ಕಂಚಿನ ಕಂಠದ ವಸಿಷ್ಠ ಸಿಂಹ ಈಗ ರಾಯಲ್ ಸ್ಟಾರ್; ಇನ್ಮುಂದೆ ಸ್ಯಾಂಡಲ್‌ವುಡ್‌ಗೆ 'ವಿಐಪಿ'!
ಕನ್ನಡ ಚಿತ್ರರಂಗದ ಕಂಚಿನ ಕಂಠ ವಸಿಷ್ಠ ಸಿಂಹ. ತಮ್ಮ ಕಂಠದಿಂದಲೇ ಅದೆಷ್ಟೋ ಅಭಿಮಾನಿಗಳನ್ನು ಸಂಪಾದಿಸಿರುವ ನಟ. ನೆಗೆಟಿವ್ ರೋಲ್ ಇರಲಿ, ಪಾಸಿಟಿವ್ ರೋಲ್ ಇರಲಿ ಪಾತ್ರಕ್ಕೆ ತಕ್ಕಂತೆ ವಸಿಷ್ಠ ಸಿಂಹ ಫಿಟ್ ಆಗುತ್ತಾರೆ. ಇತ್ತೀಚೆಗೆ ಒಂದರ ಹಿಂದೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ.
ಕಳೆದ ವರ್ಷ ಅವರ 35ನೇ ಹುಟ್ಟುಹಬ್ಬದಂದು ಹೊಸ ಸಿನಿಮಾವೊಂದು ಸೆಟ್ಟೇರಿತ್ತು. ಆಗ ಸಿನಿಮಾ ಟೈಟಲ್ ಏನು ಅನ್ನೋದನ್ನು ಅನೌನ್ಸ್ ಮಾಡಿರಲಿಲ್ಲ. ಹೊಸ ವರ್ಷದ ವೇಳೆ ಅದರಲ್ಲೂ ಮಕರ ಸಂಕ್ರಾಂತಿ ಹಬ್ಬದ ಈ ಶುಭ ಸಂದರ್ಭದಲ್ಲಿ ಅವರ ಹೊಸ ಸಿನಿಮಾ ಟೈಟಲ್ ರಿವೀಲ್ ಮಾಡಲಾಗಿದೆ. ಈ ಮೂಲಕ ವಸಿಷ್ಠ ಸಿಂಹ ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ನೀಡಲಾಗಿದೆ.

ಅಂದ್ಹಾಗೆ, ವಸಿಷ್ಠ ಸಿಂಹ ಹೊಸ ಸಿನಿಮಾಗೆ 'ವಿಐಪಿ' ಎಂದು ಟೈಟಲ್ ಇಡಲಾಗಿದ್ದು, ಈ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಗಿದೆ. ಕಳೆದ ವರ್ಷವೇ ಈ ಸಿನಿಮಾದ ಶೂಟಿಂಗ್ ಆರಂಭ ಆಗಿತ್ತು. ಕೊಡಗು, ಸಕಲೇಶಪುರ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದ್ದು, ಶೂಟಿಂಗ್ ಬಿರುಸಿನಿಂದ ಸಾಗಿದೆ. ವಸಿಷ್ಠ ಸಿಂಹ ವೃತ್ತಿ ಬದುಕಿನಲ್ಲೇ ಪ್ರಮುಖ ಸಿನಿಮಾ ಆಗುಬಹುದು ಅನ್ನೋ ಮಾತು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ.
ಇನ್ನು 'ವಿಐಪಿ' ಸಿನಿಮಾವನ್ನು ಕಲಾ ಸೃಷ್ಟಿ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಹಾಗೆಯೇ ಬ್ರಹ್ಮ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾವೆಂದು ಹೇಳಲಾಗುತ್ತಿದೆ. ಮತ್ತೊಂದು ವಿಶೇಷವೆಂದರೆ 'ವಿಐಪಿ' ಅಭಿಮಾನಿಗಳು ವಸಿಷ್ಠ ಸಿಂಹಗೆ 'ರಾಯಲ್ ಸ್ಟಾರ್' ಎಂಬ ಬಿರುದು ನೀಡಿದ್ದಾರೆ. ಈ ಸಿನಿಮಾ ಮೂಲಕ ರಾಯಲ್ ಸ್ಟಾರ್ ವಸಿಷ್ಠ ಸಿಂಹ ಆಗಿ ಕಾಣಿಸಿಕೊಳ್ಳಲಿದ್ದಾರೆ.

ರಾಗಿಣಿ ನಟಿಸಿದ್ದ 'ಸಾರಿ ಕರ್ಮ ರಿಟನ್ಸ್' ಅನ್ನುವ ಸಿನಿಮಾವನ್ನು ಬ್ರಹ್ಮ ನಿರ್ದೇಶನ ಮಾಡಿದ್ದರು. ಆ ಬಳಿಕ ಈಗ 'ವಿಐಪಿ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದ್ಹಾಗೆ ಇದು ಕಲಾಸೃಷ್ಠಿ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಕ್ರೈಮ್ ಥ್ರಿಲ್ಲರ್, ರಿವೆಂಜ್ ಸ್ಟೋರಿ ಆಗಿರುವುದರಿಂದ ಹಾಲಿವುಡ್ ಸ್ಟೈಲ್‌ನಲ್ಲಿ ಸಿನಿಮಾ ಮಾಡಲು ಚಿತ್ರತಂಡ ಮುಂದಾಗಿದೆ.
'ವಿಐಪಿ' ಸಿನಿಮಾ ನಾನ್ ಲೀನಿಯರ್ ಸ್ಕ್ರೀನ್ ಪ್ಲೇ ಮೇಕಿಂಗ್ ಇರಲಿದೆ ಅನ್ನೋ ಸುಳಿವನ್ನು ಚಿತ್ರತಂಡ ಕೊಟ್ಟಿದೆ. ಮೋಹನ್ ಕುಮಾರ್ 'ವಿಐಪಿ' ಸಿನಿಮಾಗೆ ಕಥೆ ಬರೆದಿದ್ದಾರೆ. ರಾಜೀವ್ ಗಣೇಶನ್ ಚಿತ್ರಕಥೆ ಬರೆದು ಛಾಯಾಗ್ರಾಹಣವನ್ನೂ ಮಾಡುತ್ತಿದ್ದಾರೆ. ಹರ್ಷವರ್ಧನ್ ರಾಜ್ ಮ್ಯೂಸಿಕ್, ಸತೀಶ್ ಚಂದ್ರಯ್ಯ ಎಡಿಟಿಂಗ್ ಹಾಗೂ ಕೆಜಿಎಫ್ ಖ್ಯಾತಿಯ ವಿಕ್ರಮ್ ಮೋರ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.
ವಿವಾಹದ ಬಳಿಕ ವಸಿಷ್ಠ ಸಿಂಹ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಕೈಯಲ್ಲಿ ಎರಡು ಮೂರು ಸಿನಿಮಾಗಳಿವೆ. ಸಿನಿಮಾದ ಜೊತೆ ಜೊತೆಗೆ ಫ್ಯಾಮಿಲಿ ಲೈಫ್ ಅನ್ನೂ ಎಂಜಾಯ್ ಮಾಡುತ್ತಿದ್ದಾರೆ. ಸದ್ಯಕ್ಕೀಗ 'ವಿಐಪಿ' ಸಿನಿಮಾದಲ್ಲಿ ವಸಿಷ್ಠ ಸಿಂಹ ಲುಕ್ ಸದ್ದು ಮಾಡುವುದಕ್ಕೆ ಶುರುಮಾಡಿದೆ.


Click it and Unblock the Notifications











