ವೈಷ್ಣವಿಗೌಡಗೆ ಒಟ್ಟೊಟ್ಟಿಗೆ ಅಳು ನಗು ಬರ್ತಿದ್ಯಂತೆ: ಎಲ್ಲಾ ಡಿಲೇರಿಯಂ ಫೋಬಿಯಾ ಪ್ರಭಾವ
ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ ಇತ್ತೀಚೆಗೆ ಸ್ಮಾಲ್ ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡಿಲ್ಲ. ಹೊಸ ಧಾರಾವಾಹಿ ಇಲ್ಲವೆ ಯಾವುದಾದರೂ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ನಿರೀಕ್ಷೆಯಂತೆ ಸಿನಿಮಾ ಮೂಲಕ ಥಿಯೇಟರ್‌ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ವೈಷ್ಣವಿ ಗೌಡ ಅಭಿನಯದ ಹೊಸ ಸಿನಿಮಾ 'ಬಹುಕೃತ ವೇಷಂ' ಇದೇ ವಾರ ಬಿಡುಗಡೆಯಾಗಲಿದೆ.
ಧಾರಾವಾಹಿಯಲ್ಲಿ ಹೆಸರು ಮಾಡಿದ ವೈಷ್ಣವಿ ಗೌಡ ಸಿನಿಮಾ ವಿಚಾರದಲ್ಲಿ ಚ್ಯೂಸಿಯಾಗಿದ್ದಾರೆ. ಇಂತಹದ್ದೊಂದು ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. 'ಬಹುಕೃತ ವೇಷಂ' ಸಿನಿಮಾ ಇದಕ್ಕೆ ಸಾಕ್ಷಿ ಎನ್ನುತ್ತಿದೆ ಕನ್ನಡ ಚಿತ್ರರಂಗ. ಈ ಸಿನಿಮಾ ವಿಚಾರದಲ್ಲಿಯೇ ಒಂದು ಸುದ್ದಿ ಕೂಡ ಓಡಾಡುತ್ತಿದ್ದೆ. ವೈಷ್ಣವಿ 'ಬಹುಕೃತ ವೇಷಂ' ಸಿನಿಮಾ ಒಪ್ಪಿಕೊಂಡ್ಮೇಲೆ ಅಳು-ನಗು ಒಟ್ಟಿಗೆ ಬರುತ್ತಿದೆಯಂತೆ.

ವೈಷ್ಣವಿ ಗೌಡಗೆ ಅಳು-ನಗು ಒಟ್ಟಿಗೆ ಬರ್ತಿದೆ
'ಬಹುಕೃತ ವೇಷಂ' ಒಂದು ಸೈಕಾಲಜಿಕಲ್ ಸಿನಿಮಾ. ಈ ಸಿನಿಮಾದಲ್ಲಿ ವೈಷ್ಣವಿ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಕಥೆ ಡಿಲೇರಿಯಂ ಫೋಬಿಯಾ ಎನ್ನುವ ಕಾಯಿಲೆಯೊಂದನ್ನು ಆಧಾರವಾಗಿಟ್ಟುಕೊಂಡು ಹೆಣೆಯಲಾಗಿದೆ. ಈ ಚಿತ್ರದ ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ತುದಿಗಾಲಲ್ಲಿ ಕೂರುವಂತೆ ಮಾಡುತ್ತದೆಯಂತೆ. ಕ್ಲೈಮ್ಯಾಕ್ಸ್‌ಗೂ ಮುನ್ನ ನಾಲ್ಕೂವರೆ ನಿಮಿಷದ ಒಂದು ಶಾಟ್ ಇದ್ದು, ಅದರಲ್ಲಿ ವೈಷ್ಣವಿಗೌಡ ಅವರು ನಗು, ಅಳು ಸೇರಿಸಿ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರಂತೆ.

ಡಿಲೇರಿಯಂ ಫೋಬಿಯಾ ಎಂದರೇನು?
'ಬಹುಕೃತ ವೇಷಂ' ಡಿಲೇರಿಯಂ ಫೋಬಿಯಾ ಎನ್ನುವ ಕಾಯಿಲೆಯ ಮೇಲೆ ಮಾಡಿರುವ ಚಿತ್ರ. ಈ ಕಾಯಿಲೆಯ ವಿಶೇಷತೆ ಏನಂದರೆ, ಒಬ್ಬ ವ್ಯಕ್ತಿ ಅವನ ವಿರುದ್ಧ ಅವನೇ ಫೈಟ್ ಮಾಡುತ್ತಾನೆ. ಇದು ನೈಜ ಘಟನೆ ಆಧರಿಸಿದ ಸಿನಿಮಾ. ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿರುವ ಅಧ್ಯಾಯ ತೇಜ್ ಅವರ ಸ್ನೇಹಿತನೊಬ್ಬನಿಗೆ ಇಂತಹದ್ದೊಂದು ಖಾಯಿಲೆ ಇತ್ತಂತೆ. ಪ್ರತಿದಿನ ಅವನ ಮೇಲೆ ಅವನೇ ಫೈಟ್ ಮಾಡುತ್ತಿದ್ದನಂತೆ. ಇದನ್ನೇ ಸ್ನೇಹಿತ ಹಾಗೂ ಚಿತ್ರರ ನಾಯಕ ಶಶಿಕಾಂತ್ ಬಳಿ ಹೇಳಿದ್ದರು. ಆಗಲೇ ಈ ಕಥೆಯನ್ನು ಸಿನಿಮಾ ಮಾಡಲು ಒಪ್ಪಿದರು.

ನಿರ್ಮಾಪಕರು ಈ ಕಥೆ ಒಪ್ಪಿರಲಿಲ್ಲ
ಈ ಸಿನಿಮಾದ ಹೀರೋ ಶಶಿಕಾಂತ್ 2 ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಿಲೇರಿಯಂ ಫೋಬಿಯಾ ಎನ್ನುವ ವಿಚಿತ್ರ ಖಾಯಿಲೆ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. "ನಾವು ಈ ಕಥೆ ಮಾಡಿಕೊಂಡು ನಿರ್ಮಾಪಕರ ಬಳಿ ಹೋದಾಗ ಮೊದಲು ಒಪ್ಪಲಿಲ್ಲ. ಬಳಿಕ ನಮ್ಮ ಹಿಂದಿನ ಚಿತ್ರಕ್ಕೆ ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆಗಳನ್ನು ತೋರಿಸಿದಾಗ ಒಪ್ಪಿದರು. ಈ ಸಿನಿಮಾಗೆ ಕಥೆ ಬರೆಯುವಾಗ ವೈಷ್ಣವಿಗೌಡ ಅವರೇ ಸೂಕ್ತ ಅಂದುಕೊಂಡಿದ್ದೆವು." ಎಂದು ಪಾತ್ರದ ಆಯ್ಕೆ ಬಗ್ಗೆ ಮಾತಾಡಿದ್ದಾರೆ.

'ಬಹುಕೃತ ವೇಷಂ' ಸೈಕಲಾಜಿಕಲ್ ಥ್ರಿಲ್ಲರ್
'ಗೌಡ್ರು ಸೈಕಲ್' ಎನ್ನುವ ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ ನಿರ್ಮಿಸಿದ್ದ ತಂಡವೇ ಸೇರಿಕೊಂಡು 'ಬಹುಕೃತ ವೇಷಂ' ನಿರ್ಮಾಣ ಮಾಡಿದೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ಜನರು ಮೆಚ್ಚಿಕೊಳ್ಳುತ್ತಾರೆ ಎನ್ನವ ನಂಬಿಕೆಯಲ್ಲಿ ಚಿತ್ರತಂಡವಿದೆ. ಈ ಸಿನಿಮಾವನ್ನು ಪ್ರಶಾಂತ್ ಕೆ. ಎಳ್ಳಂಪಳ್ಳಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ತೆರೆಕಂಡಿದ್ದ 'ಗೌಡ್ರು ಸೈಕಲ್' ಚಿತ್ರಕ್ಕೂ ಇವರೇ ನಿರ್ದೇಶಕರಾಗಿದ್ದರು.


Click it and Unblock the Notifications











