"ದೊರೆ ಅಂತ ಟೈಟಲ್ ಇಡುವುದಕ್ಕೆ ಇಷ್ಟ ಆಗಿರಲಿಲ್ಲ"; ಶಿವಮೊಗ್ಗದಲ್ಲಿ ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್ ಹೇಳಿಕೆ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ವೃತ್ತಿ ಬದುಕಿನಲ್ಲಿ ಸುಮಾರು 130ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೂವರೆಗೂ ನಟಿಸಿದ ಸಿನಿಮಾಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನ. ಶಿವಣ್ಣ ಲುಕ್‌ಗೆ, ಮ್ಯಾನರಿಸಂಗೆ ಕಳೆದು ಹೋಗದವರೇ ಇಲ್ಲ. 63ನೇ ವಯಸ್ಸಿನಲ್ಲೂ ಶಿವಣ್ಣನ ಎನರ್ಜಿಯನ್ನು ಸರಿದೂಗಿಸುವುದಕ್ಕೆ ಯುವ ನಾಯಕ ನಟರು ಕಷ್ಟ ಪಡುತ್ತಾರೆ.
ಇನ್ನು ಶಿವಣ್ಣ ಸಿನಿಮಾ, ಮ್ಯಾನರಿಸಂ ಎಷ್ಟು ಅಟ್ರ್ಯಾಕ್ಟಿವ್ ಆಗಿರುತ್ತೋ? ಅಷ್ಟೇ ಅವರ ಸಿನಿಮಾದ ಟೈಟಲ್‌ಗಳು ಕೂಡ ಅಷ್ಟೇ ಪವರ್‌ಫುಲ್ ಆಗಿರುತ್ತೆ. ಇತ್ತೀಚೆಗೆ ಶಿವರಾಜ್‌ಕುಮಾರ್ ಶಿವಮೊಗ್ಗದ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಸಿನಿಮಾಗಳ ಟೈಟಲ್ ಬಗ್ಗೆ ಮನ ಬಿಚ್ಚಿ ಮಾತಾಡಿದ್ದಾರೆ. ಹಾಗೇ ಕಾದಂಬರಿಯನ್ನು ಆಧರಿಸಿದ ಸಿನಿಮಾಗಳಲ್ಲಿ ನಟಿಸಿದ್ದರ ಬಗ್ಗೆನೂ ಮಾತಾಡಿದ್ದಾರೆ.

ಸಾಹಿತಿ ಕುಂ.ವೀರಭದ್ರಪ್ಪ ಅವರು ಬರೆದ ಕಥೆ, ಕಾದಂಬರಿಗಳನ್ನು ಶಿವರಾಜ್‌ಕುಮಾರ್ ಸಿನಿಮಾ ಮಾಡಿದ್ದಾರೆ. ಹೀಗಾಗಿ ಒಂದೇ ವೇದಿಕೆ ಹಂಚಿಕೊಂಡ ಸಂದರ್ಭ ಎದುರಾಗಿತ್ತು. ಈ ವೇಳೆ ಕುಂ.ವೀರಭದ್ರಪ್ಪ ಅವರು ಬರೆದ 'ಬೇಲಿಯ ಹೂವುಗಳು' ಸಿನಿಮಾವನ್ನು ಆಧರಿಸಿದ 'ದೊರೆ' ಅನ್ನುವ ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಆ ಟೈಟಲ್ ತನಗೆ ಇಷ್ಟವಿರಲಿಲ್ಲ ಎಂದು ಶಿವಣ್ಣ ವೇದಿಕೆ ಮೇಲೆ ಹೇಳಿದ್ದಾರೆ. ಅಷ್ಟಕ್ಕೂ ಈ ಮಾತನ್ನು ಯಾಕೆ ಹೇಳಿದರು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಣ್ಣ ತಂದೆ ರಾಜ್‌ಕುಮಾರ್ ಹಾಗೂ ಮಾವ, ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಅವರಿಂದ ಮಾತು ಆರಂಭಿಸಿದ್ದರು. ತಂದೆ ಹಾಗೂ ಮಾವ ಇಬ್ಬರೂ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದ್ದಾರೆ. "ಪ್ರತಿಯೊಬ್ಬರಿಗೂ ಈ ಭಾಗ್ಯ ಸಿಗೋದಿಲ್ಲ. ನನ್ನ ಬಾಳಲ್ಲಿ ಇಬ್ಬರು ಮುಖ್ಯವಾದ ವ್ಯಕ್ತಿಗಳು ಎರಡು ಕಣ್ಣು ಇದ್ದಂತೆ. ಒಬ್ಬರು ನನ್ನ ತಂದೆ. ಇನ್ನೊಬ್ಬರು ನನ್ನ ಮಾವ. ಒಳ್ಳೆಯ ತಂದೆ ಹಾಗೂ ಒಳ್ಳೆಯ ಮಾವನನ್ನು ಪಡೆಯುವುದಕ್ಕೆ ಎಷ್ಟು ಪುಣ್ಯ ಮಾಡಿದ್ನೋ ಗೊತ್ತಿಲ್ಲ. ಈ ಪುಣ್ಯ ನಡೆದುಕೊಂಡು ಹೋಗುತ್ತಲೇ ಇದೆ. ಅವರ ದಾರಿಯನ್ನು ಫಾಲೋ ಮಾಡಿಕೊಂಡು ಹೋಗುತ್ತಿದ್ದೇವೆ. ಆ ಭಾಗ್ಯ ಕೆಲವರಿಗೆ ಮಾತ್ರ ಸಿಗುತ್ತೆ. ಸಿಕ್ಕಿದಾಗ ನಾವು ಅದನ್ನು ಉಪಯೋಗಿಸಿಕೊಳ್ಳಬೇಕು." ಎಂದು ಶಿವಣ್ಣ ಹೇಳಿದ್ದಾರೆ.
ಇದೇ ವೇಳೆ ವೇದಿಕೆ ಮೇಲಿದ್ದ ಕುಂ.ವೀರಭದ್ರಪ್ಪ ಅವರ 'ಬೇಟೆ' ಕಾದಂಬರಿಯಿಂದಲೇ ಹ್ಯಾಟ್ರಿಕ್ ಹೀರೋ ಟೈಟಲ್ ಸಿಕ್ಕಿದೆ. 'ಮನಮೆಚ್ಚಿದ ಹುಡುಗಿ' ಅವರ ಕಾದಂಬರಿಯಿಂದ ಆಧರಿಸಿದ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. "ನನ್ನನ್ನು ಹ್ಯಾಟ್ರಿಕ್ ಹೀರೋ ಮಾಡಿದ್ದೇ ಕುಂ.ವೀರಭದ್ರಪ್ಪ ಅವರ ಬೇಟೆ. ಯಾಕಂದರೆ, ಅವರು ಬರೆದಿದ್ದ ಕಾದಂಬರಿ 'ಬೇಟೆ'ಯನ್ನು ಮನಮೆಚ್ಚಿದ ಹುಡುಗಿ ಅಂತ ಮಾಡಿದ್ವಿ. ಅವರ ದೊಡ್ಡತನ. ಬೇಟೆ ಟೈಟಲ್ ಕೂಡ ಚೆನ್ನಾಗಿತ್ತು. ಅದನ್ನೂ ಇಡಬಹುದಾಗಿತ್ತು. ಅವರನ್ನು ಕೇಳಿಕೊಂಡು ಮನ ಮೆಚ್ಚಿದ ಹುಡುಗಿ ಅಂತ ಇಟ್ವಿ. ಅದಾದ್ಮೇಲೆ ಅವರ ಪರ್ಮಿಷನ್ ತೆಗೆದುಕೊಂಡಿ ಮನ ಮೆಚ್ಚಿದ ಹುಡುಗಿ ಅಂತ ಬುಕ್ ಕೂಡ ರಿಲೀಸ್ ಮಾಡಿದ್ವಿ. ಆ ನೆನಪು ತುಂಬಾನೇ ಇದೆ." ಎಂದಿದ್ದಾರೆ.

ಇನ್ನು ತಮ್ಮ ವೃತ್ತಿ ಬದುಕಿನ ಮತ್ತೊಂದು ಅತ್ಯುತ್ತಮ ಸಿನಿಮಾ 'ದೊರೆ' ಟೈಟಲ್ ಬಗ್ಗೆನೂ ಮಾತನಾಡಿದ್ದು, ಈ ಟೈಟಲ್ ಇಡುವುದು ನನಗೆ ಇಷ್ಟವಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. "ಬೇಲಿಯ ಹೂವುಗಳು ಅಂತ ಒಂದು ಕಾದಂಬರಿಯನ್ನು ದೊರೆ ಅಂತ ಮಾಡಿದ್ವಿ. ದೊರೆ ಅಂತ ಟೈಟಲ್ ಇಡುವುದಕ್ಕೆ ಇಷ್ಟ ಆಗಿರಲಿಲ್ಲ. ಯಾಕಂದ್ರೆ ಆ ಸಿನಿಮಾದಲ್ಲಿ ದೊರೆತನವನ್ನು ಓಡಿಸಬೇಕು ಅಂತಲೇ ಇತ್ತು. ಈ ಪ್ರಪಂಚದಲ್ಲಿ ಇವನು ದೊರೆ. ಅವನು ಆಳು ಅನ್ನೋದು ಯಾವುದೂ ಇಲ್ಲ. ಎಲ್ಲರೂ ಒಂದೇ ಅನ್ನೋ ರೀತಿಯಲ್ಲಿ ಕಥೆಯನ್ನು ಬರೆದಿದ್ದರು." ಎಂದಿದ್ದಾರೆ.
ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದರೆ, 'ದೊರೆ' ಟೈಟಲ್ ಬದಲು 'ಕರಿಯ' ಅಂತ ಇಡಿ ಎಂದು ಸಲಹೆ ನೀಡಿದ್ದರಂತೆ. ಬಳಿಕ ಆ ಟೈಟಲ್ ಅನ್ನು ಮುಂದಿನ ದಿನಗಳಲ್ಲಿ ದರ್ಶನ್ ಸಿನಿಮಾಗೆ ಇಡಲಾಗಿತ್ತು. "ದೊರೆ ಸಿನಿಮಾದಲ್ಲಿ ಹೀರೋ ಹೆಸರು ಕರಿಯ ಅಂತ. ನಾನು ಕರಿಯ ಅಂತಾನೇ ಹೆಸರು ಇಡಿ. ಇಲ್ಲಾ ಅಂದರೆ ಬೇಲಿಯ ಹೂವುಗಳು ಅಂತಾನೇ ಹೆಸರು ಇಡಿ ಅಂತ. ಯಾಕಂದ್ರೆ, ಬೇಲಿಯ ಮೇಲಿರುವ ಹೂವುಗಳು ಯಾವಾಗಲೂ ಶ್ರೇಷ್ಠ. ಅದನ್ನು ರೈತರಿಗೆ ಹೋಲಿಸುತ್ತಾರೆ. ಥ್ಯಾಂಕ್ಯೂ ಕುಂ. ವೀರಭದ್ರಪ್ಪ ಅವರೇ ನಿಮ್ಮ ಕಾದಂಬರಿಯಲ್ಲಿ ನಟಿಸುವುದೇ ಭಾಗ್ಯ" ಎಂದು ಶಿವರಾಜ್‌ಕುಮಾರ್ ವೇದಿಕೆ ಮೇಲೆ ಹೇಳಿದ್ದಾರೆ.
ಇದೇ ವೇದಿಕೆ ಮೇಲೆ ಶಿವಣ್ಣ "ತಂದೆಯವರು ಆದ್ಮೇಲೆ ಹೆಚ್ಚು ಕಾದಂಬರಿಗಳನ್ನು ಆಧರಿಸಿ ಸಿನಿಮಾ ಮಾಡಿದ್ದು ನಾನೇ ಅಂತ ಅನಿಸುತ್ತೆ. ಅದೊಂದು ಹೆಮ್ಮೆ ನನಗೆ ಇದೆ" ಎಂದು ಸೆಂಚುರಿ ಸ್ಟಾರ್ ಹೇಳಿದ್ದಾರೆ.


Click it and Unblock the Notifications











