ಮಲ್ಲಿ ರಿಟರ್ನ್ಸ್; ದಿಢೀರನೇ ಪ್ರತ್ಯಕ್ಷ.. ವಿಜಯಲಕ್ಷ್ಮಿ ದರ್ಶನ್ ಭೇಟಿ.. ಸಿನಿಮಾ ಮಂದಿ ಲೆಕ್ಕಾಚಾರವೇನು?
ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ 8 ವರ್ಷಗಳ ಹಿಂದೆ ದಿಢೀರನೇ ಕಣ್ಮರೆಯಾಗಿದ್ದರು. ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ನಷ್ಟ ಆಗಿ, ಕೋಟಿ ಲೆಕ್ಕದಲ್ಲಿ ಸಾಲ ಮಾಡಿಕೊಂಡಿದ್ದರು. ಅದು ಕತ್ತಿನವರೆಗೂ ಬಂದಾಗ, ರಾತ್ರೋ ರಾತ್ರಿ ಊರು ಬಿಟ್ಟಿದ್ದರು. ಮಲ್ಲಿಕಾರ್ಜುನ್ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಬದುಕಿದ್ದಾರಾ? ಸತ್ತಿದ್ದಾರಾ? ಹೀಗೆ ನೂರೆಂಟು ಪ್ರಶ್ನೆಗಳು ಸಿನಿಮಾ ಮಂದಿಯನ್ನು ಕಾಡಿತ್ತು. ಅದರಲ್ಲೂ ಸಾಲ ಕೊಟ್ಟವರು ಚಿಂತೆಗೀಡಾಗಿದ್ದರು.
ದರ್ಶನ್‌ಗೆ ಮ್ಯಾನೇಜರ್ ಆಗಿದ್ದಾಗ ಮಲ್ಲಿಕಾರ್ಜುನ್ ರಾಜನಂತೆ ಇದ್ದರು. ಅವರಿಗೆ ಎಂದಿಗೂ ಹಣ ಸಮಸ್ಯೆ ಆಗಿದ್ದು ಇಲ್ಲ. ಆದರೆ, ಮ್ಯಾನೇಜರ್ ಜೊತೆ ಜೊತೆಗೆ ನಿರ್ಮಾಣ, ವಿತರಣೆಗೆ ಕೈ ಹಾಕಿದ್ದು ದೊಡ್ಡ ಮಟ್ಟಕ್ಕೆ ಏಟು ಕೊಟ್ಟಿತ್ತು. ಒಂದರ ಹಿಂದೊಂದು ಸಿನಿಮಾ ಸೋತಿತ್ತು. ನಿರ್ಮಾಣಕ್ಕೆ ಕೈ ಹಾಕಿದ್ದು, ವಿತರಣೆ ಮಾಡಿದ್ದು ದೊಡ್ಡ ಮಟ್ಟದಲ್ಲಿ ನಷ್ಟ ಕೊಟ್ಟಿತ್ತು. ಹೀಗಾಗಿ ಊರು ಬಿಡಲೇಬೇಕಾದ ಪರಿಸ್ಥಿತಿ ಎದುರಾಗಿತ್ತು. ದರ್ಶನ್ ಜೊತೆಗೆ ಇದ್ದಾಗಿನ ಗತ್ತು-ಗೈರತ್ತು ಎಲ್ಲವೂ ಕುಗ್ಗಿತ್ತು.

ಇನ್ನು ಮಲ್ಲಿಕಾರ್ಜುನ್ ಅವರನ್ನು ದರ್ಶನ್ ಕೂಡ ನೋಡುವುದಕ್ಕೆ ಸಾಧ್ಯವಾಗುವುದಿಲ್ಲವೇನೋ ಎಂಬ ಅನುಮಾನವೂ ಮೂಡಿತ್ತು. ಆದರೆ, 8 ಎಂಟು ವರ್ಷಗಳ ಬಳಿಕ ಮತ್ತೆ ದಿಢೀರನೇ ಪ್ರತ್ಯಕ್ಷ ಆಗಿದ್ದಾರೆ. ಸಾಲ ಕೊಟ್ಟವರ ಮುಂದೆ ಬರುವುದಕ್ಕೆ ಸಕಲ ತಯಾರಿಗಳನ್ನು ಮಾಡಿಕೊಂಡೇ ಬಂದಿದ್ದಾರೆ. ಮಲ್ಲಿ ರಿಟರ್ನ್ ಆಗುತ್ತಿದ್ದಂತೆ ಇತ್ತ ಸಿನಿಮಾ ಮಂದಿ ತಲೆ ಬೇರೆನೇ ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅಸಲಿಗೆ ದಿಢೀರನೇ ಮಲ್ಲಿಕಾರ್ಜುನ್ ಮರಳಿ ಬಂದಿದ್ದಕ್ಕೆ ಕಾರಣ ಹುಡುಕಿಟ್ಟುಕೊಂಡಿದ್ದಾರೆ.
ಮಲ್ಲಿಕಾರ್ಜುನ್ ತೀರಿಸಬೇಕಾಗಿದ್ದು ಐದಾರು ಕೋಟಿ ಸಾಲವಿದೆ. ಅಲ್ಲದೇ ಅವರೇ ಹೇಳಿಕೊಂಡಂತೆ ದರ್ಶನ್ ಅವರಿಂದಲೇ 1 ಕೋಟಿ ರೂಪಾಯಿ ಸಾಲ ಪಡೆದಿದ್ದಾಗಿ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಮಲ್ಲಿಕಾರ್ಜುನ್ ಈ ಎಲ್ಲಾ ಸಾಲವನ್ನು ತೀರಿಸುವುದಕ್ಕೆ ಮರಳಿ ಬಂದರೇ..? ಇಲ್ಲ ರಿ-ಎಂಟ್ರಿಯ ಹಿಂದಿನ ಕಹಾನಿ ಬೇರೆ ಇದೆಯಾ? ಈ ಪ್ರಶ್ನೆಗಳಿಗೆ ಸ್ಯಾಂಡಲ್‌ವುಡ್ ಮಂದಿ ಬಳಿ ಬೇರೆನೇ ಉತ್ತರವಿದೆ.
ದರ್ಶನ್ ಈಗ ಸಂಕಷ್ಟದಲ್ಲಿ ಇದ್ದಾರೆ. ರೇಣುಕಾಸ್ವಾಮಿ ಪ್ರಕರಣ ಇನ್ನು ಎಷ್ಟು ದಿನ ತೆಗೆದುಕೊಂಡು ಹೋಗುತ್ತೋ ಗೊತ್ತಿಲ್ಲ. ಇನ್ನೆಷ್ಟು ದಿನ ಜೈಲಿನಲ್ಲೇ ಇರಬೇಕಾಗುತ್ತೋ ಗೊತ್ತಿಲ್ಲ. ಈಗಾಗಲೇ ದರ್ಶನ್ ಜೈಲು ಸೇರಿದ್ದರಿಂದ ಕನ್ನಡ ಚಿತ್ರರಂಗಕ್ಕೂ ನಷ್ಟ ಆಗಿದೆ. ವರ್ಷಕ್ಕೆ ಕಮ್ಮಿ ಅಂದರೂ ಎರಡು ಸಿನಿಮಾಗಳನ್ನು ಕೊಡುತ್ತಿದ್ದರು. ಹೀಗಾಗಿ ಸ್ಯಾಂಡಲ್‌ವುಡ್ ಕೊಂಚ ಮಟ್ಟಿಗೆ ಸೊರಗಿದೆ ಅಂತ ಹೇಳಬಹುದು. ಈಗ ದರ್ಶನ್‌ಗೆ ಒಂದು ಪವರ್‌ಫುಲ್ ಕಿಕ್ ಸ್ಟಾರ್ಟ್ ಬೇಕಿದೆ. ಅದಕ್ಕೆ ಮಲ್ಲಿ ಎಂಟ್ರಿ ಕೊಡಿಸಲಾಗಿದೆ ಅನ್ನೋದು ಸಿನಿಮಾ ಮಂದಿ ಮಾತು.

ಮಲ್ಲಿಕಾರ್ಜುನ್ ಜೊತೆಯಲ್ಲಿ ಇದ್ದಾಗ ದರ್ಶನ್ ಕರಿಯರ್ ನೀಟಾಗಿತ್ತು. ಹೆಚ್ಚು ವಿವಾದಗಳು ಇಲ್ಲದೆ, ಸಿನಿಮಾಗಷ್ಟೇ ಸಮಯ ನೀಡುವಂತೆ ಆಗಿತ್ತು. ದರ್ಶನ್ ಸಿನಿಮಾಗಳನ್ನಷ್ಟೇ ಅಲ್ಲದೆ, ಅವರನ್ನು ಬ್ರ್ಯಾಂಡಿಂಗ್ ಮಾಡುವ ಕೆಲಸವನ್ನೂ ಮಲ್ಲಿಕಾರ್ಜುನ್ ಚೆನ್ನಾಗಿ ಮಾಡುತ್ತಿದ್ದರು. ಹೀಗಾಗಿ ಮಲ್ಲಿಕಾರ್ಜುನ್ ಇದ್ದಷ್ಟು ದಿನ ದರ್ಶನ್ ನೆಮ್ಮದಿಯಾಗಿ ಇದ್ದರು. ಮಲ್ಲಿಕಾರ್ಜುನ್ ನಾಪತ್ತೆ ಆದ್ಮೇಲೆ ದರ್ಶನ್ ವೃತ್ತಿ ಬದುಕಿನಲ್ಲಿ ಟಾಪ್‌ನಲ್ಲಿ ಇದ್ದರೂ, ವ್ಯವಸ್ಥಿತವಾಗಿದ್ದಂತೆ ಕಂಡು ಕಾಣಿಸಲಿಲ್ಲ. ಈಗ ಮತ್ತೆ ದರ್ಶನ್ ಅದೇ ಪೀಕ್‌ಗೆ ಹೋಗಬೇಕಿದೆ. ಹೀಗಾಗಿ ವಿಜಯಲಕ್ಷ್ಮಿಯವರೇ ಮಲ್ಲಿಕಾರ್ಜುನ್ ಅನ್ನು ಕರೆಸಿಸಿದ್ದಾರೆಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಲ್ಲಿಕಾರ್ಜುನ್ ವಿಜಯಲಕ್ಷ್ಮಿಯವರು ಸಂಪರ್ಕದಲ್ಲಿ ಇದ್ದರು ಎನ್ನಲಾಗಿದೆ. ಮಲ್ಲಿಕಾರ್ಜುನ್ ಮಾಡಿದ ತಪ್ಪುಗಳನ್ನೆಲ್ಲ ಮನ್ನಿಸಿ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುವುದಕ್ಕೆ ಸಲಹೆ ನೀಡಿದ್ದಾರೆ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ. ಮಲ್ಲಿಕಾರ್ಜುನ್ ಕೂಡ ಪತ್ರಿಕಾಗೋಷ್ಠಿಯಲ್ಲಿ ವಿಜಯಲಕ್ಷ್ಮಿ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದು, ಪುಷ್ಠಿಕೊಟ್ಟಿದೆ. ಅಲ್ಲದೇ ಅಜ್ಞಾತವಾಸದಲ್ಲಿ ಇದ್ದಾಗಲೂ ದಿನಕರ್ ಜೊತೆ ಸಂಪರ್ಕದಲ್ಲಿ ಇದ್ದಿದ್ದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ದರ್ಶನ್ ಜೈಲಿಂದ ಹೊರ ಬರುತ್ತಿದ್ದಂತೆ ಮಲ್ಲಿಕಾರ್ಜುನ್ ರಿ-ಎಂಟ್ರಿ ಖಚಿತ ಎಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.
ಇನ್ನೊಂದು ಕಡೆ ಈ ಎಲ್ಲಾ ಬೆಳವಣಿಗಳ ಮಧ್ಯೆ ವಿಜಯಲಕ್ಷ್ಮಿ ಅವರು ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆಂದು ಹೇಳಲಾಗಿದೆ. ಈ ವೇಳೆ ಮಲ್ಲಿಕಾರ್ಜುನ್ ಬಗ್ಗೆ ಚರ್ಚೆ ಮಾಡಿರಬಹುದೆಂದು ಹೇಳಲಾಗುತ್ತಿದೆ. ಇತ್ತ ಸಿನಿಮಾ ಮಂದಿ ಮಾತ್ರ ವಿಜಯಲಕ್ಷ್ಮಿ ದರ್ಶನ್ ಏನೋ ದೊಡ್ಡದು ಪ್ಲಾನ್ ಮಾಡುತ್ತಿದ್ದು, ಅದಕ್ಕಾಗಿಯೇ ಮಲ್ಲಿಕಾರ್ಜುನ್ ರಿಟರ್ನ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ ಎನ್ನುತ್ತಿದ್ದಾರೆ. ಆದರೆ, ಈ ಬಗ್ಗೆ ಮಲ್ಲಿಕಾರ್ಜುನ್ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.


Click it and Unblock the Notifications
