ಹೊಸಬರ 'ಲೈಫ್ ಟುಡೆ'.. ಮೆಲೋಡಿ ಪ್ರಿಯರ ಸೆಳೆದ ಸಂಚಿತ್ ಹೆಗ್ಡೆ ಸಾಂಗ್
ಸ್ಯಾಂಡಲ್‌ವುಡ್ ಸ್ಟಾರ್‌ಗಳು ಪ್ಯಾನ್ ಇಂಡಿಯಾ ಸಿನಿಮಾಗಳ ಕಡೆ ಮುಖ ಮಾಡುತ್ತಿದ್ದಾರೆ. ಹೀಗಾಗಿ ಅವರ ಸಿನಿಮಾ ಬಿಡುಗಡೆ ತಡವಾಗಿದೆ. ಹೀಗಾಗಿ ಆ ಜಾಗವನ್ನು ಹೊಸಬರು ಆಕ್ರಮಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕನ್ನಡದಲ್ಲಿ ಹೊಸಬರ ಸಿನಿಮಾಗಳೇ ಅತಿಯಾಗಿ ರಿಲೀಸ್ ಆಗುತ್ತಿದೆ.
'ಲೈಫ್ ಟುಡೆ' ಅನ್ನೋ ಹೊಸ ಸಿನಿಮಾವೊಂದು ಬಿಡುಗಡೆ ಬಿಡುವಿಲ್ಲದೆ ಪ್ರಚಾರವನ್ನು ಮಾಡುತ್ತಿದೆ. ಬಹುತೇಕ ಹೊಸಬರೇ ನಟಿಸಿರುವ ಈ ಸಿನಿಮಾ ಇತ್ತೀಚೆಗೆ ಹಾಡೊಂದನ್ನು ರಿಲೀಸ್ ಮಾಡಿದೆ. ಯುವ ಪ್ರತಿಭೆಗಳಾದ ಕಿರಣ್ ಆದಿತ್ಯ ನಾಯಕನಾಗಿ ಹಾಗೂ ಲೇಖಾ ಚಂದ್ರ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾಡಿನಲ್ಲಿ ಇವರಿಬ್ಬರ ಜೋಡಿ ಗಮನ ಸೆಳೆಯುತ್ತಿದೆ. ಶೀಘ್ರದಲ್ಲಿಯೇ ಈ ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಹೊಸಬರ 'ಲೈಫ್ ಟುಡೆ' ಸಿನಿಮಾಗೆ ಕನ್ನಡ ಚಿತ್ರರಂಗದ ಹಿರಿಯ ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಬೆಂಬಲ ನೀಡಿದ್ದಾರೆ. ಈ ಸಿನಿಮಾ "ನೀನೊಬ್ಬಳೇ.." ಅನ್ನೋ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್ ಅವರೇ ಬರೆದಿದ್ದು, ಅವರೇ ಸಾಂಗ್ ಅನ್ನು ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಸದ್ಯ ಈ ಹಾಡು ಸಂಗೀತ ಪ್ರಿಯರಿಗೆ ಇಷ್ಟ ಆಗುತ್ತಿದೆ.
'ಲೈಫ್ ಟುಡೆ' ಸಿನಿಮಾದ "ನೀನೊಬ್ಬಳೇ.." ಹಾಡನ್ನು ಬಿಡುಗಡೆ ಮಾಡಿರೋ ಡಾ.ವಿ.ನಾಗೇಂದ್ರ ಪ್ರಸಾದ್ "ಇಡೀ ಸಿನಿಮಾ ಪ್ರೀತಿಯ ಸುತ್ತ ಕಥೆ ಸಾಗಲಿದೆ. ಯುವಜನರಿಗೆ ಹತ್ತಿತರವಾಗುವ ಸಿನಿಮಾ.ನಿರ್ದೇಶಕ ಕಾಂತಾ ಕನ್ನಲ್ಲಿ ಚಿತ್ರಕ್ಕೆ ಆಕ್ಷನ್‍ಕಟ್ ಹೇಳಿದ್ದು ಹೊಸ ನಾಯಕ ಕಿರಣ್ , ನಿರ್ಮಾಪಕ ಪ್ರದೀಪ್ ಹಾಗು ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಅವರು ಸೇರಿ ಇಡೀ ತಂಡಕ್ಕೆ ಒಳ್ಳೆಯದಾಗಲಿ" ಎಂದು ಹಾರೈಸಿದ್ದಾರೆ.
ಇನ್ನು ಮೇಘನಾ ಪ್ರದೀಪ್ ನಿರ್ಮಾಣ ಮಾಡಿರಿವ ಈ ಸಿನಿಮಾವನ್ನು ಕಾಂತ ಕನ್ನಲ್ಲಿ ನಿರ್ದೇಶನ ಮಾಡಿದ್ದಾರೆ. ಮೆಲೋಡಿ ಹಾಡುಗಳಿಗೆ ಜನಪ್ರಿಯರಾಗಿರುವ ಶ್ರೀಧರ್ ಸಂಭ್ರಮ್ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಹೊಸಬರ ಸಿನಿಮಾ ಆದರೂ ಎಲ್ಲೂ ರಾಜಿಯಾಗಿಲ್ಲ ಎನ್ನುತ್ತಾರೆ ನಿರ್ದೇಶಕ ಕಾಂತ ಕನ್ನಲ್ಲಿ. "ನಾವು ಗುಣಮಟ್ಟದಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ. ನಟ ಕಿರಣ್, ನಿರ್ಮಾಪಕ ಪ್ರದೀಪ್ ಸಹಕಾರ ಕೊಟ್ಟಿದ್ದರಿಂದ ಈ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಇದರಲ್ಲಿ ಪ್ರೀತಿ, ತ್ಯಾಗ, ನೋವು, ಕೌಟುಂಬಿಕ ಬದ್ದತೆ ಸೇರಿ ಹಲವು ಅಂಶಗಳಿವೆ. ಇದೊಂದು ಮನರಂಜನಾತ್ಮಕ ಚಿತ್ರ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಟ್ರೈಲರ್ ಮೂಲಕ ಸಿನಿಮಾದ ಕಥೆಯ ಬಗ್ಗೆ ತಿಳಿಯಲಿದೆ" ಎಂದು ಕಾಂತ ಕನ್ನಲ್ಲಿ ಹೇಳಿದ್ದಾರೆ.

ಇನ್ನು ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಕೂಡ ಸಿನಿಮಾದ ಹಾಡುಗಳು ಚೆನ್ನಾಗಿ ಮೂಡಿಬಂದಿವೆ ಎಂದು ಭರವಸೆ ಕೊಟ್ಟಿದ್ದಾರೆ. "ಕನ್ನಡದ ಬಗ್ಗೆ ಹಲವು ಹಾಡುಗಳು ಮೂಡಿಬಂದಿದೆ. ಹಾಡು ಚೆನ್ನಾಗಿ ಮೂಡಿ ಬರಲು ನಟ ಕಿರಣ್ ಆದಿತ್ಯ ಕಾರಣ. ಒಂದೊಂದು ಹಾಡು ಒಂದೊಂದು ರೀತಿ ಬಿಡುಗಡೆ ಆಗಿದೆ. ಗಾಯಕ ಸಂಚಿತ್ ಹೆಗ್ಡೆ ಮತ್ತು ಅನುರಾಧ ಭಟ್ ಉತ್ತಮವಾಗಿ ಹಾಡಿದ್ದಾರೆ" ಎಂದು ಶ್ರೀಧರ್ ಸಂಭ್ರಮ್ ಹೇಳಿದ್ದಾರೆ.
ಇನ್ನು ಸಿನಿಮಾ ಹೀರೋ ಕಿರಣ್ ಆದಿತ್ಯ ಈ ಸಿನಿಮಾವನ್ನು ಮತ್ತೊಂದು 'ಮುಂಗಾರು ಮಳೆ' ಆಗುವ ಲಕ್ಷಣವಿದೆ ಎಂದಿದ್ದಾರೆ. "ಬರಗಾಲದಲ್ಲಿ ಸೌಂಡ್ ಮಾಡೋಕೆ ನಾವು ಬರ್ತಾ ಇದ್ದೇವೆ. ಆಡಿಯೆನ್ಸ್ ರಿಜೆಕ್ಷನ್ ಏನು ಅನ್ನೋದು ಗೊತ್ತಿದೆ. ಮತ್ತೊಂದು ಮುಂಗಾರು ಮಳೆ ರೀತಿ ಬರುವ ಉದ್ದೇಶ ನಮ್ಮದು. 'ಲೈಫ್ ಟುಡೆ' ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿ ಬಂದಿದೆ. ವರ್ಷದ ಹಿಟ್ ಸಿನಿಮಾ ಆಗಲಿದೆ" ಎಂದಿದ್ದಾರೆ. ಇನ್ನು ನಿರ್ಮಾಪಕ ಪ್ರದೀಪ್ "ಸಿನಿಮಾದ ಹಾಡುಗಳು ಚೆನ್ನಾಗಿವೆ" ಎಂದರೆ, ನಟ ಕಾಕ್ರೋಚ್ ಸುಧಿ " ಸಿನಿಮಾದ ಮೂರು ಹಾಡುಗಳು ಚೆನ್ನಾಗಿವೆ" ಎಂದಿದ್ದಾರೆ.


Click it and Unblock the Notifications
