ಪ್ರಿಯಕರನಿಂದ ಮೋಸ: ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ನಟಿ
ಪ್ರಿಯಕರನಿಂದ ವಂಚನೆಗೆ ಒಳಗಾದ ನಟಿ ಚಂದನಾ (29) ವಿಷ ಸೇವನೆಯ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದಿದೆ.
Recommended Video
ಕಿರುತೆರೆ, ಸಿನಿಮಾ ಮತ್ತು ಕೆಲವು ಜಾಹೀರಾತುಗಳಲ್ಲಿ ಚಂದನಾ ನಟಿಸಿದ್ದರು ಎನ್ನಲಾಗಿದೆ, ತಾವರಕೆರೆಯ ಕೃಷ್ಣಮೂರ್ತಿ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಮೇ 28ರಂದು ಈ ಘಟನೆ ನಡೆದಿದ್ದು, ಈಗ ಬೆಳಕಿಗೆ ಬಂದಿದೆ.
ಚಂದನಾ ಅವರು ಆತ್ಮಹತ್ಯೆಗಾಗಿ ವಿಷ ಸೇವನೆ ಮಾಡಿದ್ದು ಅವರ ಪ್ರಿಯಕರ ದಿನೇಶ್ ಅವರಿಗೆ ಗೊತ್ತಾಗಿ, ಸ್ಥಳಕ್ಕೆ ಧಾವಿಸಿದ್ದರು ಎನ್ನಲಾಗಿದೆ. ವಿಷ ಸೇವಿಸಿ ಅಸ್ವಸ್ಥರಾದ ಚಂದನಾ ಅವರನ್ನು ದಿನೇಶ್ ಅವರೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರಿಯತಮೆಯ ಸಾವಿನ ಬಳಿಕ ದಿನೇಶ್ ನಾಪತ್ತೆಯಾಗಿದ್ದಾರೆ. ಸದ್ದುಗುಂಟೆ ಪೊಲೀಸ್ ಠಾಣೆಯಲ್ಲಿ ದಿನೇಶ್ ವಿರುದ್ಧ ದೂರು ದಾಖಲಾಗಿದೆ. ಮುಂದೆ ಓದಿ...

ಐದು ವರ್ಷಗಳ ಪ್ರೀತಿ
ದಿನೇಶ್ ಅವರು ಚಂದನಾರಿಂದ ಅನೇಕ ಬಾರಿ ಹಣ ಪಡೆದುಕೊಂಡಿದ್ದರು. ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿಯೂ ಬಳಸಿಕೊಂಡಿದ್ದರು. ಐದು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ದಿನೇಶ್ ಅವರು ತಮ್ಮನ್ನು ವಂಚಿಸುತ್ತಿರುವುದು ತಿಳಿದು ಬೇಸರಗೊಂಡ ಚಂದನಾ, ಜೆ.ಪಿ. ನಗರದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸೆಲ್ಫಿ ವಿಡಿಯೋದ ಜತೆಗೆ ಡೆತ್ ನೋಟ್ ಕೂಡ ಬರೆದಿಟ್ಟಿದ್ದರು ಎನ್ನಲಾಗಿದೆ.

ಹಾಸನದ ಮೂಲ
ಚಂದನಾ ಅವರು ಹಾಸನದ ಬೇಲೂರು ಮೂಲದವರು. 'ಯಾರ ಜೀವನದಲ್ಲಿಯೂ ಆಟವಾಡಬೇಡಿ. ಇಷ್ಟುದಿನ ಏನೇ ಮಾಡಿದರೂ ನಿಮ್ಮನ್ನು ಮದುವೆಯಾಗಬೇಕು ಎಂದು ಮಾಡಿದ್ದೆ ಹೊರತು ಬೇರೇನೂ ಅಲ್ಲ' ಎಂದು ಅಳುತ್ತಾ ಅವರು ವಿಷ ಸೇವಿಸಿದ್ದಾರೆ. 'ಇಷ್ಟು ವಿಷ ಕುಡಿದಿದ್ದೇನೆ. ನಾನು ಸಾಯಲು ಇಷ್ಟು ಸಾಕು ಎನಿಸುತ್ತದೆ. ನೀವು ಖುಷಿಯಾಗಿರಿ' ಎಂದಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಮದುವೆಯಾಗಲು ಹಣ ನೀಡುವಂತೆ ಕೇಳಿದ್ದ
ಚಂದನಾ ಅವರಿಗೆ ದಿನೇಶ್ ಲಕ್ಷಾಂತರ ರೂ ವಂಚನೆ ಮಾಡಿದ್ದರು ಎನ್ನಲಾಗಿದೆ. ಬಾಷ್ ಕಂಪೆನಿಯ ಉದ್ಯೋಗಿಯಾಗಿರುವ ದಿನೇಶ್, ತಮ್ಮ ಶೋಕಿಗಾಗಿ ಹಣ ಪಡೆದುಕೊಳ್ಳುತ್ತಿದ್ದರು. ಮದುವೆಯಾಗು ಎಂದು ಕೇಳಿದಾಗ ಹಣ ತರುವಂತೆ ಹೇಳಿದ್ದ. ಐದು ಲಕ್ಷ ರೂ ಬೇಕೆಂದು ಆಕೆ ಮನೆಯಲ್ಲಿ ಕೇಳಿದ್ದರು. ರೈತ ಕುಟುಂಬದ ಪೋಷಕರು, ಮದುವೆಯಾಗಿ ಆಮೇಲೆ ಹಣ ಕೊಡುತ್ತೇವೆ ಎಂದಿದ್ದರು. ಆದರೆ ಇದಕ್ಕೆ ದಿನೇಶ್ ಒಪ್ಪಿರಲಿಲ್ಲ ಎನ್ನಲಾಗಿದೆ.

ಚಂದನಾ ನಡತೆ ಬಗ್ಗೆ ಕೀಳು ಮಾತು
ಮದುವೆಯಾಗುವುದಾಗಿ ನಂಬಿಸಿ ಚಂದನಾ ಅವರನ್ನು ಎಲ್ಲ ರೀತಿಯಲ್ಲಿಯೂ ಬಳಸಿಕೊಂಡಿದ್ದ. ಯಡವಟ್ಟು ಆದಾಗ ಗರ್ಭಪಾತ ಕೂಡ ಮಾಡಿಸಿದ್ದ ಎನ್ನಲಾಗಿದೆ. ದಿನೇಶ್ ಮನೆಗೆ ತೆರಳಿ ಮನವಿ ಮಾಡಿದಾಗ ಆತನ ಪೋಷಕರು ಕೆಟ್ಟದಾಗಿ ಬೈದಿದ್ದರು. ಚಂದನಾ ಅವರ ನಡತೆ ಬಗ್ಗೆ ಕೀಳಾಗಿ ಮಾತಾಡಿದ್ದರು. ಚಂದನಾ ಅವರ ಮನೆಗೆ ಬಂದು ಕೂಗಾಡಿದ್ದರು ಎಂದು ಚಂದನಾ ಸಂಬಂಧಿಕರು ಆರೋಪಿಸಿದ್ದಾರೆ.

ಧೈರ್ಯಶಾಲಿ ಹುಡುಗಿ
ನಮಗೆ ಈ ಪ್ರೀತಿಯ ವಿಚಾರ ಗೊತ್ತಿರಲಿಲ್ಲ. ಹುಡುಗಿ ಮುಚ್ಚಿಟ್ಟಿದ್ದಳು. ಹದಿನೈದು ದಿನದ ಹಿಂದಷ್ಟೇ ಗೊತ್ತಾಗಿದ್ದು. ಐದು ವರ್ಷದಲ್ಲಿ ಬೇಕಾದಂತೆ ಬಳಸಿಕೊಂಡಿದ್ದಾನೆ. ಮೋಸಕ್ಕೊಳಗಾಗಿ ದುಃಖದಲ್ಲಿರುವುದರ ಬಗ್ಗೆ ನಮ್ಮೊಂದಿಗೆ ಹೇಳಿಕೊಂಡಿರಲಿಲ್ಲ. ಒಳಗೇ ನೋವು ಅನುಭವಿಸುತ್ತಿದ್ದಳು. ಆಕೆಗೆ ಸಮಾಧಾನಪಡಿಸಿದ್ದೆವು. ಆಕೆ ಬಹಳ ಧೈರ್ಯಶಾಲಿ ಮತ್ತು ಬೋಲ್ಡ್ ಹುಡುಗಿ. ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದು ಊಹಿಸಿರಲಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ.


Click it and Unblock the Notifications











