ದ್ವಾರಕೀಶ್ ನಿಧನಕ್ಕೆ ಪಿಎಂ ಮೋದಿ ಸಂತಾಪ.. ಶಿವಣ್ಣ ಅಂತಿಮ ದರ್ಶನ; ಇಲ್ಲಿದೆ 'ಪ್ರಚಂಡ ಕುಳ್ಳ'ನ ಅಂತ್ಯಕ್ರಿಯೆ ಡಿಟೈಲ್ಸ್
ಕನ್ನಡ ಚಿತ್ರರಂಗದ ಲೆಜೆಂಡ್ ದ್ವಾರಕೀಶ್ ನಿನ್ನೆ (ಏಪ್ರಿಲ್ 16) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಚಿತ್ರರಂಗದಲ್ಲಿ ಸುಮಾರು ಆರು ದಶಕಗಳ ಕಾಲ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಸೇವೆ ಸಲ್ಲಿಸಿದ್ದರು. ಅವರ ಮೃತದೇಹವನ್ನು ಇಲೆಕ್ಟ್ರಾನಿಕ್ ಸಿಟಿಯ ಗುಳಿಮಂಗಳದ ನಿವಾಸದಲ್ಲಿ ಕುಟುಂಬಸ್ಥರ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಇಂದು (ಏಪ್ರಿಲ್ 17) ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತೆ.
ದ್ವಾರಕೀಶ್ ನಿಧನದ ಸುದ್ದಿ ಹೊರ ಬೀಳುತ್ತಿದ್ದಂತೆ ಚಿತ್ರರಂಗದ ಗಣ್ಯರು, ಆತ್ಮೀಯರು, ಸಂಬಂಧಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ನಿನ್ನೆ( ಏಪ್ರಿಲ್ 16) ದರ್ಶನ್, ಹಿರಿಯ ನಟ ಶ್ರೀನಾಥ್, ಶ್ರೀನಿವಾಸ್ ಮೂರ್ತಿ, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಹಲವು ಮಂದಿ ಗಣ್ಯರು ಶ್ರದ್ಧಾಂಜಲಿಯನ್ನು ಅರ್ಪಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯ ಮೂಲಕ ದ್ವಾರಕೀಶ್ ನಿಧನಕ್ಕೆ ಸಂತಾಪ ಸೂಚಿಸಿದ್ದರು. "ಚಿತ್ರೋದ್ಯಮಕ್ಕೆ ದ್ವಾರಕೀಶ್ ಅವರ ಕೊಡುಗೆ ಅಪಾರ. ದಶಕಗಳ ಕಾಲ ಸದಾ ನೆನಪಿನಲ್ಲಿ ಉಳಿಯುವ ನಟನೆ ಹಾಗೂ ಸಿನಿಮಾಗಳನ್ನು ನೀಡಿದ್ದಾರೆ. ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುವ ಹಾಗೂ ಹೊಸಬರನ್ನು ಬೆಂಬಲಿಸು ಮೂಲಕ ಕನ್ನಡ ಚಿತ್ರರಂಗವನ್ನು ರೂಪಿಸುವಲ್ಲಿ ಅವರ ಪಾತ್ರ ದೊಡ್ಡದು. ಅವರ ನಿಧನದಿಂದ ದುಃಖವಾಗಿದೆ. ಅವರ ಅದ್ಭುತ ಜರ್ನಿಯನ್ನು ನಾವು ಸ್ಮರಿಸುತ್ತೇವೆ. ಅವರ ಕುಟುಂಬಕ್ಕೆ ಮತ್ತು ಆತ್ಮೀಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ" ಎಂದು ನರೇಂದ್ರ ಮೋದಿ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.
ದ್ವಾರಕೀಶ್ ಅಂತಿಮ ವಿಧಿ ವಿಧಾನಗಳನ್ನು ಅವರ ಮನೆಯಲ್ಲಿ ನೆರವೇರಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅವರ ನಿವಾಸದಲ್ಲಿ ಕಾರ್ಯಗಳು ನಡಿದ್ದಿದ್ದು, ಶಿವರಾಜ್‌ಕುಮಾರ್ ಅಂತಿಮ ದರ್ಶನ ಪಡೆದಿದ್ದಾರೆ. ಇದೇ ವೇಳೆ "ದ್ವಾರಕೀಶ್ ಅವರು ಇಲ್ಲ ಅಂತ ನೆನಪಿಸಿಕೊಳ್ಳುವುದಕ್ಕೂ ಕಷ್ಟ. ಅವರು ಕನ್ನಡದ ಟಾಪ್ ಮೋಸ್ಟ್ ಪ್ರೊಡ್ಯೂಸರ್ ಅಂತ ಹೇಳಿದರೆ ತಪ್ಪಾಗುವುದಿಲ್ಲ." ಎಂದು ಶಿವಣ್ಣ ಹೇಳಿದ್ದಾರೆ.
ಮನೆಯಲ್ಲಿ ವಿಧಿ ವಿವಾದಗಳು ಮುಗಿದ ಬಳಿಕ ಬೆಳಿಗ್ಗೆ 8 ಸುಮಾರಿಗೆ ಬೆಂಗಳೂರಿನ ಟೌನ್ಹಾಲ್ ಸಮೀಪವಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ದ್ವಾರಕೀಶ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುತ್ತೆ. ಸುಮಾರು 11.30ರವರೆಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತೆ. ಬಳಿಕ ಬೆಂಗಳೂರಿನ ಚಾಮರಾಜಪೇಟೆ ಟಿಆರ್ಮಿಲ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.


Click it and Unblock the Notifications











