ಇಹಲೋಕ ತ್ಯಜಿಸಿದ ಶಿವರಾಜ್ ಕೆ.ಆರ್ ಪೇಟೆ ತಂದೆ 'ಡ್ರಾಮಾ ಮಾಸ್ಟರ್' ರಾಮೇಗೌಡ
ಜೀ ಕನ್ನಡದ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಮೂಲಕ ಕನ್ನಡಿಗರ ಮನಗೆದ್ದಿದ್ದ ನಟ ಶಿವರಾಜ್ ಕೆ ಆರ್ ಪೇಟೆ. ಹಾಸ್ಯ ಪ್ರಜ್ಞೆಯ ಮೂಲಕ ಕಿರಿತೆರೆ ವೀಕ್ಷಕರ ಮನಗೆದ್ದು, ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಹಾಸ್ಯ ಪಾತ್ರಗಳ ಮೂಲಕ ಸಿನಿಮಾ ತನ್ನದೇ ಸ್ಥಾನ ಗಿಟ್ಟಿಸಿಕೊಂಡಿರೋ ಈ ನಟನ ತಂದೆ ಇಂದು (ಆಗಸ್ಟ್ 31) ದೈವಾಧೀನರಾಗಿದ್ದಾರೆ.
ಹಾಸ್ಯ ನಟ ಶಿವರಾಜ್ ಕೆ.ಆರ್ ಪೇಟೆ ತಂದೆ ಡ್ರಾಮಾ ಮಾಸ್ಟರ್ ರಾಮೇಗೌಡ ಇಂದು (ಆಗಸ್ಟ್ 31) ಬೆಳಿಗ್ಗೆ ಕೆ.ಆರ್ ಪೇಟೆಯ ತಮ್ಮ ಸ್ವಗೃದಲ್ಲಿ ದೈವಾಧೀನರಾಗಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ರಾಜಘಟ್ಟ (ಹಾಲಿವಾಸ ಜಯನಗರ ಕೆ.ಆರ್.ಪೇಟೆ) ಗ್ರಾಮದ ನಿವಾಸಿಯಾಗಿದ್ದರು.

ಡ್ರಾಮಾ ಮಾಸ್ಟರ್ ರಾಮೇಗೌಡ ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ರಾಮೇಗೌಡ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಪತ್ನಿ ಸಾವಿತ್ರಮ್ಮ, ಪುತ್ರ ಹಾಗೂ ಸಿನಿಮಾ ನಟ ಕೆ.ಆರ್.ಪೇಟೆ ಶಿವರಾಜ್(ಕಾಮಿಡಿ ಕಿಲಾಡಿಗಳು) ಸೇರಿದಂತೆ ನಾಲ್ಕು ಗಂಡು ಮಕ್ಕಳು ಮೂರು ಹೆಣ್ಣುಮಕ್ಕಳು ಬಿಟ್ಟು ಅಗಲಿದ್ದಾರೆ.
ಶಿವರಾಜ್ ಕೆ ಆರ್ ಪೇಟೆ ತಂದೆ ರಾಮೇಗೌಡರ ಅಂತ್ಯಕ್ರಿಯೆಯನ್ನು ನಾಳೆ (ಸೆಪ್ಟೆಂಬರ್ 1) ಶುಕ್ರವಾರ ಮಧ್ಯಾಹ್ನ 01 ಘಂಟೆಗೆ ಸ್ವಗ್ರಾಮ ರಾಜಘಟ್ಟದಲ್ಲಿ ನೆರವೇರಲಿದೆ. ತಂದೆಯನ್ನು ಕಳೆದುಕೊಂಡು ದು:ಖದಲ್ಲಿರೋ ನಟನಿಗೆ ಆತ್ಮೀಯರು ಹಾಗೂ ಹಿತೈಷಿಗಳು ಸಂತಾಪ ಸೂಚಿಸುತ್ತಿದ್ದಾರೆ.
ಶಿವರಾಜ್ ಕೆ ಆರ್ ಪೇಟೆ ಮಿಮಿಕ್ರಿ ಮಾಡುವುದಲ್ಲಿ ನಿಪುಣರು. ರಿಯಾಲಿಟಿ ಶೋ ಹಾಗೂ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿರುವ ನಟ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಗ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ತಂದೆ ಇಹಲೋಕ ತ್ಯಜಿಸಿದ್ದಾರೆ.


Click it and Unblock the Notifications











