ಈ ಬಾರಿ ಸಿಂಪಲ್ ಆಗಿಲ್ಲ ಸುನಿ ಸಿನಿಮಾ: ಪರದೆ ಮೇಲೆ ರಕ್ತ ಚರಿತ್ರೆ ಬರೆಯಲು 'ದೇವರು ರುಜು ಮಾಡಿದನು'
ಸಿಂಪಲ್ ಸುನಿ ಸಿನಿಮಾಗಳು ಒಂದು ಕಡೆಯಾದರೆ, ಇನ್ನೊಂದು ಕಡೆ ಅವರು ಇಡುವ ಟೈಟಲ್‌ಗಳು ಗಮನ ಸೆಳೆಯುತ್ತವೆ. ಅವರು ನಿರ್ದೇಶನ ಮಾಡುವ ಪ್ರತಿ ಸಿನಿಮಾದ ಮೊದಲು ಗಮನ ಸೆಳೆಯುವುದು ಟೈಟಲ್‌ನಿಂದಲೇ. ಈಗ ಹೊಸ ಸಿನಿಮಾವೊಂದು ಸೆಟ್ಟೇರಿದೆ. ಆ ಸಿನಿಮಾದ ಟೈಟಲ್ ಕೂಡ ಅಷ್ಟೇ ಕ್ಯಾಚಿಯಾಗಿದೆ. ಅದುವೇ 'ದೇವರು ರುಜು ಮಾಡಿದನು'
ಸಿಂಪಲ್ ಸುನಿ ಸಿನಿಮಾಗಳಲ್ಲಿ ಟೈಟಲ್‌ಗಳೇ ಕಿಕ್ ಕೊಡುತ್ತವೆ. ಕೆಲವೊಮ್ಮೆ ಅಪ್ಪ ಕನ್ನಡದ ಟೈಟಲ್ ಇಟ್ಟು ಹೀಗೂ ಇಡಬಹುದಲ್ಲಾ? ಅಂತ ಪ್ರಶ್ನೆ ಮೂಡಿಸುತ್ತಾರೆ. ಅದೇ ಇನ್ನೊಂದು ಕಡೆ 'ಚಮಕ್', 'ಸಖತ್', 'ಬಹುಪರಾಕ್' ಅಂತ ಒಂದೇ ಪದದಲ್ಲಿ ಟೈಟಲ್ ಕೊಟ್ಟು ಮುಗಿಸಿದ್ದೂ ಇದೆ. ಆದರೆ, ಈ ಬಾರಿ ಹಾಗಲ್ಲ. 'ದೇವರು ರುಜು ಮಾಡಿದನು' ಅಂತ ಇಷ್ಟುದ್ದ ಟೈಟಲ್ ಇಟ್ಟಿದ್ದಾರೆ.

ಈ ಟೈಟಲ್‌ಗೆ ಸಿಕ್ಕಿದ್ದು ಹೇಗೆ? ಈ ಪ್ರಶ್ನೆಗೆ ಉತ್ತರನೂ ಸಿಕ್ಕಿದೆ. 'ದೇವರು ರುಜು ಮಾಡಿದನು' ಪೋಸ್ಟ್ ನೋಡಿದರೆ ಮಾಸ್ ರಗಡ್ ಅಂತ ಅನಿಸುತ್ತೆ. ಆದರೆ, ಇದರ ಹಿಂದೊಂದು ಸಂಗೀತದ ಹಿನ್ನೆಲೆಯಿದೆ ಅನಿಸುತ್ತೆ. ಇನ್ನು ಟೈಟಲ್ ವಿಷಯಕ್ಕೆ ಬರೋದಾದರೆ, ಕುವೆಂಪು ಅವರು ಬರೆದ ಪದ್ಯದ ಸಾಲನ್ನು ತಮ್ಮ ಹೊಚ್ಚ ಹೊಸ ಸಿನಿಮಾದ ಶೀರ್ಷಿಕೆಯನ್ನಾಗಿ ಮಾಡಿದ್ದಾರೆ.
ಈ ಸಿನಿಮಾ ಮೂಲಕ ಸಿಂಪಲ್ ಸುನಿ ಹೊಸ ಹೀರೋ ಅನ್ನು ಸ್ಯಾಂಡಲ್‌ವುಡ್‌ಗೆ ಕರೆದುಕೊಂಡು ಬರುವುದಕ್ಕೆ ನಿರ್ಧರಿಸಿದ್ದಾರೆ. ಈಗಾಗಲೇ ಹೀರೋ ಆಗಿರೋರು ವರ್ಷಕ್ಕೆ ಒಂದು ಸಿನಿಮಾನೂ ಮಾಡುತ್ತಿಲ್ಲ. ಅದಕ್ಕೆ ಬಹುಶ: ಸುನಿ ಹೊಸ ಪ್ರತಿಭೆಗಳನ್ನು ಪರಿಚಯ ಮಾಡೋಣ ಅಂತ ಹೊರಟಂತೆ ಇದೆ. ಇವರ 'ದೇವರು ರುಜು ಮಾಡಿದನು' ಸಿನಿಮಾ ಹೀರೋ ವೀರಾಜ್. ಹೊಸ ಪ್ರತಿಭೆ ಆದರೂ, ರಿಲೀಸ್ ಆಗಿರುವ ಪೋಸ್ಟರ್ ಪ್ರಾಮಿಸಿಂಗ್ ಆಗಿದೆ.
ವೀರಾಜ್ ರಂಗಭೂಮಿ ಕಲಾವಿದ. ರಂಗಭೂಮಿಯಲ್ಲಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿರುವ ಈ ವೀರಾಜ್ ಈಗ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹೊಸ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯ ಮಾಡುವಾಗ ಸಾಕಷ್ಟು ತಯಾರಿಯನ್ನು ಮಾಡಿಕೊಂಡೇ ಎಂಟ್ರಿ ಕೊಟ್ಟಿರುತ್ತಾರೆ. ಅದರಂತೆ ವೀರಾಜ್ ಇಂಟ್ರುಡ್ಯೂಸ್ ಮಾಡುವಾಗಲೂ ಅಷ್ಟೇ ಪೂರ್ವ ತಯಾರಿ ಮಾಡಿಕೊಂಡೇ ಬಂದಿದ್ದಾರೆ.
ಕೈಯಲ್ಲಿ ಗಿಟಾರ್ ಹಿಡಿದು ರಕ್ತ ಚರಿತ್ರೆ ಹೇಳುವುದಕ್ಕೆ ವಿರಾಜ್ ಹೊರಟಂತೆ ಇದೆ. ಇನ್ನು ಗಿಟಾರ್ ಸಂಗೀತ ಕಥೆಯನ್ನು ಹೇಳುತ್ತಿದೆ ಎನಿಸುತ್ತಿದೆ. 'ದೇವರು ರುಜು ಮಾಡಿದನು' ಸಿನಿಮಾಗೆ ಸಿಂಪಲ್ ಸುನಿ ಅವರ ಕಥೆ, ಚಿತ್ರಕಥೆ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಇದೇ ತಿಂಗಳ 20ರಂದು ಸಿನಿಮಾ ಮುಹೂರ್ತ ನಡೆಯಲಿದ್ದು, ಬಳಿಕ ಶೂಟಿಂಗ್‌ಗೆ ಮುಂದಾಗುತ್ತಿದೆ.
ಅಂದ್ಹಾಗೆ, ಈಗಾಗಲೇ ಸಿಂಪಲ್ ಸುನಿ ಚಿಕ್ಕದೊಂದು ಟೀಸರ್ ಕೂಡ ಶೂಟ್ ಮಾಡಿದ್ದಾರೆ. ಅದು 'ದೇವರು ರುಜು ಮಾಡಿದನು' ಸಿನಿಮಾದ ಮುಹೂರ್ತದ ದಿನದಂದು ರಿವೀಲ್ ಆಗಬಹುದು. ಇನ್ನು ಗ್ರೀನ್ ಹೌಸ್ ಮೂವೀಸ್ ಅಡಿಯಲ್ಲಿ ಸಿನಿಮಾವನ್ನು ಗೋವಿಂದ್ ರಾಜ್ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಜೆಜೆ , ಜೇಡ್ ಸ್ಯಾಂಡಿ ಹಾಗೂ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಂತೋಷ್ ರೈ ಪತಾಜಿ ಕ್ಯಾಮರಾ ಮ್ಯಾನ್. ಇನ್ನು ಬೆಂಗಳೂರು, ಉತ್ತರ ಕನ್ನಡ, ಗೋವಾ ಸುತ್ತಮುತ್ತ 'ದೇವರು ರುಜು ಮಾಡಿದನು' ಸಿನಿಮಾದ ಶೂಟಿಂಗ್ ನಡೆಯಲಿದೆ.


Click it and Unblock the Notifications











