ದರ್ಶನ್ 'ಡೆವಿಲ್' ಸಾಂಗ್ ಶೇರ್ ಮಾಡಿ ಸಂಭ್ರಮಿಸಿದ ಸ್ಯಾಂಡಲ್‌ವುಡ್ ಸ್ಟಾರ್‌ಗಳ್ಯಾರು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಡೆವಿಲ್' ಸಿನಿಮಾದ ಮೊದಲ ಸಾಂಗ್ ಹೊರಬಿದ್ದಿದೆ. ಫಸ್ಟ್ ಸಾಂಗ್‌ಗೆ ಅವರ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ದರ್ಶನ್ ಜೈಲಿನಲ್ಲಿ ಇದ್ದರೂ ಹಾಡನ್ನು ಸೂಪರ್ ಹಿಟ್ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಕಂಪೋಸ್ ಮಾಡಿರುವ "ಇದ್ರೆ ನೆಮ್ಮದಿಯಾಗ್ ಇರ್ಬೇಕ್" ಅನ್ನೋ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೇವಲ 7 ಗಂಟೆಗಳಲ್ಲಿ 5.1 ಮಿಲಿಯನ್ ಮಂದಿ ಹಾಡನ್ನು ವೀಕ್ಷಣೆ ಮಾಡಿದ್ದಾರೆ.
ದರ್ಶನ್ ಅಭಿಮಾನಿಗಳು ಇದೊಂದು ಕ್ಷಣವನ್ನು ಎದುರು ನೋಡುತ್ತಿದ್ದರು. ತಮ್ಮ ನೆಚ್ಚಿನ ನಟನ ಸಂಕಷ್ಟದಲ್ಲಿ ಇದ್ದರೂ ಅಭಿಮಾನಿಗಳು ಕೈ ಬಿಟ್ಟಿಲ್ಲ. 'ಡೆವಿಲ್' ಹಾಡನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಶೇರ್ ಮಾಡಿದ್ದಾರೆ. ಎಕ್ಸ್, ಇನ್‌ಸ್ಟಾಗ್ರಾಂನಲ್ಲಿ ಡೆವಿಲ್, ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಅನ್ನೋ ಹ್ಯಾಶ್ ಟ್ಯಾಗ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನೊಂದು ಕಡೆ ದರ್ಶನ್ ಜೈಲಿನಿಂದ ಬಂದ್ಮೇಲೆ ಸೈಲೆಂಟ್ ಆಗಿದ್ದ ತಾರೆಯರು ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ದರ್ಶನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸ್ಟಾರ್‌ಗಳು ಕೂಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ಡೆವಿಲ್' ಸಿನಿಮಾದ ಸಾಂಗ್ ಹಾಗೂ ರಿಲೀಸ್ ಡೇಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗಿದ್ದರೆ, ಯಾರೆಲ್ಲ ಶೇರ್ ಮಾಡಿದ್ದಾರೆ? ಸೈಲೆಂಟ್ ಆಗಿದ್ದವರು ಆಕ್ಟಿವ್ ಆದವರು ಯಾರು? ಅನ್ನೋದನ್ನು ನೋಡೋಣ.
ಮೇಘಾ ಶೆಟ್ಟಿ- ರಚಿತಾ ರಾಮ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳತಿ ಪವಿತ್ರಾ ಗೌಡ ಜೊತೆ ಗುರುತಿಸಿಕೊಂಡವರಲ್ಲಿ ಮೇಘಾ ಶೆಟ್ಟಿ ಕೂಡ ಒಬ್ಬರು. ಆದರೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಕಾಣಿಸಿಕೊಂಡ ಬಳಿಕ ಮೇಘಾ ಶೆಟ್ಟಿ ಸೈಲೆಂಟ್ ಆಗಿದ್ದರು. ಇಬ್ಬರ ಬಗ್ಗೆ ಒಂದೇ ಒಂದು ರಿಯಾಕ್ಷನ್ ಕೂಡ ಕೊಟ್ಟಿರಲಿಲ್ಲ. ಇನ್ನೊಂದು ಕಡೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ದರ್ಶನ್‌ಗೆ ಆತ್ಮೀಯರಾಗಿದ್ದವರನ್ನು ದೂರವಿಟ್ಟಿರುವ ಬಗ್ಗೆ ಸುದ್ದಿ ಓಡಾಡಿತ್ತು. ಆದ್ರೀಗ ಮೇಘಾ ಶೆಟ್ಟಿ 'ಡೆವಿಲ್' ಸಿನಿಮಾ ಸಾಂಗ್ ಹಾಗೂ ರಿಲೀಸ್ ಡೇಟ್ ಪೋಸ್ಟರ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡು, ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.
ಇದೇ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋದಾಗಿನಿಂದ ರಚಿತಾ ರಾಮ್ ಬೆಂಬಲಕ್ಕೆ ನಿಂತಿದ್ದರು. ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ದರ್ಶನ್‌ಗೆ ಸಪೋರ್ಟ್ ಮಾಡಿದ್ದರು. ಈಗಲೂ ಕೂಡ 'ಡೆವಿಲ್' ಸಾಂಗ್ ರಿಲೀಸ್ ಆಗುತ್ತಿದ್ದಂತೆ ರಚಿತಾ ರಾಮ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸೋನಾಲ್- ತರುಣ್ ಸುಧೀರ್
ಸೋನಾಲ್ ಮಾಂಟೇರೋ ಹಾಗೂ ತರುಣ್ ಸುಧೀರ್ ಇಬ್ಬರೂ ದರ್ಶನ್‌ಗೆ ಆತ್ಮೀಯರು ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ದರ್ಶನ್‌ಗೆ ತರುಣ್ ಸುಧೀರ್ ಸಿಕ್ಕಾಪಟ್ಟೆ ಆತ್ಮೀಯರು. 'ಚೌಕ', 'ರಾಬರ್ಟ್', 'ಕಾಟೇರ' ಸಿನಿಮಾಗಳ ಬಳಿಕ ಇವರ ಆತ್ಮೀಯತೆ ಇನ್ನಷ್ಟು ಬೆಳೆಯಿತು. ತರುಣ್ ಹಾಗೂ ಸೋನಾಲ್ ಮದುವೆಯನ್ನು ಖುದ್ದಾಗಿ ದರ್ಶನ್ ಅವರೇ ಮಾಡಿಸಬೇಕಿತ್ತು. ಅಷ್ಟರಲ್ಲಿ ಇಷ್ಟೆಲ್ಲ ನಡೆದು ಹೋಗಿತ್ತು. ಹೀಗಾಗಿ ಈ ಜೋಡಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಸಾಂಗ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.

ರಕ್ಷಿತಾ ಪ್ರೇಮ್- ಧನ್ವೀರ್
ಇನ್ನು ರಕ್ಷಿತಾ ಪ್ರೇಮ್ ಹಾಗೂ ದರ್ಶನ್ ಇಬ್ಬರೂ ಬೆಸ್ಟ್ ಫ್ರೆಂಡ್ಸ್. 'ಕಲಾಸಿಪಾಳ್ಯ' ಸಿನಿಮಾದಿಂದ ಇವರ ಸ್ನೇಹ ಮತ್ತಷ್ಟು ಗಟ್ಟಿಯಾಗುತ್ತಾ ಹೋಯ್ತು. ದರ್ಶನ್ ಮೊದಲ ಬಾರಿಗೆ ಜೈಲಿಗೆ ಹೋದಾಗಾ ರಕ್ಷಿತಾ ಹಾಗೂ ಪ್ರೇಮ್ ಇಬ್ಬರೂ ಜೈಲಿಗೆ ವಿಸಿಟ್ ಹಾಕಿ ದರ್ಶನ್ ಅವರನ್ನು ವಿಚಾರಿಸಿಕೊಂಡು ಬಂದಿದ್ದರು. ಈಗ ದರ್ಶನ್ ಸಿನಿಮಾ 'ಡೆವಿಲ್' ಮೊದಲ ಹಾಡು ರಿಲೀಸ್ ಆಗುತ್ತಿದಂತೆ ಇವರೂ ಕೂಡ ಇನ್‌ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ರಕ್ಷಿತಾ ಪ್ರೇಮ್ ಜೊತೆ ದರ್ಶನ್ ಹತ್ತಿರದಲ್ಲಿರುವ ಮತ್ತೊಬ್ಬ ನಟ ಧನ್ವೀರ್. ಇವರ ಕೂಡ ಇನ್‌ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.
ಟೀಸರ್-ಟ್ರೈಲರ್ ಯಾವಾಗ?
ಗೌರಿ-ಗಣೇಶ ಹಬ್ಬಕ್ಕೂ ಮುನ್ನ 'ಡೆವಿಲ್' ಸಿನಿಮಾದ ಹಾಡು ರಿಲೀಸ್ ಮಾಡಿದ್ದಾರೆ. ಹಾಗೇ ವಿಜಯ ದಶಮಿ ಹಬ್ಬಕ್ಕೆ 'ಡೆವಿಲ್' ಸಿನಿಮಾದ ಟೀಸರ್ ರಿಲೀಸ್ ಮಾಡಿ, ದೀಪಾವಳಿ ಹಬ್ಬಕ್ಕೆ ಟ್ರೈಲರ್ ರಿಲೀಸ್ ಅಥವಾ ಆಡಿಯೋ ಇವೆಂಟ್ ಮಾಡುವ ಆಲೋಚನೆ ಇದೆಯಂತೆ. ಇಂತಹದ್ದೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಸದ್ಯ ದರ್ಶನ್ ಅಭಿಮಾನಿಗಳು ಮೊದಲ ಹಾಡಿನ ಗುಂಗಿನಲ್ಲಿ ಇದ್ದಾರೆ.


Click it and Unblock the Notifications











