'ಮಹಾನ್' ನಟ ಮಿತ್ರ: ಅಬ್ಬಬ್ಬ ಹೇಗಿದೆ ನೋಡಿ ಲುಕ್
ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ಮಿತ್ರ ಈಗ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಅವರ ಲುಕ್ ಬದಲಾಗುತ್ತಿದೆ. ಒಂದೊಂದು ಸಿನಿಮಾದಲ್ಲೂ ಒಂದೊಂದು ಲುಕ್‌ನಲ್ಲಿ ಸಿನಿ ಪ್ರಿಯರಲ್ಲಿ ಅಚ್ಚರಿಯನ್ನು ಮೂಡಿಸುತ್ತಿದ್ದಾರೆ. ವಿಭಿನ್ನ ಪಾತ್ರಗಳನ್ನು ಬೆನ್ನತ್ತಿ ಹೊರಟಿರುವ ಮಿತ್ರ ಈಗ ಮತ್ತೊಂದು ಸಿನಿಮಾದ ಫೋಟೋಶೂಟ್‌ಗಳನ್ನು ಶೇರ್ ಮಾಡಿದ್ದಾರೆ.
'ಕರಾವಳಿ' ಸೇರಿದಂತೆ ಈಗೀಗ ಮಿತ್ರ ಒಪ್ಪಿಕೊಳ್ಳುತ್ತಿರುವ ಸಿನಿಮಾಗಳು ಪಾತ್ರಗಳು ಪ್ರೇಕ್ಷಕರಿಗೆ ಕಿಕ್ ಕೊಡುತ್ತಿವೆ. ಆ ಸಾಲಿಗೆ ಮತ್ತೊಂದು ಸಿನಿಮಾದ ಲುಕ್ ಕೂಡ ಸೇರಿಕೊಳ್ಳುವ ಸಾಧ್ಯತೆಯಿದೆ. ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ಪಿ ಸಿ ಶೇಖರ್ ಮತ್ತೊಂದು ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. ಅದುವೇ 'ಮಹಾನ್'. ಈ ಸಿನಿಮಾದಲ್ಲಿ ಮಿತ್ರ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪಿ.ಸಿ ಶೇಖರ್ ನಿರ್ದೇಶಿಸುತ್ತಿರುವ 'ಮಹಾನ್' ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಮಿತ್ರ ಕೂಡ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಲುಕ್ ಅನ್ನೇ ಈಗ ಶೇರ್ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಪಾತ್ರದ ಕುರಿತು ಸ್ವತ: ಮಿತ್ರ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅದೇನು ಅಂತ ನೋಡುವುದಾರೇ,
"ನಾನು ರಾಗ ಸಿನಿಮಾದ ಬಳಿಕ ನಿರ್ದೇಶಕ ಪಿ.ಸಿ.ಶೇಖರ್ ಅವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ರಾಗ' ಸಿನಿಮಾದ ನನ್ನ ಪಾತ್ರಕ್ಕೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಮತ್ತೊಂದು ಸಿನಿಮಾ ಮಹಾನ್ ನಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಿರ್ದೇಶಕರು ಈ ಸಿನಿಮಾದ ಕಥೆ ಹೇಳಿದ ತಕ್ಷಣ ಇಷ್ಟವಾಗಿತ್ತು. ಹಾಗಾಗಿ ನಟಿಸಲು ಒಪ್ಪಿಕೊಂಡೆ. ನಿರ್ಮಾಪಕ ಪ್ರಕಾಶ್ ಬುದ್ದೂರು ಅವರು ಇಂತಹ ಉತ್ತಮ ಕಥಾಹಂದರ ಹೊಂದಿರುವ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಾಗೇ ನಟ ವಿಜಯ ರಾಘವೇಂದ್ರ ಕೂಡ ಬಹಳ ಅದ್ಭುತವಾದ ನಟ. ಅವರೊಂದಿಗೆ ನಟಿಸುತ್ತಿರುವ ಖುಷಿ ಇದೆ. ಸಾಮಾಜಿಕ ಕಳಕಳಿಯುಳ್ಳ ಕಥೆಯನ್ನು ಹೊಂದಿರುವ ಸಿನಿಮಾವನ್ನು ಪಿ.ಸಿ.ಶೇಖರ್ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ವಿಜಯ ರಾಘವೇಂದ್ರ ಅವರಿಗೆ ಹೇಳಿ ಮಾಡಿಸಿದಂತಹ ಪಾತ್ರವಿದೆ. ಇನ್ನು ನನ್ನ ಪಾತ್ರ ನಾಯಕ ವಿಜಯ್ ರಾಘವೇಂದ್ರ ಅವರ ಪಾತ್ರದ ಜೊತೆಯಲ್ಲಿಯೇ ಸಾಗುತ್ತೆ. ನಮ್ಮಿಬ್ಬರ ಕಾಂಬಿನೇಶನ್ ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತೆ" ಎಂದು ನಟ ಮಿತ್ರ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನೂ 'ಮಹಾನ್' ಸಿನಿಮಾದಲ್ಲಿ ಮಿತ್ರ ಅವರ ಪಾತ್ರದ ಬಗ್ಗೆ ಪಿ.ಸಿ.ಶೇಖರ್ ಕೂಡ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ನನ್ನ ಹಾಗೂ ಮಿತ್ರ ಅವರ ಕಾಂಬಿನೇಶನ್‌ನಲ್ಲಿ ಬಂದ ರಾಗ ಸಿನಿಮಾ ಇಂದಿಗೂ ಜನಪ್ರಿಯವಾಗಿದೆ. ಈ ಸಿನಿಮಾ ಬಳಿಕ ನಾನು ನಿರ್ದೇಶಿಸಿದ ಸಿನಿಮಾಗಳಲ್ಲಿ ಮಿತ್ರ ಅವರು ನಟಿಸಲಿಲ್ಲ. ಏಕೆಂದರೆ, ನಾನು ನಿರ್ದೇಶಿಸುವ ಸಿನಿಮಾಗಳಲ್ಲಿ ಮಿತ್ರ ಅವರು ಸಣ್ಣ ಪುಟ್ಟ ಪಾತ್ರದಲ್ಲಿ ನಟಿಸುವುದು ನನಗೆ ಇಷ್ಟವಿಲ್ಲ. 'ರಾಗ' ಸಿನಿಮಾದ ಅಭಿನಯಕ್ಕಾಗಿ ಮಿತ್ರ ಅವರಿಗೆ ರಾಜ್ಯ ಪ್ರಶಸ್ತಿ ಬಂದಿತ್ತು. ಆ ಚಿತ್ರದಲ್ಲಿ ಅಂತಹ ಅದ್ಭುತ ನಟನೆ ನೀಡಿದ್ದ ಮಿತ್ರ ಅವರಿಗೆ 'ಮಹಾನ್' ಚಿತ್ರದಲ್ಲೂ ಎಲ್ಲರ ನೆನಪಿನಲ್ಲಿ ಉಳಿಯುವಂತಹ ಪಾತ್ರವಿದೆ. ಚಿತ್ರಕಥೆ ಬರೆಯುವಾಗ ಈ ಪಾತ್ರಕ್ಕೆ ಮಿತ್ರ ಅವರೇ ಸೂಕ್ತ ಎಂದು ಅನಿಸಿತು. ಇದು ಅವರಿಗೆ ಸರಿಯಾದ ಪಾತ್ರ. ಇಡೀ ಸಿನಿಮಾ ಪೂರ್ತಿ ನಾಯಕನ ಪಾತ್ರದ ಜೊತೆಗೆ ಸಾಗುವ ಪಾತ್ರ ಅವರದು. ಕುರುಕ್ಷೇತ್ರದಲ್ಲಿ ಅರ್ಜುನನ ಜೊತೆಗೆ ಶ್ರೀಕೃಷ್ಣ ಸದಾ ಇರುತ್ತಾನೆ. ಆ ಸ್ಪೂರ್ತಿಯಿಂದ ಈ ಎರಡು ಪಾತ್ರಗಳನ್ನು ಹೆಣೆಯಲಾಗಿದೆ. "ಮಹಾನ್" ಚಿತ್ರದ ಮಿತ್ರ ಅವರ ಪಾತ್ರ ಕೂಡ ಎಲ್ಲರ ಮನಸ್ಸಿಗೂ ಇಷ್ಟವಾಗುತ್ತದೆ" ಎಂದು ನಿರ್ದೇಶಕ ಪಿ.ಸಿ.ಶೇಖರ್ ಹೇಳಿದ್ದಾರೆ.
ಅಂದ್ಹಾಗೆ 'ಮಹಾನ್' ಸಿನಿಮಾವನ್ನು ಪ್ರಕಾಶ್ ಬುದ್ದೂರು ನಿರ್ಮಾಣ ಮಾಡುತ್ತದ್ದಾರೆ. ಈ ವೇಳೆ ತಮ್ಮ ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರದಲ್ಲಿ ಮಿತ್ರ ಅವರಂತಹ ಅನುಭವಿ ನಟರು ನಟಿಸುತ್ತಿರುವುದಕ್ಕೆ ಖುಷಿಯಾಗಿದೆ ಎಂದು ನಿರ್ಮಾಪಕ ಪ್ರಕಾಶ್ ಬುದ್ದೂರು ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ.


Click it and Unblock the Notifications











