ಪುನೀತ್ ಆತ್ಮಕ್ಕೆ ದೀಪ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲು ಕರೆ: ವಿಶ್ವದಾದ್ಯಂತ 'ದೀಪದ ನಮನ'
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ಬಳಿಕ ಇಡೀ ಚಿತ್ರರಂಗದಲ್ಲಿ ಸ್ಮಶಾನ ಮೌನ ಆವರಿಸಿದೆ. ಪುನೀತ್ ಅಭಿಮಾನಿಗಳಂತೂ ತನ್ನ ನೆಚ್ಚಿನ ನಟನನ್ನು ಕಳೆದುಕೊಂಡು ರೋದಿಸುತ್ತಿದ್ದಾರೆ. ರಾಜ್ಯ ಮೂಲೆ ಮೂಲೆಯಲ್ಲಿರುವ ಪುನೀತ್ ಅಭಿಮಾನಿಗಳು ತಮಗೆ ತೋಚಿದಂತೆ ಅಂತಿಮ ನಮನ ಸಲ್ಲಿಸಿದ್ದರು. ಕನ್ನಡ ಚಿತ್ರರಂಗ ಕೂಡ ಕಳೆದ ನವೆಂಬರ್ 16ರಂದು ಅಗಲಿದ ಅಪ್ಪುಗೆ ನಮನ ಸಲ್ಲಿಸಿ ಗೌರವ ಸೂಚಿಸಿದ್ದರು.
ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ಅಪ್ಪು ಮಾಡಿದ ಸಮಾಜ ಸೇವೆ ಲೋಕಕ್ಕೆ ಗೊತ್ತಾಗಿದೆ. ಈಗ ಅವರಂತೆ ಅವರ ಅಭಿಮಾನಿಗಳೂ ಕೂಡ ಸಮಾಜ ಸೇವೆಯಲ್ಲಿ ಭಾಗಿಯಾಗಿದ್ದಾರೆ. ಕೇವಲ ನಟನಾಗಿ ಅಷ್ಟೇ ಅಲ್ಲದೆ ಹಸಿದವರಿಗೆ, ಅಸಹಾಯಕರಿಗೆ, ಬಳಲಿದವರಿಗೆ, ಹಿರಿಯರಿಗೆ ನೆರವು ನೀಡಿದ ಪುನೀತ್ ಸಹಾಯಹಸ್ತ ಚಾಚಿದ್ದರು. ಕನ್ನಡ ಚಿತ್ರರಂಗ ಕಂಡ ಇಂತಹ ಮೇರು ನಟನಿಗೆ ದೀಪ ಬೆಳಗುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲು ಮುಂದಾಗಿದ್ದಾರೆ.

ಅಪ್ಪು ಆತ್ಮಕ್ಕೆ ದೀಪದ ಶ್ರದ್ದಾಂಜಲಿ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಆತ್ಮಕ್ಕೆ ಶಾಂತಿ ಕೋರಲು, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗ ಮುಂದಾಗಿದೆ. ಅಭಿಮಾನಿಗಳು ಎಲ್ಲಿದ್ದಾರೋ ಅಲ್ಲಿಂದಲೇ ದೀಪ ಬೆಳಗಿ ಅಪ್ಪು ಆತ್ಮಕ್ಕೆ ಶಾಂತಿ ಕೋರುವಂತೆ ಕೇಳಿಕೊಳ್ಳಲಾಗಿದೆ. 'ಕರುನಾಡು ಬಾ ಬೆಳಕೆ' ಅನ್ನುವ ಕಾರ್ಯಕ್ರಮದಡಿ ಇಡೀ ವಿಶ್ವದ ಮೂಲೆ ಮೂಲೆಯಲ್ಲಿರುವ ಪುನೀತ್ ಅಭಿಮಾನಿಗಳಿಗೆ ಕರೆ ನೀಡಲಾಗಿದೆ.

ಅಪ್ಪುಗೆ ದೀಪ ನಮನ ಯಾವಾಗ?
ಇಂದು(ನವೆಂಬರ್ 19) ಸಂಜೆ 7 ಗಂಟೆಗೆ ದೀಪ ನಮನ ಕಾರ್ಯಕ್ರಮಕ್ಕೆ ಕನ್ನಡ ಚಲನಚಿತ್ರ ನಿರ್ಮಾಪಕರು ಕರೆ ನೀಡಿದ್ದಾರೆ. ಏಕಕಾಲಕ್ಕೆ ಮನೆಯಿಂದಲೋ, ಕಚೇರಿಯಿಂದಲೋ ಎಲ್ಲಿದ್ದಾರೋ ಅಲ್ಲಿಂದಲೇ ದೀಪ ಬೆಳಗಿ ನಮನ ಸಲ್ಲಿಸಲು ಕೋರಿಕೊಳ್ಳಲಾಗಿದೆ. " ವಾಣಿಜ್ಯ ಮಂಡಳಿ ಮುಂದೆ ಇಡೀ ಚಿತ್ರರಂಗ ಸೇರಿ ದೀಪ ಬೆಳಗಿ ಶ್ರದ್ಧಾಂಜಲಿ ಸಲ್ಲಿಸುವ ಆಲೋಚನೆಯಿತ್ತು. ಆದರೆ, ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವಿದ್ದಲ್ಲಿಂದಲೇ ದೀಪ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲು ಇಡೀ ಚಿತ್ರರಂಗಕ್ಕೆ ತಿಳಿಸಲಾಗಿದೆ. ಅಲ್ಲದೆ ಪುನೀತ್ ಅಭಿಮಾನಿಗಳಿಗೂ ಶೇರ್ ಮಾಡಿದ್ದಾರೆ. ಅವರೂ ಭಾಗವಹಿಸುತ್ತಿದ್ದಾರೆ." ಎಂದು ನಿರ್ಮಾಪಕ ಬಾ. ಮಾ ಹರೀಶ್ ತಿಳಿಸಿದ್ದಾರೆ.

'ದೀಪ ನಮನ' ಕಾರ್ಯಕ್ರಮ ಯಾಕೆ?
ನವೆಂಬರ್ 16ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದಲೇ 'ಪುನೀತ್ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈಗ ಮತ್ತೆ ಅದೇ ಚಿತ್ರರಂಗ 'ದೀಪ ನಮನ ಕಾರ್ಯಕ್ರಮಕ್ಕೆ ಮುಂದಾಗಿದೆ. " ಪುನೀತ್ ನಮನ ಕಾರ್ಯಕ್ರಮದಲ್ಲಿ ಕೆಲವೇ ಜನರಿಗೆ ಮಾತ್ರ ಅವಕಾಶ ಸಿಕ್ಕಿತ್ತು. ವಾಣಿಜ್ಯ ಮಂಡಳಿಯ ಸದಸ್ಯರಿಗೆ ಪಾಸ್ ವಂಚಿತರಾಗಿದ್ದರು. ಇವರೊಂದಿಗೆ, ನಿರ್ಮಾಪಕರು, ಕೆಲವು ಕಲಾವಿದರು, ತಂತ್ರಜ್ಞರು, ಪ್ರದರ್ಶಕರು, ವಿತರಕರು ಹಾಗೂ ಕಾರ್ಮಿಕರಿಗೆ ನಮನ ಸಲ್ಲಿಸಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ನಮ್ಮಂತ ಪಾಸ್ ವಂಚಿತರಿಗಾಗಿ 'ದೀಪ ನಮನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಾಸ್ ಸಿಕ್ಕು ಪುನೀತ್ ನಮನಕ್ಕೆ ಹೋದವರೂ ಕೂಡ ದೀಪ ನಮನದಲ್ಲಿ ಭಾಗವಹಿಸುತ್ತಾರೆ. ಇಡೀ ಚಿತ್ರರಂಗ ಒಟ್ಟಾಗಿ ಈ ಕಾರ್ಯ ಮಾಡುತ್ತಿದ್ದೇವೆ" ಅಂತಾರೆ ಬಾ.ಮಾ ಹರೀಶ್,

ಎಷ್ಟು ಮಂದಿ ಭಾಗವಹಿಸಬಹುದು?
ಚಿತ್ರರಂಗದ ಗಣ್ಯರಿಗೆ ಹಾಗೂ ಪುನೀತ್ ಅಭಿಮಾನಿಗಳಿಗೆ ನಿರ್ಮಾಪಕರು ಸಂದೇಶ ರವಾನೆ ಮಾಡಿದ್ದಾರೆ. ಸುಮಾರು ಮೂರು ಲಕ್ಷಕ್ಕೂ ಅಧಿಕ ಮಂದಿ ದೀಪ ನಮನ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇನ್ನೂ ವಿಶ್ವದಾದ್ಯಂತ ನೆಲೆಸಿರುವ ಪುನೀತ್ ಅಭಿಮಾನಿಗಳಿಗೆ ಕರೆ ನೀಡಿರುವುದರಿಂದ ಸಂಜೆ 7 ಗಂಟೆಗೆ ದೀಪ ನಮನ ಕಾರ್ಯಕ್ರಮದ ಕರೆಗೆ ಹೇಗೆ ಪ್ರತಿಕ್ರಿಯೆ ಸಿಗುತ್ತೆ ಅನ್ನುವುದು ಗೊತ್ತಾಗಲಿದೆ.
ಪುನೀತ್ ಅಭಿಮಾನಿಗಳಿಗಾಗಿಯೇ 'ಪುನೀತ್ ನೆನಪು' ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲು ಫಿಲ್ಮ್ ಚೇಂಬರ್ ಚಿಂತನೆ ನಡೆಸಿದೆ. ಡಿಸೆಂಬರ್ ತಿಂಗಳಲ್ಲಿ ಈ ಕಾರ್ಯಕ್ರಮಕ್ಕೆ ಒಂದು ರೂಪುರೇಷೆ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಕಾರ್ಯಕ್ರಮವನ್ನು ಎಲ್ಲಿ ನಡೆಸಬೇಕು? ಹೇಗೆ ನಡೆಸಬೇಕು? ಅನ್ನುವುದು ಸದ್ಯಕ್ಕಿನ್ನೂ ಪ್ರಾಥಮಿಕ ಹಂತದಲ್ಲೇ ಇದೆ.


Click it and Unblock the Notifications











