'ಓಂ' ಖ್ಯಾತಿಯ ಕೋಟೆ ಪ್ರಭಾಕರ್‌ಗೆ ದರ್ಶನ್ ಡೂಪ್ ಹಾಕಿಸಿದ್ದೇಕೆ? ಅ ಸಿನಿಮಾ ಶೂಟಿಂಗ್ ವೇಳೆ ಏನಾಯ್ತು?
'ಓಂ' ಸಿನಿಮಾ ನೋಡಿದವರಿಗೆ ಕೋಟೆ ಪ್ರಭಾಕರ್ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಈ ಸಿನಿಮಾದಿಂದ ಕನ್ನಡ ಚಿತ್ರರಂಗದಲ್ಲಿ ಕೋಟೆ ಪ್ರಭಾಕರ್ ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೂ ಖಳನಾಯಕನಾಗಿ ನಟಿಸುತ್ತಲೇ ಇದ್ದಾರೆ. 'ಓಂ' ಸಿನಿಮಾದಲ್ಲಿ ಕೋಟೆ ಪ್ರಭಾಕರ್ ಹಾಗೂ ಸಾಧು ಕೋಕಿಲಾ ನಡುವಿನ ಹಾಸ್ಯ ದೃಶ್ಯಗಳನ್ನು ಇನ್ನೂ ಜನರು ಮರೆತಿಲ್ಲ.
ಕೋಟೆ ಪ್ರಭಾಕರ್ ಸ್ಯಾಂಡಲ್‌ವುಡ್‌ನಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದೇ ಹೆಚ್ಚು. ವಿಲನ್ ಜೊತೆಗೆ ಪೋಷಕ ಪಾತ್ರಗಳಲ್ಲಿಯೂ ನಟಿಸಿದ್ದಾರೆ. 'ಎ.ಕೆ.47', 'ವಿಶ್ವ', 'ಡೆಡ್ಲಿ ಸೋಮ', 'ಅಸುರ', 'ಸಾರಥಿ' ಸೇರಿದಂತೆ ಕನ್ನಡದ ಚಿತ್ರರಂಗದ ಎಲ್ಲಾ ಪ್ರಮುಖ ನಟರೊಂದಿಗೂ ನಟಿಸಿದ್ದಾರೆ. ಚಿಕ್ಕ ಪುಟ್ಟ ಪಾತ್ರದಿಂದ ಹಿಡಿದು ಪ್ರಮುಖ ಪಾತ್ರದವರೆಗೂ ಕೋಟೆ ಪ್ರಭಾಕರ್ ತೆರೆಮೇಲೆ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಬಿಗ್ ಬಾಸ್ ಕನ್ನಡ ಖ್ಯಾತಿಯ ಪ್ರಥಮ್ ನಟಿಸುತ್ತಿರುವ 'ನೋ ಕೊಕೇನ್' ಸಿನಿಮಾದಲ್ಲಿ ಖಳನಾಯಕನಾಗಿ ನಟಿಸುತ್ತಿದ್ದಾರೆ. ಈ ವೇಳೆ ಫಿಲ್ಮಿ ಬೀಟ್ ಕನ್ನಡಕ್ಕೆ ಸಂದರ್ಶನ ನೀಡಿದ್ದು, ಸಾಹಸ ಸನ್ನಿವೇಶಗಳಲ್ಲಿ ನಟಿಸಿದ ಜರ್ನಿಯನ್ನು ಮೆಲುಕು ಹಾಕಿದ್ದಾರೆ. ಆಕ್ಷನ್ ಸೀನ್ ಮಾಡುವಾಗ ಬಿದ್ದು ಪೆಟ್ಟುಗಳ ಬಗ್ಗೆ ಮಾತಾಡಿದ್ದಾರೆ. ಕೂದಲೆಳೆಯ ಅಂತರದಲ್ಲಿ ಜೀವಾಪಾಯದಿಂದ ಪಾರಾದ ಸನ್ನಿವೇಶಗಳನ್ನು ಹಂಚಿಕೊಂಡಿದ್ದಾರೆ. ಹಾಗೇ ದರ್ಶನ್ ಜೊತೆಗೆ ನಟಿಸಿದ ಅನುಭವಗಳನ್ನು ಶೇರ್ ಮಾಡಿದ್ದಾರೆ. ಅದರ ಝಲಕ್ ಇಲ್ಲಿದೆ.
ಅವತ್ತೇ ಹೋಗಿಬಿಡಬೇಕಿತ್ತು
"ಡೆಡ್ಲಿ ಸೋಮ ಸಿನಿಮಾದಲ್ಲಿ ನನ್ನದು ಮತ್ತು ಆದಿತ್ಯ ಸೀನ್ ಇತ್ತು. ಆದಿತ್ಯ ಜೊತೆ ಬುಲೆಟ್, ಹರೀಶ್ ರೈ, ಸೇರಿ ಒಂದಷ್ಟು ಜನ ಬರುತ್ತಾರೆ. ನಮ್ಮದೊಂದು ಗ್ಯಾಂಗ್ ಇರುತ್ತೆ. ಮಾತಿಗೆ ಮಾತು ಬೆಳೆಯುತ್ತೆ. ಹೋಗೋ ಅಂತ ಒಂದು ಕೆಟ್ಟ ಮಾತು ಬೈಯ್ಯುತ್ತೇನೆ. ಆಗ ಆದಿತ್ಯ ಲಾಂಗ್ ಹಿಡಿಕೊಂಡು ಬೀಸಬೇಕು. ಸುತ್ತಲೂ ಹಸುಗಳು ಇರುತ್ತೆ. ಆದಿತ್ಯ ಮುಂದೆ ಇರುತ್ತಾರೆ. ನಾನು ಎದುರಿಗೆ ಇರುತ್ತೇನೆ. ರವಿ ಶ್ರೀವತ್ಸ ಅವರೆಲ್ಲ ಶೂಟಿಂಗ್‌ಗೆ ಒರಿಜಿನಲ್ ಲಾಂಗ್ ಬಳಸುತ್ತಿದ್ದರು. ಯಾಕಂದ್ರೆ ಕ್ಯಾಮರಾಗೆ ಬೇಕು ಅಂತ. ಆ ಸೀನ್‌ನಲ್ಲಿ ಮಾನಿಟರ್ ಎಲ್ಲ ಮಾಡಿದ್ವಿ. ಡಿಸ್ಟೆನ್ಸ್ ನೋಡಿಕೊಂಡ್ವಿ. ಏಯ್ ಅಂತ ಲಾಂಗ್ ಬೀಸಿದರು. ಹಿಂದೆಯಿಂದ ಹಸು ತಳ್ಳಿಬಿಡ್ತು. ಮುಂದೆ ಬಂದ್ಬಿಟ್ಟೆ ನಾನು. ಲಾಂಗ್ ಅನ್ನು ನನ್ನ ಕತ್ತಿನ ಹತ್ತಿರ ನಿಲ್ಲಿಸಿದರು ಆದಿಯವರು. ಇಲ್ಲಾ ಅಂದರೆ ಅವತ್ತೇ ಹೋಗಿಬಿಡಬೇಕಿತ್ತು." ಎಂದು ಕೋಟೆ ಪ್ರಭಾಕರ್ ಸಂದರ್ಶನದ ವೇಳೆ ಹೇಳಿದ್ದಾರೆ.
ಅಂಬರೀಶ್‌ಗೆ ಚುಚ್ಚುವ ಸೀನ್‌ನಲ್ಲಿ ಭಯವಿತ್ತು
"ವಿಶ್ವ ಸಿನಿಮಾದಲ್ಲಿ ಹೈಟ್‌ನಿಂದ ಡೈ ಹೊಡೆದಿದ್ದೀನಿ. ಕಾಲು ಮುರಿದು ಹೋಗಿತ್ತು. ಎಕೆ 47ನಲ್ಲೂ ನನಗೆ ಏಟು ಬಿದ್ದಿತ್ತು. ಸುಮಾರು ಫೈಟ್‌ಗಳಲ್ಲಿ ಏಟು ಬಿದ್ದಿದೆ. ಆದರೆ, ಆಗ ಗೊತ್ತಾಗಲ್ಲ. ಮನೆಗೆ ಹೋದಾಗ ಗೊತ್ತಾಗುತ್ತೆ. ಸಿನಿಮಾದಲ್ಲಿ ನಾವು ಫೈಟ್ ಮಾಡಿದರೂ ಒದೆ ಬೀಳುತ್ತೆ. ಹೀರೋಗಳು ತಪ್ಪು ಮಾಡಿದರೂ ಒದೆ ಬೀಳುತ್ತೆ. ವೀರ ಪರಂಪರೆ ಸಿನಿಮಾದಲ್ಲಿ ಅಂಬರೀಶ್ ಅವರಿಗೆ ಎತ್ತಿಕೊಂಡು ಚುಚ್ಚಬೇಕು. ಆಗಲೂ ಎಸ್.ನಾರಾಯಣ್ ಹುಷಾರಾಗಿ ಮಾಡು ಎಂದಿದ್ದರು. ಆ ಸೀನ್ ಮಾಡುವಾಗ ಭಯವಿತ್ತು." ಎಂದು ಹೇಳಿದ್ದಾರೆ.
ದರ್ಶನ್ ಡೂಪ್ ಹಾಕಿಸಿ ಅಂದರು
"ಯೋಧ ಸಿನಿಮಾದಲ್ಲಿ ಒಂದು ಚೇಸಿಂಗ್ ಸೀನ್ ಇತ್ತು. ನಂದು ಹಾಗೂ ದರ್ಶನ್ ಸರ್‌ದು. ಕಂಠೀರವ ಸ್ಟುಡಿಯೋದ ಮೇನ್ ರೋಡ್‌ನಲ್ಲಿ. ಅಲ್ಲದೆ ಅಲ್ಲಿನ ಸರ್ಕಲ್‌ನಲ್ಲಿ ಓಡಬೇಕಾಗಿತ್ತು. ದರ್ಶನ್ ಸರ್ ಏನು ಕೋಟೆಯವರೇ ಓಡುತ್ತೀರಾ ಅಂದರು. ಸರ್ ಓಡಿ ಓಡಿ ಸುಸ್ತಾಗಿಬಿಟ್ಟಿದೆ ಅಂದೆ. ಆ ಮೇಲೆ ಫೈಟ್ ಮಾಸ್ಟರ್‌ಗೆ ಡೂಪ್ ಹಾಕಿಸಿ ಎಂದರು ದರ್ಶನ್. ಎಷ್ಟೊಂದು ಓಡಿಸುತ್ತೀರ. ಅವರ ಕೈಯಲ್ಲಿ ಆಗಲ್ಲ ಅಂತ ಅಂದರು ದರ್ಶನ್ ಸರ್." ಎಂದು ಯೋಧ ಸಿನಿಮಾ ವೇಳೆ ದರ್ಶನ್ ಹೇಳಿದ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.
ದರ್ಶನ್ ಬಚಾವ್ ಆಗಿದ್ದೇಗೆ?
"ಇನ್ನೊಂದು ಸೀನ್‌ನಲ್ಲಿ ಒಂದು ರೋಪ್ ಸೀನ್ ಇತ್ತು. ದರ್ಶನ್ ಸರ್ ಬಂದು ನಿಂತಾಗ ನೀವು ಹೀಗೆ ಹಿಡಿದುಕೊಳ್ಳಬೇಕು. ಕೆಳಗಡೆ ಬೀಳುತ್ತಿದ್ದಂತೆ ಹಿಡಿದುಕೊಳ್ಳುತ್ತೇವೆ ಅಂದರು. ದರ್ಶನ್ ಸರ್‌ಗೆ ಫೈಟ್ ಮಾಸ್ಟರ್ ಬಂದು ಕೇಳಿದರು. ಹೀಗೆ ಹಿಡಿದುಕೊಳ್ಳಿ ನಾವು ಎಳೆದು ಬೀಡುತ್ತೇವೆ ಅಂದರು. ಆಗ ದರ್ಶನ್ ಡೂಪ್ ಹಾಕಮ್ಮ ಅಂದರು. ಡೂಪ್ ಕ್ಯಾರೆಕ್ಟರ್ ಮಾಡಿದ್ದವ, ಸ್ವಲ್ಪ ದೂರ ಹೋದ್ಮೇಲೆ ಆ ರೋಪ್ ಕಟ್ ಆಗಿ ಕೆಳೆದ ಬಿದ್ದ. ಬಿದ್ದ ಕೂಡಲೇ ಕಾಲು ಲಟಕ್ ಅಂತು. ಆಗ ದರ್ಶನ್ ಸರ್ ಬಂದು. ಅವನು ಇರುವ ತೂಕಕ್ಕೆ ಕಾಲು ಮುರಿದುಕೊಂಡಿದ್ದಾರೆ. ನಾನು ಹೋಗಿದ್ದರೆ ಏನಾಗುತ್ತಿತ್ತು ಕೋಟಿಯವರೇ, ನೋಡಿದ್ರಾ ಕೆಲವೊಮ್ಮೆ ಸಿಕ್ಸ್‌ಥ್ ಸೆನ್ಸ್ ಹೇಗೆ ಕೆಲಸ ಮಾಡುತ್ತೆ ಅಂತ ಹೇಳಿದ್ದರು."


Click it and Unblock the Notifications











