"ಎಲ್ಲಿರುವೆ ಈಗ?": ಅಚ್ಚ ಕನ್ನಡದ ನಿರೂಪಕಿ ಅಪರ್ಣ ವಸ್ತಾರೆ ಪ್ರಾರ್ಥನಾ ಸಭೆಯಲ್ಲಿ ಕಣ್ಣೀರಿಟ್ಟ ಸೆಲೆಬ್ರಿಟಿಗಳು
ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡುತ್ತಿದ್ದ ನಿರೂಪಕಿ ಅಪರ್ಣ ವಸ್ತಾರೆ ಅಗಲಿದ ವಿಷಯವನ್ನು ಅವರ ಆಪ್ತರು ಇನ್ನೂ ಅರಗಿಸಿಕೊಂಡಿಲ್ಲ. ಪತಿ ನಾಗರಾಜ್ ವಸ್ತಾರೆ, ಆತ್ಮೀಯರು ಸೇರಿದಂತೆ ಅವರ ಅಭಿಮಾನಿಗಳು ಇನ್ನೂ ಈ ದು:ಖದಿಂದ ಹೊರಬಂದಿಲ್ಲ. ಅಪರ್ಣ ವಸ್ತಾರೆ ನೆನಪಿನಲ್ಲಿಯೇ ದಿನದೂಡುತ್ತಿದ್ದಾರೆ.
ಅಪಾರ ನೆನಪುಗಳನ್ನು ಬಿಟ್ಟು ಹೋದ ಅಪರ್ಣ ವಸ್ತಾರೆಯವರ ನೆನಪಿಗಾಗಿ ಪ್ರಾರ್ಥನಾ ಸಭೆಯನ್ನು ಇತ್ತೀಚೆಗೆ ಇಟ್ಟುಕೊಳ್ಳಲಾಗಿತ್ತು. ಅಪರ್ಣ ವಸ್ತಾರೆಯವರನ್ನು ಅವರನ್ನು ಹತ್ತಿರದಿಂದ ಬಲ್ಲವರು ಈ ಸಭೆಯಲ್ಲಿ ಭಾಗವಹಿಸಿದ್ದರು. ಪ್ರಕೃತಿಯ ಮಡಿನಲಿನಲ್ಲಿ, ಹಿತವಾದ ಸಂಗೀತದೊಂದಿಗೆ ನುಡಿಗಾತಿಯ ನೆನಪುಗಳನ್ನು ಹಂಚಿಕೊಳ್ಳಲಾಯಿತು.

ಅಪರ್ಣ ವಸ್ತಾರೆ ಅವರನ್ನು ನೆನೆದು ಕನ್ನಡ ಚಿತ್ರರಂಗದ ಸೆಲೆಬ್ರೆಟಿಗಳು, ಆತ್ಮೀಯರು ಭಾವುಕರಾಗಿದ್ದರು. ಅಪರ್ಣ ಅವರೊಂದಿಗೆ ಕಳೆದ ಸವಿ ನೆನಪುಗಳನ್ನು ಆತ್ಮೀಯರು ವೇದಿಕೆ ಮೇಲೆ ಹಂಚಿಕೊಂಡಿದ್ದಾರೆ. ಈ ಕ್ಷಣದ ವಿಡಿಯೋ ತುಣುಕನ್ನು ಪತಿ ನಾಗರಾಜ್ ವಸ್ತಾರೆ ಅವರು ಅಗಲಿತ ಪತ್ನಿಯ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿಯೇ ಹಂಚಿಕೊಂಡಿದ್ದಾರೆ.
ಅಪರ್ಣ ವಸ್ತಾರೆ ಅವರೊಂದಿಗೆ ಕಳೆದ ನೆನಪುಗಳನ್ನು ಈ ಪ್ರಾರ್ಥನಾ ಸಭೆಯಲ್ಲಿ ನೆನಪಿಸಿಕೊಂಡಿದ್ದಾರೆ. ಆತ್ಮೀಯರೊಂದಿಗೆ ಅಗಲಿದ ಪತ್ನಿಯ ಬಗ್ಗೆ ಹೇಳಿಕೊಂಡು ಭಾವುಕರಾಗಿದ್ದಾರೆ. "ಅವಳ ಮಾತು ಯಾವತ್ತಿಗೂ ಚಿರಂತನ ಅಂತ ಹೇಳುತ್ತಾರೆ. ಎಷ್ಟರ ಮಟ್ಟಿಗೆ ಅಂತ ಹೇಳಿದರೆ, ಯಾವುದಾದರೂ ಒಂದು ವೇದಿಕೆ ಹತ್ತಿ ವಾಪಾಸ್ ಬಂದರೂ, ಕಾರಿನಲ್ಲಿ ಕುಳಿತಲ್ಲಿಂದ ಹಿಡಿದು ಮನೆ ತಲುಪಿ, ಇಡೀ ಕಾರ್ಯಕ್ರಮದ ವಿವರವನ್ನ ಚಾಚೂ ತಪ್ಪದೆ ನನಗೆ ಒಪ್ಪಿಸುತ್ತಿದ್ದಳು.

ಈ ಪ್ರಾರ್ಥನಾ ಸಭೆಯಲ್ಲಿ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಹಿರಿಯ ನಟಿ ಗಿರಿಜಾ ಲೋಕೇಶ್, ನಟ ಅನಿರುದ್ಧ್, ನಟಿ ಪ್ರೇಮಾ ಪ್ರಭಾತ್, ಅರುಣ್ ಸಾಗರ್, ವರ್ಷಾ, ಸಿಹಿ ಕಹಿ ಚಂದ್ರು, ಗಾಯಕಿ ಮಂಜುಳಾ ಗುರುರಾಜ್ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಪರ್ಣ ಅವರೊಂದಿಗ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಅಪರ್ಣ ವಸ್ತಾರೆ ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಎರಡು ವರ್ಷಗಳಿಂದ ನೋವಿನ ಬದುಕು ನಡೆಸಿದ್ದರೂ, ಆತ್ಮೀಯರು ಬಿಟ್ಟರೆ ಬೇರೆ ಯಾರಿಗೂ ತಮ್ಮ ನೋವನ್ನು ಹೇಳಿಕೊಂಡಿರಲಿಲ್ಲ. ನಗುಮುಖದಿಂದಲೇ ಕ್ಯಾನ್ಸರ್ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸಿದ್ದರು. ಆದರೆ, ಒಂದು ತಿಂಗಳ ಹಿಂದಷ್ಟೇ ತಮ್ಮ ಹೋರಾಟವನ್ನು ನಿಲ್ಲಿಸಿ, ಇಹಲೋಕವನ್ನು ತ್ಯಜಿಸಿದ್ದರು.
ನಿರೂಪಣೆ ಕ್ಷೇತ್ರದಲ್ಲಿ ಅಪರ್ಣ ವಸ್ತಾರೆ ಹೊಸ ಚಾಪನ್ನು ಮೂಡಿಸಿದ್ದವರು. ಅಚ್ಚ ಕನ್ನಡದಲ್ಲಿಯೇ ನಿರೂಪಣೆ ಮಾಡಿ ಮನಸ್ಸನ್ನು ಗೆದ್ದಿದ್ದವರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕೊನೆಯ ಸಿನಿಮಾ 'ಮಸಣದ ಹೂವು' ಸಿನಿಮಾದಿಂದ ವೃತ್ತಿ ಬದುಕು ಆರಂಭಿಸಿದ್ದ ಅಪರ್ಣ ಬಳಿಕ ನಿರೂಪಣೆ ಕಡೆ ವಾಲಿದ್ದರು. ಅಲ್ಲಿಂದ ಕನ್ನಡದ ಟಾಪ್ ನಿರೂಪಕಿಯರಲ್ಲಿ ಅಪರ್ಣ ಅವರ ಹೆಸರು ಮುಂಚೂಣಿಯಲ್ಲಿ ಇತ್ತು.


Click it and Unblock the Notifications











