40 ವರ್ಷ ಕನಸು ಈಡೇರಿಸಿಕೊಂಡ ನವರಸ ನಾಯಕ; ಶಂಕರ್‌ನಾಗ್ ಕನಸಿನ ಹಾದಿಯಲ್ಲಿ ನವರಸ ನಾಯಕ
ನವರಸ ನಾಯಕ ಜಗ್ಗೇಶ್ ರಾಜಕೀಯ ಹಾಗೂ ಸಿನಿಮಾ ಎರಡರಲ್ಲೂ ಆಕ್ಟಿವ್ ಆಗಿದ್ದಾರೆ. ರಾಜ್ಯಸಭಾ ಸದಸ್ಯರಾಗಿದ್ದರೂ, ಸಿನಿಮಾ ನಂಟು ಬಿಟ್ಟಿಲ್ಲ. ರಾಜಕೀಯ ಜೀವನ ಒಂದು ಕಡೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಸಿನಿಮಾ ಚಟುವಟಿಕೆಗಳಲ್ಲೂ ಆಕ್ಟಿವ್ ಆಗಿದ್ದಾರೆ. ಇದೇ ವೇಳೆ ತಮ್ಮ 40 ವರ್ಷಗಳ ಹಳೆಯ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಜಗ್ಗೇಶ್ ಬೆಂಗಳೂರಿನಲ್ಲಿ ಹೊಸದೊಂದು ಸ್ಟುಡಿಯೋ ನಿರ್ಮಾಣ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅತ್ಯಗತ್ಯವಿರುವ ಆಧುನಿಕ ಸೌಲಭ್ಯಗಳನ್ನು ಈ ಸ್ಟುಡಿಯೋದಲ್ಲಿ ಒದಗಿದ್ದಾರೆ. ಕನ್ನಡ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡುವುದಕ್ಕೆ ಈ ಸ್ಟುಡಿಯೋವನ್ನು ನಿರ್ಮಾಣ ಮಾಡಿದ್ದು, ಅದಕ್ಕೆ 'ಜಗ್ಗೇಶ್ ಸ್ಟುಡಿಯೋಸ್' ಅಂತಲೇ ಹೆಸರಿಟ್ಟಿದ್ದಾರೆ.

ಈ ಸ್ಟುಡಿಯೋ ಈಗಾಗಲೇ ಕೆಲಸವನ್ನೂ ಆರಂಭ ಮಾಡಿದೆ. ತಮ್ಮ ಕೋಮಲ್ ನಟಿಸಿದ 'ಯಲಾ ಕುನ್ನಿ' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ಇಲ್ಲೇ ನಡೆದಿದೆ. ಈಗಾಗಲೇ ಹಲವು ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇಲ್ಲಿ ನಡೆದಿದೆ. ಕನ್ನಡ ಸಿನಿಮಾ ಅಷ್ಟೇ ಅಲ್ಲ. ಹಿಂದಿ ಹಾಗೂ ಮಲಯಾಳಂ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೂಡ ನಡೆದಿದೆ. ಈ ಸ್ಟುಡಿಯೋ ಬಗ್ಗೆ ಸ್ವತ: ಜಗ್ಗೇಶ್ ಅವರೇ ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನವರಸ ನಾಯಕ ಜಗ್ಗೇಶ್‌ಗೆ ಸ್ಡುಡಿಯೋ ಕಟ್ಟಬೇಕು ಅನ್ನೋದು ಇಂದಿನ ಕನಸಲ್ಲ. ಚಿತ್ರರಂಗಕ್ಕೆ ಅವರು ಪಾದಾರ್ಪಣೆ ಮಾಡಿದ ಸಮಯದಿಂದಲೇ ಇಂತಹದ್ದೊಂದು ಸ್ಟುಡಿಯೋ ಕಟ್ಟಬೇಕು ಅನ್ನೋ ಆಸೆ. 80ರ ದಶಕದಲ್ಲಿ ಚಿತ್ರರಂಗಕ್ಕೆ ಬಂದ ಜಗ್ಗೇಶ್ ಆಗ ಸ್ಟುಡಿಯೋದಿಂದ ಸ್ಟುಡಿಯೋಗೆ ಅವಕಾಶಕ್ಕಾಗಿಯೋ, ಸಿನಿಮಾದ ಕೆಲಸಕ್ಕಾಗಿ ಹೋಗಿ ಬರುತ್ತಿದ್ದರು. ಆಗ ಇಂತಹದ್ದೊಂದು ಸ್ಟುಡಿಯೋ ಕಟ್ಟಬೇಕು ಅಂದುಕೊಂಡಿದ್ದರು. ಅದು ಈಗ ಈಡೇರಿದೆ.
"ನಾನು 80ನೇ ಇಸವಿಯಲ್ಲಿ ಸಿನಿಮಾರಂಗಕ್ಕೆ ಬಂದವನು. ಆ ಸಮಯದಲ್ಲಿ ಬಿಸಿಆರ್‌ಸಿ ಅಂತ ಒಂದು ಡಬ್ಬಿಂಗ್ ಥಿಯೇಟರ್ ಇತ್ತು. ಆ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋದಾಗ ಎನ್‌ಎಸ್ ರಾವ್ ಅವರು ಡಬ್ಬಿಂಗ್ ಮಾಡುತ್ತಿದ್ದರು. ಆ ಸಮಯದಲ್ಲಿ ನಿರ್ದೇಶಕರಿಗೆ ಒಂದು ಪ್ರಶ್ನೆ ಕೇಳಿದ್ದೆ. ಈ ಸ್ಟುಡಿಯೋ ಕಟ್ಟುವುದಕ್ಕೆ ಎಷ್ಟು ಆಗುತ್ತೆ ಸರ್ ಅಂತ. ಆಗ ಅವರು 8 ರಿಂದ 9 ಲಕ್ಷ ರೂಪಾಯಿ ಆಗುತ್ತೆ ಅಂದರು. ಆ ದಿನಕ್ಕೆ ಈ ಅಮೌಂಟ್ ಕೇಳಿ ವಿಶ್ವದ ಅಗಲ ಕಾಣಿಸಿತ್ತು. ಆನಂತರ ಚಾಮುಂಡೇಶ್ವರಿ ಸ್ಟುಡಿಯೋ. ಅಲ್ಲಿ ನನ್ನ ವರ್ಣರಂಜಿತ ಬದುಕು." ಎಂದು ಆ ದಿನವನ್ನು ಜಗ್ಗೇಶ್ ನೆನಪಿಸಿಕೊಂಡಿದ್ದಾರೆ.
ಅವರ ಕಾಲದಲ್ಲಿ ಸ್ಕ್ರೀನ್ ನೋಡಿಕೊಂಡು ಡಬ್ಬಿಂಗ್ ಮಾಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದ್ದು, ಟಿವಿ ಸ್ಕ್ರೀನ್ ನೋಡಿಕೊಂಡು ಡಬ್ಬಿಂಗ್ ಮಾಡುತ್ತಾರೆ. ಅದನ್ನು ನೋಡಿ ಜಗ್ಗೇಶ್‌ಗೆ ಬೇಜಾರಾಗಿತ್ತು. ಕನ್ನಡ ಚಿತ್ರರಂಗ ಎಲ್ಲಿಗೆ ಬಂತು ನಿಂತಿದೆ ಅಂತ ಅನಿಸುವುದಕ್ಕೆ ಶುರುವಾಗಿತ್ತು. ಆಗ ಒಂದು ವೇಳೆ ಸ್ಟುಡಿಯೋ ಮಾಡಿದರೇ ಹಳೇ ಪದ್ಧತಿ ವಾಪಾಸ್ ಬರಬೇಕು ಅಂತ ಅಂದುಕೊಂಡಿದ್ದರು.
"ಈಗಿನ ಮ್ಯೂಸಿಕ್ ಡೈರೆಕ್ಟರ್‌ಗಳು ತಮ್ಮ ಮನೆಯಲ್ಲಿಯೇ ಒಂದು ರೂಮ್‌ನಲ್ಲಿ ಸ್ಟುಡಿಯೋಗಳನ್ನು ಮಾಡಿಕೊಳ್ಳುತ್ತಾರೆ. ಡಬ್ಬಿಂಗ್ ಥಿಯೇಟರ್ ಅನ್ನೋ ಕಾನ್ಸೆಪ್ಟ್ ಸತ್ತು ಹೋಗಿದೆ. ಎಲ್ಲಾ ಕಡೆ ಡಬ್ಬಿಂಗ್ ಥಿಯೇಟರ್ ಅಂತ ಮಾಡಿದ್ದಾರೆ. ತುಂಬಾ ಚಿಕ್ಕ ಚಿಕ್ಕದಾಗಿರುತ್ತೆ. ಆರ್ಟಿಸ್ಟ್‌ಗೆ ಫೀಲ್ ಬರಬೇಕು. ಅದಕ್ಕಾಗಿ ಬೆಸ್ಟ್ ಸ್ಟುಡಿಯೋ ಮಾಡಬೇಕು ಅನ್ನುವ ಅವಕಾಶ ಸಿಕ್ಕಿದೆ." ಎಂದು ಜಗ್ಗೇಶ್ ಹೇಳಿದ್ದಾರೆ.
ಅಂದ್ಹಾಗೆ ಜಗ್ಗೇಶ್ ಸ್ಟುಡಿಯೋ ವಿಶೇಷತೆಯಿದೆ. ಇದೊಂದು ಫ್ಲೋಟಿಂಗ್ ಸ್ಟುಡಿಯೋ. ಇಲ್ಲಿ ಸೌಂಡ್ ಆಚೆ ಹೋಗುವುದಿಲ್ಲ. ಚಿತ್ರೀಕರಣ ಮುಗಿಸಿಕೊಂಡು ಸಿನಿಮಾ ತಂಡ ಬಂದರೆ, ಸಿಜಿ ಕೆಲಸವೊಂದನ್ನು ಬಿಟ್ಟು ಉಳಿದದ್ದು ಎಲ್ಲವೂ ಇಲ್ಲಿ ಆಗುತ್ತೆ. ಡಬ್ಬಿಂಗ್, ರೀ ರೆಕಾರ್ಡಿಂಗ್, ಸಾಂಗ್ ರೆಕಾರ್ಡಿಂಗ್, ಮಿಕ್ಸಿಂಗ್, ಡಿಟಿಎಸ್ ಎಲ್ಲವೂ ಒಂದೇ ಫ್ಲೋರ್‌ನಲ್ಲಿ ಆಗುತ್ತೆ. ಸದ್ಯಕ್ಕೀಗ ಒಂದು ಮಲಯಾಳಂ ಹಾಗೂ ಒಂದು ಹಿಂದಿ ಸಿನಿಮಾದ ಆರು ಸಾಂಗ್ ರೆಕಾರ್ಡಿಂಗ್ ಆಗಿದೆ.


Click it and Unblock the Notifications











