Rakshit Shetty: 'ಪುಣ್ಯಕೋಟಿ' ಮಲ್ಟಿಸ್ಟಾರರ್ ಸಿನಿಮಾನಾ? ಡ್ರೀಮ್ ಪ್ರಾಜೆಕ್ಟ್ ಬಗ್ಗೆ ರಕ್ಷಿತ್ ಶೆಟ್ಟಿ ಬಿಚ್ಚಿಟ್ಟ ಗುಟ್ಟೇನು?
ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆ ಎಲ್ಲೋ' ತೆಲುಗು ಡಬ್ ಸಿನಿಮಾಗೆ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈ ಸಿನಿಮಾಗೆ ಕನ್ನಡದಲ್ಲೂ ಇಷ್ಟೊಂದು ಪ್ರಚಾರ ಮಾಡಿರಲಿಲ್ಲ. ಆದರೆ, ಕಳೆದ ಕೆಲವು ದಿನಗಳಿಂದ ತೆಲುಗಿನ ಪ್ರಮುಖ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. 'ಸಪ್ತ ಸಾಗರಾಲು ದಾಟಿ' (ಸಪ್ತ ಸಾಗರದಾಚೆ ಎಲ್ಲೋ) ಸಿನಿಮಾದ ಜೊತೆ ತಮ್ಮ ಸಿನಿಮಾದ ಭವಿಷ್ಯ ಬಗ್ಗೆನೂ ಓಪನ್ ಆಗಿ ಮಾತಾಡುತ್ತಿದ್ದಾರೆ.
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ. ಈಗಾಗಲೇ ಐದು ಸಿನಿಮಾಗಳಿಗೆ ಕಮಿಟ್ ಆಗಿದ್ದು, ಮೊದಲು 'ರಿಚರ್ಡ್ ಆಂಟೋನಿ' ಆರಂಭ ಆಗಲಿದೆ. ಆದರೆ, ರಕ್ಷಿತ್ ಶೆಟ್ಟಿಯ ಡ್ರೀಮ್ ಪ್ರಾಜೆಕ್ಟ್ 'ಪುಣ್ಯಕೋಟಿ' ಬಗ್ಗೆ ಎಲ್ಲರ ಗಮನವಿದೆ. ಈಗಾಗಲೇ ಈ ಸಿನಿಮಾ ಬಗ್ಗೆ ಕುತೂಹಲ ಕೆರಳಿಸುವಲ್ಲಿ ರಕ್ಷಿತ್ ಯಶಸ್ವಿಯಾಗಿದ್ದಾರೆ.

'ಸಪ್ತ ಸಾಗರಾಲು ದಾಟಿ' ಸಿನಿಮಾ ಬಗ್ಗೆ, ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ರಕ್ಷಿತ್ ಶೆಟ್ಟಿ ಮುಕ್ತವಾಗಿ ಫಿಲ್ಮಿಬೀಟ್ ತೆಲುಗುಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲೂ 'ಪುಣ್ಯಕೋಟಿ' ಬಗ್ಗೆ ಸುಳಿವು ಒಂದನ್ನು ಬಿಟ್ಟುಕೊಟ್ಟಿದ್ದಾರೆ. ಈ ಸಂದರ್ಶನದ ಹೈಲೈಟ್ ಇಲ್ಲಿದೆ.
"ಕರ್ನಾಟಕದಲ್ಲೂ ಈ ಸಿನಿಮಾ ಪ್ರಚಾರ ಮಾಡಿಲ್ಲ"
"ನಾವು ಕರ್ನಾಟಕದಲ್ಲೂ ಈ ಸಿನಿಮಾಗೆ ಪ್ರಚಾರ ಮಾಡಿರಲಿಲ್ಲ. ಒಂದು ಟ್ರೈಲರ್ ಹಾಗೂ ಎರಡು ಲಿರಿಕಲ್ ವಿಡಿಯೋ ಬಿಟ್ಟಿದ್ದೆವು. ಅದು ಬಿಟ್ಟರೆ ಸಿನಿಮಾ ಕಂಟೆಂಟ್ ಅನ್ನು ಹೆಚ್ಚು ಪ್ರಚಾರ ಮಾಡಿಲ್ಲ. ಸಿನಿಮಾ ಬಿಡುಗಡೆ ಬಳಿಕ ವರ್ಡ್ ಆಫ್ ಮೌತ್‌ನಿಂದ ಸಿನಿಮಾ ನೋಡಲು ಜನರು ಬಂದರು. ಪ್ರತಿವಾರ ಜನರು ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಯ್ತು." ಎಂದು ತೆಲುಗು ಮಾಧ್ಯಮಗಳ ಮುಂದೆ ರಕ್ಷಿತ್ ಶೆಟ್ಟಿ ರಿವೀಲ್ ಮಾಡಿದ್ದಾರೆ.

"5 ಸಿನಿಮಾಗಳ ಬಳಿಕ ಬೇರೆ ಯೋಚನೆ ಮಾಡುತ್ತೇನೆ"
"ಸದ್ಯ ನನ್ನ ಬಳಿ ಹಲವು ಸಿನಿಮಾಗಳಿವೆ. ಆ ಎಲ್ಲಾ ಸಿನಿಮಾಗಳಿಗೂ ನಾನೇ ಕಥೆ ಬರೆದಿದ್ದೇನೆ. ಅವುಗಳನ್ನು ನಾನೇ ನಿರ್ದೇಶನ ಮಾಡಬೇಕು. ಮೊದಲು ಆ 5 ಸಿನಿಮಾಗಳನ್ನು ಮಾಡಬೇಕು. ಆ ಬಳಿಕ ಬೇರೆ ಯೋಚನೆ ಮಾಡುತ್ತೇನೆ. ಈ ಐದು ಸಿನಿಮಾಗಳಲ್ಲಿ ಒಂದಕ್ಕೆ ಬೇರೆ ಚಿತ್ರರಂಗದಿಂದ ನಟಿಯರನ್ನು ಕರೆದುಕೊಂಡು ಬರಬಹುದು. ಅದನ್ನು ನಾನು ಮಾಡಬಹುದು." ಎಂದು ಮಲ್ಟಿಸ್ಟಾರರ್ ಸಿನಿಮಾ 'ಪುಣ್ಯಕೋಟಿ' ಬಗ್ಗೆ ಸುಳಿವು ನೀಡಿದ್ದಾರೆ.
'ಪುಣ್ಯಕೋಟಿ' ಮಲ್ಟಿಸ್ಟಾರರ್ ಸಿನಿಮಾ
"ನಾನೊಂದು ಸಿನಿಮಾ ಮಾಡುತ್ತಿದ್ದೇನೆ. ಅದರ ಹೆಸರು 'ಪುಣ್ಯಕೋಟಿ'. ಆ ಸಿನಿಮಾಗಾಗಿ ಬೇರೆ ಬೇರೆ ಚಿತ್ರರಂಗದಿಂದ ಸ್ಟಾರ್‌ಗಳನ್ನು ಕರೆದುಕೊಂಡು ಬರಬೇಕು ಅಂತ ತೀರ್ಮಾನ ಮಾಡಿದ್ದೇನೆ. ಆದರೆ, ಇನ್ನೂ ಅವರೊಂದಿಗೆ ಮಾತಾಡಿಲ್ಲ. ಹೀಗಾಗಿ ಅವರ ಹೆಸರನ್ನು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ. ಮುಂದೊಂದು ದಿನ ನಿಮಗೆ ಖಂಡಿತಾ ಗೊತ್ತಾಗುತ್ತೆ." ಎಂದು 'ಪುಣ್ಯಕೋಟಿ'ಗೆ ಬೇರೆ ಬೇರೆ ಚಿತ್ರರಂಗ ಕಲಾವಿದರನ್ನು ಕರೆತರುವ ಆಸೆ ವ್ಯಕ್ತ ಪಡಿಸಿದ್ದಾರೆ.
"ಸದ್ಯಕ್ಕೆ ಮದುವೆ ಇಲ್ಲ"
ತೆಲುಗು ಮಾಧ್ಯಮಗಳು ರಕ್ಷಿತ್ ಶೆಟ್ಟಿ ಮದುವೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆದರೆ, ರಕ್ಷಿತ್‌ಗೆ ಈಗಾಗಲೇ ಮದುವೆ ಬಗ್ಗೆ ಆಸಕ್ತಿ ಇದ್ದಂತೆ ಇಲ್ಲ. ಹೀಗಾಗಿ ಸದ್ಯಕ್ಕೆ ಮದುವೆ ಆಗುವ ಬಗ್ಗೆ ಆಲೋಚನೆ ಮಾಡಿಲ್ಲ ಎಂದು ಮಾಧ್ಯಮಗಳಿಗೆ ಉತ್ತರ ನೀಡಿ ಎಸ್ಕೇಪ್ ಆಗಿದ್ದಾರೆ. "ಸದ್ಯಕ್ಕೆ ಮದುವೆ ಬಗ್ಗೆ ಯಾವುದೇ ಆಲೋಚನೆ ಇಲ್ಲ.ಹಾಗೇನಾದರೂ ಇದ್ದಲ್ಲಿ ಮುಂದಿನ ದಿನಗಳಲ್ಲಿ ನಿಮಗೆ ತಿಳಿಸುತ್ತೇನೆ." ಎಂದು ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











