Karnataka Bandh: ಚಿತ್ರರಂಗ ಬಂದ್ ಮಾಡಲ್ಲ, ಕನ್ನಡ ಹೋರಾಟಗಾರರಿಗೆ ಬೆಂಬಲ: ಕನ್ನಡ ಫಿಲ್ಮ್ ಚೇಂಬರ್
ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರಿಂದ ಹಲ್ಲೆಯನ್ನು ಖಂಡಿಸಿ ಕಳೆದ ಕೆಲವು ದಿನಗಳಿಂದ ಆಕ್ರೋಶ ವ್ಯಕ್ತವಾಗಿತ್ತಿದೆ. ಕನ್ನಡ ಪರ ಹೋರಾಟಗಾರರು ಮರಾಠಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹಾಗೇ ಮಹಾರಾಷ್ಟ್ರದಲ್ಲಿ ಕರ್ನಾಟಕದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ಪುಂಡಾಟ ಮೆರೆದಿದ್ದಾರೆ. ಕನ್ನಡದ ಕಂಡಕ್ಟರ್‌ಗಳ ಮೇಲೆ ಅಸಭ್ಯ ವರ್ತನೆ ತೋರಿದ್ದರು.
ಹೀಗಾಗಿ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡದ ಹೋರಾಟಗಾರರು ಈ ಘಟನೆಗಳನ್ನು ಖಂಡಿಸಿ ಕರ್ನಾಟಕ ಬಂದ್ ಅನ್ನು ಕರೆ ನೀಡಿದ್ದಾರೆ. ಇದೇ ಶನಿವಾರ ಅಂದರೆ, ಮಾರ್ಚ್ 22ರಂದು ಕರ್ನಾಟಕ ಬಂದ್ ಮಾಡಲು ಮುಂದಾಗಿದ್ದಾರೆ. ಇವರಿಗೆ ಕೆಲವು ಕ್ಷೇತ್ರಗಳು ಬೆಂಬಲ ವ್ಯಕ್ತಪಡಿಸಿವೆ. ಮತ್ತೆ ಕೆಲವು ನೀಡಿಲ್ಲ. ಇದೇ ಬೆನ್ನಲ್ಲೇ ಕನ್ನಡ ಚಿತ್ರರಂಗ ನಿಲುವು ಏನು ಅನ್ನೋದನ್ನು ಎದುರು ನೋಡಲಾಗುತ್ತಿತ್ತು.

ಇಂದು (ಮಾರ್ಚ್ 20) ಕರ್ನಾಟಕ ಫಿಲ್ಮ್ ಚೇಂಬರ್‌ನಲ್ಲಿ ಚಿತ್ರರಂಗದ ಬೇರೆ ಬೇರೆ ಸಂಘಗಳು ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬಂದಿದೆ. ಶನಿವಾರದ ಕರ್ನಾಟಕದ ಬಂದ್‌ಗೆ ಫಿಲ್ಮ್ ಚೇಂಬರ್ ಬೆಂಬಲ ವ್ಯಕ್ತಪಡಿಸಿದೆ. ಆದರೆ ಚಿತ್ರರಂಗವನ್ನು ಬಂದ್ ಮಾಡುವುದಿಲ್ಲ ಎಂದು ತನ್ನ ನಿರ್ಧಾರವನ್ನು ತಿಳಿಸಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ನೇತೃತ್ವದಲ್ಲಿ ಈ ಸಭೆ ನಡೆದಿತ್ತು.
ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸುವ ಕುರಿತು ಅಧ್ಯಕ್ಷ ನರಸಿಂಹಲು ಸೇರಿದಂತೆ ಪದಾಧಿಕಾರಿಗಳು ಬೆಂಬಲ ನೀಡಿದ್ದಾರೆ. ಕನ್ನಡ ಚಿತ್ರರಂಗ ಕರ್ನಾಟಕ ಬಂದ್‌ಗೆ ತನ್ನ ಬೆಂಬಲ ನೀಡುತ್ತಿದೆ, ಆದರೆ ಯಾವುದೇ ಚಿತ್ರೀಕರಣ ಬಂದ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲಾ ಸಂಘಗಳ ಜೊತೆ ಚರ್ಚೆ ಮಾಡಿ, ಅಭಿಪ್ರಾಯವನ್ನು ಸಂಗ್ರಹಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.
ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗದ ಬೆಂಬಲ ಕೊಡುತ್ತಿದೆ. ಆದರೆ, ನಿರ್ಮಾಪಕರ ಹಿತದೃಷ್ಟಿಯಿಂದ ಸಿನಿಮಾ ಚಿತ್ರೀಕರಣಗಳನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ. ಥಿಯೇಟರ್ ಮಾಲೀಕರು ಕೂಡ ಕರ್ನಾಟಕ ಬಂದ್‌ಗೆ ತಮ್ಮ ಬೆಂಬಲ ನೀಡಿದ್ದಾರೆ. ಶನಿವಾರ (ಮಾರ್ಚ್ 22) ಅಂದು ಬೆಳಗಿನ ಶೋಗಳ ಪ್ರದರ್ಶನವನ್ನು ಮಾಡುವುದಿಲ್ಲ. ಮಧ್ಯಾಹ್ನದ ನಂತರ ಚಿತ್ರಮಂದಿರಗಳಲ್ಲಿ ಎಂದಿನಂತೆ ಶೋ ನಡೆಯಲಿವೆ ಎಂಬ ಮಾಹಿತಿ ನೀಡಿದ್ದಾರೆ.
ಡಾ.ರಾಜ್‌ಕುಮಾರ್ ಅವರ ಕಾಲದಿಂದಲೂ ಕನ್ನಡ ನೆಲ, ಜಲ, ಭಾಷೆಗೆ ಕುತ್ತು ಬಂದಾಗ ಕನ್ನಡ ಚಿತ್ರರಂಗ ಬೆಂಬಲ ನೀಡುತ್ತಲೇ ಇದೆ. ಈಗ ರಾಜ್ಯದ ಹಿತ ದೃಷ್ಟಿಯಿಂದ ಮಾಡುತ್ತಿರುವ ಕರ್ನಾಟಕ ಬಂದ್‌ಗೆ ಸಿನಿಮಾ ಕ್ಷೇತ್ರದ ಎಲ್ಲಾ ವಲಯಗಳಿಂದಲೂ ಬೆಂಬಲ ಸಿಕ್ಕಿದೆ. ಆದರೆ, ಸಿನಿಮಾ ಶೂಟಿಂಗ್‌ಗೆ ಮಾತ್ರ ಯಾವುದೇ ಕಡಿವಾಣ ಹಾಕುವುದಿಲ್ಲ. ಒಂದು ವೇಳೆ ಸಿನಿಮಾದ ನಿರ್ಮಾಪಕರು ಸ್ವಯಂಪ್ರೇರಿತವಾಗಿ ಶೂಟಿಂಗ್ ನಿಲ್ಲಿಸಿದರೆ, ಅದಕ್ಕೆ ನಮ್ಮ ಸ್ವಾಗತವಿದೆ. ಕಲಾವಿದರ ಸಂಘ, ನಿರ್ಮಾಪಕರ ಸಂಘದಿಂದಲೂ ಸಹ ಬೆಂಬಲವಿದೆ ಎಂದು ಸಭೆಯ ಬಳಿಕ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಹೇಳಿದ್ದಾರೆ.


Click it and Unblock the Notifications











