ಏನೋ ಒಂದಿಷ್ಟು ರೆಡಿ ಮಾಡಬಹುದು. ಲೆನ್ಸ್ ಹಾಕಿಕೊಂಡು ಶೂಟಿಂಗ್ ಮಾಡಬಹುದು ಎಂಬ ಸಮಾಧಾನ ಆಯ್ತು." ಎಂದು ದಿಗಂತ್ ಆ ಕಷ್ಟದ ದಿನಗಳಿಂದ ಹೊರ ಬಂದಿದ್ದಾರೆ.

ಕನ್ನಡದಲ್ಲಿ ಸ್ಟಾರ್ ಆಗಿ ಹೊರಹೊಮ್ಮಿದ್ದ ದಿಗಂತ್‌ಗೆ ಬಾಲಿವುಡ್ ಅಫರ್ ಸಿಕ್ಕಿದ್ದು ಹೇಗೆ ಅನ್ನೋದನ್ನು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಬಿಜೋಯ್ ನಂಬಿಯಾರ್ ಅಂತ ಒಬ್ಬರು ನಿರ್ದೇಶಕರು ಇದ್ದಾರೆ. ಅವರು ಸುಮಾರು ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಿದರು. ಅವರು ಇಲ್ಲೇ ಪೆಸಿಟ್‌ನಲ್ಲಿ ಓದಿರುವುದು. ಆ ಸಮಯದಲ್ಲೇ ನನ್ನ ಸಿನಿಮಾಗಳೆಲ್ಲ ರಿಲೀಸ್ ಆಗಿತ್ತು. ಆಗ ಅವರು ಬಾಲಿವುಡ್ ಕಡೆಗೆ ಹೋಗಿದ್ದರು. ಅಲ್ಲಿ ಅವರು ಜನಪ್ರಿಯತೆ ಪಡೆದುಕೊಂಡಿದ್ದರು. ಅವರೇ ಒಂದು ಸಿನಿಮಾಗೆ ಸಂಪರ್ಕ ಮಾಡಿದ್ದರು. ಅದಕ್ಕೆ ನಾನು ಹೋದೆ. ಅಲ್ಲಿ ಹೋಗಿ ಆಕ್ಟಿಂಗ್ ಮಾಡಬೇಕು ಅಂತೇನು ಇರಲಿಲ್ಲ. ಅಲ್ಲಿನ ವಾತಾವರಣ ಇಷ್ಟ ಆಯ್ತು. ಆಮೇಲೆ ಬ್ಯಾಕ್ ಟು ಬ್ಯಾಕ್ ಆಫರ್‌ಗಳು ಬಂತು." ಎನ್ನುತ್ತಾರೆ ದಿಗಂತ್.
ದಿಗಂತ್ ಕಣ್ಣು ಕಳೆದುಕೊಂಡಿದ್ದರೂ, ಆ ನಟಿ ಇವರನ್ನು ನೋಡುವುದಕ್ಕೆ ಆಸ್ಪತ್ರೆಗೂ ಬರಲಿಲ್ಲ. ಚಿಕ್ಕದೊಂದು ಮೆಸೇಜ್ ಹಾಕಿ ಸುಮ್ಮನಾಗಿದ್ದರು. ಆ ಬಗ್ಗೆ ದಿಗಂತ್ ಬೇಸರ ವ್ಯಕ್ತಪಡಿಸಿದ್ದಾರೆ.
"ಟಿಕೆಟ್ ಟು ಬಾಲಿವುಡ್ ಎನ್ನುವ ಸಿನಿಮಾ. ಅವತ್ತು ಪ್ಯಾಕಪ್ ಎಲ್ಲ ಆಗಿದೆ. ನಮ್ಮ ಇಡೀ ತಂಡವೆಲ್ಲ ಒಂದೇ ಹೋಟೆಲ್‌ನಲ್ಲಿ ಇದ್ವಿ. ಡೈರೆಕ್ಟರ್ ಪಾಸ್ ಆಗುತ್ತಿದ್ದರು. ಆಗ ನನ್ನ ರೂಮ್ ನೋಡಿದರು. ಅದೊಂದು ಸೀನ್ ಇದೆ. ಇಲ್ಲಿ ಮಾಡಿಬಿಡೋಣ ಅಂದರು. ಚಿಕ್ಕ ಸೀನ್ ಅದು. ಒಂದು ಪೇಜ್ ಇತ್ತು ಅಷ್ಟೇ. ಆ ಸೀನ್ ಏನು ಅಂದರೆ, ನಾನು ನನ್ನ ಕೋಸ್ಟಾರ್ ಇಬ್ಬರೂ ಒಂದು ರೂಮ್‌ನಲ್ಲಿ ಇರುತ್ತೇವೆ. ಒಂದೇ ಸೂಟ್‌ಕೇಸ್‌ನಲ್ಲಿ ಇಬ್ಬರದ್ದೂ ಬಟ್ಟೆ ಇರುತ್ತೆ. ನಮ್ಮಿಬ್ಬರ ನಡುವೆ ಜಗಳ ಆಗಿರುತ್ತೆ. ಅವಳು ಬಟ್ಟೆ ಬಿಸಾಕಿ ರೂಮ್ ಬಾಗಿಲು ಹಾಕ್ಬೇಕು. ನಾನು ಅಲ್ಲಿಂದ ಹೊರಡಬೇಕು. ಸೀನ್ ಅಷ್ಟೇ ಇದ್ದಿದ್ದು. ನನ್ನ ಕೋಸ್ಟಾರ್‌ದು 15 ರಿಂದ 20 ಟೇಕ್ ಆಗಿತ್ತು. ಕೊನೆ ಜಾಸ್ತಿ ಕೋಪ ಬರಲಿ ಅಂತ ಸೂಟ್ ಕೇಸ್‌ನಲ್ಲೇ ಇದ್ದಿದ್ದನ್ನು ತೆಗೆದು ಬಿಸಾಕಿದ್ದಾಳೆ. ಅದು ಹುಡುಗಿಯರು ಹಾಕುವ ಹೈ ಹೀಲ್ಸ್ ಬಂದು ಸೀದಾ ಕಣ್ಣಿಗೆ ಹೊಡೀತು. ಅವಳು ಗೊತ್ತಿದ್ದು ಮಾಡಿದ್ದಾಳೋ. ಗೊತ್ತಿಲ್ಲದೆ ಮಾಡಿದ್ದಾಳೋ ಗೊತ್ತಿಲ್ಲ. ನಾನು 20 ನಿಮಿಷ ಎಚ್ಚರ ಇರಲಿಲ್ಲ. ಆಮೇಲೆ ನೋಡಿದರೆ, ಕಣ್ಣು ಕಟ್ ಆಗ್ಬಿಟ್ಟಿದೆ. ಲಂಡನ್‌ನಲ್ಲಿ ಡಾಕ್ಟರ್ ನಿಧಾನವಾಗಿ ಏನೂ ಹೇಳಲ್ಲ. ನೇರವಾಗಿ ನೀನು ಕಣ್ಣನ್ನು ಕಳೆದುಕೊಂಡಿದ್ದೀಯ ಅಂದ್ಬಿಟ್ಟ. ಅದು ನನ್ನ ಜೀವನದ ದೊಡ್ಡ ಶಾಕ್ ಆಗಿತ್ತು." ಎಂದು ದಿಗಂತ್ ಹೇಳಿಕೊಂಡಿದ್ದಾರೆ.


Click it and Unblock the Notifications











