Jaggesh Health: ಜಗ್ಗೇಶ್ ದಿಢೀರ್ ಆಸ್ಪತ್ರೆಗೆ ದಾಖಲು.. ಆತಂಕ ಹುಟ್ಟಿಸಿದ ಫೋಟೊಗಳು
ನವರಸ ನಾಯಕ ಜಗ್ಗೇಶ್ ಕನ್ನಡ ಅನ್ನೋ ವಿಷಯ ಬಂದಾಗಲೆಲ್ಲ ಸದಾ ಮುಂದಿರುತ್ತಾರೆ. ಆದರೆ, ಇಂದು (ಸೆಪ್ಟೆಂಬರ್ 29) ನಡೆದ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಸೂಚಿಸಿದ ಬೆಂಬಲದ ವೇಳೆ ಜಗ್ಗೇಶ್ ಅನುಪಸ್ಥಿತಿ ಕಾಡುತ್ತಿತ್ತು. ಇದೇ ವೇಳೆ ಜಗ್ಗೇಶ್ ಅನಾರೋಗ್ಯದ ಸುದ್ದಿ ಓಡಾಡಿದೆ.
ನವರಸ ನಾಯಕ ಜಗ್ಗೇಶ್ ದಿಢೀರನೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ ಸ್ಕ್ಯಾನಿಂಗ್ ಮಾಡಿಸಿಕೊಳ್ಳುತ್ತಿರುವ ಕೆಲವು ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳು ಜಗ್ಗೇಶ್ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು.

ಅಷ್ಟಕ್ಕೂ ನವರಸ ನಾಯಕ ಜಗ್ಗೇಶ್‌ಗೆ ಏನಾಗಿದೆ? ದಿಢೀರನೇ ಆಸ್ಪತ್ರೆಗೆ ದಾಖಲಾಗುವಂತಹ ಆರೋಗ್ಯ ಸಮಸ್ಯೆ ಏನಾಗಿದೆ? ಅನ್ನೋದು ಸಿನಿಮಾ ಮಂದಿ ಹಾಗೂ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಇದಕ್ಕೆ ಸ್ವತ: ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ತಮ್ಮ ಆರೋಗ್ಯ ಸಮಸ್ಯೆಯೇನು? ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ.
ಜಗ್ಗೇಶ್ ಆರೋಗ್ಯ ಸಮಸ್ಯೆಯೇನು?
ನವರಸ ನಾಯಕ ಜಗ್ಗೇಶ್ ಕೆಲವು ದಿನಗಳಲ್ಲಿ ನಡೆದಾಡಲು ಕಷ್ಟ ಪಡುತ್ತಿದ್ದರು. ಹೀಗಾಗಿ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಜಗ್ಗೇಶ್ ಅವರ ಬೆನ್ನು ಹುರಿಗೆ ಸಮಸ್ಯೆಯಾಗಿದೆ. ಹೀಗಾಗಿ ನಡೆದಾಡಲು ಪರದಾಡುತ್ತಿದ್ದಾರೆ. "L4 L5 compression ಆಗಿ ನಡೆದಾಡಲು ಕಷ್ಟವಾಗಿ ಯಾವ ಕಾರ್ಯದಲ್ಲು ಭಾಗಿಯಾಗಲು ಸಾಧ್ಯವಾಗಲಿಲ್ಲಾ! 2ವಾರ pysiyo ಚಿಕಿತ್ಸೆ ಹಾಗು bedrest ಕಡ್ಡಾಯ ಎಂದು ಡಾ ಸಲಹೆ ನೀಡಿದ್ದಾರೆ.. ನಿಮ್ಮ ಮಾಹಿತಿಗಾಗಿ ಧನ್ಯವಾದ ಶುಭಸಂಜೆ.." ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ (X) ಮಾಡಿದ್ದಾರೆ.
ಬೆನ್ನು ಹುರಿಗೆ ಪೆಟ್ಟಾಗಿದ್ದು ಹೇಗೆ?
ಜಗ್ಗೇಶ್‌ಗೆ ದೇವರ ಮೇಲೆ ಎಲ್ಲಿಲ್ಲದ ನಂಬಿಕೆ. ಹೀಗಾಗಿ ಬೇರೆ ಬೇರೆ ಕಡೆಯಿರುವ ದೇವಸ್ಥಾನಗಳಿಗೆ ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದೆ ಜಗ್ಗೇಶ್ ಕೇದಾರನಾಥ ದೇವಸ್ಥಾನಕ್ಕೆ ಹೋಗಿದ್ದರು. ಆ ವೇಳೆ ಪೆಟ್ಟು ಮಾಡಿಕೊಂಡಿರಬಹುದು ಎಂದು ಸಿನಿಮಾರಂಗ ಅಂದಾಜು ಮಾಡಿದೆ. ಸದ್ಯ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾಗಿ ಜಗ್ಗೇಶ್ ಅವರೇ ಹೇಳಿಕೊಂಡಿದ್ದಾರೆ.
ಕಾವೇರಿ ಹೋರಾಟದಲ್ಲೂ ಭಾಗಿಯಾಗಿಲ್ಲ
ನವರಸ ನಾಯಕ ಜಗ್ಗೇಶ್ ಇಂದಿನ (ಸೆಪ್ಟೆಂಬರ್ 29) ಕಾವೇರಿ ಹೋರಾಟದಲ್ಲಿ ಭಾಗಿಯಾಗಿಲ್ಲ. ಕನ್ನಡ ಸಿನಿಮಾ ನಟರಲ್ಲಿ ಕನ್ನಡ ಭಾಷೆ, ನೆಲ, ಜಲದ ವಿಷಯ ಬಂದಾಗ ಜಗ್ಗೇಶ್ ಮುಂದಿರುತ್ತಿದ್ದರು. ಆದರೆ, ಇಂದು ಗೈರಾಗಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಅಲ್ಲದೆ ನಿನ್ನೆ (ಸೆಪ್ಟೆಂಬರ್ 28) ಬಿಡುಗಡೆಯಾದ 'ತೋತಾಪುರಿ 2' ಸಿನಿಮಾದ ರಿಲೀಸ್ ವೇಳೆನೂ ಕಾಣಿಸಿಕೊಂಡಿರಲಿಲ್ಲ.
ರಿಲೀಸ್ ಆಗಿದೆ 'ತೋತಾಪುರಿ 2'
ನವರಸ ನಾಯಕ ಜಗ್ಗೇಶ್, ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್ ರಂಗನಾಥನ್ ನಟಿಸಿರುವ 'ತೋತಾಪುರಿ 2' ಬಿಡುಗಡೆಯಾಗಿದೆ. ಜಗ್ಗೇಶ್ ಮ್ಯಾನರಿಸಂ ಹಾಗೂ ಡೈಲಾಗ್ ಡಿಲೇವರಿಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ವಿಜಯ್ ಪ್ರಸಾದ್ ನಿರ್ದೇಶನ ಮಾಡಿರೋ ಈ ಸಿನಿಮಾ 'ತೋತಾಪುರಿ ಪಾರ್ಟ್ 1' ಮುಂದುವರೆದ ಭಾಗ. ಹೀಗಾಗಿ ಎರಡನೇ ಭಾಗದ ಬಗ್ಗೆ ನಿರೀಕ್ಷೆಯಿತ್ತು. ಬಿಡುಗಡೆಯಾದ ಎರಡನೇ ದಿನವೇ ಬಂದ್ ಬಿಸಿ ತಟ್ಟಿದೆ.


Click it and Unblock the Notifications