ವರ್ಣ ಪದ್ಧತಿಗೆ ಸವಾಲೊಡ್ಡಿತೇ 'ಧೈರ್ಯಂ ಸರ್ವತ್ರ ಸಾಧನಂ'? ನೆಟ್ಟಿಗರ ಏನಂದ್ರು? ನಿರ್ದೇಶಕರ ವಾದವೇನು?
ಕನ್ನಡ ಚಿತ್ರರಂಗದಲ್ಲಿ ಹೊಸಬರೇ ಹೊಸ ಹೊಸ ಪ್ರಯತ್ನಗಳಿಗೆ ಧೈರ್ಯ ತೋರುತ್ತಿದ್ದಾರೆ. ಸೂಪರ್‌ಸ್ಟಾರ್‌ಗಳು ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಕಡೆ ಮುಖ ಮಾಡುತ್ತಿದ್ದರೆ, ಹೊಸ ಪ್ರತಿಭೆಗಳು ಸಿನಿಮಾದಲ್ಲಿ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಇಂತಹದ್ದೇ ಒಂದು 'ಧೈರ್ಯಂ ಸರ್ವತ್ರ ಸಾಧನಂ' ಅನ್ನೋ ಸಿನಿಮಾಗೆ ಕೈ ಹಾಕಿದ್ದು, ಇತ್ತೀಚೆಗೆ ಟೀಸರ್ ಅನ್ನು ರಿಲೀಸ್ ಮಾಡಿದೆ.
ಇತ್ತೀಚೆಗೆ 'ಧೈರ್ಯಂ ಸರ್ವತ್ರ ಸಾಧನಂ' ಸಿನಿಮಾದ ಟೀಸರ್ ಅನ್ನು ಕನ್ನಡ ನಟ ವಸಿಷ್ಠ ಸಿಂಹ ರಿಲೀಸ್ ಮಾಡಿದ್ರೆ, 'ಕಬಾಲಿ' ನಿರ್ದೇಶಕ ಪಾ.ರಂಜಿತ್ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿ ಮೆಚ್ಚುಗೆ ಸೂಚಿಸಿದ್ದರು. ಈ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಗಂಭೀರವಾಗಿ ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ.

'ಧೈರ್ಯಂ ಸರ್ವತ್ರ ಸಾಧನಂ' ಸಿನಿಮಾಗೆ ಎ.ಆರ್ ಸಾಯಿರಾಮ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಟೀಸರ್‌ನಲ್ಲಿ ನೆಲದ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ಮೂವರು ನಿಂತಿರುವ ದೃಶ್ಯವೊಂದು ಸಿಕ್ಕಾಪಟ್ಟೆ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ದೃಶ್ಯ ಸಮಾಜದಲ್ಲಿರುವ ವರ್ಣ ಪದ್ಧತಿಯನ್ನು ಹೇಳುತ್ತಿದೆ ಎಂದು ವಾದ ಮಂಡಿಸುತ್ತಿದ್ದಾರೆ. ಅಸಲಿಗೆ ಈ ದೃಶ್ಯ ಯಾಕಿಷ್ಟು ಚರ್ಚೆಯಾಗುತ್ತಿದೆ? ನಿರ್ದೇಶಕರು ಏನಂತಾರೆ? ತಿಳಿಯಲು ಮುಂದೆ ಓದಿ.
'ಧೈರ್ಯಂ ಸರ್ವತ್ರ ಸಾಧನಂ' ಸಿನಿಮಾದ ಈ ವಿಶೇಷ ದೃಶ್ಯವನ್ನು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ. ನೆಲದ ಮೇಲೆ ಮಲಗಿರೋ ವ್ಯಕ್ತಿ ಶೂದ್ರ, ಅವನ ಮೇಲೆ ನಿಂತಿರುವ ವ್ಯಕ್ತಿ ವೈಶ್ಯ, ಅವನ ಮೇಲೆ ಕೂತಿರುವ ವ್ಯಕ್ತಿ ಕ್ಷತ್ರಿಯ ಹಾಗೇ ಟಾಪ್‌ನಲ್ಲಿ ಕೂತಿರುವ ವ್ಯಕ್ತಿ ಬ್ರಾಹ್ಮಣನನ್ನು ಪ್ರತಿನಿಧಿಸುತ್ತಾನೆ. ಇದು ನಮ್ಮ ಸಮಾಜದಲ್ಲಿರುವ ಜಾತಿ ವ್ಯವಸ್ಥೆಗೆ ತಿರುಗೇಟು ಕೊಡುತ್ತಿದೆ ಎಂದು ಫೋಟೊಗಳನ್ನು ಹಂಚಿಕೊಂಡು ಚರ್ಚೆ ಮಾಡುತ್ತಿದ್ದಾರೆ.
ಇನ್ನು ಕೆಲವರು "ಸಿನಿಮಾದಲ್ಲಿ ನೆಲಮೂಲದ ಕಥೆ ಅಥವಾ ತಳ ಸಮುದಾಯದ ಬದುಕು ಅವರ ದೃಷ್ಠಿಕೋನದ ಸಿನಿಮಾಗಳು ಬರುತ್ತಿಲ್ಲ. ಹೊಸ ನಿರ್ದೇಶಕರು ಅದನ್ನು ಮಾಡುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು "ಇಲ್ಲಿವರೆಗೂ ಈ ನಾಡಿನ ಶ್ರೇಣಿಕೃತ ವ್ಯವಸ್ಥೆಯನ್ನು ದೃಶ್ಯ ಮಾಧ್ಯಮಗಳಲ್ಲಿ ಈ ರೀತಿ ತೋರಿಸಿಲ್ಲ" ಎಂದು ಚರ್ಚಿಸಿದ್ದಾರೆ. ಹಾಗಿದ್ದರೆ, 'ಧೈರ್ಯಂ ಸರ್ವತ್ರ ಸಾಧನಂ' ಜಾತಿ ವ್ಯವಸ್ಥೆಯ ವಿರುದ್ಧ ಮಾಡಿದ ಸಿನಿಮಾನಾ? ನಿರ್ದೇಶಕ ಎ.ಆರ್ ಸಾಯಿರಾಮ್ ಹೇಳೋದೇ ಬೇರೆ.

"ಟೀಸರ್ ಬಂದ್ಮೇಲೆ ಇದು ಜಾತಿ ಸಿನಿಮಾ, ದಲಿತರ ಸಿನಿಮಾ ಅಂತ ಮಾತಾಡುತ್ತಿದ್ದಾರೆ. ಆದರೆ, ಇದು ತಂದೆ ಹಾಗೂ ಮಗನ ನಡುವಿನ ಭಾವನಾತ್ಮಕ ಸಂಬಂಧದ ಸಿನಿಮಾವಿದು. ಡಾರ್ಕ್ ಆಕ್ಷನ್ ಸಿನಿಮಾವಿದು. ಟೀಸರ್ ನೋಡಿ ಏನೋ ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇದು ಅಂತಹ ಸಿನಿಮಾ ಅಲ್ಲ. ಯಾವ ಧರ್ಮ, ಯಾವ ಜಾತಿಯನ್ನೂ ನಾವು ಮುಟ್ಟಿಲ್ಲ." ಎಂದು ನಿರ್ದೇಶಕ ಎ.ಆರ್ ಸಾಯಿರಾಮ್ ಫಿಲ್ಮಿಬೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಜಾತಿ ವ್ಯವಸ್ಥೆ ಬಗ್ಗೆ ಚರ್ಚೆ ಆಗುತ್ತಿದೆ ಅದು ನಿಜ. ಪ್ರತಿಯೊಬ್ಬರೂ ಸಿನಿಮಾ ನೋಡಬೇಕು. ಆಗಲೇ ಅವರಿಗೆ ಸಂಪೂರ್ಣವಾಗಿ ಅರ್ಥ ಆಗುತ್ತೆ. ಆ ಶಾಟ್ ಏನು ಹೇಳುತ್ತಿದೆ. ಏನನ್ನು ಪ್ರತಿನಿಧಿಸುತ್ತಿದೆ. ಏನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋದು ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತೆ. ಈಗ ನಿರ್ದೇಶಕ ಕವಿ ತರ. ಅವನು ಬರೆದಿದ್ದನ್ನು ವಿವರಿಸಿ ಹೇಳಿದರೆ ಸಿನಿಮಾ ಸೋತ ಹಾಗೆ. ಅವರವರ ಭಾವಕ್ಕೆ ಸೇರಿದ್ದು." ಎನ್ನುತ್ತಾರೆ ನಿರ್ದೇಶಕರು.
ಆ ಶಾಟ್‌ನಲ್ಲಿ ಇದೇ ಮೊದಲ ಬಾರಿಗೆ ವರ್ಲ್ಡ್ ಸಿನಿಮಾದಲ್ಲಿ ಇದೇ ಮೊದಲು. ಸಾಮಾಜಿಕವಾಗಿ, ರಾಜಕೀಯವಾಗಿ ತಿರುಗುತ್ತಿದೆ. ಇರಲಿ, ಇದು ಯಾವುದೇ ಜಾತಿಗೆ, ಧರ್ಮಕ್ಕೆ ಸೀಮಿತವಾಗಿ ಮಾಡಿದ್ದಲ್ಲ. ನಾನು ಮನುಷತ್ವಕ್ಕೆ ಬೆಲೆ ಕೊಡುವವನು." ಎಂದು ನಿರ್ದೇಶಕ ಎ.ಆರ್ ಸಾಯಿರಾಮ್ ಹೇಳುತ್ತಿದ್ದಾರೆ.

ಅಂದ್ಹಾಗೆ 'ಧೈರ್ಯಂ ಸರ್ವತ್ರ ಸಾಧನಂ' ಸಿನಿಮಾದಲ್ಲಿ ವಿವಾನ್ ಕೆ.ಕೆ. ನಾಯಕನಾಗಿ ನಟಿಸಿದ್ದಾರೆ. ಅನುಷಾ ರೈ ಈ ಸಿನಿಮಾಗೆ ನಾಯಕಿ. ಪ್ರಮುಖ ಪಾತ್ರದಲ್ಲಿ ಯಶ್‌ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್ ಕಾಣಿಸಿಕೊಂಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ, ಹೃದಯಶಿವ, ಅರಸು ಅಂತಾರೆ, ಕಿನ್ನಾಳ್‌ರಾಜ್ ಸಾಹಿತ್ಯವಿದೆ.


Click it and Unblock the Notifications











