ಹೆಣ್ಣು ಮಗುವಿಗೆ ಜನ್ಮ ನೀಡಿದ ಕನ್ನಡದ ನಟಿ ಪ್ರಣಿತಾ ಸುಭಾಷ್
ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಕೆಲವು ದಿನಗಳ ಹಿಂದಷ್ಟೇ ಬೇಬಿ ಬಂಪ್ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಟಿ ತಾಯ್ತನದ ಸಂಭ್ರಮವನ್ನು ಎದುರು ನೋಡುತ್ತಿದ್ದರು. ನಟಿ ಪ್ರಣಿತಾ ಸುಭಾಷ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಪ್ರಣಿತಾ ಸುಭಾಷ್ ಈ ಸಂಭ್ರಮ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಸಂಗತಿಯನ್ನು ತಿಳಿಸಿದ್ದಾರೆ. ಇದೇ ವೇಳೆ ಹೆರಿಗೆ ಮಾಡಿಸಿದ ವೈದ್ಯರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸ್ತ್ರೀ ರೋಗ ತಜ್ಞೆಯಾಗಿರುವ ಅಮ್ಮನಿಗೆ ಧನ್ಯವಾದ
" ನಮಗೆ ಹೆಣ್ಣು ಮಗು ಜನಿಸಿದ ಘಳಿಗೆಯಿಂದಲೂ ಕಳೆದ ಕೆಲವು ದಿನಗಳು ಅತಿವಾಸ್ತವಿಕ ಅಂತ ಅನಿಸುತ್ತಿದೆ. ನಾನು ಸ್ತ್ರೀ ರೋಗ ತಜ್ಞೆಯಾಗಿರುವ ಅಮ್ಮನನ್ನು ಪಡೆದಿರುವುದಕ್ಕೆ ಅದೃಷ್ಟವಂತೆ. ಆದರೆ, ಅವರಿಗೂ ಭಾವನಾತ್ಮಕವಾಗಿ ಇದು ತುಂಬಾ ಕಠಿಣವಾದ ಸಮಯವಾಗಿತ್ತು." ಎಂದು ಪ್ರಣಿತಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

"ಡಾ. ಸುನಿಲ್ ಈಶ್ವರ್ ಹಾಗೂ ಅವರ ತಂಡ ನನ್ನ ಹೆರಿಗೆಯನ್ನು ಕಷ್ಟಕರವಲ್ಲದಂತೆ ನೋಡಿಕೊಂಡರು. ಅರವಳಿಕೆ ತಜ್ಞರಾದ ಡಾ ಸುಬ್ಬು ಹಾಗೂ ಅವರ ತಂಡಕ್ಕೂ ಧನ್ಯವಾದ. ಅವರಿಂದ ಹೆರಿಗೆ ಸಮಯದಲ್ಲಿ ಕಡಿಮೆ ನೋವು ಅನುಭವಿಸುವಂತಾಯಿತು. ನಿಮ್ಮೊಂದಿಗೆ ನನ್ನ ಜನ್ಮದ ಕಥೆಯನ್ನು ನಿಮ್ಮೊಂದಿಗೆ ಹೇಳುವುದನ್ನು ತಡೆಯಲು ಆಗುತ್ತಿಲ್ಲ." ಎಂದು ಪ್ರಣಿತಾ ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಉದ್ಯಮಿಗಳನ್ನು ವಿವಾಹವಾಗಿದ್ದ ಪ್ರಣಿತಾ
ಕನ್ನಡ ಸಿನಿಮಾ ವೃತ್ತಿ ಆರಂಭಿಸಿದ್ದರೂ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲೂ ನಟಿಸಿದ್ದರು. ಕೊರೊನಾ ಸಮಯದಲ್ಲಿ ಪ್ರಣಿತಾ ಸುಭಾಷ್ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಪ್ರಣಿತಾ ಹಲವು ದಿನಗಳಿಂದ ಪ್ರೀತಿಸುತ್ತಿದ್ದ ಉದ್ಯಮಿ ನಿತಿನ್ ರಾಜು ಅವರನ್ನು ಹಿರಿಯರ ಸಮ್ಮತಿ ಪಡೆದು ಮದುವೆಯಾಗಿದ್ದರು.

ಕೆಲವು ದಿನಗಳ ಹಿಂದಷ್ಟೇ ಪ್ರಣಿತಾ ಬೇಬಿ ಬಂಪ್ ಫೋಟೊಶೂಟ್ ಮಾಡಿಸಿದ್ದರು. ಈ ಫೋಟೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದರೊಂದಿಗೆ ಪೋಷಕರಾಗುತ್ತಿರುವ ವಿಷಯವನ್ನೂ ವಿಭಿನ್ನವಾಗಿಯೇ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು. ಕನ್ನಡ ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಫುಲ್ ಖುಷಿಯಾಗಿದ್ದಾರೆ.


Click it and Unblock the Notifications











