"ನಮ್ಮ ತಂದೆ ತಾಯಿ ಬೇರೆ ಇದ್ದರು ಅಂತ ಎಲ್ಲರಿಗೂ ಗೊತ್ತಿತ್ತು.. ತಂದೆ ಮನೆಗೆ ಬರ್ಲಿ ಅಂತ ಕಾಯ್ತಿದ್ದೆ"; ವಿನೋದ್ ಪ್ರಭಾಕರ್
ಕನ್ನಡ ಚಿತ್ರರಂಗ ಕಂಡ ದೈತ್ಯ ಹೀರೋ, ಖಡಕ್ ವಿಲನ್ ಅಂದರೆ ಅದು ಟೈಗರ್ ಪ್ರಭಾಕರ್. ಈಗ ಅವರ ಪುತ್ರ ಸ್ಯಾಂಡಲ್‌ವುಡ್‌ನಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಅಪ್ಪನಂತೆಯೇ ಆಕ್ಷನ್ ಸಿನಿಮಾಗಳಲ್ಲಿ ನಟಿಸಿದ ಮಾಸ್ ಪ್ರಿಯರನ್ನು ರಂಜಿಸುತ್ತಿದ್ದಾರೆ. ಈಗ ವಿನೋದ್ ಪ್ರಭಾಕರ್ ನಟನೆಯ 'ಮಾದೇವ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದು ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಜೂನ್ 6ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ.
ವಿನೋದ್ ಪ್ರಭಾಕರ್ 25ನೇ ಸಿನಿಮಾಗಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಇವರೊಂದಿಗೆ ಸೋನಾಲ್ ಮಾಂಟೇರೊ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ವಿನೋದ್ ಪ್ರಭಾಕರ್ ತಮ್ಮ ತಂದೆ ಹಾಗೂ ತಾಯಿಯೊಂದಿಗೆ ಕಳೆದ ದಿನಗಳನ್ನು ನೆನೆಪಿಸಿಕೊಂಡಿದ್ದಾರೆ. ತಂದೆ ಹಾಗೂ ತಾಯಿ ಇಬ್ಬರೂ ದೂರ ಇದ್ದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ತಾಯಿ ತೀರಿ ಹೋದ ಕ್ಷಣ, 'ಮಾದೇವ' ಸಿನಿಮಾ ನೋಡಿ ತಂದೆ ತಾಯಿ ನೆನಪಾಗಿದ್ದನ್ನೆಲ್ಲ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.

ನನ್ನ ತಂದೆ-ತಾಯಿ ಬೇರೆ ಇದ್ದರು
"ಬಾಲ್ಯದ ಒಳ್ಳೆಯ ಕ್ಷಣ ಅಂದರೆ, ನಮ್ಮ ತಂದೆ ನಮ್ಮನ್ನು ಬಂದು ಭೇಟಿ ಮಾಡುತ್ತಿದ್ದರು. ಎಲ್ಲರಿಗೂ ಗೊತ್ತಿದೆ. ತಂದೆ ತಾಯಿ ಬೇರೆ ಇದ್ದರು. ತಂದೆ ಮನೆಗೆ ಬರಲಿ ಅಂತ ನಾನು ನಿರೀಕ್ಷೆ ಮಾಡುತ್ತಿದ್ದೆ. ಅವರು ಬಂದು ಎರಡು ಮೂರು ತಿಂಗಳು ಇರೋರು. ಆಗ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ವಿ. ಬಂದು ನಮ್ಮನ್ನು ನೋಡಿದಾಗ ತುಂಬಾನೇ ಖುಷಿ ಅಂತ ಅನಿಸೋದು. ಕಾರು, ಟಾಯ್ಸ್ ಏನಾದರೂ ತಂದು ಕೊಡುತ್ತಿದ್ದರು. ಇವರು ಬ್ಯುಸಿ ಇದ್ದರೆ, ಮಕ್ಕಳನ್ನು ನೋಡಬೇಕು ಅಂತ ಆಸೆಯಾದರೆ, ಶೂಟಿಂಗ್ ಸ್ಪಾಟ್‌ಗೆ ಕರೆಸಿಕೊಳ್ಳುತ್ತಿದ್ದರು. ನಾನು ಹೋದ ತಕ್ಷಣ ತಂದೆಯನ್ನು ನೋಡೋದು. ಆ ಮೇಲೆ ಟಾಯ್ಸ್ ಅಂತ ಕೇಳೋದು ಮಾಡುತ್ತಿದ್ದೆ." ಎಂದು ವಿನೋದ್ ಪ್ರಭಾಕರ್ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಜಸ್ಟ್ ಪಾಸ್ ಸ್ಟುಡೆಂಟ್
"ನಾನು 6ನೇ ತರಗತಿವರೆಗೂ ರ್‍ಯಾಂಕ್ ಸ್ಟುಡೆಂಟ್. ಆಗ ಬೇರೆ ಸ್ಕೂಲ್‌ನಿಂದ ನಮ್ಮ ಶಾಲೆಗೆ ಕರೆದುಕೊಂಡು ಬಂದರು. ಅಲ್ಲಿಂದ ಎಲ್ಲವೂ ಢಮಾರ್. ಲಾಸ್ ಬೆಂಚ್, ಲಾಸ್ಟ್ ರ್‍ಯಾಂಕ್. ಆದರೆ, ನಾನು ಜಸ್ಟ್ ಪಾಸ್ ಆಗುತ್ತಿದ್ದೆ. ಇವತ್ತೂ ನನಗೆ ಡೈಲಾಗ್ಸ್ ಅನ್ನು ಓದಿದರೆ ಬರೋದಿಲ್ಲ ನನಗೆ. ಹೀಗೆ ಕೂತ್ಕೊಂಡು ಯಾರಾದರೂ ಹೇಳಿದರೆ ಸಾಕು. ನನ್ನ ತಲೆಯೊಳಗೆ ಹೋಗುತ್ತೆ." ಎಂದಿದ್ದಾರೆ.
ತಂದೆ ಒಂದು ದಿನವೂ ಕೈ ಮಾಡಿಲ್ಲ
"ನಮ್ಮ ತಂದೆ ಅಂತೂ ಒಂದು ದಿನವೂ ನನಗೆ ಕೈ ಮಾಡಿಲ್ಲ. ನಾವು ಅವರನ್ನು ಚಿಕ್ಕ ವಯಸ್ಸಿನಿಂದ ತೆರೆಮೇಲೆ ನೋಡಿದ್ದು ಹೆಚ್ಚು. ಎದುರುಗಡೆ ಬಂದು ಗದರಿದರೆ ಸಾಕು ಸುಮ್ಮನಾಗುತ್ತಿದ್ದೆ. ಹಾಗೆ ನಮ್ಮ ಅಕ್ಕಂದಿರು ಹಾಕಿಕೊಡುವುದಕ್ಕೆ ರೆಡಿ ಇರೋರು. ತಂದೆ ಹೊಡೆಯುತ್ತಿರಲಿಲ್ಲ. ಆದರೆ, ಅಮ್ಮ ಸೈಕಲ್ ಶಾಪ್‌ನಲ್ಲಿ ಟ್ಯೂಬ್ ತೆಗೆದುಕೊಂಡು ಬಾ ಅನ್ನೋರು. ತಗೆದುಕೊಂಡು ಬಂದು ಕಟ್ ಮಾಡಿ ಕೊಟ್ಟರೆ, ಅದರಲ್ಲೇ ನನಗೆ ಬೀಸೋರು. ನನಗೆ ಗಾಳಿಪಟ ಹಾರಿಸೋ ಶೋಕಿ ಬೇರೆ ಇತ್ತು." ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಅಮ್ಮ ಅಗಲಿದ ದಿನ ಕಷ್ಟ
"ನನಗೆ ತುಂಬಾ ಕಷ್ಟ ಅಂದರೆ, ಅಕ್ಟೋಬರ್ 16, 2009 ನಮ್ಮ ತಾಯಿ ತೀರಿ ಹೋಗಿದ್ದು. ನನಗೆ ಮಗು ತರ ಅವರು. ಈಗಲೂ ನನಗೆ ಆ ದಿನವನ್ನು ಮರೆಯೋಕೆ ಆಗಲ್ಲ. ನಮ್ಮನ್ನು ತುಂಬಾ ಕಷ್ಟ ಪಟ್ಟು ಸಾಕಿದರು. ತಂದೆ ಇದ್ದರು, ಹಣಕಾಸಿನ ವಿಷಯಕ್ಕೆ ಸಹಾಯ ಮಾಡುತ್ತಿದ್ದರು. ನನಗೆ ತಿಳುವಳಿಕೆ ಬರೋವರೆಗೂ ನನ್ನನ್ನು ಅಮ್ಮ ಎತ್ತಿಕೊಂಡೇ ಒಡಾಡುತ್ತಿದ್ದರು. ನಾವು ಒಂದು ಹಂತದವರೆಗೆ ಬರೋವರೆಗೂ ಅವರು ನಮ್ಮನ್ನು ನೋಡಿಕೊಳ್ಳುತ್ತಾರೆ. ಆಮೇಲೆ ಅವರು ಮಗು ಆಗುತ್ತಾರೆ. ಆಗ ನಮ್ಮನ್ನು ಹೇಗೆ ನೋಡಿಕೊಳ್ಳುತ್ತಿದ್ದರೋ ನಾವು ಅದೇ ತರ ಅವರನ್ನು ನೋಡಿಕೊಳ್ಳಬೇಕು." ಎನ್ನುತ್ತಾರೆ ವಿನೋದ್ ಪ್ರಭಾಕರ್.
ತಂದೆ ತಾಯಿ ಇಲ್ಲ ಅಂತ ಫಸ್ಟ್ ಟೈಮ್ ಹೇಳಿದ್ದೀನಿ
"ಮಾದೇಶ ಆಡಿಯೋ ಕರೆಕ್ಷನ್ ಮಾಡುವಾಗ ನಮ್ಮ ಟೀಮ್ ಇಡೀ ಸಿನಿಮಾವನ್ನು ನೋಡಿದ್ವಿ. ಸಿನಿಮಾವನ್ನು ಸಾಕಷ್ಟು ಕರೆಕ್ಷನ್ ಮಾಡಿದ್ವಿ. ಹನ್ನೆರಡುವರೆ ಅಥವಾ ಒಂದು ಗಂಟೆ ಆಗಿರಬಹುದು. ಆಗ ನನ್ನ ಬಾಯಿಯಿಂದ ಒಂದು ಮಾತು ಬರುತ್ತೆ. ಈ ಸಿನಿಮಾ ನೋಡುವುದಕ್ಕೆ ನನ್ನ ತಂದೆ ತಾಯಿ ಇಲ್ಲ ಅಂತ. ಫಸ್ಟ್ ಟೈಮ್ ಹೇಳಿದ್ದೀನಿ ನಾನು. ಯಾವ ಸಿನಿಮಾದಲ್ಲೂ ಹೇಳಿರಲಿಲ್ಲ. ಈ ಸಿನಿಮಾಗೆ ಹೇಳಿದ್ದೀನಿ. ನಮ್ಮ ತಂದೆ ಇದ್ದಿದಿದ್ರೆ ಬಂದು ಬೇಷ್ ಮಗನೆ ಅಂತ ತಬ್ಬಿಕೊಳ್ಳುತ್ತಿದ್ದರು. ನಮ್ಮ ತಾಯಿ ಆಗಿದ್ರೆ, ಗೊಳೋ ಎಂದು ಅತ್ತಿರೋರು." ಎನ್ನುತ್ತಾರೆ.


Click it and Unblock the Notifications











