Exclusive: ಕಣ್ಣಲ್ಲಿ ಕಣ್ಣನಿಟ್ಟು ಮನಸ್ಸಲ್ಲಿ ಮನಸ್ಸನ್ನಿಟ್ಟು ಮತ್ತೆ 'ಒರಟ' ಎಂದೋರು ಯಾರು?
ಹೆಚ್ಚು ಕಡಿಮೆ 15 ವರ್ಷದ ಹಿಂದಿನ ಕಥೆ. 'ಮುಂಗಾರು ಮಳೆ' ಬಳಿಕ ಹೊಸಬರ ಪರ್ವವೊಂದು ಶುರುವಾಗಿತ್ತು. ಲವ್‌ಸ್ಟೋರಿಗಳನ್ನು ನೋಡುವುದಕ್ಕೆ ಜನರು ತುದಿಗಾಲಲ್ಲಿ ನಿಂತಿರುತ್ತಿದ್ದರು. ಇಂತಹ ರೊಮ್ಯಾಂಟಿಕ್ ಸಿನಿಮಾಗಳ ಜಮಾನದಲ್ಲಿ ಒರಟು ಒರಟಾಗಿ ಬಂದವರೇ ಪ್ರಶಾಂತ್.
15 ವರ್ಷಗಳ ಬಳಿಕ 'ಒರಟ' ಸಿನಿಮಾ ಬಗ್ಗೆ ಮಾತಾಡಿದರೆ, ಅದೆಷ್ಟು ಮಂದಿಗೆ ನೆನಪಾಗುತ್ತೋ ಗೊತ್ತಿಲ್ಲ. ಆದರೆ, ಸಂಗೀತ ಪ್ರೇಮಿಗಳು ಮಾತ್ರ 'ಒರಟ' ಸಿನಿಮಾವನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ಈ ಸಿನಿಮಾದ ಒಂದು ಹಾಡು. "ಯಾರೋ.. ಕಣ್ಣಲ್ಲಿ ಕಣ್ಣನಿಟ್ಟು.. ಮನಸ್ಸಿನಲ್ಲಿ ಮನಸ್ಸನ್ನಿಟ್ಟು ನನ್ನ ಒಳಗಿಂದಾನೇ ನನ್ನಕದ್ದೋರು ಯಾರು..?" ಈ ಸಾಲುಗಳನ್ನು ಓದಿದರೇ ಸಾಕು. ಪ್ರೇಮಿಗಳ ಫೇವರೀಟ್ ಹಾಡು ಕಣ್ಮುಂದೆ ಬಂದು ಬಿಡುತ್ತೆ.
ಹೌದು 2007ರಲ್ಲಿ 'ಒರಟ ಐ ಲವ್ ಯೂ' ಅನ್ನುವ ಸಿನಿಮಾವೊಂದು ರಿಲೀಸ್ ಆಗಿತ್ತು. ಆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೊಂದು ಪ್ರತಿಭೆ ಪರಿಚಯವಾಗಿತ್ತು. ಅವರೇ ಪ್ರಶಾಂತ್. 'ಒರಟ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿದ್ದರಿಂದ ಮುಂದಿನ ದಿನಗಳಲ್ಲಿ ಒರಟ ಪ್ರಶಾಂತ್ ಅಂತಲೇ ಜನಪ್ರಿಯರಾಗಿದ್ದರು. ಆದರೆ, ಒರಟ ಸಿನಿಮಾ ಮತ್ತೆ ಪ್ರಶಾಂತ್ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಲೇ ಇಲ್ಲ. ಈಗ ಕೆಲವು ಸಿನಿಮಾಗಳು ರಿಲೀಸ್ ಥಿಯೇಟರ್‌ನಲ್ಲಿ ನಿಲ್ಲಲೇ ಇಲ್ಲ. ಆದ್ರೀಗ ಪ್ರಶಾಂತ್ ಕೆಲವು ಫೋಟೊಗಳು ಓಡಾಡುತ್ತಿವೆ. ಆ ಫೋಟೊಗಳ ಹಿಂದೆ ಸ್ಯಾಂಡಲ್‌ವುಡ್ ಒಂದೊಂದು ಕಥೆಯನ್ನು ಹೇಳುತ್ತಿವೆ.

'ಒರಟ 2' ಸಿನಿಮಾ ಮುಹೂರ್ತ ಫಿಕ್ಸ್
ಉದ್ದ ಬಿಟ್ಟ ಬಿಳಿ ಕೂದಲು.. ಹುರಿಗೊಳ್ಳುತ್ತಿರುವ ದೇಹ.. ರಗಡ್ ಲುಕ್ .. ಇವೆಲ್ಲವನ್ನೂ ನೋಡಿದರೆ, ಒರಟ ಪ್ರಶಾಂತ್ ಬದಲಾಗಿದ್ದಾರೆ ಅಂತ ಹೇಳಬಹುದು. ಆದರೆ. ಇಷ್ಟೊಂದು ತಯಾರಿ ನಡೆಸುತ್ತಿರುವುದು ಯಾಕೆ? ಮತ್ತೆ ಒರಟನಾಗುವುದಕ್ಕೆ ಮುಹೂರ್ತ ಇಟ್ಟಿದ್ದಾರಾ ಪ್ರಶಾಂತ್?. ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಅನ್ನುವ ಕುತೂಹಲ ಸಿನಿಮಾ ಪ್ರೇಮಿಗಳಿಗೆ ಈ ಫೋಟೊಗಳನ್ನು ನೋಡಿದ ಬಳಿಕ ಹುಟ್ಟಿಕೊಳ್ಳದೇ ಇರುವುದಿಲ್ಲ. ಈ ಕುತೂಹಲಕ್ಕೆ ಸ್ಯಾಂಡಲ್‌ವುಡ್ ಕೊಡುತ್ತಿರುವ ಉತ್ತರ 'ಒರಟ 2'.

ಒರಟ ಪ್ರಶಾಂತ್ ಜಿಮ್‌ನಲ್ಲಿ ಕಸರತ್ತು
ಒರಟ ಪ್ರಶಾಂತ್ ಕೆಲವು ದಿನಗಳಿಂದ ಯಾರ ಕೈಗೂ ಸಿಗುತ್ತಿಲ್ಲ. ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಯಾವ ಸಿನಿಮಾ ಒಪ್ಪಿಕೊಂಡಿದ್ದಾರೆ ಅನ್ನೋದೂ ಗೊತ್ತಿಲ್ಲ. ಆದರೆ, ಸ್ಯಾಂಡಲ್‌ವುಡ್ ಗಲ್ಲಿಯಲ್ಲಿ ಹರಿದಾಡುತ್ತಿರುವ ಈ ಫೋಟೊಗಳನ್ನು ನೋಡಿದರೆ, ಮತ್ತೆ ಒರಟನಾಗುವುದಕ್ಕೆ ತಯಾರಿ ನಡೆಸುತ್ತಿರುವುದು ಗೊತ್ತಾಗುತ್ತೆ. ಒರಟ ಪ್ರಶಾಂತ್ ಆಪ್ತರ ಪ್ರಕಾರ, ಜಿಮ್‌ನಲ್ಲಿ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಿದ್ದಾರಂತೆ. ಬೆಳಗ್ಗೆ, ಸಂಜೆ ಜಿಮ್‌ನಲ್ಲಿಯೇ ಇರುತ್ತಾರಂತೆ. ಖಡಕ್ ಲುಕ್‌ನೊಂದಿಗೆ ಮತ್ತೆ ಸಿನಿಮಾಗೆ ಎಂಟ್ರಿ ಕೊಡಲು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರಂತೆ. ಆ ಪ್ರಿಪರೇಷನ್‌ನ ಫೋಟೊಗಳು ಇವೆನೇ.

'ಮಾಫಿಯಾ' ಅಂದು ಮಾಯಾವಾಗಿದ್ದೇಕೆ?
ಒಂದು ವರ್ಷದ ಹಿಂದಷ್ಟೇ ಒರಟ ಪ್ರಶಾಂತ್ ಮತ್ತೆ ಕಾಣಿಸಿಕೊಂಡಿದ್ದರು. ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ 'ಮಾಫಿಯಾ' ಸಿನಿಮಾದ ಮುಹೂರ್ತದಂದು ಕಾಣಿಸಿಕೊಂಡಿದ್ದರು. ಇನ್ನೇನು ಮಾಫಿಯಾ ಗ್ಯಾಂಗ್ ಸೇರಿಕೊಂಡು ಮತ್ತೆ ಏನೋ ರೀ ಎಂಟ್ರಿ ಕೊಟ್ಟೇ ಬಿಟ್ಟರು ಎನ್ನುವಾಗಲೇ ಮತ್ತೆ ಮಾಯವಾಗಿದ್ದಾರೆ. ಮಾಫಿಯಾದಲ್ಲಿ ನಟಿಸುತ್ತಿದ್ದಾರೋ ಇಲ್ಲವೋ ಅನ್ನೋದು ಗೊತ್ತಿಲ್ಲ. ಈಗ ಮತ್ತೆ ಅವರ ಫೋಟೊಗಳು ಸ್ಯಾಂಡಲ್‌ವುಡ್‌ನಲ್ಲಿ ಓಡಾಡುತ್ತಿವೆ.
Recommended Video


ಎರಡು ವರ್ಷದ ಹಿಂದೆ ಸೆಟ್ಟೇರಬೇಕಿತ್ತು 'ಒರಟ 2'
'ಒರಟ 2' ಬಗ್ಗೆ ಪ್ರಶಾಂತ್ ಎರಡು ವರ್ಷಗಳ ಹಿಂದೆನೇ ಮಾತಾಡಿದ್ದರು. ಸಿನಿಮಾದ ಸ್ಕ್ರಿಪ್ಟ್ ಬಹುತೇಕ ರೆಡಿಯಾಗಿದ್ದು, ಪವರ್‌ಫುಲ್ ಕಥೆಯನ್ನು ರೆಡಿ ಮಾಡಿಕೊಂಡಿದ್ದೇವೆ ಎಂದಿದ್ದರು. ಆದರೆ, ಅದ್ಯಾಕೋ 'ಒರಟ 2' ಮತ್ತೆ ಸದ್ದು ಮಾಡಲೇ ಇಲ್ಲ. ಆದ್ರೀಗ ಮತ್ತೆ 'ಒರಟ 2' ಬಗ್ಗೆ ಸದ್ದು ಕೇಳಿಬರುತ್ತಿದೆ. ಈ ಬಾರಿಯಾದರೂ, ಸಿನಿಮಾ ಸೆಟ್ಟೇರುತ್ತಾ? ವಿವಾದಗಳಿಂದ ಮುಕ್ತಿ ಪಡೆದು ಮತ್ತೆ ಹೊಸ ಇನ್ನಿಂಗ್ಸ್ ಆರಂಭ ಮಾಡಲು ಸಜ್ಜಾಗಿರುವ ಪ್ರಶಾಂತ್ ಪ್ರತ್ಯಕ್ಷ ಆಗ್ತಾರಾ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.


Click it and Unblock the Notifications











