ಇದೇ ವಾರ ತೆರೆಗೆ ಅಪ್ಪಳಿಸಲಿದೆ 'ಸಂಭವಾಮಿ ಯುಗೇ ಯುಗೇ': ಸಿನಿಮಾ ಹೈಲೈಟ್ ಏನು?
ಸ್ಯಾಂಡಲ್‌ವುಡ್ ವಿವಾದಗಳಿಂದ ತುಂಬಿ ಹೋಗಿದೆ. ವಿಚ್ಛೇದನ, ಕೊಲೆ ಪ್ರಕರಣ, ಕಿತ್ತಾಟ ಬರೀ ಇಂತಹವನ್ನೇ ನೋಡಿ ನೋಡಿ ಜನರಿಗೂ ಸಾಕಾಗಿ ಹೋಗಿದೆ. ಇನ್ನೊಂದು ಕಡೆ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಅನ್ನೋ ಕೂಗು ಬೇರೆ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಈ ಯುವ ಪ್ರತಿಭೆಗಳ ತಂಡ ಜನರಿಗೆ ಮನರಂಜನೆ ನೀಡುವುದಕ್ಕೆ ಚಿತ್ರಮಂದಿರಕ್ಕೆ ಬರುತ್ತಿದೆ.
ಬಹುತೇಕ ಯುವ ಪ್ರತಿಭೆಗಳು ಪ್ರಮುಖ ಪಾತ್ರದಲ್ಲಿ ನಟಿಸಿರುವ ಆ ಸಿನಿಮಾವೇ 'ಸಂಭವಾಮಿ ಯುಗೇ ಯುಗೇ'. ಈ ಸಿನಿಮಾ ಇದೇ ವಾರ ರಾಜ್ಯಾದ್ಯಂತ ಬಿಡುಗಡೆ ಸಜ್ಜಾಗಿದೆ. ಇದೇ ಜೂನ್ 21ರಂದು ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ. ಚೇತನ್ ಚಂದ್ರಶೇಖರ್ ಶೆಟ್ಟಿ ಕಥೆ ಹಾಗೂ ಚಿತ್ರಕಥೆ ಬರೆದು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಚೇತನ್‌ಗೆ ಇದು ಮೊದಲ ಸಿನಿಮಾ ಆಗಿದೆ.

'ಸಂಭವಾಮಿ ಯುಗೇ ಯುಗೇ' ಸಿನಿಮಾ ಇದೊಂದು ಪಕ್ಕಾ ಗ್ರಾಮೀಣ ಭಾಗದ ಕಥೆಯನ್ನು ಹೇಳುವ ಕಮರ್ಷಿಯಲ್ ಸಿನಿಮಾ. ಈ ಸಿನಿಮಾದಲ್ಲಿ ಚಿತ್ರತಂಡವೇ ಹೇಳಿಕೊಂಡಂತೆ ಥ್ರಿಲ್ಲರ್ ಎಲಿಮೆಂಟ್‌ಗಳು ಕೂಡ ಇವೆ. ಹಳ್ಳಿ ಹುಡುಗರು ಓದಿ ಪಟ್ಟಣ ಸೇರುತ್ತಿದ್ದಾರೆ. ಹೀಗೆ ಆದರೆ, ಹಳ್ಳಿಗಳ ಸ್ಥಿತಿ ಏನಾಗುತ್ತೆ ಅನ್ನೋದೇ ಈ ಸಿನಿಮಾದ ಕಥೆ.
ಈ ಸಿನಿಮಾವನ್ನು ಮಂಡ್ಯ, ಚೆನ್ನಪಟ್ಟಣ, ರಾಮನಗರ ಸೇರಿದಂತೆ ಹಲವು ಕಡೆ ಚಿತ್ರೀಕರಣ ನಡೆದಿದೆ. ಈ ಹಿಂದೆ '1975' ಎಂಬ ಸಿನಿಮಾದಲ್ಲಿ ನಟಿದ್ದ ಜಯ್ ಶೆಟ್ಟಿ 'ಸಂಭವಾಮಿ ಯುಗೇ ಯುಗೇ' ಸಿನಿಮಾದ ನಾಯಕ. ಇವರೊಂದಿಗೆ ಬಿಜಾಪುರ ಮೂಲದ ಮುಂಬೈ ನಟಿ ನಿಶಾ ರಜಪೂತ್ ಹೀರೋಯಿನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಹಳ್ಳಿ ಹುಡುಗರು ಹೆಚ್ಚಿನ ಶಿಕ್ಷಣ ಪಡೆದ ಬಳಿಕ ಪಟ್ಟಣಕ್ಕೆ ಹೋಗಿ ಸೇರಿಕೊಳ್ಳುತ್ತಾರೆ. ಹೀಗೆ ಮುಂದುವರೆದರೆ, ಆ ಹಳ್ಳಿಗಳ ಕಥೆಯೇನು? ಮುಂದಿನ ತಲೆಮಾರಿನ ಸ್ಥಿತಿ ಏನಾಗುತ್ತೆ? ಅನ್ನೋದನ್ನೇ ಕಮರ್ಷಿಯಲ್ ಎಲಿಮೆಂಟ್ಸ್ ಇಟ್ಟುಕೊಂಡು 'ಸಂಭವಾಮಿ ಯುಗೇ ಯುಗೇ' ಸಿನಿಮಾ ಮಾಡಿದ್ದಾರೆ. "ಯುವಕರು ಹಳ್ಳಿಯಲ್ಲೇ ನೆಲಸಬೇಕು ಮತ್ತು ಹಾಗೆ ನೆಲೆಸಬೇಕು ಎಂದರೆ ಹಳ್ಳಿಯಲ್ಲಿ ಒಂದಿಷ್ಟು ಕೆಲಸ ಆಗಬೇಕು ಎಂದು ನಾಯಕ ಮುಂದಾಗುತ್ತಾನೆ. ಈ ನಿಟ್ಟಿನಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾನೆ ಎನ್ನುವುದು ಸಿನಿಮಾದ ಕಥೆ. ಇವತ್ತಿನ ತಲೆಮಾರಿನವರಿಗೆ ಕನೆಕ್ಟ್ ಆಗುವ ಹಲವು ಅಂಶಗಳು ಈ ಸಿನಿಮಾದಲ್ಲಿವೆ" ಎಂದು ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ಹೇಳಿದ್ದಾರೆ.

ಇನ್ನು "ಇದೊಂದು ಕೃಷಿ ಮತ್ತು ರೈತರ ಸಿನಿಮಾ. ತನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಆ ಹಳ್ಳಿಯ ಪಂಚಾಯ್ತಿ ಅಧ್ಯಕ್ಷನಾಗುತ್ತಾನೆ. ಮುಂದೇನು ಎಂಬುದು ಚಿತ್ರದ ಕಥೆ" ಎನ್ನುತ್ತಾರೆ ಸಿನಿಮಾ ಹೀರೊ ಜಯ್ ಶೆಟ್ಟಿ. 'ಸಂಭವಾಮಿ ಯುಗೇಯಗೇ' ಸಿನಿಮಾದಲ್ಲಿ ಜಯ್ ಶೆಟ್ಟಿ ಮತ್ತು ನಿಶಾ ರಜಪೂತ್ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಸುಧಾರಾಣಿ, ಭವ್ಯ, ಅಶೋಕ್ ಕುಮಾರ್, ಮಧುರ ಗೌಡ, ಅಭಯ್ ಪುನೀತ್, ಬಲ ರಾಜವಾಡಿ, ಅಶ್ವಿನ್ ಹಾಸನ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಪೂರಣ್ ಶೆಟ್ಟಿಗಾರ್ ಸಂಗೀತ ಸಂಯೋಜಿಸಿದ್ದಾರೆ.


Click it and Unblock the Notifications











