'ಜೋಗಿ' ನಿರ್ಮಾಪಕ 'ಜೋಗಿ 2' ಮಾಡದೇ ಇರೋಕೆ ಕಾರಣವೇನು? 'ಜೋಗಿ' ಬಜೆಟ್ ಎಷ್ಟಾಗಿತ್ತು?
2005 ಕನ್ನಡ ಚಿತ್ರರಂಗದ ದಾಖಲೆಗಳನ್ನೆಲ್ಲ ಮುರಿಯುವ ಸಿನಿಮಾ ಬಂದಿತ್ತು. ಸಿನಿಮಾದ ಟಿಕೆಟ್‌ಗಳಿಗಾಗಿ ಜನರು ಮುಗಿಬಿದ್ದಿದ್ದರು. ಬ್ಲಾಕ್‌ನಲ್ಲಿ ಸಿನಿಮಾದ ಟಿಕೆಟ್‌ಗಳು ನಾಲ್ಕೈದು ಸಾವಿರಕ್ಕೆ ಸೇಲ್ ಆಗುತ್ತಿತ್ತು. ಅಂತಹದ್ದೊಂದು ಕ್ರೇಜ್ ಹುಟ್ಟಾಕಿದ ಸಿನಿಮಾ 'ಜೋಗಿ'. ಈ ಸಿನಿಮಾ ಇಂದಿಗೂ ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳಲ್ಲೊಂದು.
21 ವರ್ಷಗಳ ಹಿಂದೆ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದ್ದ ಜೋಗಿ ಸಿನಿಮಾವನ್ನು ಅಶ್ವಿನಿ ರಾಮ್ ಪ್ರಸಾದ್ ನಿರ್ಮಾಣ ಮಾಡಿದ್ದರು. ಈ ಸಿನಿಮಾ ಅವರಿಗೆ ಸಿಕ್ಕಾಪಟ್ಟೆ ಲಾಭವನ್ನು ತಂದುಕೊಟ್ಟಿತ್ತು. ಅಶ್ವಿನಿ ಆಡಿಯೋ ಸಂಸ್ಥೆ ಮಾಲೀಕರಾಗಿರುವ ಇತ್ತೀಚೆಗೆ ಸಿನಿಮಾ ನಿರ್ಮಾಣ ಮಾಡುವುದನ್ನೇ ನಿಲ್ಲಿಸಿದ್ದರು. ಒಂದೆರಡು ಸಿನಿಮಾಗಳಲ್ಲಿ ನಷ್ಟ ಅನುಭವಿಸಿದ ಬಳಿಕ ಆಡಿಯೋ ಕಂಪನಿ ಮೇಲೆ ಹೆಚ್ಚು ಗಮನ ಹರಿಸಿದ್ದರು.

ಆದ್ರೀಗ 'ಘಾರ್ಗಾ' ಎನ್ನುವ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ತಮ್ಮ ಮಗ ಅರುಣ್ ರಾಮ್ ಪ್ರಸಾದ್ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಸುತ್ತಿದ್ದಾರೆ. ಈ ವೇಳೆ ಫಿಲ್ಮಿಬೀಟ್ ಕನ್ನಡಕ್ಕೆ ಸಂದರ್ಶನ ನೀಡಿದ್ದು, ತಾವೇಕೆ ಸಿನಿಮಾ ಮಾಡುತ್ತಿಲ್ಲ? ಜೋಗಿ 2 ಸಿನಿಮಾ ಯಾಕೆ ಮಾಡಿಲ್ಲ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಈ ಸಂದರ್ಶನದ ಝಲಕ್ ಇಲ್ಲಿದೆ.
ಸಿನಿಮಾ ಮೇಕಿಂಗ್ ಹಿಂದಿನ ಹಾಗಿಲ್ಲ
"ಸಿನಿಮಾ ಮಾಡೋದು ಹಿಂದಿನ ಹಾಗೆ ಇಲ್ಲ. ಇಲ್ಲಿ 40 ರಿಂದ 45 ಹುಡುಗರು ಕೆಲಸ ಮಾಡುತ್ತಿದ್ದಾರೆ. ಅದನ್ನು ನೋಡಿಕೊಂಡು ಹೋಗುತ್ತಿದ್ದೇನೆ. ಘಾರ್ಗಾ ಇದೊಂದು ಒಳ್ಳೆಯ ಸ್ಟೋರಿ ಎನ್ನುವ ಕಾರಣಕ್ಕೆ ಮಾಡಿದ್ದೇನೆ ಅಷ್ಟೇ. ಆಮೇಲೆ ಎಲ್ಲೋ ಹೋಗಿ ಕೆಲಸ ಮಾಡಬೇಕು ಅಂತಿಲ್ಲ. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ, ಎಲ್ಲಿ ಮಾಡಿದರೂ ನಡೆಯುತ್ತೆ." ಎಂದು ಅಶ್ವಿನಿ ರಾಮ್ ಪ್ರಸಾದ್ ಹೇಳಿದ್ದಾರೆ.
ಥಿಯೇಟರ್‌ಗೆ ಜನ ಯಾಕೆ ಬರ್ತಿಲ್ಲ?
"ಓಟಿಟಿಯಿಂದ ಸಿನಿಮಾ ನೋಡುವುದಕ್ಕೆ ಜನ ಬರ್ತಿಲ್ಲ ಅಂತಾರೆ. ಕಾಂತಾರ ಚಾಪ್ಟರ್ 1, ಸು ಫ್ರಮ್ ಸೋ ಏನಾಯ್ತು? ಸಿನಿಮಾ ನೋಡುವುದಕ್ಕೆ ಜನ ಯಾಕೆ ಬಂದ್ರು? ಸಿನಿಮಾದಲ್ಲಿ ಕಂಟೆಂಟ್ ಇದ್ದಿದ್ದರಿಂದ ಜನ ಬಂದರು. ಹಾಗೇ ಕಂಟೆಂಟ್ ಮುಖ್ಯ ಆಗುತ್ತೆ. ಕೆಲ ಸಿನಿಮಾಗಳು ಸೋತಿವೆ.. ಕೆಲ ಸಿನಿಮಾಗಳು ಗೆದ್ದಿವೆ. ಒಳ್ಳೆಯ ಸಿನಿಮಾ ಮಾಡಿದರೆ ಯಾಕೆ ಜನರು ಬರಲ್ಲ. ರೀಚ್ ಇದ್ದರೆ ಯಾಕೆ ಜನರು ಬರೋದಿಲ್ಲ" ಎಂದು ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಹೇಳಿದ್ದಾರೆ.
ರಿಸ್ಕ್ ತೆಗದುಕೊಂಡು ಸಿನಿಮಾ ಮಾಡ್ಬೇಕಾ?
"ಆ ಟೈಂ ಬೇರೆ.. ಈ ಟೈಮ್ ಬೇರೆ. ಆಗ 5 ಕೋಟಿ, 10 ಕೋಟಿಯಲ್ಲಿ ಆಗೋದು ಈಗ 200 ಕೋಟಿ ಬೇಕು ಅಂತಾರೆ. ಅಷ್ಟು ರಿಸ್ಕ್ ತೆಗೆದುಕೊಂಡು ಸಿನಿಮಾ ಮಾಡುವಂತಹ ಅವಶ್ಯಕತೆ ಇದೆಯಾ? ಈಗ ನಾನೇನು ಮಾಡುತ್ತಿದ್ದೇನೋ ಅದು ನನಗೆ ತೃಪ್ತಿ ಕೊಟ್ಟಿದೆ. ಆಗ ಜೋಗಿಗೆ 2.5 ಕೋಟಿ ಖರ್ಚು ಮಾಡಿದೆ. 2.5 ಕೋಟಿ ಪಬ್ಲಿಸಿಟಿಗೆ ಖರ್ಚು ಮಾಡಿದೆ. ಈಗ ಅದನ್ನೇ ಮಾಡುವುದಕ್ಕೆ ಹೇಳಿ 200 ಕೋಟಿ ಬಜೆಟ್ ಕೊಡುತ್ತಾರೆ. 100 ರೂಪಾಯಿ ತೆಗೆದುಕೊಳ್ಳುವವನು 2 ಕೋಟಿ ಬೇಕು ಅಂತಾನೆ. ಅವರ ಹತ್ತಿರ ಹೋದರೆ, ಬಾಯ್ಮುಚ್ಕೊಂಡು ಸಿನಿಮಾ ಮಾಡಿ ಬರಬೇಕು. ಅದು ನಮಗೆ ಆಗಲ್ಲ" ಎಂದಿದ್ದಾರೆ.
ಜೋಗಿ ಬಜೆಟ್ ಎಷ್ಟು?
"2005ರಲ್ಲಿ ಎರಡುಕಾಲು ಕೋಟಿಯಲ್ಲಿ ಜೋಗಿ ಸಿನಿಮಾ ಮಾಡಿದೆ. 20 ವರ್ಷಗಳ ಅಂತರದಲ್ಲಿ 200 ಕೋಟಿ ಅಂತಾರೆ. ಮೇಕಿಂಗ್ ಕಾಸ್ಟ್ ಜಾಸ್ತಿಯಿದೆ ಅನ್ನೋದು ಪುಂಗಿ ಅಷ್ಟೇ. ತಿನ್ನೋರು ಜಾಸ್ತಿ , ಬೇಡದ ಖರ್ಚುಗಳು ಜಾಸ್ತಿ. ಇಷ್ಟಕ್ಕೆ ತೋರಿಸಿ ಅಂದರೆ, ಅಷ್ಟಕ್ಕೂ ಬೇಕು ಅಂತಾರೆ. ಅದೆಲ್ಲ ಹೇಳಬಾರದು. ನಮಗೆ ಇಂಟ್ರೆಸ್ಟ್ ಇದ್ದರೆ ಮಾಡಬೇಕು. ಇಲ್ಲದೇ ಇದ್ದರೆ ಸುಮ್ಮನಿರಬೇಕು. ನಾನು ಸುಮ್ಮನೆ ಇದ್ದೇವೆ. ಯಾಕಂದ್ರೆ, ನಾವು ಬ್ಯಾಕ್‌ಗ್ರೌಂಡ್‌ನಲ್ಲಿ ತುಂಬಾನೇ ಕೆಲಸ ಮಾಡುತ್ತಿದ್ದೇವೆ." ಎಂದಿದ್ದಾರೆ.


Click it and Unblock the Notifications











