ಕನ್ನಡ ಚಿತ್ರರಂಗದ ಮೊದಲ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿಗೆ 50ರ ಸಂಭ್ರಮ; ಲೋಗೊ ಅನಾವರಣ
ಕನ್ನಡ ಚಿತ್ರರಂಗದ ಮೊದಲ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿ. ಈ ಸಂಸ್ಥೆಗೆ ಈಗ 50ರ ಸಂಭ್ರಮ. 1976ರಲ್ಲಿ ದಿವಂಗತ ಡಿ.ವಿ.ಸುಧೀಂದ್ರ ಅವರು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಕಟ್ಟಿದರು. ಅಲ್ಲಿಂದ ಈ ಸಂಸ್ಥೆ ಕನ್ನಡ ಸಿನಿಮಾರಂಗದ ಸೇವೆಯಲ್ಲಿ ತೊಡಗಿಕೊಂಡಿದೆ. ಕನ್ನಡ ಖ್ಯಾತ ದಿಗ್ಗಜರ ಸಿನಿಮಾಗಳಿಗೆ ಅಭೂತಪೂರ್ವ ಪ್ರಚಾರವನ್ನು ಮಾಡಿದೆ.
ರಾಘವೇಂದ್ರ ಚಿತ್ರವಾಣಿ ಇದೂವರೆಗೂ ಸುಮಾರು 3000ಕ್ಕೂ ಅಧಿಕ ಸಿನಿಮಾಗಳಿಗೆ ಪ್ರಚಾರ ಮಾಡಿದೆ. ಈ ಸಾಧನೆ ಮಾಡಿರುವ ಕನ್ನಡದ ಏಕೈಕ ಸಂಸ್ಥೆ ಇದಾಗಿದೆ. ಅಲ್ಲದೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಯಾವ ಸಿನಿಮಾ ಪ್ರಚಾರ ಸಂಸ್ಥೆ ಕೂಡ ಐವತ್ತು ವರ್ಷಗಳ ಕಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ ಉದಾಹರಣೆಗಳಿಲ್ಲ. ಡಿ.ವಿ.ಸುಧೀಂದ್ರ ಅವರು ಅಗಲಿದ ಬಳಿಕ ಪ್ರಸ್ತುತ ಈ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಸುಧೀಂದ್ರ ವೆಂಕಟೇಶ್ ನಡೆಸಿಕೊಂಡು ಹೋಗುತ್ತಿದ್ದಾರೆ.

ಇನ್ನು ದಿವಂಗತ ಸುಧೀಂದ್ರ ಅವರ ಪುತ್ರ ಸುನೀಲ್ ಸುಧೀಂದ್ರ, ಡಿ.ಜಿ.ವಾಸುದೇವ್, ಪವನ್ ವೆಂಕಟೇಶ್ ಸಾಥ್ ನೀಡುತ್ತಿದ್ದಾರೆ. ಈ ಐವತ್ತರ ಸಂಭ್ರಮವನ್ನು ಏಪ್ರಿಲ್ ತಿಂಗಳಲ್ಲಿ ವಿಶೇಷವಾಗಿ ಆಚರಿಸಲು ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಮುಂದಾಗಿದೆ. ಇದರ ಪೂರ್ವಭಾವಿಯಾಗಿ ಇತ್ತೀಚೆಗೆ ಸುವರ್ಣ ಸಂಭ್ರಮದ ಲೋಗೊ ಅನಾವರಣಗೊಂಡಿದೆ. ಹಿರಿಯ ನಟರಾದ ಜೆ.ಕೆ.ಶ್ರೀನಿವಾಸಮೂರ್ತಿ, ನಟ ಕೋಮಲ್ ಕುಮಾರ್ ಹಾಗೂ ನಟಿ ಅನು ಪ್ರಭಾಕರ್ ಮುಖರ್ಜಿ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುವರ್ಣ ಸಂಭ್ರಮದ ಲೋಗೊ ಅನಾವರಣ ಮಾಡಿದರು. ಡಿ.ವಿ.ಸುಧೀಂದ್ರ ಅವರ ಪತ್ನಿ ಶ್ರೀಮತಿ ಪದ್ಮ ಸುಧೀಂದ್ರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿರಿಯ ನಟ ಜೆ.ಕೆ ಶ್ರೀನಿವಾಸಮೂರ್ತಿ ಮಾತನಾಡಿ, "ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೂ 50 ವರ್ಷ. ನಾನು ಸಿನಿಮಾರಂಗಕ್ಕೆ ಬಂದು 50 ವರ್ಷ. ಆಗಿನಿಂದಲೂ ನನಗೆ ಸುಧೀಂದ್ರ ಅವರ ಜೊತೆ ಒಡನಾಟ. ಪ್ರಚಾರ ಸಂಸ್ಥೆಯೊಂದು ಈ ರೀತಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಖುಷಿಯಾಗಿದೆ. ರಾಘವೇಂದ್ರ ಚಿತ್ರವಾಣಿ ನೂರು ವರ್ಷಗಳ ಸಂಭ್ರಮವನ್ನು ಕಾಣುವಂತಾಗಲಿ" ಎಂದು ಹಾರೈಸಿದರು.
ಇನ್ನು ವಿಶೇಷ ಅತಿಥಿಯಾಗಿ ಬಂದಿದ್ದ ಕೋಮಲ್ ಕುಮಾರ್ "ನೀವು ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಟರಾಗಿ ಬೆಳೆಯುತ್ತೀರಾ ಎಂದು ನನಗೆ ಹಾರೈಸಿದವರು ಸುಧೀಂದ್ರ. ಅವರ ತುಂಬು ಕುಟುಂಬ ನೋಡಿದರೆ ನನಗೆ ಸಂತೋಷ ಆಗುತ್ತೆ. ಸುಧೀಂದ್ರ ಅವರ ನಿಧನದ ನಂತರ ವೆಂಕಟೇಶ್ ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ಕುಟುಂಬದ ಎಲ್ಲರೂ ಅವರಿಗೆ ಜೊತೆಯಾಗಿ ನಿಂತಿದ್ದಾರೆ. ರಾಘವೇಂದ್ರ ಚಿತ್ರವಾಣಿ ಸಂಸ್ಥೆ ರಾಯರ ದಯೆಯಿಂದ ಇನ್ನಷ್ಟು ಹೆಸರು ಮಾಡಲಿ" ಎಂದು ನಟ ಕೋಮಲ್ ಕುಮಾರ್ ಶುಭಕೋರಿದ್ದಾರೆ.
ಇನ್ನು ಅನು ಪ್ರಭಾಕರ್ ಮುಖರ್ಜಿ ಕೂಡ ರಾಘವೇಂದ್ರ ಚಿತ್ರವಾಣಿ ಬಗ್ಗೆ ಮಾತಾಡಿದ್ದಾರೆ. "ನಾನು ಬಾಲ ನಟಿಯಾದಗಿನಿಂದಲೂ ಸುಧೀಂದ್ರ ಸರ್ ನೋಡಿಕೊಂಡು ಬೆಳೆದವಳು. ನಮ್ಮ ಕುಟುಂಬಕ್ಕೂ ಹಾಗೂ ಅವರ ಕುಟುಂಬಕ್ಕೂ ಬಹಳ ಆತ್ಮೀಯತೆ. ಎಲ್ಲರೂ ಹೇಳಿದ ಹಾಗೆ ಪ್ರಚಾರ ಸಂಸ್ಥೆಯೊಂದು 50 ವರ್ಷಗಳ ಕಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಹೆಮ್ಮೆ" ಎಂದು ನಟಿ ಅಭಿಪ್ರಾಯ ಪಟ್ಟಿದ್ದಾರೆ.
ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನ ಮುನ್ನಡೆಸುತ್ತಿರುವ ಸುಧೀಂದ್ರ ವೆಂಕಟೇಶ್ ಲೋಗೊ ಅನಾವರಣ ಮಾಡಿಕೊಟ್ಟ ಚಿತ್ರರಂಗದ ಗಣ್ಯರಿಗೆ ಧನ್ಯವಾದ ಹೇಳಿದ್ರು. ಏಪ್ರಿಲ್‌ನಲ್ಲಿ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 50 ನೇ ವರ್ಷದ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲು ಸಿದ್ದತೆ ನಡೆಯುತ್ತಿದೆ. ಆಗಿನಿಂದಲೂ ನಮಗೆ ಪ್ರೋತ್ಸಾಹ ನೀಡುತಾ ಬಂದಿರುವ ಚಿತ್ರರಂಗ ಹಾಗೂ ಮಾಧ್ಯಮರಂಗಕ್ಕೆ ನಾವು ಆಬಾರಿ ಎಂದರು.


Click it and Unblock the Notifications











