"ದೇಗುಲ ಕಟ್ಟಿಸಿ, ದೇಗುಲದ ಶಿಲ್ಪಿಯ ಕೈ ಕತ್ತರಿಸಿ.."; ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ಕಿಶೋರ್ ಪೋಸ್ಟ್ ವೈರಲ್!
ಇಂದು (ಜನವರಿ 22) ಭಾರತಕ್ಕೆ ಐತಿಹಾಸಿಕ ಕ್ಷಣ ಎಂದೇ ಬಣ್ಣಿಸಲಾಗುತ್ತಿದೆ. ನೂರಾರು ವರ್ಷಗಳಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಬೇಕು ಅನ್ನೋ ಜನರ ಕನಸು ಇಂದು ಈಡೇರಿದೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ಶ್ರೀರಾಮ ಮಂದಿರ ಅನಾವರಣ ಕಾರ್ಯಕ್ರಮಕ್ಕೆ ಭರ್ಜರಿಯಾಗಿ ಸಿದ್ಧತೆಗಳು ನಡೆದಿತ್ತು. ಇಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಯಶಸ್ಸಿಯಾಗಿ ನಡೆದಿದೆ.
ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ವಿಶ್ವದ ಮೂಲೆ ಮೂಲೆಯಲ್ಲಿ ಕೋಟ್ಯಾಂತರ ಮಂದಿ ಕಣ್ತುಂಬಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು ಎಂಟು ಸಾವಿರ ಮಂದಿಗೆ ಆಹ್ವಾನ ನೀಡಲಾಗಿತ್ತು ಎಂದು ವರದಿಯಾಗಿದೆ. ಸಿನಿಮಾ ತಾರೆಯರು, ಉದ್ಯಮಿಗಳು, ಕ್ರೀಡಾಪಟುಗಳು, ರಾಜಕಾರಣಿಗಳಿಗೆ ಆಹ್ವಾನ ನೀಡಲಾಗಿತ್ತು.

ಆಹ್ವಾನ ನೀಡಿದ ಬಹುತೇಕ ಗಣ್ಯರು ಅಯೋಧ್ಯೆಗೆ ತೆರಳಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇತ್ತ ಕನ್ನಡದ ನಟ ಕಿಶೋರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಚರ್ಚೆ ಆರಂಭ ಆಗಿದೆ. ಅಷ್ಟಕ್ಕೂ ಕಿಶೋರ್ ಮಾಡಿದ ಪೋಸ್ಟ್‌ನಲ್ಲಿ ಏನಿದೆ? ತಿಳಿಯಲು ಮುಂದೆ ಓದಿ.
"ಮಂದಿರ, ರಾಜರು ಮತ್ತು ರಾಜಕೀಯ ನಿಯಂತ್ರಣ.. ನಾವು ನೋಡದ್ದೇನಲ್ಲ.. ಇಂದು ಮತ್ತೆ ರಾಜರ ಕಾಲಕ್ಕೆ ಹೋದ ಅನುಭವ.. ದೇವರ ಹೆಸರಲ್ಲಿ ಪೂಜಾರಿಯೊಂದಿಗೆ ಸೇರಿ ಜನರನ್ನು ನಿಯಂತ್ರಿಸಿ, ದೇಗುಲ ಕಟ್ಟಿಸಿ, ತಮ್ಮ ಹೆಸರು ಕೆತ್ತಿಸಿ, ದೇಗುಲದ ಶಿಲ್ಪಿಯ ಕೈ ಕತ್ತರಿಸಿ, ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಿ, ಅಜರಾಮರರಾದ ದೊರೆಗಳು.. ಉಧೋ ಉಧೋ ಎಂದ ಪ್ರಜೆಗಳು, ಭಟ್ಟಂಗಿಗಳು.. ಧರ್ಮ ಮತ್ತು ದೇವರು ರಾಜಕಾರಿಣಿಗಳ ಕೈಗೆ ಹೋಗಿ ತಾವೂ ಪ್ರಶ್ನಾತೀತವಾಗಿ ಅವರನ್ನೂ ಪ್ರಶ್ನಾತೀತರನ್ನಾಗಿಸಿ ಬಿಡುವುದು ಸಂಸ್ಕೃತಿಯ ಚಲನಶೀಲತೆಗೆ, ನಾಡಿನ ಭವಿಷ್ಯಕ್ಕೆ ಅತೀ ಅಪಾಯಕಾರಿ." ಎಂದು ನಟ ಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ.
ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ 11 ದಿನ ಮುನ್ನ ಮತ್ತೊಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ನಲ್ಲೂ ಕಿಶೋರ್, ಪರೋಕ್ಷವಾಗಿ ಮಾಧ್ಯಮ ಹಾಗೂ ಧರ್ಮ ರಾಜಕಾರಣ ಮಾಡುವವರನ್ನು ವಿರೋಧಿಸಿ ಬರೆದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
"ಅಸಲಿ ಹಿಂದೂ ವಿರೋಧಿ ಯಾರು?
ಧರ್ಮದ ರಾಜಕೀಕರಣವನ್ನು ವಿರೋಧಿಸುವವರನ್ನು ಹಿಂದೂ ವಿರೋಧಿಗಳು, ದೇಶ ವಿರೋಧಿಗಳೆಂದು ಟ್ರೋಲ್ ಮಾಡುವ ವಿಶ್ವಗುರು ಭಕ್ತರು ಮತ್ತು ತನ್ನ ವೃತ್ತಿಧರ್ಮಕ್ಕೆ ದ್ರೋಹ ಬಗೆದ ಗೋದಿ ಮಾಧ್ಯಮದವರು ಈಗೇನು ಮಾಡುತ್ತಾರೆ? ಶಂಕರಾಚಾರ್ಯರುಗಳನ್ನೂ ಹಿಂದೂ ವಿರೋಧಿಗಳು ದೇಶ ವಿರೋಧಿಗಳೆಂದು ಟ್ರೋಲ್ ಮಾಡುತ್ತಾರೆಯೇ? ರಾಮ ಮಂದಿರದ ರಾಜಕೀಕರಣವನ್ನು ವಿರೋಧಿಸುತ್ತಿರುವ ಶಂಕರಾಚಾರ್ಯರುಗಳು ಹಿಂದೂ ವಿರೋಧಿಗಳಲ್ಲವೆಂದರೆ ನಿಜವಾದ ಹಿಂದೂ ವಿರೋಧಿಗಳು ಯಾರು ? ಅರ್ಧಂಬರ್ಧ ದೇವಸ್ಥಾನದ ಉದ್ಘಾಟನೆ ಮಾಡಿ ಓಟು ಬಾಚಲು ನಿಂತಿರುವ ಧೂರ್ತರು ಅವರ ಅಂಧಭಕ್ತರು ಹಿಂದೂ ವಿರೋಧಿಗಳೇ ಅಲ್ಲವೇ? ಅವರ ಧರ್ಮಾಂಧತೆಯ ಮಂಕುಬೂದಿಯ ಭ್ರಮೆಯಲ್ಲಿ ಮಂತ್ರಾಕ್ಷತೆ ಹಂಚುತ್ತಿರುವವರೂ ಅದೇ ಆಗಿಬಿಡುವುದಿಲ್ಲವೇ? ಈ ಅಯೋಗ್ಯ ರಾಜಕಾರಿಣಿಗಳಿಗೆ ರಾಮ ಬರೀ ರಾಜಕೀಯ ಲಾಭಕ್ಕಾಗಿಯೇ ಇರುವ ವ್ಯಾಪಾರದ ಸರಕು.. ಅಷ್ಟೇ. ನಿಜವಾದ ದೈವವೆನ್ನುವ ನಂಬಿಕೆ ಇರುವುದು ಮಂದಿರ, ಮಸೀದಿ ಚರ್ಚುಗಳಲ್ಲಲ್ಲ..ಗಾಂಧಿಯಂತೆ, ಜೀವನದ ಪ್ರತಿ ನಡೆಯಲ್ಲಿ ರಾಮ.. ಪ್ರತಿ ನುಡಿಯಲ್ಲಿ ರಾಮ.. ಸಾವಲ್ಲೂ ಹೇ ರಾಮ.. ಈ ಢೋಂಗಿಗಳಿಗೆ ಎಂದಾದರೂ ಅದು ಸಾಧ್ಯವೇ ? ಎಷ್ಟೇ ಆಗಲಿ ಆ ಗಾಂಧಿಯನ್ನು ಕೊಂದವರಲ್ಲವೇ.." ಎಂದು ಪೋಸ್ಟ್ ಮಾಡಿದ್ದರು.


Click it and Unblock the Notifications











