'ಅಬ ಜಬ ದಬ' ಮತ್ತೆ ಬಿಗ್ ಸ್ಕ್ರೀನ್‌ಗೆ ಕರಾಟೆ ಕಿಂಗ್ ಶಂಕರ್ ನಾಗ್ ಎಂಟ್ರಿ!
ಶಂಕರ್ ನಾಗ್ ಅಪಾರ ಅಭಿಮಾನಿಗಳನ್ನು ಅಗಲಿ ಬರೋಬ್ಬರಿ 31 ವರ್ಷಗಳಾಗಿವೆ. ಆದರೂ ಇನ್ನೂ ಅಭಿಮಾನಿಗಳು ಮಾತ್ರ ಕರಾಟೆ ಕಿಂಗ್ ಮರೆತಿಲ್ಲ. ಅವರ ಸಿನಿಮಾಗಳನ್ನು ಮರೆತಿಲ್ಲ. ಶಂಕರ್ ನಾಗ್ ಇದ್ದಿದ್ದರೆ, ಈಗ ಕನ್ನಡ ಸಿನಿಮಾ ಹೇಗಿರುತ್ತಿತ್ತು ಅಂತ ಮರುಗುವವರೂ ಕಮ್ಮಿಯಾಗಿಲ್ಲ. ಅದೇ ರೀತಿ ಶಂಕರ್ ನಾಗ್ ಇದ್ದಿದ್ದರೆ, ನಂದಿ ಬೆಟ್ಟಕ್ಕೆ ರೋಪ್ ವೇ ಆಗುತ್ತಿತ್ತು ಅಂತ ಹೇಳುವವರು ಇಂದಿಗೂ ಸಿಗುತ್ತಾರೆ. ಆದರೆ, ಜನರ ಮನಗೆದ್ದಿದ್ದ ಶಂಕರ್ ಮಾತ್ರ ನಮ್ಮೊಂದಿಗಿಲ್ಲ.
ಶಂಕರ್ ನಾಗ್ ಇಲ್ಲದೆ ಇದ್ದರೆ ಏನಂತೆ, ಅವರನ್ನು ಬೆಳ್ಳಿತೆರೆ ಮೇಲೆ ತರುವುದಕ್ಕೆ ನಿರ್ದೇಶಕರು ತುದಿಗಾಲಲ್ಲಿ ನಿಂತಿದ್ದಾರೆ. ಎರಡು ವರ್ಷದ ಹಿಂದೆ, ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸಲು ಬಂದಿದ್ದ ನಿರ್ದೇಶಕ ಮಯೂರ ರಾಘವೇಂದ್ರ ಮತ್ತೊಂದು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದುವೇ 'ಅಬ ಜಬ ದಬ'. ಕರಾಟೆ ಕಿಂಗ್ ಶಂಕರ್ ನಾಗ್ ರನ್ನು ತೆರೆಮೇಲೆ ತರಲು ಹೊರಟಿರುವುದು ಇವರೇ.
ಸದ್ಯ ಮಂತ್ರಾಲಯದ ರಾಯರ ಸಾನಿಧ್ಯದಲ್ಲಿ ಈ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಹಾಗಿದ್ದರೆ, 'ಅಬ ಜಬ ದಬ' ಸಿನಿಮಾದಲ್ಲಿ ಶಂಕರ್ ನಾಗ್ ಎಂಟ್ರಿ ಹೇಗಿರುತ್ತೆ ಅನ್ನುವುದನ್ನು ನಿರ್ದೇಶಕರು ಫಿಲ್ಮಿ ಬೀಟ್‌ಗೆ ವಿವರಿಸಿದ್ದಾರೆ.

ಶಂಕರಣ್ಣ ಮತ್ತೆ ತೆರೆಮೇಲೆ ಬರ್ತಾರಾ?
'ಅಬ ಜನ ದಬ' ಸಿನಿಮಾ ಟೈಟಲ್ ಜೊತೆ ಶಂಕರ್ ನಾಗ್ ಹೆಸರು ಇವೆಲ್ಲವೂ ಸಿನಿಪ್ರಿಯರಿಗೆ ಕುತೂಹಲ ಕೆರಳಿಸಿದೆ. ಹೀಗಾಗಿ ಈ ವಿನೂತನ ಪ್ರಯತ್ನದ ಬಗ್ಗೆ ನಿರ್ದೇಶಕ ಮಯೂರ ರಾಘವೇಂದ್ರ ಕೆಲವು ಸುಳಿವುಗಳನ್ನು ಬಿಟ್ಟುಕೊಟ್ಟಿದ್ದಾರೆ. "ಅಬ ಜಬ ದಬ ಇದೊಂದು ಕಾಮಿಡಿ ಟೈಟಲ್. ಟೈಟಲ್ ಕೇಳಿದ್ರೆನೇ ಕಾಮಿಡಿ ಟೈಟಲ್ ಅಂತ ಅನಿಸುತ್ತೆ. ಸಿನಿಮಾದ ಕೊನೆಯಲ್ಲಿ ಫ್ಯಾಂಟಸಿ ಟಚ್ ಇರುತ್ತೆ ಅಂತ ನಾನು ಹೇಳಬಲ್ಲೆ. ಈಗಾಗಲೇ ಪೋಸ್ಟರ್ ನೋಡಿದಾಗ ಕರಾಟೆ ಕಿಂಗ್ ಶಂಕರ್ ನಾಗ್ ಇನ್ ಅಬ ಜಬ ದಬ ಅಂತ ಇದೆ. ಶಂಕರಣ್ಣ ಬರ್ತಾರಾ? ಸ್ಯಾಂಡಲ್‌ವುಡ್ ಅಂತಿದೆ. ನಂದಿಬೆಟ್ಟ ಒಂದಿದೆ ಅಲ್ಲಿ. ರೋಪ್ ವೇ ಇದೆ ಅಲ್ಲಿ. ಅದರಲ್ಲಿ ಸಾಕಷ್ಟು ವಿಷಯಗಳು ಇವೆ. ಅದಕ್ಕೆ ನಾನು ಹೇಳಿದ ಹಾಗೆ ಒಂದು ಕಾಮಡಿ ಸಿನಿಮಾದಲ್ಲಿ ಫ್ಯಾಂಟಸಿ ಟಚ್ ಕೊಟ್ಟಿದ್ದಕ್ಕೆ 'ಅಬ ಜಬ ದಬ' ಅಂತಿದೆ. " ಎನ್ನುತ್ತಿದ್ದಾರೆ.

ಈ ಚಿತ್ರದಲ್ಲಿ ಶಂಕರ್ ನಾಗ್ ರದ್ದು ಪ್ರಮುಖ ಪಾತ್ರ
"ಶಂಕರ್‌ನಾಗ್ ಬಗ್ಗೆ ಹೆಚ್ಚು ವಿಷಯಗಳನ್ನು ನಾನು ಬಿಟ್ಟುಕೊಡಲು ಸಾಧ್ಯವಿಲ್ಲ. ಇಡೀ ಸಿನಿಮಾದಲ್ಲಿಯೂ ಇರುತ್ತಾರಾ? ಅನ್ನುವುದನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಶಂಕರ್ ನಾಗ್ ಇಡೀ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಅನ್ನುವುದನ್ನು ಮಾತ್ರ ಹೇಳುತ್ತೇನೆ. ಅವರು ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಅಂತ ಹೇಳಿದರೂ ಕಥೆ ಬಿಟ್ಟುಕೊಟ್ಟ ಹಾಗೆ. ಅದಕ್ಕೆ ಸಿನಿಮಾದಲ್ಲಿಯೇ ನೋಡಬೇಕು." ಅಂತಾರೆ ನಿರ್ದೇಶಕ ಮಯೂರ ರಾಘವೇಂದ್ರ.

ಶಂಕರ್ ನಾಗ್ ಪಾತ್ರ ತೆರೆಮೇಲೆ ತರಲು ಸಜ್ಜಾದ ತಂತ್ರಜ್ಷರು
"ಶಂಕರ್ ನಾಗ್ ಅವರ ಪೋಷನ್‌ಗೆ ಮೂರು ಜನರ ಒಂದು ತಂಡ ಕೆಲಸ ಮಾಡುತ್ತಿದೆ. ಒಬ್ಬರು ಬೆಂಗಳೂರಿನವರು. ಮತ್ತೊಬ್ಬರು ಮುಂಬೈನವರು ಹೀಗೆ ಇದ್ದಾರೆ. ಆದರೆ, ಅವರು ಫೈನಲ್ ಆಗಿಲ್ಲ. ಅವರ ಕೆಲಸ ಒಮ್ಮೆ ನೋಡಿದ ಮೇಲೆ ಫೈನಲ್ ಮಾಡುತ್ತೇನೆ. ಇನ್ನೂ ಕೆಲಸನೇ ಶುರುವಾಗದೇ ಇರದೆ ಇರುವುದರಿಂದ ಶಂಕರ್ ನಾಗ್ ಪೋಷನ್‌ಗೆ ಟೆಕ್ನಿಷಿಯನ್ಸ್ ಎಷ್ಟು ದಿನ ತೆಗೆದುಕೊಳ್ಳುತ್ತಾರೆ ಅನ್ನುವುದು ಸದ್ಯಕ್ಕೆ ಹೇಳುವುದಕ್ಕೆ ಆಗುವುದಿಲ್ಲ. ಟೆನ್ನಿಸ್ ಕೃಷ್ಣ, ರೇಖಾ ದಾಸ್ ನಟಿಸಿದ ಒಂದು ಕಾಮಿಡಿ ಸಿನಿಮಾ ಡೈಲಾಗ್ 'ಅಬ ಜಬ ದಬ'. ಅದನ್ನು ಬಿಟ್ಟು ಒಂದು ವಿಭಿನ್ನವಾಗಿರುವ ಶೀರ್ಷಿಕೆ. ಸಿನಿಮಾದಲ್ಲಿ ಯಾರು ನಟಿಸುತ್ತಾರೆ ಅನ್ನುವುದನ್ನು ಫೈನಲ್ ಮಾಡಿಲ್ಲ. ಮಂತ್ರಾಲಯಕ್ಕೆ ಬಂದು ಗುರುಗಳ ಕೈಯಲ್ಲಿ ಶೀರ್ಷಿಕೆ ಅನಾವರಣ ಮಾಡಿಸಿದ್ದೇವೆ." ಅಂತಿದ್ದಾರೆ ಮಯೂರ ರಾಘವೇಂದ್ರ.

'ಅಬ ಜನ ದಬ' ಸಿನಿಮಾ ರಿಲೀಸ್ ಯಾವಾಗ?
ಕರಾಟೆ ಕಿಂಗ್ ಶಂಕರ್ ನಾಗ್ ಇರುವ 'ಅಬ ಜಬ ದಬ' ಸಿನಿಮಾ ಟೈಟಲ್ ಮಂತ್ರಾಲಯದಲ್ಲಿ ಅನಾವರಣ ಆಗಿದೆ. ಜನವರಿಯಲ್ಲಿ ಸಿನಿಮಾ ಮುಹೂರ್ತ ಮಾಡಿ, ಫೆಬ್ರವರಿಯಲ್ಲಿ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ. ಆದರೆ, ಗ್ರಾಫಿಕ್ಸ್ ಕೆಲಸ ಇರುವುದರಿಂದ ಸಿನಿಮಾವನ್ನು ಯಾವಾಗ ರಿಲೀಸ್ ಮಾಡುವುದು ಅನ್ನುವುದನ್ನು ಚಿತ್ರತಂಡ ಈಗಲೇ ನಿರ್ಧರಿಸಿಲ್ಲ. 'ಅಬ ಜಬ ದಬ' ಚಿತ್ರದಲ್ಲಿ ಕರಾಟೆ ಕಿಂಗ್ ಶಂಕರ್ ನಾಗ್ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ.


Click it and Unblock the Notifications











