'ಮಠ', 'ಎದ್ದೇಳು ಮಂಜುನಾಥ' ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ; ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಕನ್ನಡದ ಖ್ಯಾತ ನಿರ್ದೇಶಕ 'ಮಠ' ಹಾಗೂ 'ಎದ್ದೇಳು ಮಂಜುನಾಥ' ಸಿನಿಮಾವನ್ನು ನಿರ್ದೇಶಿಸಿದ್ದ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಗಾಗಿದ್ದಾರೆ. ಕನ್ನಡದ ಡೇರಿಂಗ್ ಡೈರೆಕ್ಟರ್ ಅಂತಲೇ ಜನಪ್ರಿಯತೆ ಪಡೆದುಕೊಂಡಿದ್ದ ಗುರುಪ್ರಸಾದ್ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಗುರು ಪ್ರಸಾದ್ ಅವರ ಶವ ಅಪಾರ್ಟ್‌ಮೆಂಟ್ ಒಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗುರು ಪ್ರಸಾದ್ ಯಾವ ಕಾರಣಕ್ಕೆ ಇಂತಹ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನೋ ಬಗ್ಗೆ ಖಚಿತ ಮಾಹಿತ ಇಲ್ಲ. ಮೂಲಗಳ ಪ್ರಕಾರ ಗುರು ಪ್ರಸಾದ್ ಸಾಲದ ಸುಳಿಗೆ ಸಿಲುಕಿದ್ದರು ಎನ್ನಲಾಗಿದೆ. ಸಾಲಗಾರರ ಕಾಟಕ್ಕೆ ತಡೆಯಲಾಗದೆ ಈ ನಿರ್ಧಾರಕ್ಕೆ ಬಂದಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದ್ದೆ. ಆದರೆ ಇವರ ಆತ್ಮಹತ್ಯೆ ಬಗ್ಗೆ ಖಚಿತ ಮಾಹಿತಿ ಇಲ್ಲ.

ಗುರುಪ್ರಸಾದ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಹಾಗೂ ನಟ. ಇದೂವರೆಗೂ 5 ಕನ್ನಡ ಚಿತ್ರಗಳನ್ನು ಗುರುಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಅದರಲ್ಲೂ ಗುರು ಪ್ರಸಾದ್ ನಿರ್ದೇಶಿಸಿದ 'ಮಠ' ಸಿನಿಮಾ ಸ್ಯಾಂಡಲ್‌ವುಡ್‌ನ ಕಲ್ಟ್ ಸಿನಿಮಾಗಳಲ್ಲಿ ಒಂದಾಗಿದೆ. ಇದರ ಹಿಂದೆನೇ ಗುರುಪ್ರಸಾದ್ 'ಎದ್ದೇಳು ಮಂಜುನಾಥ' ಸಿನಿಮಾ ನಿರ್ದೇಶಿಸಿದ್ದರು. ಆ ಸಿನಿಮಾ ಕೂಡ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು.
ಗುರುಪ್ರಸಾದ್ ಬರವಣಿಗೆ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಅಭಿಪ್ರಾಯವಿತ್ತು. ಗುರುಪ್ರಸಾದ್ ಸಿನಿಮಾಗಳಿಗೆ ಬರವಣಿಗೆ ಬರೆಯುತ್ತಿದ್ದಾರೆ ಅಂದರೆ ಅಲ್ಲೊಂದು ನಿರೀಕ್ಷೆಯಿರುತ್ತಿತ್ತು. ಗುರುಪ್ರಸಾದ್ ಸಿನಿಮಾಗಳಿಗಷ್ಟೇ ಅಲ್ಲ, ರಿಯಾಲಿಟಿ ಶೋಗಳಿಗೂ ಕೂಡ ಬರವಣಿಗೆ ಬರೆದಿದ್ದರು. ಆ ಶೋಗಳು ಕೂಡ ಸೂಪರ್ ಹಿಟ್ ಆಗಿತ್ತು. ಇಂತಹ ಅಪ್ರತಿಮ ನಿರ್ದೇಶಕ ಆತ್ಮಹತ್ಯೆಗೆ ಶರಣಗಾಗಿದ್ದು ಚಿತ್ರರಂಗಕ್ಕೆ ಅಘಾತವಾಗಿದೆ.
ಕನ್ನಡದ ನಿರ್ದೇಶಕ ಗುರುಪ್ರಸಾದ್ ಯಾಕೆ ಇಂತಹ ನಿರ್ಧಾರಕ್ಕೆ ಬಂದರು ಎಂಬ ಆತಂಕದಲ್ಲಿ ಚಿತ್ರರಂಗವಿದೆ. ಗುರುಪ್ರಸಾದ್ ಬೆಂಗಳೂರಿನ ಮದನಾಯಕನಹಳ್ಳಿ ಸಮೀಪ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಿದ್ದರು ಎನ್ನಲಾಗಿದೆ. ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ಸಾಲದ ಸುಳಿಗೆ ಸಿಲುಗೆ ಅಪಾರ್ಟ್‌ಮೆಂಟ್‌ಗಳನ್ನು ಬದಲಾಯಿಸಿದ್ದರು. ಅಲ್ಲೂ ಸಾಲಗಾರರ ಕಾಟ ತಪ್ಪಲಿಲ್ಲ ಎಂದು ಹೇಳಲಾಗುತ್ತಿದೆ.
ಗುರುಪ್ರಸಾದ್ ಅವರ ವೃತ್ತಿ ಜೀವನ ಕೂಡ ಚೆನ್ನಾಗಿರಲಿಲ್ಲ. ಅದರಲ್ಲೂ ನವರಸ ನಾಯಕ ಜಗ್ಗೇಶ್ ಅವರಿಗೆ ನಿರ್ದೇಶಿಸಿದ 'ರಂಗನಾಯಕ' ಸಿನಿಮಾ ಕೂಡ ಸೋತಿತ್ತು. ಈ ಹಿನ್ನೆಲೆಯಲ್ಲಿ ಗುರುಪ್ರಸಾದ್‌ಗೆ ಸಿನಿಮಾಗಳಲ್ಲಿ ಅವಕಾಶ ಇರಲಿಲ್ಲ. ಅಲ್ಲದೇ ಸಿನಿಮಾ ಸೋತಿದ್ದರ ಜೊತೆಗೆ ಸಾಲ ಕೂಡ ಮಾಡಿಕೊಂಡಿದ್ದರು ಎನ್ನಲಾಗಿದೆ. ಇವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣ ಸಾಲವೇ ಇರಬಹುದು ಎಂದು ಊಹಿಸಲಾಗಿದೆ.
ಇನ್ನೊಂದು ಕಡೆ ಸಾಲ ಹಾಗೂ ಸೋಲಿನ ಸುಳಿಗೆ ಸಿಲುಕಿದ್ದ ಗುರುಪ್ರಸಾದ ಇತ್ತೀಚೆಗೆ ಕುಡಿತಕ್ಕೆ ದಾಸರಾಗಿದ್ದರು ಎನ್ನಲಾಗಿದೆ. ಹಾಗೇ ಅವರ ವೈವಾಹಿಕ ಜೀವನ ಕೂಡ ಚೆನ್ನಾಗಿರಲಿಲ್ಲ ಎನ್ನಲಾಗಿದೆ, ಮೊದಲನೇ ಮದುವೆ ಮುರಿದು ಬಿದ್ದಿತ್ತು. ಇತ್ತೀಚೆಗೆ ಎರಡನೇ ಮದುವೆ ಕೂಡ ಆಗಿದ್ದರು. ಎರಡನೇ ಮದುವೆ ಆದ ಬಳಿಕವೂ ದಾಂಪತ್ಯದಲ್ಲಿ ಒಡಕು ಮೂಡಿತ್ತು ಎಂದು ಹೇಳಲಾಗುತ್ತಿದೆ.


Click it and Unblock the Notifications











