ಒರಟ ಪ್ರಶಾಂತ್ ಸೆಕೆಂಡ್ ಇನ್ನಿಂಗ್ಸ್ ಶುರು: ಕೈಯಲ್ಲಿಷ್ಟು ಸಿನಿಮಾಗಳಿವೆ?
14 ವರ್ಷಗಳ ಹಿಂದೆ 'ಒರಟ' ಅನ್ನೋ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರಾದವರು ನಾಯಕ ನಟ ಪ್ರಶಾಂತ್. ಮೊದಲ ಸಿನಿಮಾದಲ್ಲಿಯೇ ಪ್ರಶಾಂತ್‌ಗೆ ಸಕ್ಸಸ್ ಸಿಕ್ಕಿತ್ತು. ಇವರ ಹೆಸರಿಗೆ ಒರಟ ಅನ್ನೋ ಹೆಸರು ಅಷ್ಟೇ ಸುಲಭವಾಗಿಯೂ ಸೇರಿಕೊಂಡಿತ್ತು. ಅಲ್ಲಿಂದ ಕನ್ನಡ ಸಿನಿಪ್ರಿಯರ ಪಾಲಿಗೆ ಒರಟ ಪ್ರಶಾಂತ್ ಆಗಿ ಫೇಮಸ್ ಆಗಿಬಿಟ್ಟರು.
'ಒರಟ' ಬಳಿಕ ಪ್ರಶಾಂತ್ ನಟಿಸಿದ ಸಿನಿಮಾಗಳು ಆ ಮಟ್ಟಿಗೆ ಸದ್ದು ಮಾಡಲಿಲ್ಲ. ಆದರೂ ಪ್ರಯತ್ನ ಅಂತೂ ಬಿಟ್ಟಿರಲಿಲ್ಲ. ಒಂದರ ಹಿಂದೊಂದು ಸಿನಿಮಾಗಳನ್ನು ಮಾಡಿದ್ರು. ಆದರೂ ಕೈ ಹಿಡಿಯದೇ ಇದ್ದಾಗ ಒಂದಿಷ್ಟು ದಿನ ಸಿನಿಮಾಗಳಿಗೆ ಬ್ರೇಕ್ ಕೊಟ್ಟರು. ಕೆಲವು ತಿಂಗಳ ಹಿಂದಷ್ಟೇ 'ಯಾರಿಗೆ ಯಾರುಂಟು' ಅನ್ನೋ ಸಿನಿಮಾ ಮಾಡಿದ್ದರು. ಅದೂ ಕೂಡ ಕೈ ಹಿಡಿಯಲಿಲ್ಲ.

ಆದ್ರೀಗ 'ಹೆಡ್ ಬುಷ್' ಸಿನಿಮಾದ ನಿರ್ದೇಶಕ ಶೂನ್ಯ ನಿರ್ದೇಶಿಸುತ್ತಿರುವ 'ರೋಸಿ' ಫಸ್ಟ್ ಲುಕ್ ರಿಲೀಸ್ ಆಗಿದೆ. ಮತ್ತೆ ಒರಟ ಪ್ರಶಾಂತ್ ಕೇವಲ ಫಸ್ಟ್ ಲುಕ್‌ನಿಂದಲೇ ಶೈನ್ ಆಗುತ್ತಿದ್ದಾರೆ. ಇಲ್ಲಿಂದ ಒರಟ ಪ್ರಶಾಂತ್ ಅದೃಷ್ಟ ಮತ್ತೆ ಬದಲಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿದೆ.
ಒರಟ ಪ್ರಶಾಂತ್ ನಟಿಸುತ್ತಿರುವ 'ರೋಸಿ' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗುತ್ತಿದ್ದಂತೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಸದ್ಯ ಸ್ಪೀಡ್ ಪ್ಲಸ್ ಕರ್ನಾಟಕ ಅನ್ನುವ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ಕೊಟ್ಟಿದ್ದಾರೆ. ಇದರಲ್ಲಿ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ, ಸಿನಿಮಾಗೆ ಬ್ರೇಕ್ ಕೊಟ್ಟಿದ್ದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಅದರ ಝಲಕ್ ಇಲ್ಲಿದೆ.
ಒರಟ ಪ್ರಶಾಂತ್ ಅಂದಕೂಡಲೇ ಅವರ ಸ್ವಭಾವ ಕೂಡ ಒರಟು ಅಂತ ಅಂದುಕೊಳ್ಳುವವರೇ ಹೆಚ್ಚು. ಅದಕ್ಕೆ ಪ್ರಶಾಂತ್ ಅವರ ಸ್ವಭಾವದ ಬಗ್ಗೆ ಹೇಳೋದಿಷ್ಟು. "ನನ್ನ ಹೆಸರು ಪ್ರಶಾಂತ. ಅದಕ್ಕೆ ಒರಟ ಸೇರಿಕೊಂಡಿದೆ. ಕಂಡರೆ ಒರಟನಂತೆ ಕಾಣಿಸುತ್ತೇನೆ. ಇಲ್ಲ ಅಂದರೆ, ಪ್ರಶಾಂತವಾಗಿ ಕಾಣಿಸುತ್ತೇನೆ. ನನ್ನ ಎರಡೂ ಶೇಡ್ ಕೂಡ ಕಾಣುತ್ತೆ. ಸಾಮಾನ್ಯವಾಗಿ ಇವನು ಪ್ರಶಾಂತವಾಗಿ ಇರುತ್ತಾನೆ. " ಎಂದು ರಿಯಲ್ ಕ್ಯಾರೆಕ್ಟರ್ ಬಗ್ಗೆ ಹೇಳಿಕೊಂಡಿದ್ದಾರೆ.

ಒರಟ ಪ್ರಶಾಂತ್ ನಟಿಸಿದ ಕೆಲವು ಸಿನಿಮಾಗಳು ರೀಚ್ ಆಗದೇ ಇದ್ದಾಗ ಕೆಲವು ದಿನ ಗ್ಯಾಪ್ ಕೊಡಬೇಕಾಯಿತು ಎಂದಿದ್ದಾರೆ. "ನಾವು ಕೆಲವೊಮ್ಮೆ ಒಂದಿಷ್ಟು ವಿಷಯಗಳನ್ನು ಅಂದ್ಕೊಂಡು ಕೆಲಸ ಮಾಡುತ್ತಿರುತ್ತೇವೆ. ನಾವು ಅಂದುಕೊಂಡ ಮಟ್ಟಿಗೆ ರೀಚ್ ಆಗದೇ ಇದ್ದಾಗ, ಒಂದಿಷ್ಟು ನೋವುಗಳಾಗುತ್ತವೆ. ಅದರ ಜೊತೆಗೆ ಒಂದಿಷ್ಟು ಕಥೆಗಳ ಆಯ್ಕೆ. ನನ್ನ ಕೊನೆಯ ಸಿನಿಮಾ ಯಾರಿಗೆ ಯಾರುಂಟು. ಬೇರೆ ತರಹದ್ದೇ ಪಾತ್ರವನ್ನು ಪ್ಲೇ ಮಾಡಿದ್ದೆ. ಸಿನಿಮಾ ಬಹಳ ಚೆನ್ನಾಗಿತ್ತು, ಮುದ್ದಾಗಿತ್ತು. ಆದರೆ, ನಾವು ಅಂದುಕೊಂಡ ಹಾಗೆ ರೆಸ್ಪಾನ್ಸ್ ನಮಗೆ ಸಿಗಲಿಲ್ಲ." ಎಂದು ಒರಟ ಪ್ರಶಾಂತ್ ಹೇಳಿದ್ದಾರೆ.
ಒರಟ ಪ್ರಶಾಂತ್‌ಗೆ ಹೆಚ್ಚು ಸಿನಿಮಾ ಮಾಡಬೇಕು ಅನ್ನೋ ಹಂಬಲವಿಲ್ಲ. ಆದರೆ, ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಅನ್ನೋ ಆಸೆಯಿದೆ. "ಕಲಾವಿದನಿಗೆ ಆ ಹಂಬಲ ಯಾವಾಗಲೂ ಇದ್ದೇ ಇರುತ್ತೆ. ನನಗೆ ಏನಂದ್ರೆ, ಸಿನಿಮಾಗಳ ಕೌಂಟ್ ಹೆಚ್ಚು ಮಾಡಿಕೊಳ್ಳುವುದಕ್ಕಿಂತ ಒಳ್ಳೆಯ ಸಿನಿಮಾ ಮಾಡೋಣ ಅಂತ. ನಂದೂ ಒಂದಿಷ್ಟು ಸಿನಿಮಾ ಆಗಿದೆ ಅನ್ನೋದಕ್ಕಿಂತ, ನಾನು ಒಂದಿಷ್ಟು ಒಳ್ಳೆಯ ಸಿನಿಮಾ ಮಾಡಿದ್ದೀನಿ ಅನ್ನೋ ತುಡಿತ ನನಗೆ. ಈ ವರ್ಷ ಬ್ಯಾಕ್ ಟು ಬ್ಯಾಕ್ ಒಂದಿಷ್ಟು ಒಳ್ಳೆಯ ಸಿನಿಮಾಗಳನ್ನು ಕೊಡುವ ಕೆಲಸ ನಡೆಯುತ್ತಿವೆ." ಎನ್ನುತ್ತಾರೆ.
'ರೋಸಿ' ಫಸ್ಟ್ ಲುಕ್ ಏನೋ ರಿಲೀಸ್ ಆಗಿದೆ. ಆದರೆ, ಇದಕ್ಕೂ ಮುನ್ನ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಇಷ್ಟು ಸುಮ್ಮನೆ ಇದ್ದರೂ, ತೆರೆ ಮರೆಯಲ್ಲಿ ಸಿನಿಮಾದ ಆಗ ಹೋಗುಗಳ ಮೇಲೆ ಅಧ್ಯಯನ ನಡೆಯುತ್ತಲೇ ಇತ್ತು. ಈಗಾಗಲೇ 'ದಳವಾಯಿ' ಅನ್ನುವ ಸಿನಿಮಾವನ್ನು ಮಾಡಿ ಮುಗಿಸಿದ್ದಾರೆ. 'ರೋಸಿ' ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಇನ್ನೂ ಎರಡು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಈ ವರ್ಷ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.


Click it and Unblock the Notifications











