"ಮಗಳೇ ಹೆಗಲೇ ವಿಮಾನ ನಿನಗೆ, ನಿನ್ನ ನಗುವೇ ಪ್ರಧಾನ ನನಗೆ" ಎನ್ನುತ್ತ ಮಗಳನ್ನು ನೆನೆದು ಭಾವುಕರಾದ ಶ್ರೀನಗರ ಕಿಟ್ಟಿ!
ಸ್ಯಾಂಡಲ್‌ವುಡ್ ಅದ್ಭುತ ಕಲಾವಿದರಲ್ಲಿ ಶ್ರೀನಗರ ಕಿಟ್ಟಿ ಕೂಡ ಒಬ್ಬರು. ಬಹಳ ದಿನಗಳ ಬಳಿಕ ಶ್ರೀನಗರ ಕಿಟ್ಟಿ ಸೋಲೋ ಹೀರೊ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಅದುವೇ 'ಗೌಳಿ'. ಇಂದು (ಫೆಬ್ರವರಿ 24) ಈ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದೆ. ಕಿಟ್ಟಿ ಹಾಗೂ ಪಾವನಾ ಗೌಡ ಕಾಂಬಿನೇಷನ್ ಸಿನಿಮಾ ಈಗಾಗಲೇ ಟ್ರೈಲರ್ ಹಾಗೂ ಹಾಡುಗಳಿಂದ ಕುತೂಹಲ ಕೆರಳಿಸಿದೆ. ಅಲ್ಲದೆ ಶ್ರೀನಗರ ಕಿಟ್ಟಿ ಉದ್ದನೆಯ ಗಡ್ಡ ಬಿಟ್ಟು ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಪಕ್ಕಾ ಕಂಟೆಂಟ್ ಓರಿಯೆಂಟ್ ಸಿನಿಮಾ ಅಂತ ಅನಿಸಿದರೂ, ಕಮರ್ಷಿಯಲ್ ಎಲಿಮೆಂಟ್ಸ್ ಹೆಚ್ವಿವೆ.
ಅಂದ್ಹಾಗೆ 'ಗೌಳಿ' ತಂದೆ ಹಾಗೂ ಮಗಳ ನಡುವೆ ಬಾಂಧವ್ಯದ ಮೇಲೂ ಬೆಳಕು ಚೆಲ್ಲುತ್ತೆ. ಶ್ರೀನಗರ ಕಿಟ್ಟಿ ಹಾಗೂ ಬೇಬಿ ನಮನಾ ನಡುವಿನ ಸಂಬಂಧವನ್ನು ಎಮೋಷನಲ್ ಆಗಿ ತೆರೆಮೇಲೆ ತಂದಿದ್ದಾರೆ. ಮಾಸ್ ಸಿನಿಮಾ ಆಗಿದ್ದರೂ, ಸೆಂಟಿಮೆಂಟ್ ದೃಶ್ಯಗಳಿಗೇನು ಕಮ್ಮಿಯಿಲ್ಲ. ಇದೇ ಸಿನಿಮಾದಲ್ಲಿರೋ ತಂದೆ ಹಾಗೂ ಮಗಳ ಬಾಂಧವ್ಯದ ಬಗ್ಗೆ ಮಾತಾಡುವಾಗ ಶ್ರೀನಗರ ಕಿಟ್ಟಿ "ಮಗಳೇ ಹೆಗಲೇ ವಿಮಾನ ನಿನಗೆ.." ಅನ್ನೋ ಹಾಡಿನ ಸಾಲುಗಳನ್ನು ನೆನೆದು ಭಾವುಕರಾಗಿದ್ದಾರೆ. ಡಾ.ನಾಗೇಂದ್ರ ಪ್ರಸಾದ್ ಬರೆದ ಸಾಲುಗಳನ್ನು ಮೆಚ್ಚಿಕೊಂಡಾಡಿದ್ದಾರೆ. ತಮ್ಮ ಮಗಳನ್ನು ನೆನಪಿಸಿಕೊಂಡು ಕೆಲ ಕಾಲ ಸೈಲೆಂಟ್ ಆಗಿದ್ದಾರೆ.

ಮಗಳನ್ನು ನೆನೆದು ಭಾವುಕರಾದ ಶ್ರೀನಗರ ಕಿಟ್ಟಿ
ತಂದೆಗೆ ಮಗಳು.. ತಾಯಿಗೆ ಮಗನ ಮೇಲೆ ಪ್ರೀತಿ ಹೆಚ್ಚು ಅನ್ನೋದು ಹೊಸ ವಿಷಯವೇನಲ್ಲ. ತಂದೆ-ಮಗಳ ಬಾಂಧವ್ಯವೇ ಬೇರೆ. ಶ್ರೀನಗರ ಕಿಟ್ಟಿ ಹಾಗೂ ಅವರ ಪುತ್ರಿ ಪರಿಣಿತಾ ಬಾಂಧವ್ಯ ಕೂಡ ಹಾಗೇ ಇದೆ. ಇನ್ನು ಗೌಳಿ ಸಿನಿಮಾದಲ್ಲಿಯೂ ಶ್ರೀನಗರ ಕಿಟ್ಟಿ ಹಾಗೂ ಬೇಬಿ ನಮನಾ ನಡುವೆ ತಂದೆ-ಮಗಳ ನಡುವಿನ ಸನ್ನಿವೇಶಗಳಿವೆ. ಈ ಸಿನಿಮಾ ಶೂಟಿಂಗ್ ವೇಳೆ ತಮ್ಮ ಮಗಳನ್ನು ನಮನಾಳೊಂದಿಗೆ ಕಾಣುತ್ತಿದ್ದೆ ಎಂದು ಶ್ರೀನಗರ ಕಿಟ್ಟಿ ಫಿಲ್ಮಿ ಬೀಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
"ಆ ಮಗುವನ್ನು ಕರೆದುಕೊಂಡು ಬಂದು ಮೊದಲು ನನ್ನ ತೊಡೆ ಮೇಲೆ ಕೂರಿಸಿದ ತಕ್ಷಣ ನೆನಪಿಗೆ ಬಂದಿದ್ದೇ ನನ್ನ ಮಗಳು. ಆ ಸಾಲು ಬರೆದ ತಕ್ಷಣ ನನಗೆ ಕೇಳಿಸಿದ ತಕ್ಷಣ ನಾಗೇಂದ್ರ ಪ್ರಸಾದ್‌ಗೆ ಫೋನ್ ಮಾಡಿ, ಏನ್ರಿ ಹಿಂಗೆ ಬರೆದುಬಿಟ್ಟಿದ್ದೀರಾ ಕೇಳಕ್ಕೆ ರೋಮಾಂಚನ ಆಗುತ್ತೆ. ಮಗಳೇ ಹೆಗಲೇ ವಿಮಾನ ನಿನಗೆ, ನಿನ್ನ ನಗುವೇ ಪ್ರಧಾನ ನನಗೆ. ಋಣವೇ ನೀನು ನನ್ನ ತಾಯಿ ಹಾಗೆ.." ಎನ್ನುತ್ತಾ ಶ್ರೀನಗರ ಕಿಟ್ಟಿ ಭಾವುಕರಾಗಿದ್ದಾರೆ. ಹಾಗೇ ಈ ಸಿನಿಮಾ ಶೂಟಿಂಗ್ ಮಾತಾಡುವಾಗ ಪ್ರತಿ ನನ್ನ ಮಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ.

ಫೋನ್ ಮಾಡಿದಾಗಲೆಲ್ಲಾ ಎಷ್ಟೊತ್ತಿಗೆ ಬರ್ತಿರಾ ಅಂತಾಳೆ
"ನನ್ನ ಮಗಳನ್ನು ಬಿಟ್ಟು ಶೂಟಿಂಗ್ ಮಾಡುತ್ತಿದ್ದೆ. ನನಗೆ ನನ್ನ ಮಗಳು ಅಲ್ಲಿ ಸಿಕ್ಕಿದ್ಲು. ಪ್ರತಿದಿನ ನಾನು ಫೋನ್ ಮಾಡಿದಾಗಲೂ ನನ್ನ ಮಗಳು ಕೇಳೋಳು. ಅಪ್ಪ ನಮನ ಹೇಗಿದ್ದಾಳೆ. ಅಪ್ಪ ನಮನಾ ಹೇಗಿದ್ದಾಳೆ ಅಂತ. ಆ ಬಾಂಧವ್ಯ ನಿಮಗೆ ತೆರೆಮೇಲೆ ಕಾಣುತ್ತೆ. ನನ್ನ ಮಗಳನ್ನು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತಲೇ ಇರುತ್ತೇನೆ. ಅವಳ ಪ್ರಪಂಚ ಎಲ್ಲೋ ಇರುತ್ತೆ. ಆದರೆ ನಾನು ಮನಗೆ ಬಂದ ಕೂಡಲೇ ಅವಳಿಗೆ ನಾನು ಕಾಣಿಸಬೇಕು. ನನಗೆ ಒಂದು ಫೋನ್ ಮಾಡುತ್ತಾಳೆ. ಅಪ್ಪ ಎಷ್ಟು ಹೊತ್ತಿಗೆ ಬರುತ್ತೀರಾ. ಲೇ ಕಳ್ಳಿ ಕೆಲಸದಲ್ಲಿ ಇದ್ದೀನಿ ಅಂದ್ರೆ, ಸರಿ ಎಷ್ಟು ಹೊತ್ತಿಗೆ ಬರುತ್ತೀರಾ ಹೇಳಿ ಅಂತಾಳೆ." ಎಂದು ಮಗಳು ಪರಿಣಿತಾ ಬಗ್ಗೆ ಕಿಟ್ಟಿ ಮಾತಾಡಿದ್ದಾರೆ.
"ನನಗೆ ನಾಲ್ಕು ಜನ ಅಕ್ಕಂದಿರು. ನಾಲ್ಕು ಜನ ಅತ್ತಿಗೆಯರು. ನಮ್ಮ ತಾಯಿ, ದೊಡ್ಡಮ್ಮ, ಅವರೊಂದಿ ಎಂಟು ಜನ ಅವರೆಲ್ಲರೊಂದಿಗೆ ಬೆಳೆದು ಬೆಳೆದು ಅಭ್ಯಾಸ ಆಗಿಬಿಟ್ಟು ಆ ಘಳಿಗೆ ತುಂಬಾನೇ ನೆನಪಿಸಿಬಿಡುತ್ತೆ. ಆ ಪುಟ್ಟಿ ಎಷ್ಟು ಚೆನ್ನಾಗಿ ಬೆರೆತುಬಿಡ್ತು ಅಂದ್ರೆ, ಈ ಅವತಾರ, ದಾಡಿ ಎಲ್ಲಾ ಬಿಟ್ಟಿದ್ದು ನೋಡಿ ನನ್ನ ಕಂಡರೆ ಭಯ ಆ ಪುಟ್ಟಿಗೆ. ಪಾವನ ಹತ್ತಿರ ಹೋಗಿ ಏನೋ ದೂರು ಹೇಳೋದು, ಏನೋ ಮಾತಾಡೋಳು. ಬಾರಮ್ಮ ಇಲ್ಲಿ ಹತ್ತಿರ ಬಾರಮ್ಮ, ನಾನು ನಿಮ್ಮ ಅಪ್ಪ ಹತ್ತಿರ ಬಾರೆ ಅಂದ್ರೆ, ಏನೋ ಭಯ ಭಯದಲ್ಲೇ ಬರೋಳು. ಆ ಭಯದಲ್ಲಿ, ಆ ಮುಗ್ಧತೆಯಲ್ಲಿ ಆ ಮಗು ಪಾತ್ರ ಮಾಡಿದ್ದು ಅದ್ಭುತ." ಎಂದು 'ಗೌಳಿ' ಸಿನಿಮಾದ ನಟಿ ನಮನಾ ಬಗ್ಗೆ ಶ್ರೀನಗರ ಕಿಟ್ಟಿ ಮನಬಿಚ್ಚಿ ಮಾತಾಡಿದ್ದಾರೆ.


Click it and Unblock the Notifications











