KCC: ಕೆಸಿಸಿಯಿಂದ "ಎಷ್ಟೋ ಗೋಡೆಗಳು ಮುರಿಯೋದನ್ನು ನೋಡಿದ್ದೀನಿ" ಕಿಚ್ಚ ಸುದೀಪ್
ಕನ್ನಡ ಚಲನಚಿತ್ರ ಕಪ್ ಮತ್ತೆ ಆರಂಭ ಆಗುತ್ತಿದೆ. ಈ ಬಾರಿ ನಾಲ್ಕನೇ ಸೀಸನ್‌ಗೆ ಕಿಚ್ಚ ಸುದೀಪ್ ಮತ್ತು ತಂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕಿಚ್ಚ ಸುದೀಪ್ ಆರಂಭ ಮಾಡಿರುವ ಕ್ರಿಕೆಟ್ ಪಂದ್ಯಾವಳಿ ಈಗ ಮತ್ತೊಂದು ಹಂತಕ್ಕೆ ತಲುಪಿದೆ.
ಮುಂದಿನ ತಿಂಗಳು ಡಿಸೆಂಬರ್ 23 ರಿಂದ 25ರವರೆಗೆ ಈ ಪಂದ್ಯವಾಳಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದೇ ಕೆಸಿಸಿಯ ಮೂರನೇ ಸೀಸನ್ ಇದೇ ವರ್ಷ ಫೆಬ್ರವರಿಯಲ್ಲಿ ಆರಂಭ ಆಗಿತ್ತು. ಇದರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಮಾಜಿ ಕ್ರಿಕೆಟಿಗರು ಕೂಡ ಪಾಲ್ಗೊಳ್ಳುತ್ತಿದ್ದಾರೆ.

ಪ್ರತಿಬಾರಿ ಕೆಸಿಸಿ ಪಂದ್ಯಾವಳಿ ಆರಂಭ ಆಗುವುದಕ್ಕೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಅದು ಈ ಬಾರಿ ಕೂಡ ನಡೆಯಲಿದೆ. ನವೆಂಬರ್ 26ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಒಟ್ಟು ಆರು ಟೀಮ್‌ಗಳಿಗೆ ಆಟಗಾರರ ಆಯ್ಕೆ ಪ್ರಕ್ರಿಯೆ ಕೂಡ ನಡೆಯಲಿದೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಕೆಸಿಸಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
"ನಿಮ್ಮಗಳಿಗೆ ನೋಡುವುದಕ್ಕೆ ಸಿಗದೇ ಇರೋದು ಏನಂದ್ರೆ, ಡ್ರೆಸ್ಸಿಂಗ್ ರೂಮ್. ಎಲ್ಲಾ ಕಲಾವಿದರು, ಎಲ್ಲಾ ರೀತಿಯ ತಂತ್ರಜ್ಞರು, ಮಾಧ್ಯಮದವರು, ಪ್ರತಿಯೊಬ್ಬರು ಸೇರಿ ಅಲ್ಲಿ ಮಾತುಕತೆ ನಡೆದಾಗ, ಎಷ್ಟೋ ಗೋಡೆಗಳು ಮುರಿಯೋದನ್ನು ನೋಡಿದ್ದೀನಿ ನಾನು. ಮಧ್ಯ ಮಧ್ಯದಲ್ಲಿ ಕಟ್ಟಿರೋ ಎಷ್ಟೋ ಗೋಡೆಗಳು ಮುರಿದು ಹೋಗಿವೆ. ಯಾರ ಯಾರ ಮೇಲೆ ಇರೋ ಎಷ್ಟೋ ಅಭಿಪ್ರಾಯಗಳು ಬದಲಾಗಿವೆ. ಸ್ನೇಹಿತರಾಗಿದ್ದಾರೆ. ಯಾರ ಬಗ್ಗೆ ಏನೋ ಒಪಿನಿಯನ್ ಕೊಟ್ಟರೂ, ನನಗೆ ಅವರ ಬಗ್ಗೆ ಗೊತ್ತಿದೆ ಅಂತ ಇನ್ನೊಬ್ಬ ಸ್ನೇಹಿತ ಫೋನ್ ಮಾಡುತ್ತಾನೆ. ಈ ವಾತಾವರಣ ಕೆಸಿಸಿಯಿಂದ ಸೈಷ್ಟಿಯಾಗಿದ್ದು ನನಗೆ ಖುಷಿಯಿದೆ." ಕಿಚ್ಚ ಸುದೀಪ್ ಹೇಳಿದ್ದಾರೆ.
"ಚಿತ್ರರಂಗದವರು ಎಲ್ಲರೂ ಸೇರುವುದಕ್ಕೆ ಯಾವುದೋ ಒಂದು ಸ್ಥಳ ಬೇಕಿತ್ತು. ಸ್ಪೋರ್ಟ್ಸ್‌ಗಿಂತ ಉತ್ತಮವಾದದ್ದು ಬೇರೆ ಏನೂ ಇಲ್ಲ. ಪ್ರಶಸ್ತಿ ಸಮಾರಂಭ ಅಂತ ಹೇಳುವುದಕ್ಕೆ ಆಗೋದಿಲ್ಲ. ಪ್ರತ್ಯೇಕವಾಗಿ ಬರ್ತೀವಿ.. ನಮ್ಮದನ್ನು ತಗೊಂಡು ನಾವು ಹೋಗುತ್ತೇವೆ." ಎಂದು ಕೆಸಿಸಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
"ಉಪೇಂದ್ರ ಅವರಿಗೆ ಕ್ರಿಕೆಟ್ ಆಡೋದು ಕಷ್ಟ. ಆದರೂ, ಎಲ್ಲರಿಗೋಸ್ಕರ ಬರ್ತಾರೆ. ಫೀಲ್ಡ್‌ಗೆ ಇಳಿತಾರೆ. ಕಳೆದ ಬಾರಿ ಧ್ರುವ ಸರ್ಜಾ ಬಂದಿದ್ದರು. ಧನಂಜಯ್ ಕೂಡ ಅಷ್ಟೇ. ಟೆನ್ನಿಸ್ ಬಾಲ್‌ನಲ್ಲಿ ಆಡಿ ಪ್ರಾಕ್ಟೀಸ್ ಮಾಡಿ, ನಾನು ಆಡುತ್ತೇನೆ ಅಂತ ಶುರು ಮಾಡಿದ್ದಾರೆ. ಹಾಗೇನೆ ಶಿವಣ್ಣ ಇದ್ದಾರೆ. ಈ ಸರಿ ದುನಿಯಾ ವಿಜಯ್ ಸೇರಿಕೊಂಡಿದ್ದಾರೆ." ಎಂದು ಕಿಚ್ಚ ಸುದೀಪ್ ಮಾಹಿತಿ ನೀಡಿದ್ದಾರೆ.
ಇನ್ನು ಕಳೆದ ಬಾರಿ ಮಾಜಿ ಅಂತರಾಷ್ಟ್ರೀಯ ಸ್ಟಾರ್ ಆಟಗಾರರು ಭಾಗವಹಿಸಿದ್ದರು. ಬ್ರಿಯಾನ್ ಲಾರಾ, ಸುರೇಶ್ ರೈನಾ, ಸುಬ್ರಮಣಿಯಂ ಬದ್ರಿನಾಥ್, ಹರ್ಷಲ್ ಗಿಬ್ಸ್, ತಿಲಕರತ್ನೆ ದಿಲ್ಶಾನ್ ಹಾಗೂ ಕ್ರಿಸ್ ಗೇಲ್ ಭಾಗವಹಿಸಿದ್ದರು.


Click it and Unblock the Notifications











