ವಜ್ರಮುನಿ ಡೈಲಾಗೇ ಕೋಮಲ್ ಹೊಸ ಸಿನಿಮಾ ಟೈಟಲ್: 'ಯಲಾ ಕುನ್ನಿ' ಮೇರಾ ನಾಮ್ ವಜ್ರಮುನಿ
ವ್ರಜಮುನಿ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗ ಇಂತಹ ಮತ್ತೊಬ್ಬ ಖಳನಟನನ್ನು ಇದೂವರೆಗೂ ಕಂಡೇ ಇಲ್ಲ. ತೆರೆಮೇಲೆ ಆ ರೋಷಾವೇಷ, ಖಡಕ್ ಡೈಲಾಗ್, ಕೆರಳಿದ ಕಣ್ಣುಗಳು, ಸಹಜ ಅಭಿನಯ ಎಲ್ಲವೂ ನೋಡುಗರನ್ನು ಬೆಚ್ಚಿಬೀಳಿಸುತ್ತಿತ್ತು. ಇಲ್ಲಾ ಪ್ರೇಕ್ಷಕರನ್ನೇ ಕೋಪವನ್ನು ನೆತ್ತಿಗೇರಿಸುತ್ತಿತ್ತು. ಇಂತಹ ಅದ್ಭುತ ಕಲಾವಿದ ಸಿನಿಪ್ರೇಮಿಗಳಿಂದ ಕಣ್ಮರೆಯಾಗಿ ವರ್ಷಗಳೇ ಉರುಳಿವೆ.
ಅಂದು ನಾಯಕರನ್ನು ಗೆಲ್ಲಿಸುತ್ತಿದ್ದ ಇದೇ ಕಲಾವಿದ ಡೈಲಾಗ್ ಈಗ ಸಿನಿಮಾ ಆಗುತ್ತಿದೆ. ವಜ್ರಮುನಿ ಖಳನಾಯಕನಾಗಿ ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಬಳಸಿತ್ತಿದ್ದ ಡೈಲಾಗ್ ಅನ್ನೇ ಟೈಟಲ್ ಆಗಿ ಇಟ್ಟುಕೊಳ್ಳಲಾಗಿದೆ. ಅದುವೇ 'ಯಲಾ ಕುನ್ನಿ'.

ವಜ್ರಮುನಿಯವರ ಸಿನಿಮಾಗಳನ್ನು ನೋಡಿದವರಿಗೆ ಈ ಡೈಲಾಗ್ ಹೊಸತೇನಲ್ಲ. ಈಗ ಇದೇ ಡೈಲಾಗ್ ಅನ್ನೇ ಟೈಟಲ್ ಮಾಡಿಕೊಂಡು ಕೋಮಲ್ ಕುಮಾರ್ ಅಖಾಡಕ್ಕೆ ಇಳಿಯುತ್ತಿದ್ದಾರೆ. ಈ ಸಿನಿಮಾದಲ್ಲಿ ಕೋಮಲ್ ರೆಟ್ರೋ ಲುಕ್‌ನಲ್ಲಿ ವಜ್ರಮುನಿ ಅವತಾರವೆತ್ತಿ ಸಿನಿಪ್ರಿಯರನ್ನು ರಂಜಿಸಲು ಬರುತ್ತಿದ್ದಾರೆ.
ಸಿನಿಮಾ ಟೈಟಲ್ ಅಷ್ಟೇ ಇಂಟ್ರೆಸ್ಟಿಂಗ್ ಅಲ್ಲ. ಅದಕ್ಕೆ ಇಟ್ಟಿರೋ ಉಪಶೀರ್ಷಿಕೆ ಕೂಡ ಅಷ್ಟೇ ಮಜವಾಗಿದೆ. 'ಯಲಾ ಕುನ್ನಿ' ಟೈಟಲ್ ಆದರೆ, ಮೇರಾ ನಾಮ್ ವಜ್ರಮುನಿ ಸಬ್ ಟೈಟಲ್. ಅಂದ್ಹಾಗೆ ಶೀರ್ಷಿಕೆ ನೋಡಿ, ಇದು ತುಂಬಾನೇ ಸೀರಿಯಸ್ ಸಿನಿಮಾ ಅಂದ್ಕೊಳ್ಬೇಡಿ. ಪಕ್ಕಾ ಹಾಸ್ಯಮಯ ಸಿನಿಮಾ. ಜೊತೆಗೆ ಒಂದಿಷ್ಟು ಭಾವನಾತ್ಮಕ ಸನ್ನಿವೇಶಗಳನ್ನು ಇಡಲಾಗಿದೆ.

'ಯಲಾ ಕುನ್ನಿ' ಸಿನಿಮಾವನ್ನು ಮಹೇಶ್ ಗೌಡ್ರು ನಿರ್ಮಿಸುತ್ತಿದ್ದು, ಎನ್. ಆರ್ ಪ್ರದೀಪ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕ ಓಂಪ್ರಕಾಶ್ ರಾವ್, ಮುಸ್ಸಂಜೆ ಮಹೇಶ್ ಅವರೊಂದಿಗೆ ಕೆಲಸ ಮಾಡಿರೋ ಪ್ರದೀಪಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಮೊದಲ ಸಿನಿಮಾದಲ್ಲೇ ಪ್ರೇಕ್ಷಕರನ್ನು ನಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಈ ಸಿನಿಮಾದ ಕಥೆ 1981ರ ಕಾಲಘಟ್ಟದಲ್ಲಿ ನಡೆಯೋ ಕಥೆ. ಹೀಗಾಗಿ ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತ ಹಳ್ಳಿ ಹಾಗೂ ದೇವಸ್ಥಾನದ ಸೆಟ್‌ಗಳನ್ನು ನಿರ್ಮಿಸಿ ಶೂಟಿಂಗ್ ಮಾಡಲಾಗುತ್ತಿದೆ. ಇನ್ನು ಈ ಸಿನಿಮಾದಲ್ಲಿ ಹಿರಿಯ ಕಲಾವಿದ ಮುಸುರಿ ಕೃಷ್ಣ ಮೂರ್ತಿ ಅವರ ಪುತ್ರ ಜಯಸಿಂಹ ಮುಸುರಿ, ನವರಸ ನಾಯಕ ಜಗ್ಗೇಶ್ ಕಿರಿಯ ಪುತ್ರ ಯತಿರಾಜ್ ಹಾಗೂ 'ಫ್ರೆಂಚ್ ಬಿರಿಯಾನಿ' ಖ್ಯಾತಿಯ ಮಹಾಂತೇಶ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಕುಟುಂಬ ಸಮೇತ ನೋಡಬಹುದಾದ ಪರಿಶುದ್ಧ ಹಾಸ್ಯ ಕಥಾಹಂದರದ ಜೊತೆಗೆ ಎಮೋಶನ್ ಸನ್ನಿವೇಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ನಿರ್ದೇಶಕ ಪ್ರದೀಪ ಅವರೆ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ,ಗೀತ ರಚನೆ ಸಹ ಮಾಡಿದ್ದಾರೆ. ಧರ್ಮ ವಿಶ್ ಸಂಗೀತ, ಉದಯ್ ಲೀಲಾ ಕ್ಯಾಮರಾ ವರ್ಕ್ ಇದೆ.


Click it and Unblock the Notifications











