ರಚಿತಾ ರಾಮ್ ಬರ್ತ್‌ಡೇ ಸೆಲೆಬ್ರೆಷನ್ ಕ್ಯಾನ್ಸಲ್; "ಈ ತ್ಯಾಗ ನಮ್ಮ ಡಿ ಬಾಸ್ ಗೋಸ್ಕರ" ಎಂದ ನೆಟ್ಟಿಗರು
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಸಿನಿಮಾ, ರಿಯಾಲಿಟಿ ಶೋ ಅಂತ ಬ್ಯುಸಿಯಾಗಿದ್ದಾರೆ. ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ರಚಿತಾ ರಾಮ್ ಪ್ರತಿ ಬಾರಿ ಅಭಿಮಾನಿಗಳೊಂದಿಗೆ ಬರ್ತ್‌ಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಮಾತ್ರ ಅವರ ಡೈ ಹಾರ್ಡ್ ಫ್ಯಾನ್ಸ್‌ಗೆ ನಿರಾಸೆ ಮಾಡಿದ್ದಾರೆ.
ರಚಿತಾ ರಾಮ್ ಅಕ್ಟೋಬರ್ 3ನೇ ತಾರೀಕಿನಂದು 32ನೇ ವಸಂತಕ್ಕೆ ಕಾಲಿಡಲಿದ್ದಾರೆ. ತಮ್ಮ ನೆಚ್ಚಿನ ನಟಿಯೊಂದಿಗೆ ಹುಟ್ಟುಹಬ್ಬವನ್ನು ಆಚರಣೆ ಮಾಡಬೇಕು ಅಂತ ಅಭಿಮಾನಿಗಳು ನಿರ್ಧರಿಸಿದ್ದರು. ಆದರೆ, ಆ ಆಸೆ ಈ ಬಾರಿ ನೆರೆವೇರುತ್ತಿಲ್ಲ. ಸ್ವತ: ಡಿಂಪಲ್ ಕ್ವೀನ್ ರಚಿತಾ ರಾಮ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿಯೇ ಬರೆದುಕೊಂಡಿದ್ದಾರೆ.

ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ರಚಿತಾ ರಾಮ್ ತಮ್ಮ ಅಭಿಮಾನಿಗಳಿಗೆ ಸಂದೇಶ ಕೊಟ್ಟಿದ್ದಾರೆ. ಈ ಫೋಸ್ಟ್ ಅವರ ಫ್ಯಾನ್ಸ್‌ಗೆ ಬೇಸರ ತರಿಸಿದ್ದರೂ, ಭಾನುವಾರ ಭೇಟಿ ಮಾಡುತ್ತೇನೆ ಎಂದು ಹೇಳಿದ್ದು ಸಮಾಧಾನ ತಂದಿದೆ. ಅಷ್ಟಕ್ಕೂ ದರ್ಶನ್ ಸಲುವಾಗಿಯೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಅನ್ನೋದನ್ನು ಅರಿತಿರುವ ಫ್ಯಾನ್ಸ್ ಕೂಡ ಹಾಗೇ ಕಾಮೆಂಟ್ ಮಾಡುತ್ತಿದ್ದಾರೆ.
ರಚಿತಾ ರಾಮ್ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದರೆ, ಅವರ ಮನೆಯ ಮುಂದೆ ಅಭಿಮಾನಿಗಳು ಹಾಗೂ ಸಿನಿಮಾ ಮಂದಿ ತುಂಬಿ ತುಳುಕುತ್ತಿದ್ದರು. ಆದರೆ, ಈ ಬಾರಿ ತಮ್ಮ ಗಾಡ್‌ಫಾದರ್ ಜೈಲಿನಲ್ಲಿರುವಾಗ ರಚಿತಾಗೆ ಬರ್ತ್‌ಡೇ ಸೆಲೆಬ್ರೆಷನ್ ಬೇಡ ಅಂತ ಅನಿಸಿದೆ. ಹೀಗಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಆ ಪೋಸ್ಟ್ ಹೀಗಿದೆ.
"ಎಲ್ಲರಿಗೂ ನಮಸ್ಕಾರ, ಎಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತಾ, ಈ ಬಾರಿ ಚಿತ್ರೀಕರಣ ಇರುವುದರಿಂದ ನನ್ನ ಹುಟ್ಟುಹಬ್ಬದ (ಅಕ್ಟೋಬರ್ 3) ಆಚರಣೆಯನ್ನು ನಾನು ಮಾಡಿಕೊಳ್ಳುತ್ತಿಲ್ಲ ಎಂದು ಹೇಳಲು ಇಚ್ಛಿಸುತ್ತೇನೆ. ಎಲ್ಲರಿಗೂ ಕ್ಷಮೆಯಾಚಿಸುತ್ತಾ ಎಂದಿನಂತೆ ಪ್ರತಿ ಭಾನುವಾರ ಚಿತ್ರೀಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ. ನಿಮ್ಮ ಪ್ರೀತಿಯ ರಚ್ಚು" ಎಂದು ತಮ್ಮ ಅಭಿಮಾನಿಗಳಿಗೆ ಸಂದೇಶವನ್ನು ಇನ್‌ಸ್ಟಾ ಪೋಸ್ಟ್ ಮೂಲಕ ನೀಡಿದ್ದಾರೆ.
ರಚಿತಾ ರಾಮ್ ಹಾಕಿದ ಈ ಪೋಸ್ಟ್ ಹೊರ ಬೀಳುತ್ತಿದ್ದಂತೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಈ ತ್ಯಾಗ ನಮ್ಮ ಡಿ ಬಾಸ್ ಗೋಸ್ಕರ. ರಚಿತಾ ಹುಟ್ಟುಹಬ್ಬ ಆಚರಣೆ ಮಾಡಲ್ಲ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನು ಕೆಲವರು "ಅಡ್ವಾನ್ಸ್ ಹ್ಯಾಪಿ ಬರ್ತಡೇ" ಎಂದು ಡಿಂಪಲ್ ಕ್ವೀನ್‌ಗೆ ವಿಶ್ ಮಾಡುತ್ತಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ರಚಿತಾ ರಾಮ್ ಈ ಬೆಳವಣಿಗೆಯಿಂದ ಬೇಸರದಲ್ಲಿದ್ದಾರೆ. ತಮ್ಮನ್ನು ಚಿತ್ರರಂಗಕ್ಕೆ ಕರೆದುಕೊಂಡು ಬಂದ ದರ್ಶನ್‌ರನ್ನು ಗಾಡ್ ಫಾದರ್ ಅಂತಲೇ ಭಾವಿಸಿದ್ದಾರೆ. ಸದ್ಯ ಗಾಡ್ ಫಾದರ್ ಜೈಲಿನಲ್ಲಿ ಇರುವ ಈ ಸಂದರ್ಭದಲ್ಲಿ ಹೊರಗಡೆ ತನ್ನ ಹುಟ್ಟುಹಬ್ಬದ ಸಂಭ್ರಮಾಚರಣೆ ಸರಿಯಿಲ್ಲವೆಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ, ಪೋಸ್ಟ್‌ನಲ್ಲಿ ಚಿತ್ರೀಕರಣದ ಕಾರಣ ನೀಡಿದ್ದು, ಅಭಿಮಾನಿಗಳು ಡಿಕೋಡ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ರಚಿತಾ ರಾಮ್ ಕೈಯಲ್ಲಿ ಹಲವು ಸಿನಿಮಾಗಳಿವೆ. ನಾಗಶೇಖರ್ ನಿರ್ದೇಶಿಸಿದ 'ಸಂಜು ವೆಡ್ಸ್ ಗೀತಾ 2' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ರಚಿತಾ ರಾಮ್‌ಗೆ ಶ್ರೀನಗರ ಕಿಟ್ಟಿ ನಾಯಕನಾಗಿ ನಟಿಸಿದ್ದಾರೆ. ಇತ್ತೀಚೆಗೆ 'ಕಲ್ಟ್' ಸಿನಿಮಾ ಅನೌನ್ಸ್ ಆಗಿದೆ. ಇದು ಜಹೀದ್ ಖಾನ್ ನಾಯಕನಾಗಿ ನಟಿಸುತ್ತಿರುವ ಎರಡನೇ ಸಿನಿಮಾ. ಇದರ ಜೊತೆಗೆ 'ಶಬರಿ ಸರ್ಚಿಂಗ್ ಫಾರ್ ರಾವಣ', 'ಲವ್ ಮಿ ಔರ್ ಹೇಟ್ ಮಿ' ಸಿನಿಮಾದ ಶೂಟಿಂಗ್ ಕೂಡ ಮುಗಿದಿದೆ.


Click it and Unblock the Notifications











