ಹೆಣ್ಣು ಮಗುವಿಗೆ ಜನ್ಮ ನೀಡಿದ ಅದಿತಿ ಪ್ರಭುದೇವ; 'ನಮ್ಮನೆ ಮಹಾಲಕ್ಷ್ಮಿ' ಎನ್ನುತ ಪೋಟೊ ಶೇರ್ ಮಾಡಿದ ನಟಿ
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಯುಗಾದಿ ಹಬ್ಬದ ಈ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ಖುಷಿ ವಿಷಯವನ್ನು ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅದಿತಿ ಪ್ರಭುದೇವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೇ ವಿಷಯವನ್ನು ಹೊಸ ವರ್ಷದ ಈ ಶುಭ ದಿನದಂದು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
2022ರಲ್ಲಿ ಅದಿತಿ ಪ್ರಭುದೇವ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಾಫಿ ಬೆಳಗಾರ ಹಾಗೂ ಉದ್ಯಮಿ ಯಶಸ್ ಪಾಟ್ಲಾರನ್ನು ಮದುವೆ ಆಗಿದ್ದರು. ವಿವಾಹದ ಬಳಿಕವೂ ಸಿನಿಮಾಗಳಲ್ಲಿ ಆಕ್ಟಿವ್ ಆಗಿದ್ದ ನಟಿ ಇದೇ ವರ್ಷ ಜನವರಿ ತಿಂಗಳಲ್ಲಿ ಸಿಹಿ ಸುದ್ದಿಯನ್ನು ನೀಡಿದ್ದರು. ಗರ್ಭಿಣಿಯಾಗಿರುವ ವಿಷಯವನ್ನು ಬಹಿರಂಗಗೊಳಿಸಿದ್ದರು.

ಪತಿಗೆ ಈ ಖುಷಿ ವಿಷಯವನ್ನು ವಿಭಿನ್ನವಾಗಿ ತಿಳಿಸಿದ್ದರು. ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದರು. ಇದೀಗ ಇಬ್ಬರು ಮೂವರಾಗಿದ್ದಾರೆ. ಮನೆಗೆ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡಿದ್ದಾರೆ. ಈ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಶುಭಾಶಗಳನ್ನು ತಿಳಿಸುತ್ತಿದ್ದಾರೆ.
ಅಂದ ಹಾಗೆ, ಅದಿತಿ ಪ್ರಭುದೇವ ಏಪ್ರಿಲ್ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು (ಏಪ್ರಿಲ್ 9) ಶುಭ ದಿನವಾಗಿದ್ದರಿಂದ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊ ಜೊತೆಗೆ 'ನಮ್ಮನೆ ಮಹಾಲಕ್ಷ್ಮಿ' ಎಂದು ಕ್ಯಾಪ್ಷನ್ ಕೊಟ್ಟು ಸಂತಸ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಅದಿತಿ ಪ್ರಭುದೇವ ಹಾಗೂ ಯಶಸ್ ಪಾಟ್ಲಾ ಇಬ್ಬರಿಗೂ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಂದೆ-ತಾಯಿಯ ಕೈ ಮೇಲೆ ಮಗುವಿನ ಕೈ ಇಟ್ಟ ಫೋಟೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ "4.4.2024 ನಮ್ಮನೆ ಮಹಾಲಕ್ಷ್ಮಿ.. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎಂದು ಅದಿತಿ ಪ್ರಭುದೇವ ಖುಷಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಪತಿ ಯಶಸ್ ಪಾಟ್ಲಾ ಪ್ರತಿಕ್ರಿಯಿಸಿದ್ದು, "ನನ್ನ ಜೀವದ ಗೆಳತಿ ಅದಿತಿ. ನಿನ್ನ ಹಾಗೆಯೇ ನಮ್ಮ ಮಗಳು" ಸಂತಸ ಪಟ್ಟಿದ್ದಾರೆ.
ಅದಿತಿ ಪ್ರಭುದೇವ ಟಿವಿಯಿಂದ ವೃತ್ತಿ ಬದುಕನ್ನು ಆರಂಭಿಸಿದ್ದರು. ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ವಾರವಷ್ಟೇ ಅದಿತಿ ಪ್ರಭುದೇವ ನಟನೆಯ 'ಮ್ಯಾಟ್ನಿ' ಸಿನಿಮಾ ತೆರೆಕಂಡಿತ್ತು. ಸದ್ಯಕ್ಕೀಗ ಕೌಟುಂಬಿಕ ಜೀವನದ ಕಡೆಗೆ ಗಮನ ಹರಿಸಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಸಿನಿಮಾಗೆ ಮರಳುವ ಸಾಧ್ಯತೆಯಿದೆ.


Click it and Unblock the Notifications











