"ಮಿಸ್ಟರ್ ಜಗದೀಶ್.. ನನ್ನ ಮನೆ ಅಡಾ ಇಟ್ಟು ಚಿತ್ರರಂಗಕ್ಕೆ ಸಾಲಕೊಟ್ಟಿದ್ದೀನಿ"; ಗಂಡುಗಲಿ ಕೆ. ಮಂಜು
ಕನ್ನಡ ಚಿತ್ರರಂಗದಲ್ಲಿ ಮೀಟರ್ ಬಡ್ಡಿ, ಪಾತ್ರಕ್ಕಾಗಿ ಪಲ್ಲಂಗದಂತಹ ಕೆಟ್ಟ ಸಂಸ್ಕೃತಿಯಿದೆ ಅನ್ನೋ ಆರೋಪ ಹಲವು ದಿನಗಳಿಂದ ಹೇಳಿ ಬರುತ್ತಿದೆ. ಇತ್ತ ಕೇರಳದ ಹೇಮಾ ಕಮಿಟಿ ವರದಿಯಂತೆ ಕನ್ನಡ ಚಿತ್ರರಂಗದಲ್ಲೂ ತರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕೊನೆಗೂ ಈಗೊಂದು ಕಮಿಟಿ ರಚನೆಯಾಗಿದೆ. ಹಿನ್ನೆಲೆಯನ್ನು ಇಟ್ಟುಕೊಂಡು ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಕನ್ನಡ ಚಿತ್ರರಂಗದ ವಿರುದ್ಧ ಆಕ್ಷೇಪ ತೆಗೆದಿದ್ದರು.
ಇತ್ತೀಚೆಗೆ ಡೈಲಿ ಮಾಧ್ಯಮ ಅನ್ನುವ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡುವ ವೇಳೆ ಚಿತ್ರರಂಗದಲ್ಲಿ ಮೀಟರ್ ಬಡ್ಡಿ ವ್ಯವಸ್ಥೆಯಿದೆ ಎಂದಿದ್ದರು. ಹಾಗೇ ಮಂಚಕ್ಕೆ ಬಂದರೆ ಮಾತ್ರ ನಾಯಕಿ ಪಟ್ಟ ಸಿಗುತ್ತೆ ಅನ್ನೋ ಗಂಭೀರ ಆರೋಪ ಮಾಡಿದ್ದರು. ಲಾಯರ್ ಜಗದೀಶ್ ಮಾಡಿದ ಆ ಆರೋಪಗಳಿಗೆ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ.ಮಂಜು ಅದೇ ಯೂಟ್ಯೂಬ್ ಚಾನೆಲ್‌ಗೆ ತಿರುಗೇಟು ನೀಡಿದ್ದಾರೆ.

ಅಷ್ಟಕ್ಕೂ ಲಾಯರ್ ಜಗದೀಶ್ ಏನು ಹೇಳಿದ್ದರು? ಅನ್ನೋದನ್ನು ನೋಡುವುದಾರೇ.. "ನಮ್ಮ ಕನ್ನಡ ಚಿತ್ರರಂಗದಲ್ಲಿ ಮೀಟರ್ ಬಡ್ಡಿ ಹಾವಳಿ ಜಾಸ್ತಿಯಿದೆ. ಪ್ರಡ್ಯೂಸರ್‌ಗಳಿಗೆ ಕುತ್ತಿಗೆಗೆ ತರುವಂತಹವರು, ಬಿಬಿಎಂಪಿಯಲ್ಲಿ ಅಕ್ರಮ ದುಡ್ಡಿದ್ದರೆ ಅದನ್ನು ತೆಗೆದುಕೊಂಡು ಹೋಗಿ ಇಂಡಸ್ಟ್ರಿಗೆ ಹಾಕುವಂತಹವರು, ಈ ರೀತಿ ಎಲ್ಲಾ ಚಟುವಟಿಕೆಗಳು ಇವೆ. ಎರಡನೆಯದು ಮಂಚದ ಕಾರ್ಯಕ್ರಮ. ಮಂಚಕ್ಕೆ ಬಂದು ಹೀರೋಯಿನ್ ಆಗು ಅನ್ನುವಂತಹದ್ದು. ಇವೆರಡನ್ನು ನಿಲ್ಲಿಸಬೇಕು ಅನ್ನೋ ಆಸೆಯಿದೆ." ಎಂದು ಲಾಯರ್ ಜಗದೀಶ್ ಹೇಳಿದ್ದರು.
ಹಾಗೇ ಚಿತ್ರರಂಗದಲ್ಲಿ ಮೀಟರ್ ಬಡ್ಡಿ, ರೌಡಿಗಳ ಹಾವಳಿ, ಪಾತ್ರಕ್ಕಾಗಿ ಪಲ್ಲಂಗದಂತ ಸಂಸ್ಕೃತಿಯಿದೆ ಎಂದು ಆರೋಪಿಸಿದ್ದರು. "ಇದೊಂದು ಎಂಟರ್‌ಟೈನ್ಮೆಂಟ್ ಇಂಡಸ್ಟ್ರಿ. ಇಲ್ಲಿ ನಾವುಗಳು ರೌಡಿಗಳಾಗಬಾರದು. ಆಮೇಲೆ ಮೀಟರ್ ಬಡ್ಡಿ ಕಲ್ಚರ್ ಬೇಡ ಇಲ್ಲಿ. ಮಂಚಕ್ಕೆ ಬಂದು ಹೀರೋಯಿನ್ ಆಗು ಅನ್ನುವ ಕಲ್ಚರ್ ಬೇಡವೇ ಬೇಡ ಇಲ್ಲಿ. ಇದೆಲ್ಲವನ್ನೂ ಮಟ್ಟ ಹಾಕಬೇಕು. ಸಮಯ ಬಂದಾಗ ಅದೆಲ್ಲವನ್ನೂ ಹಾಕೋಣ." ಎಂದಿದ್ದರು.

ಲಾಯರ್ ಜಗದೀಶ್ ಕೊಟ್ಟ ಹೇಳಿಕೆಯಿಂದ ರೊಚ್ಚಿಗೆದ್ದಿರುವ ಕೆ ಮಂಜು ಫುಲ್ ರಾಂಗ್ ಆಗಿದ್ದಾರೆ. "ಅವರಿಗೆ ಮೀಟರ್ ಬಡ್ಡಿ ಗೊತ್ತಾ ಅಂತ ಕೇಳಿ ಮೊದಲು. ಅವರು ಸಿನಿಮಾದವರಲ್ಲ. ಆಮೇಲೆ ಮಂಚದ ವ್ಯವಹಾರ ಗೊತ್ತಂತ. ಸುಮ್ಮನೆ ಲೂಸ್ ಟಾಕ್ ಯಾಕೆ ಮಾತಾಡಬೇಕು. ಇವರಿಂದಲೇ ಬೇರೆಯವರಿಗೆ ಅಗೌರವ ಆಗೋದು. ಇಂತಹವರು ಒಬ್ಬರಿಂದಲೇ ಇಂಡಸ್ಟ್ರಿಗೆ ಕೆಟ್ಟ ಹೆಸರು. ಸಿನಿಮಾ ಇಂಡಸ್ಟ್ರಿ ನಮಗೆಲ್ಲ ದೇವಸ್ಥಾನ ಸ್ವಾಮಿ. ಅದರಿಂದ ಅನ್ನ ತಿನ್ನುತ್ತಿದ್ದೇವೆ." ಎಂದಿದ್ದಾರೆ.
ಸಂದರ್ಶನದ ವೇಳೆ ಕೆ. ಮಂಜು ಹೆಸರನ್ನು ಪ್ರಸ್ತಾಪ ಮಾಡಿದ್ದಕ್ಕೂ ಗರಂ ಆಗಿದ್ದಾರೆ. "ಆ ಯಪ್ಪನಿಗೆ ಕಲ್ಚರ್ ಇಲ್ಲ ಅಂತ ಅನಿಸಿತು. ಅಲ್ಲ ಒಬ್ಬ ವಕೀಲನಾಗಿ ಹೀಗೆ ಮಾತಾಡುತ್ತೀಯಲ್ಲ. ಯಾವ ಸಂಘ ಸಂಸ್ಥೆಗಳು ನಿನಗೆ ಉಗಿಯೋದಿಲ್ವಾ? ಸಮಾಜ ಇವರಿಗೆ ಬೈಯ್ಯಬೇಕು. ಮಿಸ್ಟರ್ ಜಗದೀಶ್ ಲಾಯರ್.. ನೀವು ಹೇಳಿದ್ರಂತೆ. ಯಾವನೋ ಅವನು ಕೊಬ್ಬರಿ ಮಂಜು ಅಂತ.. ಸ್ವಾಮಿ ನಾನು ಕಳ್ಳತನ ಮಾಡಿಲ್ಲ. ಆಟೋ ರಿಕ್ಷಾ ಓಡಿಸಿ, ಕಂಡವರ ಮನೆ ಕಾರು ತೊಳೆದು ಈ ಮಟ್ಟಕ್ಕೆ ಬಂದಿದ್ದೀನಿ. ಕೆ. ಮಂಜು ಈಗ ಒಬ್ಬ ದೊಡ್ಡ ವ್ಯಕ್ತಿ." ಎಂದು ಕೆ. ಮಂಜು ಕಿಡಿಕಾರಿದ್ದಾರೆ.
ಕೆ ಮಂಜು ಚಿತ್ರರಂಗದಲ್ಲಿ ಮೀಟರ್ ಬಡ್ಡಿ ಮಾಡುತ್ತಾರೆ ಅಂತ ಲಾಯರ್ ಜಗದೀಶ್ ಸಂದರ್ಶನದಲ್ಲಿ ಆರೋಪಿಸಿದ್ದರು. ಅದಕ್ಕೂ ತಿರುಗೇಟು ಕೊಟ್ಟಿದ್ದಾರೆ. "ಏನಂದೆ.. ಕೊಬ್ಬರಿ ಮಂಜು ಮೀಟರ್ ಬಡ್ಡಿ ಅಂದೆ. ನಾನು ಕೊಟ್ಟಿರೋ ಕಾಸನ್ನು ನೀನು ಒಬ್ಬರಿಗೆ ಕೊಟ್ಟು ವಾಪಸ್ ತೆಗೋ ನೋಡ್ತೀನಿ. ನನ್ನ ಮನೆ ಅಡಾ ಇಟ್ಟು, ಕೋಟ್ಯಾಂತರ ರುಪಾಯಿ ಸಾಲ ಮಾಡಿ ಚಿತ್ರರಂಗಕ್ಕೆ ಸಹಾಯ ಮಾಡಿದ್ದೇನೆ. ಇವತ್ತು ಬಡ್ಡಿ ಅಲ್ಲ, ಅಸಲು ಕೂಡ ಬಂದಿಲ್ಲ. ಮಾತಾಡೋದನ್ನು ತಿಳಿದುಕೊಂಡು ಮಾತಾಡಬೇಕು. ಯಾವನೋ ಮಾತಾಡಿದ ಅಂತ ಮಾತಾಡೋದಲ್ಲ." ಎಂದು ಕೆ.ಮಂಜು ಗರಂ ಆಗಿದ್ದಾರೆ.


Click it and Unblock the Notifications











