"ಬದುಕು ಎನ್ನುವುದು ನಗೆಯ ಮೆರವಣಿಗೆಯಾಗಬೇಕು ಸಾರ್"; ಗುರು ನಗೆಯನ್ನು ನೆನಪಿಸಿಕೊಂಡ ಟಿ ಎನ್ ಸೀತಾರಾಮ್

ಗುರುಪ್ರಸಾದ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ಬರಹಗಾರ ಹಾಗೂ ನಿರ್ದೇಶಕ. ಕಿರುತೆರೆಯಿಂದ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದ ಗುರುಪ್ರಸಾದ್ ನಂತರ ಸಿನಿಮಾ ಕಡೆಗೆ ವಾಲಿಕೊಂಡರು. ಸಿನಿಮಾದಲ್ಲಿ ಯಶಸ್ಸು ನೀಡಬೇಕು ಅನ್ನೋ ಆಸೆಯಿತ್ತು. ಅದರಂತೆ ಎರಡು ಅದ್ಭುತ ಸಿನಿಮಾಗಳನ್ನು ಕೊಟ್ಟು ಗುರುಪ್ರಸಾದ್ ಗೆದ್ದಿದ್ದರು. ನಂತರದ ದಿನಗಳಲ್ಲಿ ಯಾಕೋ ಹಿಂದೆ ಬಿದ್ದುಬಿಟ್ಟರು.

ಅಂದ್ಹಾಗೆ ಕಿರುತೆರೆಯ ಸ್ಟಾರ್ ಡೈರೆಕ್ಟರ್ ಟಿ ಎನ್‌ ಸೀತಾರಾಮ್ ಅವರ ಗರಡಿಯಲ್ಲಿ ಗುರುಪ್ರಸಾದ್ ಕೆಲಸ ಮಾಡಿದ್ದರು. 'ಮನ್ವಂತರ' ಅನ್ನುವ ಮೆಗಾ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದರು. ಸುಮಾರು 10 ವರ್ಷಗಳ ಕಾಲ ಇವರೊಂದಿಗೆ ದುಡಿದು ತರಬೇತಿ ಪಡೆದಿದ್ದರು. ಕಿರುತೆರೆ ಸಾಕು ಅಂತ ಸಿನಿಮಾ ಕಡೆಗೆ ಮುಖ ಮಾಡಿದ್ದರು. ಸಿನಿಮಾ ಕಾಲಿಟ್ಟ ಆರಂಭದ ದಿನಗಳಲ್ಲಿ ಗೆದ್ದು ಬೀಗಿದ್ದರು.

Kannada director T N Seetharam wrote an emotional post about Guruprasad s death

ಗುರುಪ್ರಸಾದ್ ಸಾವಿನ ಸುದ್ದಿಯನ್ನು ಕೇಳಿ ಟಿ ಎನ್ ಸೀತಾರಾಮ್ ಭಾವುಕರಾಗಿದ್ದಾರೆ. ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಗುರುಪ್ರಸಾದ್ ಅವರೊಂದಿಗಿನ ನೆನಪುಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಗುರುಪ್ರಸಾದ್ ನಗುವಿನ ಸೀಕ್ರೆಟ್‌ ಅನ್ನು ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಯಾವಾಗಲೂ ಗುರುಪ್ರಸಾದ್ ನಗುತ್ತಲೇ ಇರುತ್ತಿದ್ದರು. ಸದಾ ನಗುವನ್ನು ಇಷ್ಟಪಡುತ್ತಿದ್ದರು ಅನ್ನುವುದನ್ನು ಹಿರಿಯ ನಿರ್ದೇಶಕ ಟಿ ಎನ್ ಸೀತಾರಾಮ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಟಿ.ಎನ್. ಸೀತಾರಾಮ್ ಫೇಸ್ ಬುಕ್ ಪೋಸ್ಟ್

"23 ವರ್ಷದ ಹಿಂದೆ ನಾನು ಮನ್ವಂತರ ಎನ್ನುವ ಧಾರಾವಾಹಿ ಮಾಡಿದಾಗ ಸಹ ನಿರ್ದೇಶಕರಲ್ಲಿ ಒಬ್ಬರು ಈ ಗುರುಪ್ರಸಾದ್. ಅತ್ಯಂತ ಪ್ರತಿಭಾವಂತ ಬರಹಗಾರ‌. ನಗು ಅವನ ಬ್ರಾಂಡ್ ಮಾರ್ಕ್. ಅವನಿಗೆ ನಗಲು ಒಂದು ನೆಪ ಬೇಕಿರುತ್ತಿತ್ತು ಅಷ್ಟೇ. ಪೂರ್ಣ ಕಾರಣ ಬೇಕಿರಲಿಲ್ಲ. ಯಾವಾಗಲೂ ಈ ಚಿತ್ರದಲ್ಲಿ ಇರುವಂತೆಯೇ ಇರುತ್ತಿದ್ದ.

ತಮಾಷೆ ಪ್ರಿಯನಾದ ಈ ಗುರು 'ಬದುಕು ಎನ್ನುವುದು ಒಂದು ನಗೆಯ ಮೆರವಣಿಗೆಯಾಗ ಬೇಕು ಸಾರ್' ಎಂದು ಹೇಳುತ್ತಿದ್ದ.

ಅದೇ ಸಮಯದಲ್ಲೇ ರಘು ಸಮರ್ಥ, ರಮೇಶ್ ಇಂದಿರಾ, ಮಧು ಚಂದ್ರ ಮುಂತಾದವರು ಭೂಮಿಕಾ ನಿರ್ದೇಶನ ತಂಡದಲ್ಲಿ ಇದ್ದರು. ಮನ್ವಂತರದ ನಂತರ ಅವನು ಚಿತ್ರ ನಿರ್ದೇಶನದ ಕಡೆ ಹೊರಟುಬಿಟ್ಟ. ಮಠ ಎನ್ನುವ ಚಿತ್ರ ನಿರ್ದೇಶಿಸಿ ಮಠ ಗುರು ಎಂದು ಖ್ಯಾತನಾಗಿದ್ದ. ನಾನು ಧಾರಾವಾಹಿಗಳ ದಾರಿಯಲ್ಲೇ ಇದ್ದು ಮುಕ್ತ, ಮುಕ್ತ ಮುಕ್ತ, ಮಗಳು ಜಾನಕಿ,, ಮುಂತಾದ ಧಾರಾವಾಹಿ ಮಾಡುತ್ತಿದ್ದೆ. ಗುರು ಚಿತ್ರರಂಗದಲ್ಲಿ ಖ್ಯಾತನಾಗುತ್ತಾ ಹೋದ. ನಂತರ ನನ್ನ ಅವನ ಭೇಟಿ ತುಂಬಾ ವಿರಳವಾಗುತ್ತಾ ಹೋಯಿತು.

ಎಂದಾದರೂ ಫೋನ್‌ನಲ್ಲಿ ಮಾತನಾಡಲು ಸಿಕ್ಕಿದಾಗ ನಿಮಿಷಕ್ಕೆ ಹತ್ತು ಸಾರಿ ನಗುತ್ತಾ ಸಂಭ್ರಮಿಸುತ್ತಿದ್ದ. ಅವನ 'ಎರಡನೆಯ ಸಲ' ಎನ್ನುವ ಚಿತ್ರ ನೋಡಲು ಒಮ್ಮೆ ನನ್ನನ್ನು ಕರೆದಿದ್ದ. ಅವನ ತಂಡದವರನ್ನೆಲ್ಲ ಅಲ್ಲಿ ಭೇಟಿ ಮಾಡಿದ್ದೆ. ಆ ಚಿತ್ರ ನನಗೆ ಅಷ್ಟಾಗಿ ಇಷ್ಟವಾಗಿರಲಿಲ್ಲ. ಅದನ್ನು ಅವನಿಗೆ ಹೇಳಿದಾಗ ಜೋರಾಗಿ ನಕ್ಕಿದ್ದ. ಆ ನಗುವಿನ ಅರ್ಥ ನನಗೆ ಹೊಳೆಯಲಿಲ್ಲ.

ಐದಾರು ವರ್ಷದಿಂದ ಈಚೆಗೆ ಫೋನ್ ಕೂಡಾ ಇರಲಿಲ್ಲ. ಸಿನಿಮಾ ನಿರ್ದೇಶನದ ಬಗ್ಗೆ, ನಿರ್ಮಾಣದ ಬಗ್ಗೆ ಅತ್ಯಂತ ಮಹತ್ವಾಕಾಂಕ್ಷೆಗಳನ್ನೂ, ಕನಸುಗಳನ್ನೂ ಹೊತ್ತಿದ್ದ.

ಜಾಣರಾಗದಿದ್ದರೆ ಈ ಸಿನಿಮಾ ಎನ್ನುವುದು ತನ್ನ ಮರಳ ಸುಳಿಗಳೊಳಗೆ ಸೃಷ್ಟಿಶೀಲರನ್ನು ಎಳೆದುಕೊಂಡು ಮುಗಿಸುವುದನ್ನು ನಾನು ಅನೇಕ ಬಾರಿ ಕಂಡಿದ್ದೇನೆ.

ಗುರು ಪ್ರಸಾದನಿಗೂ ಹಾಗೇ ಆಗಿರಬೇಕು. ಬದುಕು ಒಂದು ನಗೆಯ ಮೆರವಣಿಗೆ ಎನ್ನುತ್ತಿದ್ದವನು. ಇಂದು ಆತ್ಮಹತ್ಯೆ ಮಾಡಿಕೊಂಡ ಎಂದು ಕೇಳಿ ದಿಗ್ಭ್ರಮೆ ಆಯಿತು.

ಹೀಗೆ ನಗುತ್ತಿದ್ದವನು ಹಾಗೆ ಹೋಗಿಬಿಟ್ಟ. ಈ ಬದುಕಿನ ನಿರರ್ಥಕತೆ ನನ್ನನ್ನು ವಿಷಣ್ಣನನ್ನಾಗಿ ಮಾಡುತ್ತಿದೆ. ಅವನ ಹತ್ತಿರದವರಿಗೆ ಅವನ ಸಾವಿನ ನೋವನ್ನು ಸಹಿಸಿಕೊಳ್ಳುವ ಶಕ್ತಿ ಬರಲಿ ಎಂಬ ಹಾರೈಕೆ ನನ್ನದು." ಎಂದು ಹಿರಿಯ ನಿರ್ದೇಶಕ ಟಿ ಎನ್ ಸೀತಾರಾಮ್ ಬರೆದು ಪೋಸ್ಟ್ ಮಾಡಿದ್ದಾರೆ.

More from Filmibeat

English summary
Kannada director T. N. Seetharam wrote an emotional post about Guruprasad's death;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X