ನಟಿ ಪ್ರೇಮ ಅಭಿನಯದ ಸಿನಿಮಾ 'ವೆಡ್ಡಿಂಗ್ ಗಿಫ್ಟ್' ಸಿನಿಮಾ ಫಿನಿಶ್: ಬಿಡುಗಡೆ ಯಾವಾಗ?
ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್ ಸಕ್ಸಸ್ ಫುಲ್ ನಟಿಯಾಗಿ ಗುರುತಿಸಿಕೊಂಡಿದ್ದ ನಟಿ ಪ್ರೇಮಾ. ಆದರೆ, ವಿವಾಹದ ಬಳಿಕ ಸಿನಿಮಾಗಳಿಂದ ನಟಿ ಪ್ರೇಮಾ ಹಿಂದೆ ಸರಿದಿದ್ದರು. 'ಸವ್ಯಸಾಚಿ'ಯಿಂದ ಸಿನಿಮಾ ಪಯಣ ಆರಂಭಿಸಿದ ಪ್ರೇಮಾ ಎರಡನೇ ಸಿನಿಮಾಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡು ಗಮನ ಸೆಳೆದಿದ್ದರು. ಉಪೇಂದ್ರ ನಿರ್ದೇಶಿಸಿದ್ದ 'ಓಂ' ಸಿನಿಮಾ ಪ್ರೇಮಾ ವೃತ್ತಿ ಬದುಕಿಗೆ ಹೊಸ ತಿರುವು ನೀಡಿತ್ತು. ಶಿವಣ್ಣ ಹಾಗೂ ಪ್ರೇಮಾ ಜೋಡಿಗೆ ಸಿನಿಪ್ರಿಯರು ಜೈ ಅಂದಿದ್ದರು.
ಅಂದು ಪ್ರೇಮಾ ನಟಿಸಿದ ಸಿನಿಮಾಗಳು ಇಂದಿಗೂ ಜನರ ಮಾನಸದಲ್ಲಿ ಉಳಿಸಿವೆ. ನಮ್ಮೂರ ಮಂದಾರ ಹೂವೇ, ತುತ್ತಾಮುತ್ತಾ, ಚಂದ್ರಮುಖಿ ಪ್ರಾಣಸಖಿಯಂತಹ ಸಿನಿಮಾಗಳು ಪ್ರೇಮಗೆ ವೃತ್ತಿ ಬದುಕಿಗೆ ಹೊಸ ತಿರುವು ನೀಡಿತ್ತು. 2009ರಿಂದ ಪ್ರೇಮಾ ಸಿನಿಮಾಗಳಿಂದ ದೂರ ಉಳಿದಿದ್ದರು. ಆದರೆ, ಬಣ್ಣ ಹಚ್ಚಿ ಸ್ಯಾಂಡಲ್‌ವುಡ್‌ಗೆ ಮರಳಿದ್ದರೂ ದಿನ ನೆಲೆಯೂರಲಿಲ್ಲ. ಈಗ ನಾಲ್ಕು ವರ್ಷಗಳ ಬಳಿಕ ಪ್ರೇಮಾ 'ವೆಡ್ಡಿಂಗ್ ಗಿಫ್ಟ್' ಅನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರೇಮಾ ನಟಿಸಿದ 'ವೆಡ್ಡಿಂಗ್ ಗಿಫ್ಟ್' ಸಿನಿಮಾ ಮುಕ್ತಾಯ
4 ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಕಾಣಿಸಿಕೊಂಡಿರುವ ಪ್ರೇಮಾ ವಕೀಲೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ಆರಂಭ ಆಗಿದ್ದ ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿದೆ. ಅಂದುಕೊಂಡಿದ್ದಕ್ಕಿಂತ ಮೊದಲೇ 'ವೆಡ್ಡಿಂಗ್ ಗಿಫ್ಟ್' ಸಿನಿಮಾ ಶೂಟಿಂಗ್ ಮುಗಿದಿದೆ. ವಿಭಿನ್ನ ಪಾತ್ರದಲ್ಲಿ ನಟಿಸಿರುವ ನಟಿ ಪ್ರೇಮಾ ಕಮ್ ಬ್ಯಾಕ್ ಸಿನಿಮಾ ಸಿನಿಪ್ರಿಯರು ಕಾದು ಕೂತಿದ್ದಾರೆ.

ಸಿನಿಮಾ ಮುಕ್ತಾಯಗೊಂಡಿರುವ ಬಗ್ಗೆ ಚಿತ್ರತಂಡ ಪತ್ರಿಕಾಗೋಷ್ಟಿ ನಡೆಸಿತ್ತು. ಈ ವೇಳೆ ಶೂಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. 'ಕಥೆ ಕೇಳಿ ವಿಭಿನ್ನ ಸಿನಿಮಾ ಅಂತ ಅನಿಸಿತು. ಇದೇ ಮೊದಲ ಬಾರಿಗೆ ಲಾಯರ್ ಪಾತ್ರದಲ್ಲಿ ನಟಿಸಿದ್ದೇನೆ. ನಾನು ಸಾಮಾನ್ಯವಾಗಿ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಪಾತ್ರ ಉತ್ತಮವಾಗಿದ್ದರಷ್ಟೇ ಒಪ್ಪಿಕೊಳ್ಳುತ್ತೇನೆ. ಈ ಚಿತ್ರದ ಕಥೆ ಬಗ್ಗೆ ಒಂದೆಳೆ ಹೇಳಿದ್ದರು. ಹೀಗಾಗಿ ಉತ್ತಮ ಸಂದೇಶವಿರುವ ಚಿತ್ರದಲ್ಲಿ ನಟಿಸಿದ್ದೇನೆ ಎನ್ನುವ ಖುಷಿಯಿದೆ." ಎಂದು ನಟಿ ಪ್ರೇಮಾ ತಿಳಿಸಿದ್ದಾರೆ.
ಒಂದು ದಿನ ಮೊದಲೇ 'ವೆಡ್ಡಿಂಗ್ ಗಿಫ್ಟ್' ಸಿನಿಮಾ ಫಿನಿಶ್
'ವೆಡ್ಡಿಂಗ್ ಗಿಫ್ಟ್' ಸಿನಿಮಾವನ್ನು ವಿಕ್ರಂ ಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಡಿಸೆಂಬರ್ 31ಕ್ಕೆ ಸಿನಿಮಾ ಮುಗಿಸಬೇಕು ಎಂದುಕೊಂಡಿದ್ದ ನಿರ್ದೇಶಕರು ಒಂದು ದಿನ ಮೊದಲೇ ಸಿನಿಮಾ ಮುಗಿಸಿದ್ದಾರೆ. ಮಂಗಳೂರಿನವರಾದರೂ ಪೂಣೆಯಲ್ಲಿ ನೆಲೆಸಿರುವ ವಿಕ್ರಂ ಪ್ರಭು, ಈ ಹಿಂದೆ ಕನ್ನಡ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹದಿನೆಂಟು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ 'ಲವ್' ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಬಳಿಕ ಸ್ಯಾಂಡಲ್‌ವುಡ್‌ನಿಂದ ದೂರ ಉಳಿದಿದ್ದರು. ಈಗ 'ವೆಡ್ಡಿಂಗ್ ಗಿಫ್ಟ್' ಮೂಲಕ ಮತ್ತೆ ಚಿತ್ರರಂಗಕ್ಕೆ ವಾಪಾಸ್ ಆಗಿದ್ದಾರೆ.

ಬೆಂಗಳೂರು, ತುಮಕೂರು, ಉಡುಪಿ, ಮಂಗಳೂರು ಸೇರಿದಂತೆ ಹಲವೆಡೆ ಸುಮಾರು 37 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಗಂಡ ಹಾಗೂ ಹೆಂಡತಿ ನಡುವೆ ನಡೆಯುವ ಕಥಾಹಂದರ ಇದಾಗಿದ್ದು, ಸಕ್ಷನ್ 498 ಸಂಬಂಧಿಸಿದ ಸನ್ನಿವೇಶಗಳನ್ನು ನಿರ್ದೇಶಕರು ಚಿತ್ರದಲ್ಲಿ ಅಳವಡಿಸಿದ್ದಾರೆ. ಇವರೊಂದಿಗೆ ನಿಶಾನ್ ನಾಣಯ್ಯ ಹಾಗೂ ಸೋನುಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋನು ಗೌಡ ಈವರೆಗೂ ಇಂತಹ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಆಕಾಂಕ್ಷ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನೊಂದ ಮನಸ್ಸುಗಳಿಗೆ ಹತ್ತಿರವಾಗುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಮಾ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಖುಷಿಯಲ್ಲಿ ಚಿತ್ರತಂಡವಿದ್ದು, ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ.


Click it and Unblock the Notifications











